11. ಅರ್ದ ಬಟ್ಟಿ ಭತ್ತ ಹೊತ್ತು

ನೀರು ಸೇದುವ ಸೈದಾಲಿಯು ಸಿದ್ಧಾಪುರ ಸಂತೆಯ ದಿನ ರಸ್ತೆಯಲ್ಲಿ ತಲೆಯ ಮೇಲೆ ಅರ್ದ ಬಟ್ಟಿ ಭತ್ತ ಹೊತ್ತು ಹೂವಿನ ಕೊಲ್ಲಿಯ ಟ್ರಾಕ್ಟರನ್ನು ಹಿಂಬಾಲಿಸಿಕೊಂಡು ಬೆವರುತ್ತಾ ನಡೆಯುತ್ತಿದ್ದನು. ಆದರೂ ಅವನ ಮುಖದಲ್ಲಿ ಎಂತಹದೋ ನಗುವಿತ್ತು. ಟ್ರಾಕ್ಟರ್ನ್ನು ನಡೆಸುತ್ತಿದ್ದ ವೇಲಾಯುದನೂ ಆಗೊಮ್ಮೆ ಈಗೊಮ್ಮೆ ಹಿಂತಿರುಗಿ ನೋಡುತ್ತಾ ಇಳಿಜಾರಿನಲ್ಲಿ ನಿಧಾನವಾಗಿ ಟ್ರಾಕ್ಟರು ಬಿಡುತ್ತಾ ತಾನೂ ಮುಗುಳ್ನಗುತ್ತಾ ಕೂತಿದ್ದನು. ಟ್ರಾಕ್ಟರಿನ ಹಿಂಬದಿಯಲ್ಲಿ ಮುಖವನ್ನು ಗಂಭೀರಮಾಡಿಕೊಂಡು ಕೂತಿದ್ದ ಉಸ್ಮಾನ್ರೈಟರು ಈ ಸೈದಾಲಿಯ ಬತ್ತದ ಬುಟ್ಟಿಯನ್ನು ಹೊರಲಾರದೆ ಎಲ್ಲಿ ರಸ್ತೆಯಲ್ಲಿ ಬೀಳಿಸುವನೋ ಎಂದು ಯೋಚಿಸಿ ತಾವೂ ಬೆವರಿಕೊಂಡು ಅಲುಗಾಡುತ್ತಾ ಕೂತಿದ್ದರು. ಸೈದಾಲಿಯ ಹಣೆಬರಹವನ್ನು ಯೋಚಿಸಿಕೊಂಡು ಅವರಿಗೆ ಸಂಕಟವಾಗುತ್ತಿತ್ತು.

ಸಿದ್ಧಾಪುರದ ಇಳಿಜಾರಿನಲ್ಲಿ ಮಸೀದಿಯ ಅಂಗಳದಲ್ಲಿ ನಿಂತು ದೊಡ್ಡ ಉಸ್ತಾದರೂ, ಸಣ್ಣ ಉಸ್ತಾದರೂ, ಹಜರೆ ಸಾಹೇಬರೂ ಸೈದಾಲಿಯ ಸಾಹಸವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರು. ಮಸೀದಿಯ ಮುಂದಿನಿಂದ ಟ್ರಾಕ್ಟರು ದಾಟುವಾಗ ಉಸ್ಮಾನ್ ರೈಟರು ತಲೆ ಹೊರಕ್ಕೆ ಚಾಚಿ ದೊಡ್ಡ ಉಸ್ತಾದರನ್ನು ನೋಡಿ ಸಂಕಟದಲ್ಲಿ ನಕ್ಕರು. ಎಲ್ಲ ಅರ್ಥವಾದವರಂತೆ ದೊಡ್ಡ ಉಸ್ತಾದರೂ ರೈಟರನ್ನು ನೋಡಿ ನಕ್ಕರು. ಎಲ್ಲರೂ ಸೈದಾಲಿ ಒಂದು ಚೂರೂ ಸುಸ್ತಾಗದೆ ಬತ್ತದ ಬುಟ್ಟಿಯನ್ನು ಹೊತ್ತುಕೊಂಡು ಟ್ರಾಕ್ಟರಿನ ಹಿಂದೆ ನಡೆಯುತ್ತಿರುವುದನ್ನು ನೋಡುತ್ತಿದ್ದರು. ಸಂತೆಗೆ ಹೋಗಿ ಬರುತ್ತಿರುವವರೂ, ಅಂಗಡಿಗಳ ಮುಂದೆ ನಿಂತಿದ್ದವರೂ, ಹೋಗಿ ಬರುವ ಲಾರಿ ಕಾರು ಬಸ್ಸುಗಳಿಲ್ಲಿದ್ದವರೂ ಅವನನ್ನು ನೋಡಿ ಮುಂದುವರಿಯುತ್ತಿದ್ದರು.

ಸೈದಾಲಿಯ ಹಿಂದೆ ಕೊಂಚ ದೂರದಲ್ಲಿ ಕಂಕುಳಲ್ಲಿ ತನ್ನ ಹೊಸ ಕಾದಾಟದ ಹುಂಜವನ್ನು ಹಿಡಿದುಕೊಂಡು ರಾಟೆಮನೆಯ ದೂಮಣ್ಣನೂ, ಸೈಕಲ್ನ್ನು ದೂಡಿಕೊಂಡು ಸೈಕಲ್ ಮಹಮ್ಮದನೂ ನಡೆದುಬರುತ್ತಿದ್ದರು. ಇನ್ನೊಂದು ಬದಿಯಲ್ಲಿ ಮರಿಯಮ್ಮ ಅವರಿಬ್ಬರಿಗೆ ಸರಿಸರಿಯಾಗಿ ಹೆಜ್ಜೆ ಹಾಕುತ್ತಾ ತಲೆಯ ಮೇಲೆ ಸಂತೆಯ ಚೀಲ ಹೊತ್ತುಕೊಂಡು ನಡೆಯುತ್ತಿದ್ದಳು.

ಎಲ್ಲವನ್ನೂ ಅರಿತಿದ್ದ ಕಥೆ ಹೇಳುವ ಪಾತಿಂಞ ಬೆರಳು ಚೀಪುವ ಮಗಳು ನೆಬೀಸಾಳನ್ನು ಎಳೆದುಕೊಂಡು ಮನಸಿನೊಳಗೇ ಅಲ್ಲಾಹುವನ್ನು ಪ್ರಾಥರ್ಿಸುತ್ತ, ಪಡೆದವನೇ ಇದೊಂದು ಬಾರಿ ಸೈದಾಲಿಯು ಈ ಪಂದ್ಯದಲ್ಲಿ ಗೆದ್ದು ಅವನಿಗೆ ಸಾಹುಕಾರರು ಗೇಟು ಕಾಯುವ ಪಾರೆಯ ಕೆಲಸ ಕೊಧಿಸಿದರೆ ಮುರುಗಾ ಮಲೆಯ ಔಲಿಯಾನಿಗೆ ಸಕ್ಕರೆಯನ್ನೂ, ಬೆಂಕಿಪೆಟ್ಟಿಗೆಯನ್ನೂ, ಸಾಧ್ಯವಾದರೆ ಒಂದು ಗಂಡಾಡನ್ನೂ ಕಡಿದು ಕೊಡುವುದಾಗಿ ಅಂದುಕೊಳ್ಳುತ್ತ ಹಿಂದಿನಿಂದ ನಡೆದುಬರುತ್ತಿದ್ದಳು.

ಮರಿಯಮ್ಮಳ ನಾಯಿ ಜಿಮ್ಮಿ ಸಿದ್ದಾಪುರದ ಅಂಗಡಿ ಮುಂಗಟ್ಟುಗಳ ಮೇಲೆ ಕಾಲು ಎತ್ತಿ ಉಚ್ಚೆ ಉಯ್ಯುತ್ತಾ, ಕುಂಟಿಕೊಂಡು ನಡೆಯುತ್ತ, ನಡುನಡುವೆ ಟ್ರಾಕ್ಟರ್ನ್ನು ಹಿಂದಿಕ್ಕಲು ಕುಂಟಿಕೊಂಡು ಓಡುತ್ತಾ ಏದುಸಿರು ಬಿಡುತ್ತಿತ್ತು. ಇದು ಯಾವುದನ್ನೂ ಗಮನಿಸದೆ ಸಾಹುಕಾರರು ಇಟ್ಟಿರುವ ಈ ಪಂದ್ಯದಲ್ಲಿ ಗೆದ್ದೇಗೆಲ್ಲುವೆನೆಂಬ ಸಂತೋಷದಲ್ಲಿ ಸೈದಾಲಿಯು ಲೀಲಾಜಾಲವಾಗಿ ಭತ್ತ ಹೊತ್ತು ಕಣ್ಣು ಕಿರಿದುಗೊಳಿಸಿ ಟ್ರಾಕ್ಟರಿನ ಹಿಂದೆ ನಡೆಯುತ್ತಿದ್ದನು.
ನೀರು ಸೇದುವ ಸೈದಾಲಿಯು ಸಂತೆಯ ದಿನ ಬೇಗನೇ ಎದ್ದು ನೀರಿನ ಕೊಡಪಾನಗಳನ್ನು ಹೊತ್ತು ಬಿಡಾರದಿಂದ ಬಾವಿಗೂ ಬಾವಿಯಿಂದ ಬಿಡಾರಕ್ಕೂ ಲಗುಬಗೆಯಿಂದ ನಡೆಯುತ್ತ ಎಲ್ಲರೂ ಎಚ್ಚರಗೊಳ್ಳುವ ಮೊದಲೇ ನೀರು ತುಂಬಿ ಮುಗಿಸಿ ಖುಷಿಯಲ್ಲಿ ಇನ್ನೇನು ಮಾಡುವುದು ಎಂದು ಅರಿವಾಗದೆ ಪೇರಲೆಯ ಮರದಡಿಯಲ್ಲಿ ಸುಮ್ಮನೆ ಕುಳಿತುಕೊಂಡಿದ್ದನು. ಹೊತ್ತು ಬೆಳಗಾದ ಮೇಲೆ ಬಂಗಲೆಯ ಕಡೆಯಿಂದ ಟ್ರಾಕ್ಟರು ಬಂದ ಮೇಲೆ ಅದರಲ್ಲಿ ಉಸ್ಮಾನ್ ರೈಟರು ಕುಳಿತುಕೊಂಡ ಮೇಲೆ ಆತ ಟ್ರಾಲಿಯಲ್ಲಿ ಬತ್ತ ತುಂಬಿದ ಬುಟ್ಟಿಯ ಪಕ್ಕದಲ್ಲಿ ಕುಳಿತು ಸಿದ್ದಾಪುರಕ್ಕೆ ಹೋಗಬೇಕಿತ್ತು ಟ್ರಾಕ್ಟರು ಸಂತೆಯ ಸಾಮಾನುಗಳನ್ನು ತುಂಬಿಕೊಂಡು ಬಂಗಲೆಗೆ ಹಿಂತಿರುವಾಗ ಅದರ ಹಿಂದೆ ಬತ್ತದ ಬುಟ್ಟಿಯನ್ನು ತಲೆಯ ಮೇಲೆ ಹೊತ್ತುಕೊಂಡು ಎಲ್ಲೂ ಇಳಿಸದೆ ದೊಡ್ಡ ಗೇಟಿನವರೆಗೆ ಬರಬೇಕಿತ್ತು. ಹಾಗೆ ಎಲ್ಲೂ ಇಳಿಸದೆ ತಲುಪಿದರೆ ಆತನಿಗೆ ಅರ್ಧಆಳಿನ ಸಂಬಳದ ಗೇಟು ಕಾಯುವ ಪಾರೆಯ ಕೆಲಸವನ್ನು ಕೊಡುವುದಾಗಿ ಸಾಹುಕಾರರು ಹೇಳಿದ್ದರು. ಮೂರು ಕೊಡಪಾನ ನೀರನ್ನು ಏಕಕಾಲಕ್ಕೆ ಎತ್ತುವ ತನಗೆ ಒಂದು ಬುಟ್ಟಿ ಬತ್ತವನ್ನು ಹೊತ್ತುಕೊಂಡು ನಡೆಯುವುದು ದೊಡ್ಡ ಸಂಗತಿಯೇ ಅಲ್ಲವೆಂದು ಸಂಜೆ ಬಾವಿಯಿಂದ ನೀರು ಸೇದುವಾಗ ಸೈದಾಲಿಯು ಹಾಜಿರಾಳ ಬಳಿ ಹೇಳಿದ್ದನು. ಅದು ನಿಜವೆಂದು ಆಕೆಯೂ ಹೇಳಿದ್ದಳು. ಬಾವಿಯ ಬಳಿ ಕುಳಿತಿದ್ದ ದನ ಮೇಯಿಸುವ ಮುದಾರ, 'ಎಲ್ಲವೂ ಸರಿ ಸೈದಾಲಿ, ಆದರೆ ದಾರಿಯಲ್ಲಿ ಕುಂಡೆಯಿಂದ ಹೇಲು ಹೊರಡದ ಹಾಗೆ ನೋಡಿಕೋ ಸೈದಾಲಿ' ಎಂದು ಹೇಳಿ ಸುಮ್ಮನಾಗಿದ್ದನು. ಬಿಡಾರದೊಳಗೆ ಹೇಳಲು ಹೋದರೆ ಹಾಜಮ್ಮ ಕೇಳಲೇ ಇಲ್ಲವೆಂಬಂತೆ ಏನೂ ಮಾತಾಡದೆ ಸುಮ್ಮನಾಗಿದ್ದಳು. ರೈಟರ ಹೆಂಡತಿ ಆಯಿಶಾ ತಗೋ ಸೈದಾಲಿ ಎಂದು ಆತನಿಗೆ ಬೇಯಿಸಿದ ಮೊಟ್ಟೆಯೊಂದನ್ನು ಕೊಟ್ಟಿದ್ದಳು. ರೈಟರ ಮೊದಲ ಹೆಂಡತಿಯ ಮಕ್ಕಳಾದ ಸೂಪಿ ಮತ್ತು ಇಬ್ರಾಹಿಂ ಸೈದಾಲಿಯನ್ನು ತಬ್ಬಿಕೊಂಡು ಆತನ ಹೆಗಲ ಮೇಲೆ ತೂಗಾಡುತ್ತಾ ಆತನ ಶಕ್ತಿ ಪರೀಕ್ಷಿಸಿ ನೋಡಿದ್ದರು.

ಸಂಜೆ ಕತ್ತಲಾಗುವ ಹೊತ್ತು ಕಾಪಿ ಹೂಗಳನ್ನು ನೋಡಿಕೊಂಡು ಹೂವಿನ ಕೊಲ್ಲಿಗೆ ಒಂದು ಸುತ್ತು ಹಾಕಿ ಬಂದ ಉಸ್ಮಾನ್ ರೈಟರು ಸುಸ್ತಾಗಿ ಗಂಬೂಟನ್ನು ಕಳಚಿ ನೆಲದ ಮೇಲಿಟ್ಟು ಒಳಬಂದು ಹಜಾರದ ಲೈಟು ಹಾಕಿ ಉಸ್ಸೆಂದು ಈಸಿ ಚೇರಿನ ಮೇಲೆ ಕುಳಿತು 'ಏನು ಸಾವು ಬಂದಿದೆಯಾ ಈ ಮನೆಗೆ. ಕತ್ತಲಾದರೂ ಯಾರಿಗೂ ಲೈಟು ಹಾಕುವ ಬುದ್ದಿ ಬಂದಿಲ್ಲವಾ' ಎಂದು ತಲೆಯ ಮೇಲಿನ ಚಳಿಯ ಟೊಪ್ಪಿಯನ್ನು ಸ್ಟೂಲಿನ ಮೇಲಿಟ್ಟು ಜೋರಾಗಿ ಅರಚಿಕೊಂಡಿದ್ದರು. ಅವರು ಅರಚಿದ್ದು ಅಳುವ ಹಾಗೆ ಕೇಳಿಸಿತ್ತು. ಹಾಜಮ್ಮ ಒಳಗಿಂದ ಹೊರಬಂದು ಏನೋ ಹೇಳದೆ ಮಗನನ್ನು ನೋಡಿ ಒಳಹೋಗಿ ಒಲೆಯ ಮೇಲೆ ಕಾಪಿಗೆ ನೀರಿಟ್ಟಿದ್ದರು. ಆಯಿಷಾ ಮಸಿಯ ಬಟ್ಟೆಯಿಂದ ಕೈಒರೆಸಿ ಒಳಗಿಂದ ಹೊರಬಂದು ಇನ್ನು ಬೆಳಕಿದ್ದರೂ ಲೈಟು ಹಾಕಿ ಕೂತಿರುವ ಗಂಡನನ್ನು ಕಂಡು ಏನೂ ಹೇಳದೆ ಒಳಗೆ ಹೋಗಿದ್ದರು. ಎಲ್ಲರಿಗೂ ಏನೋ ಆಗಿದೆ ಅಂತ ಅನಿಸುತ್ತಿತ್ತು. ಇದು ಯಾವುದೂ ಅರಿಯದ ಹಾರೂನ್ ಅಂಗಳದಿಂದ ಒಳಬಂದು ತಂದೆಯ ಮಡಿಲು ಹತ್ತಿಕುಳಿತು ಎಂದಿನಂತೆ ಅವರ ಮಡಚಿರುವ ಬೆರಳುಗಳನ್ನು ಬಿಡಿಸುವ ಆಟದಲ್ಲಿ ತೊಡಗಿದನು. ಉಸ್ಮಾನ್ ರೈಟರು ಕೋಪ ಮಾಡಿಕೊಳ್ಳದೆ ಅವನು ಒಂದು ಬೆರಳನ್ನು ಬಿಡಿಸುವಾಗ ಇನ್ನೊಂದು ಬೆರಳನ್ನು ಮಡಚಿ ಅವನು ಅದನ್ನು ಬಿಡಿಸುವಾಗ ಇನ್ನೊಂದನ್ನು ಮಡಚಿ ತಾನೂ ಸುಮ್ಮನೆ ಆಡಲು ತೊಡಗಿದರು.
ಪುನಃ ಒಳಗಿನಿಂದ ಬಂದ ಹಾಜಮ್ಮ ತಂದೆ ಮಗ ಬೆರಳು ಬಿಡಿಸುವ ಆಟದಲ್ಲಿ ತೊಡಗಿರುವುದನ್ನು ಕಂಡು ಸಮಾಧಾನಗೊಂಡು 'ಏನಾಯಿತು ಉಸ್ಮಾನೇ, ತೋಟದಲ್ಲಿ ಏನಾದರೂ ಸಂಭವಿಸಿತಾ?' ಎಂದು ಕೇಳಿದರು.

'ಏನೂ ಇಲ್ಲ ಅವನು ಬಂದಿದ್ದ. ಚಾಮುಂಡಿ ಬಾಣೆಯ ಬೇಲಿಯ ಆಚೆ ನಿಂತುಕೊಂಡು ಮಾತನಾಡಿಸಿ ಹೋದ' ಎಂದಷ್ಟೇ ಹೇಳಿ ಉಸ್ಮಾನ್ ರೈಟರು ಮಗ ಹಾರೂನನ ತಲೆಗೆ ತಮ್ಮ ಗಡ್ಡದಿಂದ ಉಜ್ಜುತ್ತಾ ಆಟ ಮುಂದುವರಿಸಿದ್ದರು 'ಯಾರು ಅವನಾ? ಹೌದಾ?' ಎಂದಷ್ಟೇ ಹೇಳಿ ಹಾಜಮ್ಮ ಮಾತುಬಾರದೆ ಕಣ್ಣೀರು ತುಂಬಿಕೊಂಡು ಆಪೀಸು ಕೋಣೆಯೊಳಕ್ಕೆ ಹೊಕ್ಕು ಕತ್ತಲೆಯಲ್ಲಿ ಬಾಗಿಲು ಹಾಕಿ ಕಮೀಸು ಬಟ್ಟೆ ಹಾಕಿಕೊಂಡು ನಮಾಜು ಮಾಡಲು ತೊಡಗಿದರು.
ಹಾಜಮ್ಮನಿಗೆ ತಾನು ಮಾಡದುತ್ತಿರುವುದು ಸಂಜೆಯ ಅಸರ್ ನಮಾಜೋ ರಾತ್ರಿಯ ಏಸಾ ನಮಾಜೋ ಎಂದು ಗೊತ್ತಾಗದೆ ಸುಮ್ಮನೆ ಕೈಕಟ್ಟಿಕೊಂಡು ಪಡೆದವನನ್ನು ಪ್ರಾಥರ್ಿಸುತ್ತಿದ್ದರು. ಅವರಿಗೆ ಏನು ಪ್ರಾಥರ್ಿಸುವುದು ಎಂದು ಗೊತ್ತಾಗುತ್ತಿರಲಿಲ್ಲ. ಸುಮ್ಮನೆ ಕಣ್ನು ತುಂಬಿಕೊಂಡು, 'ಅವನಿಗೆ ಏನೂ ಆಗಿಲ್ಲವಲ್ಲ ಪಡೆದವನೇ. ನೀನು ಅವನಿಗೆ ಏನೂ ಮಾಡಿಲ್ಲವಲ್ಲ ಪಡೆದವನೇ. ಎಲ್ಲವನ್ನೂ ಕಂಡವನೂ ಅರಿತವನೂ ಆದ ನಿನಗೆ ಏನು ಹೇಳುವುದು ಪಡೆದವನೆ' ಎಂದು ಬೇಡಿಕೊಳ್ಳಲು ತೊಡಗಿದರು.

ಹಾಗೆ ನೋಡಿದರೆ ಉಸ್ಮಾನ್ ರೈಟರಿಗೆ ಕುಪ್ಪಿಮೂಸಾ ಎಂಬ ತಮ್ಮನಿರುವುದು ಹೂವಿನ ಕೊಲ್ಲಿಯಲ್ಲಿ ಎಲ್ಲರಿಗೂ ತಿಳಿದಿತ್ತು. ಆದರೆ ಯಾರೂ ಅದರ ಬಗ್ಗೆ ಮಾತನಾಡುತ್ತಿರಲಿಲ್ಲ. ಹಳೆಯ ಬಾಟಲಿಗಳನ್ನೂ, ಕಬ್ಬಿಣದ ಸಾಮಾನುಗಳನ್ನೂ, ಕೊಡೆ, ಚಪ್ಪಲು, ಕೊಡಪಾನಗಳನ್ನೂ ಯಾರು ಯಾರಿಂದಲೋ ಕೊಂಡು ಎಲ್ಲೆಲ್ಲಿಗೋ ಮಾರಿ ತಿರುಗಾಡುತ್ತಿದ್ದ ಕುಪ್ಪಿಮೂಸಾ ಯಾವಾಗಲೋ ಒಮ್ಮೆ ಹೀಗೆ ಕಾಣಿಸಿಕೊಂಡು ಮರೆಯಾಗುತ್ತಿದ್ದವನು ಈಗ ಬಹಳ ವರ್ಷಗಳಿಂದ ಕಾಣಿಸಿಕೊಂಡಿರಲೇ ಇಲ್ಲ. 'ನನ್ನ ಒಂದು ಕಣ್ಣು ಹೊಟ್ಟಿ ಹೋಯಿತು ಎಂದು ತಿಳಿದುಕೊಂಡಿದ್ದೇನೆ' ಎಂದು ತೀಮರ್ಾನಿಸಿದ್ದ ಹಾಜಮ್ಮನೂ ಅವನ ಬಗ್ಗೆ ಮಾತನಾಡುತ್ತಿರಲಿಲ್ಲ ಆದರೆ ಕುಪ್ಪಿಮೂಸಾ ಬಹಳ ವಷಗಳಿಂದ ಕಾಣಿಸದೇ ಹೋದಾಗ ಅವರು ಕಂಡಕಂಡವರಲ್ಲಿ ಗುಟ್ಟಾಗಿ ಅವನನ್ನು ವಿಚಾರಿಸಿಕೊಂಡು ಎಲ್ಲರೂ ಕಂಡಿಲ್ಲ ಎಂದು ಹೇಳಿದಾಗ ಯಾರೂ ಕಾಣದ ಹಾಗೆ ಕಣ್ಣೀರು ಹಾಕುತ್ತಿದ್ದರು. ಕುಪ್ಪಿಮೂಸಾ ಬೊಂಬಾಯಿಗೆ ಹೋಗಿರುವನೆಂದೂ ದುಬಾಯಿಗೆ ಹೋಗಿರುವನೆಂದೂ ಯಾರಾದರೂ ಹೇಳಿದರೆ ಸಮಾಧಾನ ಪಡುತ್ತಿದ್ದರು. ಆದರು ಅವನ ಹೆಸರನ್ನು ಮಗ ಉಸ್ಮಾನ್ರೈಟರ ಬಳಿ ಹೇಳಲು ಹೆದರಿಕೆಯಾಗುತ್ತಿತ್ತು. ಈಗ ಅವರೇ ಅವನನ್ನು ಕಂಡಿರುವುದಾಗಿ ಹೇಳಿದ ಮೇಲೆ ಅಳಬೇಕೋ ಸಮಾಧಾನ ಪಡಬೇಕೋ ಗೊತ್ತಾಗದೆ ಸುಮ್ಮನೆ ಕಮೀಸು ಹೊದ್ದುಕೊಂಡು ನಮಾಜು ಮಾಡಲು ತೊಡಗಿದ್ದರು.

ಈ ಕುಪ್ಪಿ ಮೂಸಾನ ಕಥೆ ಹೇಳುವುದಾದರೆ ಅದು ದೊಡ್ಡಕತೆ. ಈ ಹಾಜಮ್ಮನ ಗಂಡ ಅಬ್ಬುಬ್ಯಾರಿ ಸುಳ್ಯ ಸೀಮೆಯಲ್ಲಿ ದೊಡ್ಡ ಗಾಡಿ ವ್ಯಾಪಾರಿಯಾಗಿದ್ದರು. ಗಾಡಿಯಲ್ಲಿ ಸರಕು ಹೇರಿಕೊಂಡು ಸುಳ್ಯ, ಸುಬ್ರಹ್ಮಣ್ಯ, ಸಂಪಾಜೆ, ಮಡಿಕೇರಿ, ಸೋಮವಾರ ಪೇಟೆ ಹೀಗೆ ಮಾರುತ್ತಾ ಕೊಡಗಿನಿಂದ ಕರಿಮೆಣಸು, ಏಲಕ್ಕಿ, ದೂಪ, ಸಾಂಬ್ರಾಣ,ಿ ಅಂಬುವಾಳ ಇತ್ಯಾದಿ ಕೊಂಡು ಪುತ್ತೂರಿನ ಪೈಗಳ ಅಂಗಡಿಗೆ ಕೊಡುತ್ತಾ ಬದುಕುತ್ತಿದ್ದವರು ಒಂದು ಬಾರಿ ಹೀಗೆ ಗಾಡಿಯಲ್ಲಿ ಬರುವಾಗ ಜೋಡುಪಾಲದ ಬಳಿಯ ಈರುಳ್ಳಿ ಮಲೆಯಲ್ಲಿ ಏಲಕ್ಕಿ ಬೆಳೆದುಕೊಂಡಿದ್ದ ದೊಡ್ಡ ಸಾಹುಕಾರರ ಹತ್ತಿರ ದೊಡ್ಡಮಗ ಉಸ್ಮಾನನನ್ನು ಕೆಲಸಕ್ಕೆ ಇರಿಸಿಹೋಗಿದ್ದರು. ದೊಡ್ಡ ಸಾಹುಕಾರರು ಏಲಕ್ಕಿ ಮಲೆಯನ್ನು ತೊರೆದು ಮಿಸ್ಮರ್. ವೈಟ್ ದೊರೆಯ ಹೂವಿನ ಕೊಲ್ಲಿ ಕಾಫಿತೋವನ್ನು ಕೊಂಡುಕೊಂಡಾಗ ಉಸ್ಮಾನ್ ಅಲ್ಲಿ ರೈಟರಾಗಿ ಸೇರಿಕೊಂಡಿದ್ದರು.

ಮಗ ರೈಟರಾಗಿರುವ ಹೂವಿನ ಕೊಲ್ಲಿಗೂ ಅಬ್ಬುಬ್ಯಾರಿಗಳು ಗಾಡಿ ಹೊಡೆದುಕೊಂಡು ಒಂದೆರೆಡು ಸಲ ಬಂದು ಹೋಗಿದ್ದರು. ಆಮೇಲೆ ಎಲ್ಲೋ ದಾರಿಯಲ್ಲಿ ಹಾವು ಕಚ್ಚಿ ಗಾಡಿಯಲ್ಲಿ ತೀರಿಹೋಗಿದ್ದರು. ಅವರು ತೀರಿಹೋದಮೇಲೆ ಒಂದುವರ್ಷ ಗಾಡಿ ಹೊಡೆದುಕೊಂಡಿದ್ದ ಎರಡನೆಯ ಮಗ ಮೂಸಾ ಆಮೇಲೆ ಗಾಡಿಯನ್ನೂ ಎತ್ತನ್ನೂ ಮಾರಿ ತನಗೂ ಹೂವಿನಕೊಲ್ಲಿಯಲ್ಲಿ ಕೆಲಸ ಕೊಡಿಸಬೇಕೆಂದು ಕೇಳಿಕೊಂಡು ಬಂದಿದ್ದನು. ತಮ್ಮನಿಗೆ ಏನು ಕೆಲಸ ಕೊಡಿಸುವುದು ಎಂದು ಗೊತ್ತಾಗದೆ ಉಸ್ಮಾನ್ ರೈಟರು ದೊಡ್ಡ ಸಾಹುಕಾರರಲ್ಲಿ ಹೇಳಿ ತೋಟದ ಮೇಸ್ತ್ರಿ ಕೆಲಸವನ್ನು ಕೊಡಿಸಿದ್ದರು. ಇಬ್ಬರೂ ಮಕ್ಕಳೂ ಇಲ್ಲಿರುವಾಗ ತಾನು ಯಾಕೆ ಅಲ್ಲಿರುವುದೆಂದು ತಿಳಿದು ಹಾಜಮ್ಮನೂ ಬಂದು ಹೂವಿನಕೊಲ್ಲಿಗೆ ಸೇರಿಕೊಂಡಿದ್ದರು. ಆಗ ಉಸ್ಮಾನ್ ರೈಟರಿಗೂ ಮದುವೆಯಾಗಿರಲಿಲ್ಲ. ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು.

ಹಾಜಮ್ಮ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದು ಹೂವಿನ ಕೊಲ್ಲಿಯಲ್ಲಿ ಸಮಾಧಾನದ ಉಸಿರುಬಿಟ್ಟುಕೊಂಡು ಬದುಕಲು ಶುರುಮಾಡಿದ್ದೇನೆ ಅಂದುಕೊಳ್ಳುವಷ್ಟರಲ್ಲಿ ಉಸ್ಮಾನ್ರೈಟರು ಹಿಂದೆ ಕೆಲಸ ಮಾಡುತ್ತಿದ್ದ ಜೋಡುಪಾಲದ ಬಳಿಯ ಈರುಳ್ಳಿ ಮಲೆಯ ಸಾಬ್ಜಾನ್ ಸಾಹೇಬರ ಹಠಮಾರಿ ಮಗಳು ಜುಲೈಕಾಳನ್ನು ಮದುವೆ ಮಾಡಿಕೊಂಡು ಬಂದಿದ್ದರು. ನೋಡಲು ಬೆಳದಿಂಗಳಿನ ಹಾಗೆ ಕಾಣಿಸುತ್ತಿದ್ದ ಜುಲೈಕಾ ಯಾವಾಗಲೂ ಸುಮ್ಮನೆ ಹಠಮಾಡಿಕೊಂಡು ಅಲಂಕಾರ ಮಾಡಿಕೊಂಡು ಇರುವುದು ಹಾಜಮ್ಮಳಿಗೆ ನೋಡಿಕೊಂಡು ಇರಲಾರದೆ ಎರಡುಮೂರು ಸಾರಿ ಎರಡನೆಯ ಮಗ ಮೂಸಾನನ್ನು ಕಟ್ಟಿಕೊಂಡು ಎಲ್ಲೆಲ್ಲಿಗೋ ಹೋಗಿಬಿಟ್ಟಿದ್ದರು. ಉಸ್ಮಾನ್ ರೈಟರು ಮಂಕು ಹಿಡಿದ ಹಾಗೆ ಏನೂ ಹೇಳಲಾಗದೆ, ತಾಯಿಯನ್ನೂ ಮರಳಿ ಕರೆಯಲಾಗದೆ, ಹೆಂಡತಿಯನ್ನೂ ಬಿಡಲಾಗದೆ ಅಷ್ಟರಲ್ಲಿ ಅವರಿಗೆ ಒಂದರ ಹಿಂದೆ ಒಂದರ ಹಾಗೆ ಮೂರು ಮಕ್ಕಳೂ ಆಗಿದ್ದರು. ಆ ಮೂರು ಮಕ್ಕಳನ್ನೂ ಕಥೆ ಹೇಳುವ ಪಾತಿಂಞಿ ಸ್ವಂತ ಮಕ್ಕಳ ಹಾಗೆ ತನ್ನ ಮೊಲೆಯೂಡಿಸಿ ಬೆಳೆಸಿದ್ದರು. ಜುಲೈಕಾಳಿಗೆ ಮಕ್ಕಳಿಗೆ ಹಾಲು ಊಡಿಸಲೂ ಬರುವುದಿಲ್ಲ ಎಂದು ಹೂವಿನ ಕೊಲ್ಲಿಯಲ್ಲಿ ಸುದ್ದಿಯಾಗಿತ್ತು.

ಯಾರು ಏನು ಹೇಳಿದರೂ ಕೇಳದ ಜುಲೈಕಾ ಸುಮ್ಮನೆ ಮುಖ ತೊಳೆದು ಕೊಂಡು, ಹೂ ಮುಡಿದುಕೊಂಡು, ಯಾವಾಗಲೂ ಆಕಾಶನೋಡುತ್ತಾ ನಗುತ್ತಾ ಇರುತಿದ್ದವಳು ಹಾಜಿರಾ ಹುಟ್ಟಿದ ಮೇಲೆ ಅದನ್ನೂ ಮರೆತು ತಾನೂ ಮಂಕಾಗಿ ಹೂವಿನ ಕೊಲ್ಲಿಯೊಳಗೆ ಸುಮ್ಮನೆ ಹುಚ್ಚು ಹತ್ತಿದ ಹಾಗೆ ಓಡಾಡಲು ಶುರುಮಾಡಿದವಳು ಆಮೇಲೆ ಮಕ್ಕಳನ್ನೂ ತೊರೆದು ಕಾಣದಾಗಿದ್ದಳು. ಆಕೆ ಜೋಡುಪಾಲಕ್ಕೆ ತಿರುಗಿ ಹೋಗಿರುವುದಾಗಿ ಎಲ್ಲರೂ ಹೇಳುತ್ತಿದ್ದರು.
ಜುಲೈಕಾ ಕಾಣದಾದ ಮೇಲೆ ಹಾಜಮ್ಮ ಸಣ್ಣಮಗ ಮೂಸಾನ ಜೊತೆ ಹೂವಿನ ಕೊಲ್ಲಿಗೆ ಮರಳಿ ಬಂದಿದ್ದಳು. ಮೂಸಾ ಇನ್ನು ತಾನು ತೋಟದ ಕೆಲಸ ಮಾಡುವುದಿಲ್ಲವೆಂದು ಹೇಳಿ ಹಳೆಬಾಟಲು, ಕಬ್ಬಿಣದ ಸಾಮಾನು ಎಂದು ವ್ಯಾಪಾರದಲ್ಲಿ ತೊಡಗಿ ಸಿದ್ಧಾಪುರ, ಮಾದಾಪುರ ಅಂತ ಸುತ್ತತೊಡಗಿದ್ದ. ಹಾಗೆ ಸುತ್ತ ತೊಡಗಿದವನು ಎಲ್ಲೋ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಲಯಾಳಿ ಬಿಲ್ಲವರ ಹೆಂಗಸೊಂದನ್ನು ಮದುವೆ ಮಾಡಿ ಮತ ಬದಲಿಸಿ ಆತನಿಗೂ ಮಕ್ಕಳಾಗಿತ್ತು. ಅಷ್ಟುಹೊತ್ತಿಗೆ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲವೆಂದು ಉಸ್ಮಾನ್ರೈಟರು ಸಕಲೇಶಪುರದ ಕಡೆಯಿಂದ ಯಾರೂ ಇಲ್ಲದ ಅನಾಥಹುಡುಗಿ ಆಯಿಷಾಳನ್ನು ಮದುವೆ ಮಾಡಿಕೊಂಡಿದ್ದರು. ಕಾಲಕಳೆಯುತ್ತಿದ್ದಂತೆ ಆಯಿಷಾಳಿಗೂ ಇಬ್ಬರು ಮಕ್ಕಳಾಗಿ ಬಿಟ್ಟಿತ್ತು. ಆ ಮಕ್ಕಳನ್ನೂ ನೋಡಿಕೊಳ್ಳಲು ಕಥೆ ಹೇಳುವ ಪಾತಿಂಞಿ ಬಂದಿದ್ದರು. ಆಯಿಷಾ ಬೇಡ ಬೇಡವೆಂದರೂ ಆ ಮಕ್ಕಳಿಗೂ ಹಾಲು ಊಡಿಸಿದ್ದರು.

ಆ ಹಾಲು ಉಂಡು ಬೆಳೆದ ಮಗ ಹಾರೂನ್ ಈಗ ತಂದೆ ಉಸ್ಮಾನ್ ರೈಟರ ಮಡಿಲೇರಿ ಕುಳಿತು ಅವರ ಬೆರಳು ಬಿಡಿಸುವ ಆಟದಲ್ಲಿ ತೊಡಗಿದ್ದ. ಚಾಮುಂಡಿ ಬಾಣೆಯಲ್ಲಿ ಬೇಲಿಯ ಬದಿಯಲ್ಲಿ ಸಂಜೆಯ ಹೊತ್ತಲ್ಲಿ ತಮ್ಮ ತಮ್ಮನಾದ ಕುಪ್ಪಿ ಮೂಸಾನ ಹಾಳು ಮುಖವನ್ನು ನೋಡಿ ಸಿಟ್ಟಾಗಿದ್ದ ಉಸ್ಮಾನ್ ರೈಟರು ತಮ್ಮ ಸಿಟ್ಟನ್ನೂ ಸಂಕಟವನ್ನೂ ಮರೆಯಲು ಮಗ ಹಾರೂನನ ಕೈಗಳಿಗೆ ತಮ್ಮ ಹತ್ತೂ ಕೈಬೆರಳುಗಳನ್ನು ಒಪ್ಪಿಸಿ ಗಡ್ಡದಿಂದ ಆತನ ಮುಡಿಯನ್ನು ಉಜ್ಜುತ್ತಾ ಕುಳಿತಿದ್ದರು. ಇವರಿಬ್ಬರ ಆಟವನ್ನು ಕಂಡು ಜುಲೈಕಾ ಎಂಬ ಮಾತನಾಡುವ ಗಿಳಿ ಪಂಜರದೊಳಗಿಂದ ತಾನೂ ಹಾಡು ಹೇಳಲು ನೋಡುತ್ತಿತ್ತು.
ತನ್ನ ತಮ್ಮನಾದ ಕುಪ್ಪಿ ಮೂಸಾನ ಕಥೆ ಇಷ್ಟೇ ಆಗಿದ್ದರೆ ಉಸ್ಮಾನ್ರೈಟರು ಅಷ್ಟೇನೂ ಸಿಟ್ಟುಮಾಡಿಕೊಳ್ಳುತ್ತಿರಲ್ಲ. ತಾಯಿ ಹಾಜಮ್ಮಳಿಗೂ ಇಷ್ಟು ಸಂಕಟವಾಗುತ್ತಿರಲಿಲ್ಲ. ಹೂವಿನ ಕೊಲ್ಲಿಯಲ್ಲೂ ಅದು ಅಷ್ಟು ದೊಡ್ಡ ವಿಷಯವಾಗುತ್ತಿರಲಿಲ್ಲ. ಸಾಹುಕಾರರೂ ಕುಪ್ಪಿಮೂಸಾನನ್ನು ಹೂವಿನ ಕೊಲ್ಲಿಯೊಳಗೆ ಸೇರಿಸಬಾರದೆಂದು ಆರ್ಡರು ಮಾಡುತ್ತಿರಲಿಲ್ಲ. ಸಿದ್ದಾಪುರದ ಮಸೀದಿಯ ದೊಡ್ಡ ಉಸ್ತಾದರೂ ಎಲ್ಲರ ಎದುರಿಗೆ ಆತನನ್ನು ಬೈದು ಜಮಾತಿನಿಂದ ಹೊರಗೆ ಹಾಕುತ್ತಿರಲಿಲ್ಲ.

ಹಳೆಯ ಬಾಟಲ್ಲುಗಳನ್ನೂ, ಕಬ್ಬಿಣದ ಸಾಮಾನುಗಳನ್ನು, ಹಳೆ ಚಪ್ಪಲಿ, ಹರಿದ ಕೊಡೆಗಳನ್ನು ಕೊಂಡು ಮಾರಿ ಊರೂರು ತಿರುಗಿ ಬದುಕುತ್ತಿದ್ದ ಕುಪ್ಪಿಮೂಸಾ ಬರುತ್ತಾ ಬರುತ್ತಾ ತನಗೆ ಲೋಹವಿದ್ಯೆ ಬರುವುದೆಂದೂ, ತಗಡನ್ನೂ ತಾಮ್ರವನ್ನೂ ಚಿನ್ನಕೆ ತಿರುಗಿಸಲು ಆಗುವುದೆಂದೂ, ನಿಧಿ ನಿಕ್ಷೇಪ ಕೊಪ್ಪರಿಗೆ ಇತ್ಯಾದಿ ಎಲ್ಲಿದ್ದರೂ ಪತ್ತೆ ಹಿಡಿಯುವೆನೆಂದೂ ಎಲ್ಲರಿಗು ಹೇಳಿ ಸಿದ್ಧಾಪುರ, ಪಾಲಿಬೆಟ್ಟ, ಸುಂಟಿಕೊಪ್ಪ, ಹೀಗೆ ಎಲ್ಲ ಕಡೆ ಕಾಫಿ ತೋಟಗಳ ಸಾಹುಕಾರುಗಳನ್ನೂ ರೈಟರುಗಳನ್ನು ನಂಬಿಸಿ ಅವರಿಂದ ಕಡಪಡೆದು ಆತನು ಹೇಳಿದ ಚಿನ್ನಕ್ಕಾಗಿ ಅವರು ಹೂವಿನ ಕೊಲ್ಲಿಗೂ ಆತನನ್ನು ಹುಡುಕಿಕೊಂಡು ಬಂದು ಉಸ್ಮಾನ್ರೈಟರಿಗೂ ಹಾಜಮ್ಮನಿಗೂ ಶಾಪಹಾಕಿ ಎಚ್ಚರಿಕೆ ಹೇಳಿ ಹೋಗುತ್ತಿದ್ದರು. ಅವರ ಕಾಟತಾಳಲಾದರೆ ಸಾಹುಕಾರರು ಹೂವಿನಕೊಲ್ಲಿಯ ದೊಡ್ಡಗೇಟಿಗೆ 'ಅಪ್ಪಣೆಯಿಲ್ಲದೆ ಪ್ರವೇಶವಿಲ್ಲ' ಎಂದು ಬೋಡರ್ು ಬರೆಸಿ ಹಾಕಿದ್ದರು.

ಕುಪ್ಪಿ ಮೂಸಾನಿಗೆ ಲೋಹದ ವಿದ್ಯೆಯ ಹುಚ್ಚು ಹತ್ತುವುದಕ್ಕೂ ಒಂದು ಕಾರಣವಿತ್ತು. ಹಳೆಯ ಬಾಟಲು ಹುಡುಕಿಕೊಂಡು ತಿರುಗುತ್ತಿದ್ದ ಆತನಿಗೆ ಸಿದ್ದಾಪುರಕ್ಕೆ ಹೋಗುವ ದಾರಿಯಲ್ಲಿ ಇಟ್ಟಿಗೆ ಗೂಡಿಗೆ ಮಣ್ಣು ಅಗೆಯುತ್ತಿದ್ದ ತಮಿಳರು ಮಣ್ಣಿನಡಿಯಲ್ಲಿ ಸಿಕ್ಕಿದ್ದ ಹಳೆಯ ಒಂದು ಕೊಡೆ, ಒಂದು ಪಾತ್ರೆ,, ಒಂದು ಕತ್ತಿ, ಹಾಗೂ ಹಲವು ನಾಣ್ಯಗಳನ್ನು ಮಾರಿದ್ದರು. ಅವುಗಳು ಕಬ್ಬಿಣದ ಹಾಗೆ ಕಾಣಿಸದೆ ಬೇರೆ ಏನೋ ಲೋಹ ಇರಬೇಕೆಂದು ಕುಪ್ಪಿಮೂಸಾ ಅವುಗಳನ್ನು ಸಿದ್ದಾಪುರದ ಚಿನ್ನದ ಆಚಾರಿ ಕಣ್ಣನ ಬಳಿ ಕೊಂಡು ಹೋಗಿದ್ದನು. ಇದು ಹಿತ್ತಾಳೆ, ಇದು ಚೊಂಬು, ಇದು ತಾಮ್ರ ಎಂದು ಅವುಗಳನ್ನು ವಿಂಗಡಿಸದ ಕಣ್ಣಾಚಾರಿ ಅವುಗಳನ್ನು ನೆಲಕ್ಕೆ ಬಿಸಾಕಿದ್ದನು. ಆಮೇಲೆ ತಾಮ್ರಕ್ಕೆ ಸಲ್ಲುವಷ್ಟು ಹಣವನ್ನು ಕೊಟ್ಟು ಕುಪ್ಪಿ ಮೂಸಾನನ್ನು ಕಳುಹಿಸಿದ್ದನು.

ಆಮೇಲೆ ಕಣ್ಣಾಚಾರಿಯನ್ನು ಮೈಸೂರಿನ ಪೊಲೀಸರು ಹಿಡಕೊಂಡು ಹೋಗಿದ್ದರು. ಟೀಪೂಸುಲ್ತಾನನ ಕಾಲದ ಚಿನ್ನದ ವಸ್ತುಗಳನ್ನು ಕದ್ದು ಮಾರುತ್ತಿರುವೆನೆಂದು ಆತನನ್ನು ಮೈಸೂರು ಜೈಲಿಗೆ ಕಳಿಸಿದ್ದರು. ಅದಾದನಂತರ ಕುಪ್ಪಿಮೂಸಾನಿಗೆ ಲೋಹವಿದ್ಯೆಯ ಹುಚ್ಚು ಹಿಡಿದು ಆತನನ್ನೂ ಪೊಲೀಸರು ಹುಡುಕುತ್ತಿದ್ದರು. ಹುಡುಕಿಕೊಂಡು ಹೂವಿನ ಕೊಲ್ಲಿಗೂ ಬಂದಿದ್ದರು. ನೀರು ಸೇದುವ ಸೈದಾಲಿ ಕುಪ್ಪಿಮೂಸಾನ ಮಗನೆಂದೂ ಅಣ್ಣನ ಬಳಿ ಸಾಕಲು ಬಿಟ್ಟಿರುವನೆಂದೂ ಪೊಲೀಸರಿಗೆ ಯಾರೋ ಹೇಳಿದ್ದರು. ಇದು ಯಾವುದರ ಅರಿವೂ ಇಲ್ಲದೆ ನೀರು ಸೇದುವ ಸೈದಾಲಿ ತಲೆಯ ಮೇಲೆ ಅರ್ದ ಬಟ್ಟಿ ಭತ್ತ ಹೊತ್ತುಕೊಂಡು ಏದುಸಿರು ಬಿಡುತ್ತಾ ಟ್ರಾಕ್ಟರಿನ ಹಿಂದೆ ನಡೆದು ಬರುತ್ತಿದ್ದ. ಇನ್ನೊಂದು ತಿರುವು ಮುಗಿದರೆ ಹೂವಿನ ಕೊಲ್ಲಿಯ ದೊಡ್ಡ ಗೇಟು ಕಾಣಿಸುತ್ತಿತ್ತು.
ಉಸ್ಮಾನ್ ರೈಟರು ಮುಖವೆಲ್ಲಾ ಬೆವರಿಕೊಂಡು ಸೈದಾಲಿಯನ್ನು ನೋಡುತ್ತಿದ್ದರು. ಇದು ಏನೂ ಗೊತ್ತಿಲ್ಲದೆ ಮರಿಯಮ್ಮಳ ನಾಯಿ ಜಿಮ್ಮಿ ನಡೆಯಲಾಗದೆ ಒಂಟಿ ಕಾಲೆತ್ತಿನಿಂತು ಎಲ್ಲವನ್ನೂ ಸುಮ್ಮನೆ ನೋಡುತ್ತಿತ್ತು.

Post new comment

The content of this field is kept private and will not be shown publicly.
2 + 5 =
Solve this simple math problem and enter the result. E.g. for 1+3, enter 4.