ಇತ್ತೀಚಿನ ಅಧ್ಯಾಯ...
`ಬ್ಲಾಗಂಬರಿ 'ಎಂಬುದು ಕಾದಂಬರಿ ಮತ್ತು ಬ್ಲಾಗ್ ಎಂಬ ಎರಡು ನಾಮ ಪದಗಳ ವರ್ಣಸಂಕರದಿಂದ ಉಂಟಾದ ಕನ್ನಡ ಸಾಹಿತ್ಯದ ಒಂದು ವಿನೂತನ ತಳಿ.ಕನ್ನಡ ಸಾಹಿತ್ಯದ ಹೊಸ ಹೇಸರಗತ್ತೆ! read more »
ಹೂವಿನ ಕೊಲ್ಲಿ ಕಾಫಿ ತೋಟ ಬೆಳಗಿನ ಎಳೆ ಬಿಸಿಲಿನಲ್ಲಿ ನಗುತ್ತಾ ಮಲಗಿತ್ತು. ಸದ್ದಿಲ್ಲದೆ ಸುಳಿದಾಡುವ ಗಾಳಿ ಇಂದು ಇನ್ನೂ ಸದ್ದಿಲ್ಲದೆ ಕಾಫಿಗಿಡಗಳ ನಡುವೆ ಸುಮ್ಮನೆ ಚಲಿಸುತ್ತಾ ತೋಟಕ್ಕೆ ತೋಟವೇ ಇಂದು ಇನ್ನಷ್ಟು ಖುಷಿಯಲ್ಲಿ ಬೀಗುತ್ತಿರುವಂತೆ ನೆರಳಿನ ಮರಗಳು ಇನ್ನಷ್ಟು ತೋಳು ಚಾಚಿ ಎಲ್ಲವನ್ನೂ ಅಕ್ಕರೆಯಿಂದ ನೋಡುತ್ತಿತ್ತು.
ಕಾಫಿ ಹಣ್ಣುಗಳ ಕೊಯ್ದುಮುಗಿದು, ಬಿದ್ದಬೀಜಗಳ ಹೆಕ್ಕಿಮುಗಿದು ಬೇರೆ ಏನೂ ಕೆಲಸವಿಲ್ಲದೆ ಗಿಡಗಳ ಅಡಿಯಲ್ಲಿ ಆಳುಗಳು ಓಡಾಡದೆ ನಾನಾ ತರಹದ ಹಕ್ಕಿಗಳು ಬೆಳಿಗ್ಗೆಯೇ ಸದ್ದು ಮಾಡಿಕೊಂಡು ಮರಗಳ ಕೊಂಬೆಗಳಿಂದ ನೆಲದ ಕಡೆಗೆ ನೆಲದ ಮೇಲಿನಿಂದ ಆಕಾಶದ ಕಡೆಗೆ ಸಣ್ಣಗೆ ಸದ್ದು ಮಾಡುತ್ತಾ ಹಾರಾಡುತ್ತಾ ಬೆಳಗಿನ ಬಿಸಿಲಿಗೆ ಅವುಗಳ ಮೈ ಹೊಳೆಯುತ್ತಿತ್ತು. ಒಂದೆರೆಡು ಕಾಡುಮೈನಾ ಹಕ್ಕಿಗಳು ಕಾಲುದಾರಿಯ ನಡುವಲ್ಲಿ ಕುಪ್ಪಳಿಸಿಕೊಂಡು ಸರಸದಲ್ಲಿ ಜಗಳವಾಡುತ್ತಿರುವಂತೆ ಹಾಡುತ್ತಿದ್ದವು. read more »
ಇದುವರೆಗೂ ಯಾರೊಂದಿಗೂ ಕಾದಾಡದ ತಮ್ಮ ಕಾದಾಟದ ಕುಪ್ಪುಲೆ ಎಂಬ ಹೆಸರಿನ ಹುಂಜವನ್ನು ಬಗಲಲ್ಲಿ ಸಿಲುಕಿಸಿಕೊಂಡು ತೀರಲಾಗದ ಅದರ ಹಸಿವೆಗೆ ಅಕ್ಕಿಹುಡಿ ತವುಡು ಸಿಗುವುದೋ ಎಂದು ತಮ್ಮ ಎಂದಿನ ಅಲ್ಪತನದ ಆಸೆಯಲ್ಲಿ ನಡೆದು ಬರುತ್ತಿದ್ದ ರಾಟೆಮನೆಯ ದೂಮಣ್ಣನವರಿಗೆ ಪೇರಲೆ ಮರದಲ್ಲಿ ಕಾಲಾಡಿಸುತ್ತಿದ್ದ ಹಾಜಿರಾ ಅಷ್ಟು ದೂರದಿಂದಲೇ ಕಾಣಿಸಿದಳು. ಅವರಿಗೆ ಉಸ್ಮಾನ್ ರೈಟರು ಮುರುಗಾಮಲೆಗೆ ಹೋಗಿರುವುದು ಖಾತರಿಯಾಯಿತು. ಅವರ ಬಗಲಲ್ಲಿದ್ದ ಕಾದಾಟದ ಹುಂಜವೂ ತನ್ನ ಕಣ್ಣಕೊನೆಯಲ್ಲೇ ಎಲ್ಲವನ್ನೂ ಗಮನಿಸಿಕೊಂಡು ಜುಲೈಕಾ ಎಂಬ ಗಿಳಿಯ ಗೊಣಗಾಟವನ್ನು ಕೇಳಿಯೂ ಕೇಳಿಸದಂತೆ ಮುಖಮಾಡಿಕೊಂಡು ತಿನ್ನಲು ಏನಾದರೂ ಸಿಗುವುದೇ ಎಂದು ತಲೆಯಾಡಿಸಿಕೊಂಡು ದೂಮಣ್ಣನವರ ಬಗಲಲ್ಲಿ ಬೆಚ್ಚಗೆ ಅಲುಗಾಡಿಕೊಂಡು ಬರುತ್ತಿತ್ತು. ಉಸ್ಮಾನ್ ರೈಟರು ಬಿಡಾರದಲ್ಲಿಲ್ಲ ಎನ್ನುವ ಸಂಗತಿ ಅದಕ್ಕೂ ನಿಧಾನವಾಗಿ ಖಚಿತವಾಗುತ್ತಿತ್ತು. ಅದು ನಿಜ ಎನ್ನುವಂತೆ ಪೇರಲೆಯಗೆಲ್ಲಿನಲ್ಲಿ ಹಾಜಿರಾ ಕೂತಿದ್ದಳು. read more »
ಇರುಳು ಅರ್ಧ ಕಳೆದು ಮುಗಿದು ಬಹಳ ಸಮಯವಾಗಿದ್ದರೂ, ಆಕಾಶದತುಂಬ ಚಂದ್ರನಬೆಳಕು ತುಂಬಿಕೊಂಡು, ಮರಿಯಮ್ಮ ಇನ್ನು ಕತ್ತಲಾಗುವುದೇ ಇಲ್ಲವೇನೋ ಎಂಬ ಹೆದರಿಕೆಯಲ್ಲಿ ಕೆಟ್ಟುಹೋಗುತ್ತಿದ್ದ ಬೆಂಕಿಗೆ ಉಳಿದ ಒಣಎಲೆಗಳನ್ನು ತುಂಬಿ, ಊದುಕೊಳವೆಯಿಂದ ಊದಿ, ಹೊಗೆಎಬ್ಬಿಸಿ, ಕಣ್ಣೀರು ತುಂಬಿಕೊಂಡು ಕೂತಿದ್ದರು.
ಹೂವಿನ ಕೊಲ್ಲಿಯ ಕೆಳಗಿನ ಹಾಡಿಯಲ್ಲಿ ಉಳಿದ ಎಲ್ಲರೂ ಚಿಮಿಣಿ ದೀಪ ಕೆಡಿಸಿ ಬಾಗಿಲು ಹಾಕಿಕೊಂಡು ತಮ್ಮ ತಮ್ಮ ಲೈನು ಮನೆಗಳನ್ನು ಕತ್ತಲು ಮಾಡಿಕೊಂಡು ಮೌನವಾಗಿ ನಿದ್ದೆ ಹೋಗಲು ನೋಡುತ್ತಿದ್ದರು. ಮರಿಯಮ್ಮನ ಪಕ್ಕದ ಲೈನುಮನೆಯಿಂದ ಆಸಿಯಾಳ ಆರುತಿಗಳ ಮಗು ಬಾಯಿತೆರೆದು ಅಳುತ್ತಿತ್ತು. ಆಸಿಯಾ ಯಾವುದೋ ಹಾಡುಹೇಳಿ ಆ ಮಗುವನ್ನು ಮಲಗಿಸಲು ನೋಡಿದರೆ ಲೈನುಮನೆಯ ಬೀಡಾಡಿ ನಾಯಿಗಳು ಆ ಮಗುವಿನ ಅಳುವನ್ನು ಅಣಕಿಸುತ್ತಾ ಚಂದ್ರನ ಕಡೆನೋಡಿ ಊಳಿಡುತ್ತಿದ್ದವು. ಆಸಿಯಾಳ ಗಂಡ ಸೈಕಲ್ ಮಹಮ್ಮದ್ ಕ್ಯಾಕರಿಸುತ್ತಾ ಎದ್ದು ಎದುರುಬಾಗಿಲಿನ ಚಿಲಕವನ್ನು ಸದ್ದುಮಾಡಿ ತೆಗೆದು ಹೊರಬಂದು ಬೀಡಾಡಿ ನಾಯಿಗಳನ್ನು ಬೈಯಲೆಂದು ಬಾಯಿತೆರೆದನು. ಅವನಿಗೆ ಮರಿಯಮ್ಮ ಬೆಂಕಿಯ ಮುಂದೆ ಬಾಗಿ ಕೂತಿರುವುದನ್ನು ಕಂಡು ಏನೂ ಹೇಳಲು ಬಾಯಿಬಾರದೆ ಪುನಃ ಬಾಗಿಲು ಹಾಕಿ ಒಳಹೊಕ್ಕು ತಾನೂ ಒಂದು ಹಾಡು ಹೇಳುತ್ತಾ ಮಗುವನ್ನು ಮಲಗಿಸಲು ನೋಡಿದನು. read more »
ಹೂವಿನಕೊಲ್ಲಿಯ ಕೆಳಗಿನಹಾಡಿಯ ಲೈನುಮನೆಯ ಆಫೀಸು ರೂಮಿನಲ್ಲಿ ಹರಕು ಹಾಸಿಗೆಯ ಮೇಲೆ ಮರಣವನ್ನು ಎದುರುನೋಡುತ್ತಾ ವರ್ಷಗಳಿಂದ ಮಲಗಿರುವ ಕುಂಞಿಪಾತುಮ್ಮ ಪ್ರತಿಯೊಂದು ಉಸಿರಿನಲ್ಲೂ ತಾನು ಈ ಲೋಕವನ್ನು ಬಿಟ್ಟು ಹೋಗುವೆನೆಂದು ಮೂಸಕಾಕನನ್ನು ಹೆದರಿಸುತ್ತಿದ್ದಳು. ಪ್ರತಿಯೊಂದು ಸಲವೂ ತಿನ್ನಲು ಕೊನೆಯದಾಗಿ ಏನಾದರೂ ಬೇಕೆಂದು ಕಣ್ಣಲ್ಲೇ ಬೇಡಿಕೊಂಡು ಮೂಸಕಾಕಾ ಪ್ರತಿಸಲವೂ ರಾತ್ರಿ ಕಾವಲು ಮುಗಿಸಿ ಬರುವಾಗ ತೋಟದಿಂದ ಹಲಸಿನ ತೊಳೆಗಳನ್ನೋ, ನೇರಳೆಯ ಹಣ್ಣುಗಳನ್ನೋ, ಕಿತ್ತಳೆಯ ಹಣ್ಣುಗಳನ್ನೋ ಯಾರೂ ಕಾಣದ ಹಾಗೆ ತಮ್ಮ ಮಳೆಕೋಟಿನ ಜೇಬಿನಲ್ಲಿ ಅಡಗಿಸಿಕೊಂಡು ಬರುತ್ತಿದ್ದರು. ಈ ಕಾರಣಕ್ಕಾಗಿಯೇ ಅವರು ಉಸ್ಮಾನ್ ರೈಟರಿಗೆ ಹೇಳಿ ಹೂವಿನ ಕೊಲ್ಲಿಯ ದೊಡ್ಡ ಗೇಟಿನ ಕಾವಲು ಕಾಯುವ ಕೆಲಸವನ್ನು ಬದಲಿಸಿಕೊಂಡು ರಾತ್ರಿ ಕಾವಲಿನ ಕೆಲಸವನ್ನು ಕಷ್ಟವಾದರೂ ವಹಿಸಿಕೊಂಡಿದ್ದರು. ರಾತ್ರಿಯಾದರೆ ಕಾಫಿಕಾಡಿಗೆ ನುಗ್ಗುವ ಕಾಡುಪಾಪಗಳ ಜೊತೆ ಹೊಡೆದಾಡಿ ಅವುಗಳ ಪಾಲಾಗುವ ಹಣ್ಣುಗಳನ್ನು ಕುಂಞಿಪಾತುಮ್ಮಳ ಬಾಯಿಗೆ ತಿನ್ನಿಸುತ್ತಿದ್ದರು. ನಡುನಡುವಲ್ಲಿ ನಿದ್ದೆ ತೂಗುತ್ತಾ ಮಧ್ಯಾಹ್ನದ ಗಂಜಿಬೇಯಿಸಿ ಹೆಂಡತಿಯ ಬಾಯಿಗಿಟ್ಟು ಅವಳ ತಲೆಯ ಬಳಿಯೇ ನಿದ್ದೆ ಹೋಗಿ, ಕತ್ತಲಾಗುವ ಮೊದಲೇ ತಡಬಡಿಸಿ ಎದ್ದು, ಮಳೆಯ ಕೋಟು ಹಾಕಿ, ಟೊಪ್ಪಿ ತಲೆಗೇರಿಸಿ, ಗಂಬೂಟಿನೊಳಗೆ ಕಾಲು ತೂರಿಸಿ, ಟಾರ್ಚ್ ಕೈಗೆತ್ತಿ ಹೊರಡುತ್ತಿದ್ದರು. ಹೊರಡುವಾಗ ಅವರು ಹೆಂಡತಿಯ ತೆರೆದ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿ ನಾನು ತಿರುಗಿಬರುವವರೆಗೆ ತೀರಿಹೋಗಬೇಡ ಎನ್ನುವಂತೆ ಬೇಡಿಕೊಳ್ಳುತ್ತಿದ್ದರು. ಆಗಬಹುದು ಎನ್ನುವಂತೆ ಕುಂಞಿಪಾತುಮ್ಮ ತೆರೆದ ಕಣ್ಣುಗಳಲ್ಲೇ ನಸುನಗುತ್ತಿದ್ದರು. read more »
ದಿನಾ ಬರುವ ವಿಮಾನ ಆಕಾಶದಲ್ಲಿ ಬೆಳ್ಳಗೆ ಗೆರೆ ಎಳೆದುಕೊಂಡು ಈ ದಿನವೂ ಮೂಡಣದಲ್ಲಿ ಸಣ್ಣದಾಗಿ ಕಾಣೆಯಾಗುತ್ತಿತ್ತು.
ದಿನಾ ಬರುವ ವಿಮಾನ ಸಣ್ಣ ಹಕ್ಕಿಯಂತೆ ಮರಗಳ ನಡುವಿಂದ ಆಕಾಶದಲ್ಲಿ ಕಾಣಿಸಿಕೊಂಡರೆ ಹೂವಿನಕೊಲ್ಲಿಯ ಆಳುಗಳು ಕೆಲಸ ಕೈ ಬಿಟ್ಟು ಮಧ್ಯಾಹ್ನದ ಗಂಜಿ ಉಣ್ಣಲು ಕೆಳಗಿನ ಹಾಡಿಗೋ ಮೇಲಿನ ಹಾಡಿಗೋ ಹೋಗುವ ಹೊತ್ತಾಯಿತು ಎಂದುಕೊಳ್ಳುತ್ತಿದ್ದರು. ಹಾಗೆ ಅಂದುಕೊಳ್ಳುತ್ತಿದ್ದಂತೆ ಸಾಹುಕಾರರ ಬಂಗಲೆೆಯ ಹೂವಿನ ತೋಟದ ದಿಬ್ಬದಿಂದ ಹಾಲು ಕರೆಯುವ ನಂಬಿಯಾರರು ಊದುವ ಮಧ್ಯಾಹ್ನದ ತುರಿಯ ಸದ್ದುಮೊಳಗುತ್ತಿತ್ತು. read more »
ಹಾರೂನ್ ಕಾಣೆಯಾಗಿರುವನು ಎಂಬ ಸಂಗತಿ ಬಹಳ ಹೊತ್ತಿನವರೆಗೆ ಯಾರ ಅರಿವಿಗೂ ಬಂದಿರಲಿಲ್ಲ. ಸಿದ್ಧಾಪುರ ಸಂತೆಯ ಶನಿವಾರ ಬೆಳಬೆಳಿಗ್ಗೆಯೇ ಎಲ್ಲಿಂದಲೋ ಬಂದಿದ್ದ ಅಜ್ಮೀರಿನ ಮಿಠಾಯಿ ಪಾಪಾ ತಮ್ಮ ಮಿಠಾಯಿ ತುಂಬಿದ್ದ ಬಟ್ಟೆಯ ಗಂಟನ್ನು ಹಜಾರದಲ್ಲಿ ಬಿಚ್ಚಿ ಹರಡಿ ಕೂತಿದ್ದರು. ಅವರು ತಮ್ಮ ಹಸಿರು ನಿಲುವಂಗಿಯ ಜೇಬಿನೊಳಗಿಂದ ಬಗೆ ಬಗೆಯ ಅತ್ತರು ಬಾಟಲಿಗಳನ್ನು ತೆಗೆದು ನೆಲದಲ್ಲಿ ಸಾಲಾಗಿ ಜೋಡಿಸಿಟ್ಟು ಇನ್ನೊಂದು ಜೇಬಿನೊಳಗಿಂದ ಕಲ್ಲು ಹರಳುಗಳ ಕೈ ಉಂಗುರಗಳ ಗಂಟನ್ನು ಬಿಚ್ಚಿ ನೆಲದಲ್ಲಿ ಸುರಿದು ಕೂತಿದ್ದರು. ಅವರು `ಯಾ ಖ್ವಾಜಾ.. ಯಾ ಮುಹಿಯುದ್ದೀನ್' ಎಂದು ತಮ್ಮ ಎಲ್ಲ ಬೆರಳುಗಳ ಒಂದೊಂದು ನಟಿಕೆಯನ್ನು ಮುರಿದು ಸದ್ದುಮಾಡಿ ನಡುನಡುವಲ್ಲಿ ಕೆಮ್ಮಿ ಗಂಟಲು ಸರಿಮಾಡಿ ಯಾಕೆ ಯಾರೂ ಬರುತ್ತಲೇ ಇಲ್ಲವಲ್ಲ ಎಂದು ತಮ್ಮ ಅಗಲ ಕಣ್ಣುಗಳಿಂದ ಸುತ್ತಮುತ್ತ ನೋಡುತ್ತಿದ್ದರು. read more »
ಕಾಣೆಯಾದ ಹಾರೂನನು ತನ್ನ ಬಾಪಾ ಉಸ್ಮಾನ್ ರೈಟರ ಹೆಗಲ ಮೇಲೆ ರಾಜಕುಮಾರನಂತೆ ಕಾಲಾಡಿಸಿಕೊಂಡು ಬರುತ್ತಿರುವನು ಎಂಬ ಅರಿವಿಲ್ಲದೆ ಅಕ್ಕ ಹಾಜಿರಾ ಅವನನ್ನು ಹುಡುಕುತ್ತಾ ನೀರು ಸೇದುವ ಸೈದಾಲಿಯ ಹಿಂದೆ ನಡೆಯುತ್ತಿದ್ದಳು. ಹೂವಿನ ಕೊಲ್ಲಿಯ ಬಂಗಲೆಯ ಕಡೆಯಿಂದ ಬರುವ ಕಾಲುದಾರಿ, ಮೇಲಿನ ಪಾಡಿಯಿಂದ ಬರುವ ಕಾಲುಹಾದಿ, ರಾಟೆಮನೆಯಿಂದ ಬರುವ ದಾರಿ ಈ ಮೂರು ದಾರಿಗಳು ಸೇರುವ ಕೂಡುದಾರಿಯ ನಡುವೆ ಬೋರರ್ ಬಂದ ಕಾಪಿಯ ಬೊಡ್ಡೆಗಳಿಗೆ ಬೆಂಕಿ ಹಾಕಿಕೊಂಡು ಉರಿಸುತ್ತಾ, ಉರಿಯುವ ಬೆಂಕಿಗೆ ನೀರು ಹಾಯಿಸಿ ಕೆಡಿಸುತ್ತಾ ಇದ್ದಿಲು ಮಾಡುವ ಸಿಲೋನ್ ಅಣ್ಣಾಚಿ ಮುಖ ಗಂಟುಮಾಡಿಕೊಂಡು ಬೆಂಕಿಯ ಸುತ್ತ ಓಡಾಡುತ್ತಿದ್ದ. read more »
ಮಳೆನಿಂತು ಎಲ್ಲರೂ ಹೋಗಿ ಆಗಿತ್ತು. ಬರೆಯ ಮೇಲಿಂದ ಕಾಪಿಗೆಲ್ಲುಗಳ ನಡುವಿಂದ, ಕಿತ್ತಳೆಗಿಡಗಳ ಮೇಲಿನಿಂದ ಅರ್ಧ ಚಂದ್ರ ಅರೆಬರೆಯಾಗಿ ಕಾಣಿಸಿಕೊಳ್ಳುತ್ತಿದ್ದ. ಮಳೆಗೆ ಸಿಲುಕಿ ನಲುಗಿ ಹೋಗಿದ್ದ ಬರೆಯ ಮೆಲಿನ ಕಾಡು ಹೂಗಳು ಚೇತರಿಸಿಕೊಂಡು ಹಿತ್ತಲಲ್ಲಿ ಉರಿಯುತ್ತಿದ್ದ ಚಿಮಿಣಿ ದೀಪದ ನಸುಕು ಬೆಳಕಿನಲ್ಲಿ ತೂಗಾಡಿಕೊಂಡು ನಿಂತಿದ್ದವು. ಆ ಕತ್ತಲಲ್ಲಿ ರಂಗೋಲಿ ಪುಡಿಯ ರಂಧ್ರ ಬಾಯಿತೆರೆದುಕೊಂಡು ನಿಂತು ಎಲ್ಲಿಂದಲೋ ಹರಿದು ಅದರೊಳಗೆ ಸೇರಿಕೊಳ್ಳುತ್ತಿದ್ದ ಮಳೆಯ ನೀರು ದಾರೆದಾರೆಯಾಗಿ ಬಂದು ಕೆಳಗೆ ಚರಂಡಿಯಲ್ಲಿ ಸೋರಿ ಹೋಗುತ್ತಿತ್ತು. ಇದು ಯಾವುದರ ಪರಿವೆಯೂ ಇಲ್ಲದೆ ಹಿತ್ತಲಿನಲ್ಲಿ ಮದರಂಗಿ ಅರೆಯುವ ಕಲ್ಲಿನ ಮುಂದೆ ಚಿಮಿಣಿ ದೀಪವೊಂದನ್ನು ಉರಿಸಿ ಇಟ್ಟುಕೊಂಡು ಹಾಜಿರಾ ಮದರಂಗಿಯ ಎಲೆಗಳಿಗೆ ಸುಣ್ಣ ಸೇರಿಸಿ ಅರೆಯುತ್ತಾ ಕುಳಿತಿದ್ದಳು read more »
ನಡುರಾತ್ರಿಯಲ್ಲಿ ಮತ್ತೆ ಹಿಡಿದಿದ್ದ ಮಳೆ ಬೆಳಗಾದರೂ ಬಿಡದೆ ಸುರಿಯುತ್ತಿತ್ತು. 'ಇದೆಂತದು ದೆವ್ವದಂತಹ ಮಳೆ ರೈಟರೇ..' ಎಂದು ಗೊಣಗಿ ಕಾವಲುಗಾರ ಕುಂಞಿಕಣ್ಣ ತಾನು ನೆನೆಯುತ್ತಾ ಕೊಡೆಯನ್ನು ಉಸ್ಮಾನ್ ರೈಟರ ತಲೆಯ ಮೇಲೆ ಹಿಡಿದು ನಿಂತಿದ್ದ. read more »
ಕೆಳಗಿನ ಪಾಡಿಯ ಮೇಲಕ್ಕಿರುವ ದೇವರಕಾಡು ಹೂವಿನ ಕೊಲ್ಲಿಯ ಒಂದು ಭಾಗವಾಗಿತ್ತು. ಆದರೂ ಅಲ್ಲಿ ಕಾಫಿಯನ್ನೂ ಬೆಳೆಸದೆ ಏಲಕ್ಕಿಯನ್ನೂ ಬೆಳೆಸದೆ ಅದು ಕಾಡಿನಿಂದಲೂ ಕಮ್ಯುನಿಷ್ಟ್ ಬಲ್ಲೆಯಿಂದಲೂ ತುಂಬಿಕೊಂಡು ಅದರೊಳಗೆ ಹೊಕ್ಕರೆ ತಾವು ಎಲ್ಲಿರುವೆವು ಎಂದು ಯಾರಿಗೂ ಅರಿವಾಗುತ್ತಿರಲಿಲ್ಲ. ಬೀಟೆಯ ಮರಗಳೂ, ಹೊನ್ನೆಯ ಮರಗಳೂ, ಹೆಬ್ಬಲಸು, ಬೂರುಗ, ಗಂಧದ ಮರಗಳೂ ಅಲ್ಲಿ ಆಕಾಶದ ಎತ್ತರಕ್ಕೆ ಬೆಳೆದು ನಿಂತಿದ್ದವು. ಬೇರೆ ಎಲ್ಲಿಯೂ ಕಾಣದ ಕಾಡುಜಾತಿಯ ಪಾನವಾಳದ ಮರಗಳೂ ಅಲ್ಲಿ ಯಾವಾಗಲೂ ಹೂಬಿಟ್ಟುಕೊಂಡು ನಿಂತಿರುತ್ತಿದ್ದವು. ಅಲ್ಲಿ ಹರಿಯುವ ತೊರೆಯೊಂದು ಚಳಿ ಬಿಸಿಲೆನ್ನದೆ ಯಾವಾಗಲೂ ಹರಿಯುತ್ತ ರಾಟೆ ಮನೆಯ ಬಲಕ್ಕಿರುವ ದೊಡ್ಡ ಕೆರೆಯನ್ನು ಸೇರುತ್ತಿತ್ತು. ಮಳೆ ಬರಲು ತೊಡಗಿದರೆ ಎಲ್ಲೆಲ್ಲಿಂದಲೋ ಹರಿದು ಬರುವ ರಾಡಿನೀರು ಆ ತೊರೆಯನ್ನು ಸೇರಿ ಕೆರೆಯೂ ತುಂಬಿ ಹರಿಯಲು ಶುರು ಮಾಡುತ್ತಿತ್ತು. ಕೆರೆ ತುಂಬಿ ಹರಿಯುವುದನ್ನು ಅರಿತಿರುವವೋ ಎಂಬಂತೆ ಕೆರೆಯ ನೂರಾರು ಮೀನುಗಳು ತೊರೆಯನ್ನು ಏರಿ ಈಜಿಕೊಂಡು ಅಲ್ಲಿ ಇಲ್ಲಿ ಹೊಂಡ ಪಾತಿಗಳಲ್ಲಿ ಸೇರಿಕೊಂಡು ಮೊಟ್ಟೆಯಿಡಲು ಶುರುಮಾಡುತ್ತಿದ್ದವು. read more »
ನೀರು ಸೇದುವ ಸೈದಾಲಿಯು ಸಿದ್ಧಾಪುರ ಸಂತೆಯ ದಿನ ರಸ್ತೆಯಲ್ಲಿ ತಲೆಯ ಮೇಲೆ ಅರ್ದ ಬಟ್ಟಿ ಭತ್ತ ಹೊತ್ತು ಹೂವಿನ ಕೊಲ್ಲಿಯ ಟ್ರಾಕ್ಟರನ್ನು ಹಿಂಬಾಲಿಸಿಕೊಂಡು ಬೆವರುತ್ತಾ ನಡೆಯುತ್ತಿದ್ದನು. ಆದರೂ ಅವನ ಮುಖದಲ್ಲಿ ಎಂತಹದೋ ನಗುವಿತ್ತು. ಟ್ರಾಕ್ಟರ್ನ್ನು ನಡೆಸುತ್ತಿದ್ದ ವೇಲಾಯುದನೂ ಆಗೊಮ್ಮೆ ಈಗೊಮ್ಮೆ ಹಿಂತಿರುಗಿ ನೋಡುತ್ತಾ ಇಳಿಜಾರಿನಲ್ಲಿ ನಿಧಾನವಾಗಿ ಟ್ರಾಕ್ಟರು ಬಿಡುತ್ತಾ ತಾನೂ ಮುಗುಳ್ನಗುತ್ತಾ ಕೂತಿದ್ದನು. ಟ್ರಾಕ್ಟರಿನ ಹಿಂಬದಿಯಲ್ಲಿ ಮುಖವನ್ನು ಗಂಭೀರಮಾಡಿಕೊಂಡು ಕೂತಿದ್ದ ಉಸ್ಮಾನ್ರೈಟರು ಈ ಸೈದಾಲಿಯ ಬತ್ತದ ಬುಟ್ಟಿಯನ್ನು ಹೊರಲಾರದೆ ಎಲ್ಲಿ ರಸ್ತೆಯಲ್ಲಿ ಬೀಳಿಸುವನೋ ಎಂದು ಯೋಚಿಸಿ ತಾವೂ ಬೆವರಿಕೊಂಡು ಅಲುಗಾಡುತ್ತಾ ಕೂತಿದ್ದರು. ಸೈದಾಲಿಯ ಹಣೆಬರಹವನ್ನು ಯೋಚಿಸಿಕೊಂಡು ಅವರಿಗೆ ಸಂಕಟವಾಗುತ್ತಿತ್ತು. read more »
