1. ಜ್ಹುಲೈಕಾ ಎಂಬ ಮಾತನಾಡುವ ಗಿಳಿ

 

ಹೂವಿನ ಕೊಲ್ಲಿ ಕಾಫಿ ತೋಟ ಬೆಳಗಿನ ಎಳೆ ಬಿಸಿಲಿನಲ್ಲಿ ನಗುತ್ತಾ ಮಲಗಿತ್ತು. ಸದ್ದಿಲ್ಲದೆ ಸುಳಿದಾಡುವ ಗಾಳಿ ಇಂದು ಇನ್ನೂ ಸದ್ದಿಲ್ಲದೆ ಕಾಫಿಗಿಡಗಳ ನಡುವೆ ಸುಮ್ಮನೆ ಚಲಿಸುತ್ತಾ ತೋಟಕ್ಕೆ ತೋಟವೇ ಇಂದು ಇನ್ನಷ್ಟು ಖುಷಿಯಲ್ಲಿ ಬೀಗುತ್ತಿರುವಂತೆ ನೆರಳಿನ ಮರಗಳು ಇನ್ನಷ್ಟು ತೋಳು ಚಾಚಿ ಎಲ್ಲವನ್ನೂ ಅಕ್ಕರೆಯಿಂದ ನೋಡುತ್ತಿತ್ತು.

 

ಕಾಫಿ ಹಣ್ಣುಗಳ ಕೊಯ್ದುಮುಗಿದು, ಬಿದ್ದಬೀಜಗಳ ಹೆಕ್ಕಿಮುಗಿದು ಬೇರೆ ಏನೂ ಕೆಲಸವಿಲ್ಲದೆ ಗಿಡಗಳ ಅಡಿಯಲ್ಲಿ ಆಳುಗಳು ಓಡಾಡದೆ ನಾನಾ ತರಹದ ಹಕ್ಕಿಗಳು ಬೆಳಿಗ್ಗೆಯೇ ಸದ್ದು ಮಾಡಿಕೊಂಡು ಮರಗಳ ಕೊಂಬೆಗಳಿಂದ ನೆಲದ ಕಡೆಗೆ ನೆಲದ ಮೇಲಿನಿಂದ ಆಕಾಶದ ಕಡೆಗೆ ಸಣ್ಣಗೆ ಸದ್ದು ಮಾಡುತ್ತಾ ಹಾರಾಡುತ್ತಾ ಬೆಳಗಿನ ಬಿಸಿಲಿಗೆ ಅವುಗಳ ಮೈ ಹೊಳೆಯುತ್ತಿತ್ತು. ಒಂದೆರೆಡು ಕಾಡುಮೈನಾ ಹಕ್ಕಿಗಳು ಕಾಲುದಾರಿಯ ನಡುವಲ್ಲಿ ಕುಪ್ಪಳಿಸಿಕೊಂಡು ಸರಸದಲ್ಲಿ ಜಗಳವಾಡುತ್ತಿರುವಂತೆ ಹಾಡುತ್ತಿದ್ದವು.

ಇಂದು ಯಾಕೆ ಎಲ್ಲಹೀಗೆ ಇಷ್ಟುಚಂದವಾಗಿದೆ ಎಂಬುದ ಅರ್ಥಮಾಡಿಕೊಂಡವರಂತೆ ತೋಟದ ಬಾಯಿಬಾ

ರದ ಹಸು,ಕರು,ಕೋಣಗಳು ಹುಲ್ಲು ಬಾಣೆಯಲ್ಲಿ ಮೆಲ್ಲಗೆ ಸದ್ದುಮಾಡಿಕೊಂಡು ಅವುಗಳ ಕೊರಳಿನ ಮರದ ಗಂಟೆಗಳು ಆ ಸದ್ದಿಗೆ ಸೇರಿಕೊಂಡು ಅಲ್ಲಾಡಿಕೊಂಡು ಮೇಯುತ್ತಿದ್ದವು. ಎಲ್ಲಿಂದಲೋ ಬೆಳಿಗ್ಗೆಯೇ ಇಳಿದು ಬಂದವರಂತೆ ಹಾರಾಡುತ್ತಿದ್ದ ಏರೋಪ್ಲೇನ್ ಚಿಟ್ಟೆಗಳು ಎಲ್ಲ ಗಿಡಮರಹೂಹಣ್ಣುಗಳನ್ನು ಸವರಿನೋಡುತ್ತಾ ಒಂದರ ಮೈ ಇನ್ನೊಂದರ ಮೇಲೆ ತಾಗದಂತೆ ನಾಜೂಕಾಗಿ ಅಂತರ ಕಾಪಾಡುತ್ತಾ ಬಟ್ಟೆ ಒಣಗಿಸುವ ತಂತಿಗಳ ಮೇಲೆ ವಿಶ್ರಮಿಸುತ್ತಾ ಸದ್ದಿಲ್ಲದ ಆ ಬೆಳಕಿನಲ್ಲಿ ವೈಯ್ಯಾರಮಾಡುತ್ತಾ ಒಂದನ್ನೊಂದು ನೋಡಿಕೊಂಡು ನಗಾಡಿಕೊಂಡು ಅರ್ಥ ಮಾಡಿಕೊಂದು ಕೂತಿದ್ದವು.

ಜ್ಹುಲೈಕಾ ಎಂಬ ಮಾತನಾಡುವ ಗಿಳಿ ತನ್ನ ಪಂಜರದೊಳಗಿಂದ ಎಲ್ಲವನ್ನೂ ನೋಡುತ್ತಾ ಕಾಲಿನಿಂದ ಪಂಜರದ ತಂತಿಗಳನ್ನು ಕೆರೆಯುತ್ತಾ, ತನ್ನ ಗಾಯದ ಕೊಕ್ಕಿನಿಂದ ಕೊಳೆತು ಹೋಗಿದ್ದ ಅತ್ತಿಯ ಹಣ್ಣುಗಳನ್ನು ಕುಕ್ಕಿ ನಿರಾಶೆಗೊಂಡು ಇನ್ನು ಏನು ಕೀಟಲೆ ಮಾಡುವುದು ಎಂದು ತೀರ್ಮಾನಿಸಿಕೊಂಡು ಮಾತನಾಡಲು ತವಕಿಸುತ್ತಿತ್ತು. ಅದರ ಮಾತುಗಳನ್ನು ಕೇಳಿಸಿಕೊಂಡು ಹೇಗೆ ಸಹಿಸಿಕೊಂಡಿರುವುದು ಎನ್ನುವ ಭಾವದಲ್ಲಿ ಗೋಡೆಯಲ್ಲಿದ್ದ ಬೆಕ್ಕಿನ ಚಿತ್ರ ಗಾಳಿಗೆ ಅಲ್ಲಾಡಲುತೊಡಗಿತು.

ಅದು ಒಂದು ಪರ್ಷಿಯನ್ ಬೆಕ್ಕಿನ ಚಿತ್ರ. ನಮ್ಮ ಇಂಡಿಯಾದಲ್ಲಿ ಎಲ್ಲೂ ಇಂತಹ ಸುಂದರವಾದ ಬೆಕ್ಕು ಇಲ್ಲ ಎಂದು ಆ ಬೆಕ್ಕಿನ ಚಿತ್ರವಿದ್ದ ಕ್ಯಾಲೆಂಡರ್ ಒಂದನ್ನು ಸುಮಾರು ಏಳೆಂಟು ವರ್ಷಗಳ ಹಿಂದೆಯೇ ಮುರುಗಾಮಲೆ ದರ್ಗಾದಿಂದ ತಂದಿದ್ದ ಉಸ್ಮಾನ್ ರೈಟರು ಅದರಲ್ಲಿದ್ದ ದಿನ, ತಿಯದಿ, ತಿಂಗಳುಗಳು ಮುಗಿದು ಎಷ್ಟೋ ವರ್ಷಗಳಾಗಿದ್ದರೂ ಅದನ್ನು ಅಲ್ಲೇ ತೂಗಲು ಬಿಟ್ಟಿದ್ದರು. ಅವರು ಬೆಳಿಗ್ಗೆ ಟೀ ಕುಡಿದು ಟೋಪಿ ಹಾಕಿಕೊಂಡು ಬೂಟುಧರಿಸಿ ಬೆಳಗಿನ ಚಕ್ರೋಲಿಗೆ ಹೊರಟು ಮೆಟ್ಟಲಿಳಿಯುವ ಮೊದಲು ಆ ಬೆಕ್ಕನ್ನೊಮ್ಮೆ ಆನಂದದಿಂದ ನೋಡುತ್ತಿದ್ದರು. ಆಗ ಜ್ಹುಲೈಕಾ ಎಂಬ ಆ ಮಾತನಾಡುವ ಗಿಳಿ `ರೈಟರೇ ಗುಡ್ಮಾರ್ನಿಂಗ್' ಎಂದು ಕೀಟಲೆಯಲ್ಲಿ ಉಲಿಯುತ್ತಿತ್ತು. ಮತ್ತೆ ಅವರು ಬೆಳಗಿನ ನಾಷ್ಟಾ ಮಾಡಲು, ಮಧ್ಯಾಹ್ನದ ಊಟ ನಿದ್ದೆ ಮಾಡಲು ಬರುವಾಗಲೂ ಹಾಗೇ ಉಲಿಯುತ್ತಿತ್ತು. ರೈಟರು ಸಂಜೆ ಬರುವಾಗ ಕೈಯಲ್ಲಿ ಅತ್ತಿಯ ಹಣ್ಣುಗಳನ್ನು, ನೇರಳೆ ಹಣ್ಣುಗಳನ್ನು ಕಂಬಳಿಹಣ್ಣುಗಳನ್ನು ಹಿಡಕೊಂಡು ಬರದಿದ್ದರೆ ಜ್ಹುಲೈಕಾ ಸಿಟ್ಟು ಮಾಡಿಕೊಂಡವಳಂತೆ ಮೌನವಾಗಿರುತ್ತಿದ್ದಳು.

ಗೋಡೆಯಲ್ಲಿದ್ದ ಪರ್ಷಿಯನ್ ಬೆಕ್ಕಿನ ಚಿತ್ರ ಯಾವಾಗಲೂ ಇದನ್ನೆಲ್ಲಾ ನೋಡಿಕೊಂಡು ಮನಸಿನಲ್ಲೇ ನಗಾಡುತ್ತಿತ್ತು. 'ಆ ಬೆಕ್ಕು ಯಾವತ್ತಾದರೂ ಒಂದುದಿನ ನಿನ್ನನ್ನು ಹಿಡಿದು ತಿಂದು ಬಿಡಬಹುದೆಂಬ ಹೆದರಿಕೆ ಇಲ್ಲವೇ ನಿನಗೆ ರಂಡೆಯ ಮಗಳೇ' ಎಂದು ಉಸ್ಮಾನ್ ರೈಟರೂ ನಗುತ್ತಿದ್ದರು. ಆಗ ಜ್ಹುಲೈಕಾ ಎಂಬ ಆ ಮಾತನಾಡುವ ಗಿಳಿ ಬೇಕೆಂತಲೇ ತನ್ನ ಕೀರಲು ದನಿಯಲ್ಲಿ ಕಿರುಚುತ್ತಿತ್ತು. ಉಸ್ಮಾನ್ ರೈಟರೂ ಮತ್ತು ಜ್ಹುಲೈಕಾ ಎಂಬ ಈಗಿಣಿಯೂ ಹೀಗೆ ಸರಸದಲ್ಲಿ ತೊಡಗಿದರೆಂದರೆ ಮನೆಯಲ್ಲಿ ಎಲ್ಲರೂ ಖುಷಿಯಲ್ಲಿರುತ್ತಿದ್ದರು. ಅವರಿಬ್ಬರೂ ಮಾತಾಡದೆ ಮೌನವಾಗಿದ್ದರೆ ಅಲ್ಲಿ ಇನ್ನು ಸ್ವಲ್ಪ ಹೊತ್ತಲ್ಲಿ ಏನೋ ಸಂಭವಿಸಲಿದೆ ಎಂದು ಅರ್ಥ ಹಾಗಾಗಿ ಉಸ್ಮಾನ್ ರೈಟರ ಮುದಿಯಾದ ತಾಯಿ ಹಾಜಮ್ಮ ಗೊಣಗಿಗೊಣಗಾಡಿಕೊಂಡು ಆಗಾಗ ಮನಸಿನಲ್ಲೇ ನಗಾಡಿಕೊಂಡು ತಮ್ಮ ಸುರುಳಿ ಸುರುಳಿಯಾಗಿದ್ದ ದೇಹವನ್ನು ಗಾಳಿಯಲ್ಲಿ ತೇಲಿಹೋಗದ ಹಾಗೆ ಬಿಗಿಮಾಡಿಕೊಂಡು ಎಲ್ಲ ಕಡೆ ಓಡಾಡುತ್ತಾ ಎಲ್ಲವೂ ಸರಿಯಾಗಿರುವಂತೆ ನೋಡಿಕೊಳ್ಳಲು ಹೆಣಗಾಡುತ್ತಿದ್ದರು. ಅವರು ಜ್ಹುಲೈಕಾ ಎಂಬ ಆ ಗಿಳಿಗೆ ಶಾಪ ಹಾಕುತ್ತಾ ಅದರ ಪಂಜರದೊಳಕ್ಕೆ ಏನ್ನನ್ನಾದರೂ ತಿನ್ನಲೋ ಕುಡಿಯಲೋ ಇಡುತ್ತಾ ಉಸ್ಮಾನ್ ರೈಟರ ಎರಡನೆಯ ಹೆಂಡತಿ ಆಯಿಶಾಳಿಗೆ ಸಾಂತ್ವನದ ಮಾತು ಆಡುತ್ತಾ ಹರ್ನಿಯಾದ ನೋವಿನಿಂದ ಭೂಮಿಯೇ ಬಾಯಿಬಿಡುವಂತೆ ಆಗಾಗ ಹಠಾತ್ತನೆ ಬೊಬ್ಬಿರಿಯುವ ಆಯಿಶಾಳ ಎರಡು ವರ್ಷದ ಮಗ ಹಾರೂನನ ವೃಷಣಗಳಿಗೆ ತಣ್ಣಿರು ಸುರಿದು ಸುಮ್ಮನಾಗಿಸುತ್ತಿದ್ದರು. ಆರು ತಿಂಗಳ ಆತನ ತಂಗಿ ಸಕೀನಾಳ ಬಟ್ಟೆಯ ತೊಟ್ಟಿಲನ್ನು ಅಲ್ಲಾಡಿಸಿ ಹಾಡು ಹೇಳಿ ಸುಮ್ಮನೆ ಮಲಗಿಸುತ್ತಿದ್ದರು. ಉಸ್ಮಾನ್ ರೈಟರ ಮೊದಲ ಹೆಂಡತಿಯ ಕೊನೆಯ ಮಗಳಾದ ಹಾಜಿರಾಳ ಮೂತ್ರದ ಹಾಸಿಗೆಯನ್ನು ಬಿಸಿಲಿನಲ್ಲಿ ಒಣಗಿಸುತ್ತಾ ಮೊದಲ ಹೆಂಡತಿಯ ಇನ್ನಿಬ್ಬರು ಮಕ್ಕಳ ಅಂಗಿ ಚಡ್ಡಿಗಳನ್ನು ಎಲ್ಲೆಲ್ಲಿಂದಲೋ ಹೆಕ್ಕಿ ಬಟ್ಟೆ ಒಗೆಯುವ ಕಲ್ಲಿನ ಮೇಲೆ ತಂದಿಡುತ್ತಾ ಅನ್ನದ ಪಾತ್ರೆಯಲ್ಲಿ ಅಕ್ಕಿ ಅಗುಳಾಗಿದೆಯಾ ಸಾರಿನ ಮಡಿಕೆಯಲ್ಲಿ ಮಾಂಸ ಕುದಿಯುತ್ತಿದೆಯಾ ಎಂದೆಲ್ಲ ನೋಡಿಕೊಂಡು ಎಲ್ಲವೂ ಸರಿಯಾಗಿದೆ ಎಂದು ಸಮಾಧಾನ ಪಟ್ಟುಕೊಂಡು ಆಮೇಲೆ ಇರುವ ಹೊತ್ತಿನಲ್ಲಿ ಜ್ಹುಲೈಕಾ ಎಂಬ ಗಿಳಿಗೆ ಬದರ್ಯುದ್ಧದ ಹಾಡುಗಳನ್ನು ಕಲಿಸಲು ನೋಡುತ್ತಿದ್ದರು.

ಎಂದಾದರೂ ಒಂದುದಿನ ಜ್ಹುಲೈಕಾ ಎಂಬ ಈ ದರಿದ್ರವಾಗಿ ಕಿರುಚುವ ಗಿಳಿ ಬದರ್ ಯುದ್ಧದ ಹಾಡುಗಳನ್ನ ಕಲಿತರೆ- ಆ ಹಾಡನ್ನು ಅದು ತಮ್ಮ ಮಗನಾದ ಉಸ್ಮಾನ್ ರೈಟರು ತೋಟದಿಂದ ಕೆಲಸ ಮುಗಿಸಿ ಬರುವಾಗ ಹಾಡಿದರೆ- ತಾನು ಇಷ್ಟು ವರ್ಷಗಳಿಂದ ಮಣ್ಣಲ್ಲಿ ಮಣ್ಣಾಗಿ ಹೋಗದೆ ಜೀವಹಿಡಿದು ಕೊಂಡಿರುವುದು ಸಾರ್ಥಕವಾದಂತೆ ಎಂಬುದು ಹಾಜಮ್ಮ ಎಂಬ ಈ ಮುದುಕಿಯ ಆಶೆಯಾಗಿತ್ತು.

ಹಾಜಮ್ಮ ನವರಿಗೆ ಹಾಗೆ ನೋಡಿದರೆ ಈ ವಯಸ್ಸು ಕಾಲದಲ್ಲಿ ಕೊಡಗಿನ ಈ ಕಾಫಿಕಾಡಿನಲ್ಲಿ ಚಳಿಗಾಳಿ, ಶೀತ, ಕತ್ತಲೆಯಲ್ಲಿ ಜೀವಹಿಡಕೊಂಡು ಬದುಕಲು ಬೇರೆ ಯಾವ ಆಶೆಗಳೂ ಇರಲಿಲ್ಲ. ತಮ್ಮ ತಲೆಯೊಳಗೆ ತುಂಬಾ ವರ್ಷಗಳಿಂದ ಬಂದು ಕೂತಿರುವ ಮತಿಭ್ರಮಣೆಯನ್ನು ಅವರು ಯಾರಿಗೂ ಅರಿವಾಗದಂತೆ ತಲೆಯೊಳಗೇ ಒತ್ತಿ ಹಿಡಿದುಕೊಂಡು ಎಲ್ಲರೆದುರು ಸುಮ್ಮನೆ ನಗುತ್ತಾ ಮಗ ಉಸ್ಮಾನ್ ರೈಟರ ಹಠಮಾರಿ ಕೋಪಿಷ್ಠ ಬುದ್ಧಿಯನ್ನು ಸರಿಮಾಡಲು ನೋಡುತ್ತಾ ಅವರ ಎಳೆಯಳಾದ ಹೆಂಡತಿ ಆಯಿಶಾಳಿಗೆ ಸಹನೆಯನ್ನು ಕಲಿಸುತ್ತಾ, ಪ್ರತಿರಾತ್ರಿಯೂ ಹಾಸಿಗೆಯಲ್ಲಿ ಮೂತ್ರ ಮಾಡುವ ಹಾಜಿರಾ ಎಂಬ ದೊಡ್ಡ ಹುಡುಗಿಯಾಗಿರುವ ಮೊಮ್ಮಗಳಿಗೆ ಮೂತ್ರವನ್ನು ಹೇಗೆ ತಡೆದು ಹಿಡಿಯಬೇಕೆಂದು ತೋರಿಸಿಕೊಡುತ್ತಾ, ಹಾರೂನನ ಊದಿಕೊಂಡಿರುವ ವೃಷಣಗಳಿಗೆ ಗಾಳಿಬೀಸುತ್ತಾ, ಮಾತನಾಡುವ ಗಿಳಿಗೆ ಹಾಡುಕಲಿಸುತ್ತಾ ಕಾಲ ಕಳೆಯುತ್ತಿರುವ ಆ ಮುದುಕಿ ಯಾವಾಗಲಾದರೂ ಒಂದು ದಿನ ಹೀಗೆ ಒಮ್ಮೆಗೆ ಒಂದು ಕ್ಷಣ ಪ್ರಳಯವಾಗಬಹುದು ಎಂದು ನಂಬಿಕೊಂಡಿದ್ದಳು. ಆ ಪ್ರಳಯದ ಅಂತಿಮ ಕ್ಷಣದಲ್ಲಿ ತಾನು ಇರಬೇಕು ಎಂದುಕೊಂಡಿದ್ದಳು.

ತನ್ನ ಸುತ್ತಮುತ್ತ ಸದ್ದಿಲ್ಲದೇ ಸಂಭವಿಸುತ್ತಿರುವ ಒಂದೊಂದು ಸಂಗತಿಗಳಲ್ಲೂ ಪ್ರಳಯವೆಂಬ ಕೊನೆಯ ದಿನ ಹತ್ತಿರವಾಗುತ್ತಿರುವ ಸೂಚನೆಗಳನ್ನು ಕಾಣುತ್ತಿದ್ದ ಆಕೆ ಮನಸಿನಲ್ಲೇ ನಗುತ್ತಾ ಅಲ್ಲಿಯವರೆಗೆ ಎಲ್ಲವೂ ಸರಿಯಾಗಿರಲಿ ಎನ್ನವ ಸಣ್ಣ ಆಶೆಯಲ್ಲಿ ಎಲ್ಲವನ್ನೂ ಸರಿಯಾಗಿಡಲು ನೋಡುತ್ತಿದ್ದಳು. ಉಳಿದ ಸಮಯದಲ್ಲಿ ಜ್ಹುಲೈಕಾ ಎಂಬ ಗಿಳಿಗೆ ಹಾಡು ಕಲಿಸಲು ಹೋಗಿ ಆ ಗಿಳಿಯು ಅಹಂಕಾರದಲ್ಲಿ ಹಾಡುಕಲಿಯದೆ,ಇನ್ನೂ ಉಳಿದ ಸಮಯದಲ್ಲಿ ಹಾಜಮ್ಮ ಮೈಕೈ, ಮುಖ, ಹಣೆ ಕಿವಿ, ಅಂಗೈ ಕಾಲುಗಳನ್ನು ತೊಳೆದುಕೊಂಡು ಬೆಳ್ಳಗಿನ ನಿಲುವಂಗಿ ಹಾಕಿಕೊಂಡು ಪಶ್ಚಿಮದ ಕಡೆ ಮುಖಮಾಡಿಕೊಂಡು ಪ್ರಾರ್ಥಿಸಲು ನಿಲ್ಲುತ್ತಿದ್ದಳು.

ಹಾಜಮ್ಮ ಪ್ರಾರ್ಥಿಸಲು ಕಅಬಾದ ಕಡೆ ನಿಂತುಕೊಂಡರೆಂದರೆ ಅವರ ಕಿವಿಯೊಳಗೆ ಲೋಕಕ್ಕೆ ಲೋಕವೇ ಸ್ತಬ್ಧವಾಗಿ ಬಿಡುತ್ತಿತ್ತು. ಹಾರುನ್ ಬೊಬ್ಬಿರಿಯುವುದಾಗಲೀ, ಸಕೀನಾ ನಿದ್ದೆಯಿಂದ ಎದ್ದು ಅಳುವುದಾಗಲೀ, ಹಾಜಿರಾ ಹಾಡು ಹೇಳಿಕೊಂಡು ಜ್ಹುಲೈಕಾ ಎಂಬ ಗಿಳಿಯ ಜೊತೆ ಮಾತನಾಡುವುದಾಗಲೀ, ಸೊಸೆ ಆಯಿಶಾ ಬಟ್ಟೆಗಳನ್ನು ಗುಡ್ಡೆ ಮಾಡಿಕೊಂಡು ಕಲ್ಲಿಗೆ ಬಡಿಯುತ್ತಾ ಉಸ್ಸೆಂದು ಒಗೆಯುವುದಾಗಲೀ, ಮಧ್ಯಾಹ್ನದ ಊಟ ನಿದ್ದೆಗಾಗಿ ಬಂದ ಉಸ್ಮಾನ್ ರೈಟರು ಗಿಳಿಯೊಡನೆ ಮಾತನಾಡುತ್ತಾ ಹೆಂಡತಿಯೊಡನೆ ಪಿಸುಗುಟ್ಟುತ್ತಾ ರೇಡಿಯೋ ಹಾಕಿಕೊಂಡು ವಾತರ್ೆಗಳನ್ನು ಕೇಳುವುದಾಗಲೀ ಅವರ ಅರಿವಿಗೆ ಬರುತ್ತಿರಲಿಲ್ಲ.

ಅವರು ತಮ್ಮ ಹಿಡಿದಿಟಿದ್ದ ಮತಿಭ್ರಮಣೆಯನ್ನು ಪಡೆದವನಾದ ಅಲ್ಲಾಹುವಿನ ಕರುಣೆಯಕಡೆ ಹರಿಯಬಿಡುತ್ತಾ ಸಂಜೆ ಕತ್ತಲೆಗೆ ಶಾಲೆಯಿಂದ ಮಕ್ಕಳು ಬರುವವರೆಗೆ ಮನಸಿನೊಳಗೆ ವಾಗ್ವಾದಗಳನ್ನು ನಡೆಸಿಕೊಂಡು ಪ್ರಾರ್ಥನೆಯ ನೆಲಗಂಬಳಿಯಲ್ಲಿ ಅಲುಗಾಡದೆ ಹೆಣಗುತ್ತಿದ್ದರು.ದೂರದಿಂದ ನೋಡಿದರೆ ಅವರು ಬದುಕಿರುವ ಯಾವ ಕುರುಹುಗಳೂ ಅರಿವಾಗದ ಹಾಗೆ ನೆಲಗಂಬಳಿಯಲ್ಲಿ ಬಿದ್ದಿರುವ ಒಂದು ದೊಡ್ಡ ಹಳೆಯ ಬಟ್ಟೆಯ ರಾಶಿಯ ಹಾಗೆ ಕಾಣಿಸುತ್ತಿದ್ದರು.

*** ***

ಆದರೆ ಇಂದು ಹಾಜಮ್ಮನವರೂ ಏನೂ ಮಾಡದೆ ಖುಷಿಯಲ್ಲಿ ಸುಮ್ಮನೇ ಕೂತಿದ್ದರು. ಸೊಸೆ ಆಯಿಶಾ ಮಡಿಲಲ್ಲಿ ಆರುತಿಂಗಳ ಮಗಳು ಸಕೀನಾಳನ್ನು ಎಣ್ಣೆ ಹಚ್ಚಿ ಮಲಗಿಸಿಕೊಂಡು ನೆಲದಲ್ಲಿ ಬೆತ್ತಲೆಯಾಗಿ ಕೂತಿದ್ದ ಹಾರೂನನ ತಲೆಯಲ್ಲಿ ಇಲ್ಲದ ಹೇನುಗಳನ್ನು ಸುಮ್ಮನೆ ಹುಡುಕುತ್ತಾ ಬಿಸಿಲು ಕಾಯುತ್ತಿದ್ದರು. ಹಾಜಿರಾ ಕಳೆದ ಇರುಳು ಹಾಸಿಗೆಯನ್ನು ಹಾಳು ಮಾಡದೆ ಒಳ್ಳೆಯವಳಂತೆ ನಿದ್ದೆ ಹೋಗಿ ಬೆಳಿಗ್ಗೆ ಎದ್ದು ಅವಳೇ ತಲೆ ಬಾಚಿಕೊಂಡು ಬೈತಲೆ ತೆಗೆದು ಕುಣಿಯುತ್ತಾ ಓಡಾಡುತ್ತಿದ್ದವಳು ಈಗ ನೋಡಿದರೆ ಎಳೆ ಬಿಸಿಲಲ್ಲಿ ಪೇರಲೆಯ ಮರ ಹತಿ ಗೆಲ್ಲಿನ ಎರಡೂ ಬದಿಯಲ್ಲಿ ಕಾಲುಗಳನ್ನು ಇಳಿಬಿಟ್ಟುಕೊಂಡು ದೊಡ್ಡ ಪೇರಲೆ ಕಾಯೊಂದನ್ನು ಕಚ್ಚಿಕೊಂಡು ಕಣ್ಣು ಮುಚ್ಚಿಕೊಂಡು ಕೂತು ಮರದೊಡನೆ ತಾನೂ ಗಾಳಿಗೆ ತೊನೆಯುತ್ತಾ ಕೂತಿದ್ದಳು.ಅವಳಿಗೆ ಅಲ್ಲಿಂದಲೇ ಎಲ್ಲವೂ ಕಾಣುತ್ತಿತ್ತು.

ದೂರದಲ್ಲಿ ಟಾರುರೋಡಿನಲ್ಲಿ ಅಪರೂಪಕ್ಕೆ ಓಡಾಡುತ್ತಿದ್ದ ಮೋಟಾರುವಾಹನಗಳು, ಏಲಕ್ಕಿ ಕಾಡಿನ ಪಕ್ಕದ ಹುಲ್ಲು ಬಾಣೆಯಲ್ಲಿ ದನಗಳ ಉಣ್ಣೆ ಹೆಕ್ಕುತ್ತಾ ಕೂತಿದ್ದ ದನ ಮೇಯಿಸುವ ಮುದಾರ, ಅವನ ಪಕ್ಕದಲ್ಲಿ ಕುಕ್ಕರುಗಾಲಲ್ಲಿ ಕೂತು ತಮ್ಮ ಬೊಕ್ಕ ತೆಲೆಯ ಮೇಲೆ ಬೆರಳಾಡಿಸುತ್ತಾ ಮಾತನಾಡುತ್ತಾ ಕೂತಿದ್ದ ಹಾಲು ಕರೆಯುವ ನಂಬಿಯಾರ್, ಇನ್ನೂ ದೂರದಲ್ಲಿ ಕೆಸರು ಗದ್ದೆಯಲ್ಲಿ ನಡುಬಗ್ಗಿಸಿಕೊಂಡು ಕಾಡುಕೆಸವನ್ನು ದಂಟಿನ ಸಮೇತ ಕತ್ತರಿಸುತ್ತಿದ್ದ ರಾಟೆಮನೆಯ ದೂಮಕ್ಕ ಮತ್ತು ಅವಳ ಇಬ್ಬರು ಹೆಣ್ಣು ಮಕ್ಕಳು, ಅವರನ್ನು ಮಾತನಾಡಿಸಿಕೊಂಡು ನಿಂತಿರುವ ಮೀನು ಮಾರುವ ಹೈದರ್, ಈಚೆ ಕಡೆ ಮೇಲೆ ಮಲೆಯಲ್ಲಿ ಕಾಪಿಗಿಡಗಳ ನಡುವೆ ಕಾಲುದಾರಿಯಲ್ಲಿ ಕೈಯಲ್ಲಿ ಕಾಗೆಗಳನ್ನು ಓಡಿಸುವ ಕವಣೆಯನ್ನು ಹಿಡಿದುಕೊಂಡು ನಿಂತಿರುವ ಕಾವಲುಗಾರ ಕುಂಞಿಕಣ್ಣ ಎಲ್ಲರೂ ಸಮಾಧಾನದಲ್ಲಿ ನಿಂತಲ್ಲೇಕುಳಿತಲ್ಲೇ ಚಿತ್ರಗಳಂತೆ ಕಾಣಸಿಕೊಳ್ಳುತ್ತಾ ಹಾಜಿರಾ ಕಣ್ಣು ಮುಚ್ಚಿಕೊಂಡು ಪೇರಲೆ ಕಾಯನ್ನು ಸವಿಯುತ್ತಿದ್ದಳು.

ದೂರದಲ್ಲಿ ಎಲ್ಲೋ ಕಾಪಿಗಿಡಗಳ ಅಡಿಯಲ್ಲಿ ಕಿತ್ತಲೆ ಹಣ್ಣುಗಳನ್ನು ಕದ್ದು ಸುಲಿದು ತಿನ್ನುತ್ತಿರುವ ಅವಳ ಇಬ್ಬರು ಅಣ್ಣಂದಿರು ಅಲ್ಲಿಂದಲೇ ಕಿತ್ತಲೆಯ ಪರಿಮಳವನ್ನು ಗಾಳಿಯಲ್ಲಿ ಹರಿಯಬಿಟ್ಟು ಅವರ ಕಳ್ಳತನವು ಗಾಳಿಯ ಪರಿಮಳದಲ್ಲೇ ಎಲ್ಲರಿಗೂ ಗೊತ್ತಾಗುತ್ತಿತ್ತು. ಆದರೂ ಎಲ್ಲರೂ ಈ ದಿನ ಸುಮ್ಮನಿದ್ದರು. ಜ್ಹುಲೈಕಾ ಎಂಬ ಗಿಳಿಯು ಮಾತ್ರ ಪಂಜರದೊಳಗಿಂದ `ಕುಂಞಿಕಣ್ಣಾ..ಕಳ್ಳರು. ಕುಂಞಿಕಣ್ಣಾ..ಕಳ್ಳರು' ಎಂದು ಪ್ರಾಸಬದ್ದವಾಗಿ ಅವರ ಕಳ್ಳತನವನ್ನು ಹಾಡುಮಾಡಿಕೊಂಡು ಹಾಡಲು ನೋಡಿ ಆಗದೆ ಉಗುಳು ನುಂಗುತ್ತಿತ್ತು. ಗೋಡೆಯಲ್ಲಿದ್ದ ಪಷರ್ಿಯನ್ ಬೆಕ್ಕಿನ ಚಿತ್ರ ಕಣ್ಣು ಮುಚ್ಚಿಕೊಂಡು ಗಾಳಿಗೆ ಸಣ್ಣಗೆ ಅಲುಗಾಡುತ್ತಾ ನೋಡುತ್ತಿತ್ತು. ಅದಕ್ಕೂ ಯಾಕೋ ಈವತ್ತು ಸುಮ್ಮನೆ ಖುಷಿಯಾಗುತ್ತಿರುವಂತೆ ಅನಿಸುತ್ತಿತ್ತು.

ಏಕೆಂದರೆ ಹೂವಿನ ಕೊಲ್ಲಿ ಕಾಪಿ ತೋಟದ ಮೇಲ್ವಿಚಾರಕರಾದ ಉಸ್ಮಾನ್ ರೈಟರು ನಿನ್ನೆ ರಾತ್ರಿಯೇ ತಮಿಳುನಾಡಿನ ಮುರುಗಮಲೆ ದರ್ಗಾಕ್ಕೆ ತಮ್ಮ ಮೂಲವ್ಯಾಧಿಯನ್ನು ಕನಸಿನಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಬರಲು ಹೋಗಿದ್ದರು. ಅವರು ಪ್ರತಿ ವರ್ಷವೂ ಹೀಗೆ ಕಾಫಿ ಕೊಯ್ಯುವುದು ಮುಗಿದು ಕಾಫಿ ಹೆಕ್ಕುವುದು ಮುಗಿದು ಆಳುಗಳೆಲ್ಲ ಬೋನಸ್ಸು ಪಡೆದು ರಜೆ ತೆಗೆದುಕೊಂಡು ಹೊರಟಾಗ ತಾವೂ ರಜೆ ಪಡೆದುಕೊಂಡು ತಮಗೆ ಆಗಾಗ ಸಂಭವಿಸುವ ಹಲವು ಕಾಯಲೆಗಳನ್ನು ಮುರುಗಾಮಲೆಯ ಸೂಪಿಸಂತನ ಬಳಿಹೋಗಿ ಕನಸಿನಲ್ಲಿ ಗುಣಪಡಿಸಿಕೊಂಡು ಬರುತ್ತಿದ್ದರು.

ಮುರುಗಾಮಲೆಯ ಬಾಬಾ ಅವರ ಕನಸಿನಲಿ ಕಾಣಿಸಿಕೊಂಡು ದರ್ಗಾಶರೀಫಿನಲ್ಲಿ ಬಂದು ಇರಬೇಕೆಂದು ಹೇಳಿದರೆ ಇವರು ಹೊರಡುತ್ತಿದ್ದರು. ಅಲ್ಲಿ ಎಷ್ಟು ದಿನ ಇರಬೇಕೆಂದು ಬಾಬಾ ಕನಸಿನಲ್ಲಿ ಹೇಳಿದರೆ ಅಷ್ಟು ದಿನ ಇರುತ್ತಿದ್ದರು. ಬಾಬಾ ಒಂದು ಇರುಳಿನಲ್ಲಿ ಇವರಿಗೆ ಕನಸಿನಲ್ಲೇ ಶಸ್ತ್ರ ಚಿಕಿತ್ಸೆಯನ್ನು ನಡೆಸಿ ಇನ್ನು ಹೋಗು ಎಂದರೆ ಹೋಗುತ್ತಿದ್ದರು. ಬರುವಾಗ ಮುರುಗ ಮಲೆಯಿಂದ ಬಣ್ಣದ ಹರಳುಗಳನ್ನೂ ಖರ್ಜೂರವನ್ನೂ ಕಲ್ಲು ಸಕ್ಕರೆಯನ್ನೂ ತರುತ್ತಿದ್ದರು. ಹಾಗೆಯೇ ಒಮ್ಮೆ ಬರುವಾಗ ಅವರ ಕೈಯಲ್ಲಿನ ಪಂಜರದಲ್ಲಿ ಒಂದು ಗಿಳಿ ಇತ್ತು. ಆ ಗಿಳಿಗೆ ಅವರು ಬಾಬಾ ಹೇಳಿದಂತೆ ಜ್ಹುಲೈಕಾ ಎಂಬ ಹೆಸರನ್ನು ಇಟ್ಟಿದ್ದರು. ಕನಸಿನಲ್ಲಿ ಬಂದ ಬಾಬಾಗೆ ತಮ್ಮ ಮೊದಲ ಹೆಂಡತಿಯ ಹೆಸರು ಜ್ಹುಲೈಕಾ ಎಂಬುದು ಹೇಗೆ ಗೊತ್ತಾಗಿದೆಯೆಂಬುದು ಉಸ್ಮಾನ್ ರೈಟರಿಗೆ ಕೊನೆಯವರೆಗೂ ಗೊತ್ತಾಗದೆ ಅವರು ಪ್ರತಿ ಸಲವೂ ಮುರುಗ ಮಲೆಗೆ ಹೊರಡುವಾಗ ಪಂಜರವನ್ನೊಮ್ಮೆ ತೂಗಿ ಅಳೆದು ನೋಡಿಕೊಂಡು ಗಿಳಿಯ ಕೈಗೆ ತಮ್ಮ ಬೆರಳುಗಳನ್ನು ಮೆದುವಾಗಿ ಕಚ್ಚಲು ಕೊಟ್ಟು ಹೊರಡುತ್ತಿದ್ದರು. ಅವರು ಹೊರಟು ತಿರುಗಿ ಬರುವವರೆಗೂ ಜ್ಹುಲೈಕಾ ಎಂಬ ಮಾತನಾಡುವ ಗಿಳಿ 'ರೈಟರು ಇಲ್ಲ... ರೈಟರು ಇಲ್ಲ' ಎಂದು ಅರ್ದ ಸಂಕಟದಿಂದಲೂ ಅರ್ದ ಆನಂದದಿಂದಲೂ ಉರು ಹೊಡೆಯುತ್ತಿತ್ತು. ಅದರ ಮಾತು ಸಹಿಸಲಾಗದೆ ಹಾಜಮ್ಮನವರು ಒಮ್ಮೆಮ್ಮೆ ಅದರ ಪಂಜರಕ್ಕೆ ಯಾವುದಾದರೂ ಬಟ್ಟೆ ಹೊದೆಸಿ ಕತ್ತಲು ಮಾಡಿ ಸುಮ್ಮಗಾಗಿಸುತ್ತಿದ್ದರು.

ಈವತ್ತು ಹಾಜಮ್ಮನವರಿಗೆ ಅಚ್ಚರಿಯಾಗುವ ಹಾಗೆ ಜ್ಹುಲೈಕಾ ಎನ್ನುವ ಆ ಗಿಳಿ ಗಂಟಲಲ್ಲಿ ಏನೋ ಸಿಲುಕಿಕೊಂಡಿರುವ ಹಾಗೆ ಸುಮ್ಮನೆ ಸದ್ದುಮಾಡುತ್ತಿತ್ತು. ಹಾಜಮ್ಮನವರು ಹತ್ತಿರ ಹೋದರೆ ಸುಮ್ಮನೆ ರೆಕ್ಕೆಗಳ ಒಳಗೆ ಕೊಕ್ಕು ಹಾಕಿ ಏನನ್ನೋ ಹೆಕ್ಕುತ್ತಿರುವಂತೆ ನಾಟಕ ವಾಡುತ್ತಿತ್ತು. ಹಾಜಮ್ಮನವರಿಗೆ ಇದರದು ಅತಿಯಾಗುತ್ತಿದೆ ಅನಿಸಿ ಕೆಟ್ಟದೆನಿಸಿತು. ಆ ಗಿಳಿ ಬಂದಾಗಲೇ ಅವರಿಗೆ ಹಾಗೆ ಅನಿಸಿತ್ತು. ಅದಕ್ಕೆ ಜ್ಹುಲೈಕಾ ಎಂಬ ಹೆಸರಿಟ್ಟಾಗ ಅದು ನಿಜ ಅನ್ನಿಸಿತ್ತು.

ನಿನ್ನೆ ಸಂಜೆ ಉಸ್ಮಾನ್ ರೈಟರು ಮುರುಗಾಮಲೆಗೆ ಹೊರಟಾಗ ಅದು ಆಡಿದ್ದು ನೋಡಿ ಪ್ರಳಯ ಖಂಡಿತ ಹತ್ತಿರವಾಗುತ್ತಿದೆ ಅನಿಸಿತ್ತು. ಉಸ್ಜಾನ್ ರೈಟರು ಹೊರಡುವಾಗ ಮೆದುವಾಗಿ ಕಚ್ಚಲೆಂದು ತಮ್ಮ ಬೆರಳುಗಳನ್ನು ಕೊಟ್ಟರೆ ಜ್ಹುಲೈಕಾ ಬಲವಾಗಿಯೇ ಕಚ್ಚಿ ಉಸ್ಮಾನ್ ರೈಟರು ನೆತ್ತರಿನ ತಮ್ಮ ಬೆರಳನ್ನು ಹೊರಕ್ಕೆ ಎಳೆದ ರಬಸಕ್ಕೆ ಗಿಳಿಯು ತನ್ನ ಕೊಕ್ಕುಗಳಿಗೆ ಗಾಯಮಾಡಿಕೊಂಡಿತ್ತು. ಉಸ್ಮಾನ್ ರೈಟರು ಬೆರಳನ್ನು ಹಾಗೇ ಅದುಮಿ ಹಿಡಿದುಕೊಂಡು ತಾಯಿಯ ಮುಖವನ್ನೊಮ್ಮೆ ಹೆಂಡತಿಯ ಮುಖವನ್ನೊಮ್ಮೆ ಮಕ್ಕಳ ಕಡೆಗೊಮ್ಮೆ ನೋಡಿ ಕಾಲುದಾರಿಯಲ್ಲಿ ಮರೆಯಾಗಿದ್ದರು.

ಹಾಜಿರಾ ಪೇರಳೆಯ ಮರದಿಂದ ಎಲ್ಲವನ್ನೂ ಗಮನಿಸುತ್ತಿದ್ದಳು. ರಾಟೆಮನೆಯಿಂದ ಬರುವ ಕಾಲುದಾರಿಯಲ್ಲಿ ದೂಮಣ್ಣ ತಮ್ಮ ಕಾದಾಟದ ಕೋಳಿ ಕಟ್ಟದ ಹುಂಜವನ್ನು ಬಗಲಲ್ಲಿ ಸಿಲುಕಿಸಿಕೊಂಡು ಹೆಂಡತಿ ಮಕ್ಕಳನ್ನು ಹುಡುಕಿಕೊಂಡು ನಡೆದು ಬರುತ್ತಿದ್ದರು. ಅವರ ಬಗಲಲ್ಲಿದ್ದ ಹುಂಜ ಒಂಟಿತನದಲ್ಲಿ ಕೂಗುತ್ತಾ ಅಲ್ಲಿ ಉಳಿದಿದ್ದ ಮೌನವನ್ನು ಮುರಿಯಿತು. ಆ ಸದ್ದಿಗೆ ಎಚ್ಚರಗೊಂಡ ಜ್ಹುಲೈಕಾ ಪುಕ್ಕ ಕೆದರಿಕೊಂಡು ಮತ್ತೆ ಮಾತಾಡಲುತೊಡಗಿತು.

ಕೆಲವು ಪದಗಳ ಅರ್ಥ
ಚಕ್ರೋಲ್: ಚೆಕ್-ರೋಲ್,ಆಳುಗಳ ಲೆಕ್ಕ ತೆಗೆಯುವುದು
ಬದರ್ ಯುದ್ಧ: ಪವಿತ್ರ ಧರ್ಮ ಯುದ್ಧ,
ಇಸ್ಲಾಂ ಕ್ರೈಸ್ತ ಧರ್ಮಗಳ ನಡುವೆ ನಡೆಯಿತು

Comment viewing options

Select your preferred way to display the comments and click "Save settings" to activate your changes.

That's the news so many

That's the news so many kannadigas have been waiting for.

ur comments

thank u for ur comments
can i know u?

the first chapter

VERY PICTURESQUE NARRTION. I LIKE IT

chennaagi ide

saar naanu chandan aaswaaL. gottaayte? aakaasha vaani huDuga. aagaaga saatvik avarannu bhETi maaDalu bartaa irteeni. nanna snEhitha obba nimma blogambari mattu mysore post blog gaLannu tOrisida. haage nimma blog ambari ge ondu comment haaki hOGoNa endu bande. bloginalli kaadambari haaktaa iddeera. oLLeya prayatna saar. samaya iddaaga nimma sampoorNa blogambari OdabEku. sigONa -chandan

ನಿಮ್ಮ ಬ್ಬಾಗಂಬರಿ

ರಶೀದ್ ಅವರೇ,
ಕಾದಂಬರಿ ಬರೆಯುವ ನಿಮ್ಮ ಉತ್ಸಾಹಕ್ಕೆ ಯಾರೂ ತಣ್ಣೀರೆರಚಲಾರರು.
ಚೆನ್ನಾಗಿದೆ ಬರವಣಿಗೆ;ಮುಂದುವರೆಸಿ,
ಬಹಳ ಹಿಂದೆ ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲಿ
"ಹಾಲು ಕುಡಿದ ಹುಡುಗ"
ಎಂಬ ಲವ್ ಲವಿಕೆಯ ಕಥೆ ಓದಿದ ನೆನಪಾಗುತ್ತಿದೆ.
ಅದುನೀವು ಬರೆದದ್ದೇ ಅಲ್ಲವೇ...
-ಎಚ್.ಶಿವರಾಂ

Post new comment

The content of this field is kept private and will not be shown publicly.
4 + 2 =
Solve this simple math problem and enter the result. E.g. for 1+3, enter 4.