2. ಹೆಂಗಸರು ಮರ ಹತ್ತಿ ಗಂಡಸರು ಒಲೆ ಊದಿ..

ಇದುವರೆಗೂ ಯಾರೊಂದಿಗೂ ಕಾದಾಡದ ತಮ್ಮ ಕಾದಾಟದ ಕುಪ್ಪುಲೆ ಎಂಬ ಹೆಸರಿನ ಹುಂಜವನ್ನು ಬಗಲಲ್ಲಿ ಸಿಲುಕಿಸಿಕೊಂಡು ತೀರಲಾಗದ ಅದರ ಹಸಿವೆಗೆ ಅಕ್ಕಿಹುಡಿ ತವುಡು ಸಿಗುವುದೋ ಎಂದು ತಮ್ಮ ಎಂದಿನ ಅಲ್ಪತನದ ಆಸೆಯಲ್ಲಿ ನಡೆದು ಬರುತ್ತಿದ್ದ ರಾಟೆಮನೆಯ ದೂಮಣ್ಣನವರಿಗೆ ಪೇರಲೆ ಮರದಲ್ಲಿ ಕಾಲಾಡಿಸುತ್ತಿದ್ದ ಹಾಜಿರಾ ಅಷ್ಟು ದೂರದಿಂದಲೇ ಕಾಣಿಸಿದಳು. ಅವರಿಗೆ ಉಸ್ಮಾನ್ ರೈಟರು ಮುರುಗಾಮಲೆಗೆ ಹೋಗಿರುವುದು ಖಾತರಿಯಾಯಿತು. ಅವರ ಬಗಲಲ್ಲಿದ್ದ ಕಾದಾಟದ ಹುಂಜವೂ ತನ್ನ ಕಣ್ಣಕೊನೆಯಲ್ಲೇ ಎಲ್ಲವನ್ನೂ ಗಮನಿಸಿಕೊಂಡು ಜುಲೈಕಾ ಎಂಬ ಗಿಳಿಯ ಗೊಣಗಾಟವನ್ನು ಕೇಳಿಯೂ ಕೇಳಿಸದಂತೆ ಮುಖಮಾಡಿಕೊಂಡು ತಿನ್ನಲು ಏನಾದರೂ ಸಿಗುವುದೇ ಎಂದು ತಲೆಯಾಡಿಸಿಕೊಂಡು ದೂಮಣ್ಣನವರ ಬಗಲಲ್ಲಿ ಬೆಚ್ಚಗೆ ಅಲುಗಾಡಿಕೊಂಡು ಬರುತ್ತಿತ್ತು. ಉಸ್ಮಾನ್ ರೈಟರು ಬಿಡಾರದಲ್ಲಿಲ್ಲ ಎನ್ನುವ ಸಂಗತಿ ಅದಕ್ಕೂ ನಿಧಾನವಾಗಿ ಖಚಿತವಾಗುತ್ತಿತ್ತು. ಅದು ನಿಜ ಎನ್ನುವಂತೆ ಪೇರಲೆಯಗೆಲ್ಲಿನಲ್ಲಿ ಹಾಜಿರಾ ಕೂತಿದ್ದಳು.

ಉಸ್ಮಾನ್ ರೈಟರು ಬಿಡಾರದಲ್ಲಿಲ್ಲದಿದ್ದರೆ ದೂಮಣ್ಣ ತಮ್ಮ ಬಗಲಿನಿಂದ ಕುಪ್ಪುಲೆ ಎಂಬ ಹೆಸರಿನ ಆ ಕಾದಾಟದ ಹುಂಜವನ್ನು ನೆಲಕ್ಕೆ ಇಳಿಸಿ ಅದರ ಎಡಗಾಲಿನ ಕೊನೆಯಲ್ಲಿ ನೇತಾಡುತ್ತಿರುವ ತೆಳ್ಳಗಿನ ಹಗ್ಗವನ್ನು ಪೇರಲೆಯ ಬುಡಕ್ಕೆ ಕಟ್ಟಿಹಾಕಿ, ಅಲ್ಲೇ ಬಿದ್ದಿದ್ದ ತೆಂಗಿನ ಕಾಯಿಯ ಗೆರಟದಲ್ಲಿ ನೀರು ತುಂಬಿ ಹುಂಜದ ಮುಂದಿಟ್ಟು 'ಅಮ್ಮಾ ಹುಂಜಕ್ಕೆ ಹುಡಿ ಅಕ್ಕಿ ತವುಡು ಏನಾದರೂ ಇದೆಯಾ' ಎಂದು ಬೇಡಿಕೊಂಡು ಅವರ ಆ ಬೇಡಿಕೆಗೆ ಆ ಹುಂಜವೂ ಮನಸಿನಲ್ಲೇ ಸಹಮತ ತೋರಿಸಿ ತಲೆ ಆಡಿಸುತ್ತಿತ್ತು. ಹಾಜಮ್ಮ ಅಲ್ಲೇ ಎಲ್ಲೋ ಓಡಾಡುತ್ತಿರುವವರು ಹುಂಜದ ಆಸೆಯನ್ನು ಅರ್ಥಮಾಡಿಕೊಂಡು ಹಾಗೇ ಗಾಳಿಯಲ್ಲಿ ಅಲ್ಲಾಡುತ್ತಾ ಒಳಕ್ಕೆ ಹೋಗಿ ಒಂದು ಪಾವಿನಲ್ಲಿ ಕಾಲುಪಾವು ಹುಡಿಅಕ್ಕಿಯನ್ನು ತಂದು ಹುಂಜದ ಮುಂದೆ ಎರಚಿ `ಆನೆಯಂತಹ ಹುಂಜ ಸಾಕಲು ಬರುತ್ತದೆ ನಿನಗೆ. ಅದರ ಹೊಟ್ಟೆ ತುಂಬಿಸಲು ಬರುವುದಿಲ್ಲವೇ ನಿನಗೆ' ಎಂದು ಗೊಣಗುತ್ತಿದ್ದರು. ಹಾಜಮ್ಮ ಗೊಣಗಿದರೂ ಮನೆಯಲ್ಲಿ ಮಗ ಇಲ್ಲದಿರುವಾಗ ದೂಮಣ್ಣ ತನ್ನ ಕಾದಾಟದ ಕೋಳಿಯನ್ನು ಹಾಗೆ ತಂದು ನೀರು ಕುಡಿಸಿ ತವುಡು ತಿನ್ನಿಸಿ ಮಾತನಾಡಿ ಹೋಗುವುದನ್ನು ಬಲು ಇಷ್ಟ ಪಡುತ್ತಿದ್ದರು. ಅವರಿಗೆ ದೂಮಣ್ಣನೊಡನೆ ಹೀಗೆ ಎಳೆಬಿಸಿಲಿನಲ್ಲಿ ತುಳುವಿನಲ್ಲಿ ಹೊಟ್ಟೆ ತುಂಬುವಷ್ಟು ಮಾತನಾಡುವುದು ಖುಷಿಯಾಗುತ್ತಿತ್ತು. ತನ್ನ ಹಾಗೆಯೇ ಘಟ್ಟದ ಕೆಳಗಿನ ಸುಳ್ಯದ ಪೈಚಾರಿನ ಹತ್ತಿರದಿಂದ ಹೂವಿನ ಕೊಲ್ಲಿ ಎಂಬ ಈ ಕಾಫಿಕಾಡಿಗೆ ಬೆನೆಬರಲು ಬಂದಿರುವ ಈ ದೂಮಣ್ಣ ಯಾರಾದರೂ ಕೇಳಿದರೆ ಈ ಕಾದಾಟದ ಹುಂಜವೂ ತನ್ನ ಜೊತೆಗೇ ಈ ಭೂಮಿಯ ಮೇಲೆ ಬಂದಿರುವುದಾಗಿ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುತ್ತಿದ್ದನು.

ಹಾಜಮ್ಮನವರಿಗೆ ಮಾತ್ರ ಕಾಲಕಾಲಕ್ಕೆ ದೂವಣ್ಣನ ಬಗಲಲ್ಲಿರುವ ಹುಂಜವು ಬದಲಾಗುತ್ತಿರುವುದು ಅರಿವಾಗುತ್ತಿತ್ತು. ಕೆಂಪು ರೆಕ್ಕೆಗಳ ಮೇಲೆ ಕರಿಯ ಚುಕ್ಕಿಗಳನ್ನೂ, ಅಲ್ಲಲ್ಲಿ ಬಿಳಿಯ ಪುಕ್ಕಗಳನ್ನೂ ಹೊಂದಿದ್ದ ತನ್ನ ಕುಪ್ಪುಲೆಯ ಎದುರು ಕಾದಾಡುವ ಹುಂಜವು ಘಟ್ಟದ ಕೆಳಗೆ ಎಲ್ಲೂ ಹುಟ್ಟಿಲ್ಲವೆಂದೂ ಅದಕ್ಕಾಗಿ ತಾನು ಹೂವಿನಕೊಲ್ಲಿಗೆ ಅದನ್ನು ಬಗಲಿಗೆ ಸಿಲುಕಿಸಿ ಬಂದಿರುವುದಾಗಿಯೂ ಹೇಳುತ್ತಿದ್ದ. ದೂಮಣ್ಣನ ಸುಳ್ಳನ್ನು ಹಾಜಮ್ಮನವರು ಮನಸಿನಲ್ಲೇ ಇಷ್ಟಪಟ್ಟುಕೊಂಡು ಅವನ ಹುಂಜಕ್ಕೆ ಕಾಲುಪಾವು ಹುಡಿ ಅಕ್ಕಿ ಹಾಕಿ ಆ ಹುಂಜವು ವಾರೆಗಣ್ಣಿನಿಂದ ಅವರನ್ನು ನೋಡುತ್ತಾ ಹುಡಿ ಅಕ್ಕಿಯನ್ನು ಕುಕ್ಕಿ ತಿನ್ನುತ್ತಿತ್ತು. ಅದಕ್ಕೂ ಹಾಜಮ್ಮನವರ ಮನಸ್ಸು ಅರ್ಥವಾಗುತ್ತಿತ್ತು ಅದಕ್ಕೂ ಹಿಂದೆ ದೂಮಣ್ಣನ ಬಗಲಲ್ಲಿದ್ದ ಹುಂಜ, ಅದಕ್ಕೂ ಹಿಂದೆ ಇದ್ದ ಹುಂಜ, ಅದರ ಅದಕ್ಕೂ ಹಿಂದೆ ಇದ್ದ ಹುಂಜ - ಈ ಎಲ್ಲ ಹುಂಜಗಳೂ ಹೂವಿನ ಕೊಲ್ಲಿಯ ಚಾಮುಂಡಿ ಬಾಣೆಯ ಒಂದು ಮೂಲೆಯಲ್ಲಿ ನೂರಾರು ವರ್ಷಗಳಿಂದ ಇದ್ದ ಕಾಯರಕಾಯಿಯ ಮರದ ಬುಡದಲ್ಲಿ ಇರುವ ಗುಳಿಗನ ಕಲ್ಲಿಗೆ ವರ್ಷಕ್ಕೊಂದು ಬಾರಿ ಬಲಿಯಾಗುತ್ತಿದ್ದವು. ತಾನು ಹುಂಜಗಳನ್ನು ಗುಳಿಗನ ಕಲ್ಲಿಗೆ ಬಲಿಕೊಡುವುದು ಗೊತ್ತಾದರೆ ಉಸ್ಮಾನ್ ರೈಟರು ಹೂವಿನಕೊಲ್ಲಿಯ ಆಳುಗಳ ಪಟ್ಟಿಯಿಂದ ತನ್ನ ಹೆಸರನ್ನು ಹೊಡೆದು ಹಾಕಿ ತೋಟಬಿಟ್ಟು ಓಡಿಸಿಬಿಡುವರು ಎಂದು ಗೊತ್ತಿದ್ದ ದೂಮಣ್ಣ ತನ್ನ ಬಗಲಲ್ಲಿರುವ ಕಾದಾಟದ ಹುಂಜ ತನ್ನ ಜೊತೆಯಲ್ಲೇ ಹುಟ್ಟಿದೆ ಮತ್ತು ತನ್ನ ಜೊತೆಯಲ್ಲೇ ಸಾಯುತ್ತದೆ ಎಂದು ಸುಳ್ಳುಹೇಳುತ್ತಿದ್ದ. ಎಷ್ಟು ಅಡಗಿಸಿಟ್ಟರೂ ಕಾಲಕಾಲಕ್ಕೆ ಬದಲಾಗುತ್ತಿರುವ ತನ್ನ ಕಾದಾಟದ ಹುಂಜದ ಸತ್ಯಗಳು ಉಸ್ಮಾನ್ ರೈಟರಿಗೆ ಖಂಡಿತ ಗೊತ್ತಾಗುವುದು ಎಂಬ ಹೆದರಿಕೆಯಿಂದ ಆತ ಅವರಿಲ್ಲದಿರುವಾಗ ಮಾತ್ರ ಅದನ್ನು ಬಗಲಿಗೆ ಸಿಲುಕಿಸಿಕೊಂಡು ರೈಟರ ಬಿಡಾರಕ್ಕೆ ಬಂದು ಪೇರಲೆಯಮರಕ್ಕೆ ಕಟ್ಟಿ ಹಾಕುತ್ತಿದ್ದ. ಹಾಗೆ ಬಂದಾಗಲೆಲ್ಲ ಸತ್ಯ ತನಗೂ ಗೊತ್ತಿದೆ ಎನ್ನುವ ಅಹಮ್ಮಿನಿಂದ ಜುಲೈಕಾ ಮನುಷ್ಯರ ಭಾಷೆಯಲ್ಲಿ ಮಾತನಾಡುವುದನ್ನು ಬಿಟ್ಟು ಪಕ್ಷಿಗಳ ಭಾಷೆಯಲ್ಲಿ ಅರಚುತ್ತಿತ್ತು. ಅದರ ಮಾತುಗಳನ್ನು ಕೇಳಿಸಿಕೊಂಡ ಆ ಹುಂಜ ಅವಮಾನದಿಂದ ಪೇರಲೆಯ ಅಡಿಯಲ್ಲಿ ಕುದಿಯುತ್ತಿತ್ತು.

ಹಾಜಿರಾ ಪೇರಲೆಯ ಗೆಲ್ಲಲ್ಲಿ ಗಾಳಿಗೆ ಆಡುತ್ತಾ ಕೂತಿದ್ದವಳು ದೂಮಣ್ಣನೂ ಅವರ ಹುಂಜವೂ ಎಳೆಬಿಸಿಲಿನಲ್ಲಿ ಓಲಾಡುತ್ತಾ ಬರುತ್ತಿರುವುದನ್ನು ಕಂಡು ಬಾಯಲ್ಲಿದ್ದ ಪೇರಲೆ ಕಾಯಿಯನ್ನು ಅರ್ಧತಿಂದು ಅರ್ಧವನ್ನು ಎಸೆದು ಕೆಳಗಿಳಿಯಬೇಕೆಂದು ಕೊಂಡವಳು ಆಮೇಲೆ ಆಲಸ್ಯದಿಂದ ಮನಸ್ಸು ಬದಲಿಸಿ ತಾನು ಯಾಕೆ ಸುಮ್ಮನೇ ಎಲ್ಲರಿಗೂ ಹೆದರುವುದು ಎಂದು ಆ ಗೆಲ್ಲು ಬದಲಿಸಿ ಕೆಳಗಿನ ಇನ್ನೊಂದು ಗೆಲ್ಲಿನ ಮೇಲೆ ಕೂತುಕೊಂಡಳು. ಅವಳಿಗೆ ಅಲ್ಲಿಂದಲೇ ಎಲ್ಲವೂ ಕಾಣಿಸುತ್ತಿತ್ತು.

ದೂರದಲ್ಲಿ ಟಾರುರೋಡಿನಲ್ಲಿ ಮೋಟಾರು ವಾಹನಗಳ ಸದ್ದು ಹೆಚ್ಚಾಗುತ್ತಿತ್ತು. ಏಲಕ್ಕಿ ಕಾಡುದಾಟಿ, ಭತ್ತದ ಗದ್ದೆ ದಾಟಿ, ಬೇಲಿಯನ್ನೂ ದಾಟಿ ಇನ್ನೂ ಆಕಡೆ ನೋಡಿದರೆ ಅಷ್ಟು ಹೊತ್ತು ಮಂಜಿನಲ್ಲಿ ಮುಸುಕಿರುವಂತೆ ಕಾಣುತ್ತಿದ್ದ ಕಾಡುಮಾವಿನ ಮರದಲ್ಲಿ ಜೊಂಪೆ ಜೊಂಪೆಯಾಗಿ ತೂಗುತ್ತಿದ್ದ ಕಾಡುಮಾವಿನ ಮಿಡಿಗಳು ಬಿಸಿಲಿನಲ್ಲಿ ಹೊಳೆದುಕೊಂಡು ನೇತಾಡುತ್ತಿದ್ದವು. ಕೆಸರು ಗದ್ದೆಯಲ್ಲಿ ಕಾಡುಕೆಸವನ್ನು ಕುಯಿದುಮುಗಿಸಿ ಅವುಗಳನ್ನು ಗಂಟುಮಾಡಿ ಕಟ್ಟಿ ಅಲ್ಲೇ ಗದ್ದೆಯ ಬದುವಿನಲ್ಲಿ ಇಟ್ಟು ರಾಟೆಮನೆಯ ದೂಮಕ್ಕ ಮತ್ತು ಅವಳ ಇಬ್ಬರು ಹೆಣ್ಣುಮಕ್ಕಳು ಬದುವಿನಲ್ಲಿ ಒಬ್ಬರ ಹಿಂದೆ ಒಬ್ಬರು ನಡೆಯುತ್ತಾ ಬಿದ್ದ ಮಾವಿನ ಕಾಯಿಗಳನ್ನು ಹೆಕ್ಕಲು ಹೋಗುತ್ತಿದ್ದರ. ರಸ್ತೆಯಲ್ಲಿ ತನ್ನ ಮೀನಿನ ಸೈಕಲನ್ನು ವಾಲಿಸಿ ಇಟ್ಟು ಬೇಲಿಹಾರಿ ಬಂದಿದ್ದ ಹೈದರ್ ಅವರ ಮುಂದೆ ನಡೆಯುತ್ತಿದ್ದ. ದನಗಳ ಉಣ್ಣೆ ಹೆಕ್ಕುತ್ತಿದ್ದ ಮುದಾರ ಹೆಕ್ಕುವುದನ್ನು ನಿಲ್ಲಿಸಿ ತಾನೂ ಎದ್ದು ಮೀನಿನ ಸೈಕಲ್ಲಿನಲ್ಲಿರುವ ಮೀನಿನ ಪೆಟ್ಟಿಗೆಯಲ್ಲಿ ಏನೇನೆಲ್ಲಾ ಹಸಿ ಮೀನುಗಳಿರುವುದೋ ಎಂದು ನೋಡಲು ನಡೆಯುತ್ತಿದ್ದ. ಅವನು ನಡೆಯುವುದನ್ನು ಕಂಡು ಅವನ ಬಾಯಿಬಾರದ ದನಕರುಗಳು ತಾವೂ ಚದುರಿ ಚಲ್ಲಾಪಿಲ್ಲಿಯಾಗಿ ಭತ್ತದ ಗದ್ದೆಯಲ್ಲಿ ಕೊಯಿದು ಉಳಿದಿದ್ದ ಭತ್ತದ ಪೈರನ್ನು ತಿನ್ನಲು ಹೊರಟವು.

ಹಾಲುಕರೆಯುವ ನಂಬಿಯಾರ್ ಮೀನು ತಿನ್ನುವುದಿಲ್ಲ ಹಾಗಾಗಿ ಅವರು `ನನ್ನ ಗುರುವಾಯೂರಪ್ಪಾ' ಎಂದು ಉದ್ಗರಿಸಿ ಕುಕ್ಕರಗಾಲಲ್ಲಿ ಕೂತಲ್ಲಿಂದ ಎದ್ದು ತಮ್ಮ ಜೋಮು ಹಿಡಿದ ಕಾಲುಗಳನ್ನು ಸೆಟೆಸಿಕೊಂಡು ಸರಿಮಾಡುತ್ತಾ ಅವರ ಸೊಂಟಕ್ಕೆ ಸುತ್ತಿದ್ದ ಮುಂಡು ಎಂದಿನಂತೆ ಜಾರಿ ಅವರು ಅದನ್ನು ಕೊಡವಿ ಸರಿ ಮಾಡಿಕೊಂಡು ಮೆಲ್ಲಗೆ ಬಿಡಾರದ ಕಡೆಗೆ ಕುಂಟುತ್ತಾ ನಡೆದು ಬರುತ್ತಿದ್ದರು. ಹಾಜಿರಾಳಿಗೆ ಮನಸಿನಲ್ಲೇ ನಗುಬರುತ್ತಿತ್ತು.

ಹಾಜಿರಾಳಿಗೆ ತನ್ನ ಬಾಪಾ ಉಸ್ಮಾನ್ ರೈಟರು ಬಿಡಾರದಲ್ಲಿದ್ದರೆ ನಗುವೇ ಬರುತ್ತಿರಲಿಲ್ಲ. ಬಂದರೂ ನಗಬಾರದೆಂದು ಅವಳು ತನ್ನ ಸುಂದರವಾದ ಮುಖವನ್ನ ಯಾವಾಗಲೂ ಗಂಟುಮಾಡಿಕೊಂಡು ಇರುತ್ತಿದ್ದಳು. ತಾನು ಬೇಕುಬೇಕೆಂದು ತನ್ನ ಮುಖವನ್ನು ಗಂಟುಮಾಡಿಕೊಂಡಿರುವುದಿಲ್ಲ ತನ್ನ ಬಾಪಾ ಬಿಡಾರದಲ್ಲಿರುವಾಗ ಮಾತ್ರ ತನ್ನ ಮುಖ ತನ್ನಿಂತಾನೇ ಹಾಗೆ ಆಗುವುದು ಎಂದು ಹಾಜಿರಾ ಮನಸಿನಲ್ಲಿ ಅಂದುಕೊಳ್ಳುತ್ತಿದ್ದಳು. ಯಾರು ಏನು ಹೇಳಿದರೂ ತನ್ನ ಉಮ್ಮ ಜುಲೈಕಾ ಬೀಬಿಯನ್ನು ಉಸಿರುಕಟ್ಟಿ ಸಾಯಿಸಿರುವುದು ಮಾತ್ರ ತನ್ನ ಬಾಪಾ ಉಸ್ಮಾನ್ ರೈಟರು ಎಂದು ಅವಳ ಎಳೆಯ ಹೃದಯ ನಂಬಿಕೊಂಡಿತ್ತು. ನಿನ್ನ ಉಮ್ಮಾ ಜುಲೈಕಾ ತೀರಿಹೋಗಿಲ್ಲ ಅವಳು ಸಂಪಾಜೆಯಲ್ಲಿರುವಳು. ಅವಳ ತಲೆ ಸರಿಯಾದ ಮೇಲೆ ಮತ್ತೆ ಬರುವಳು ಎಂದು ಹಾಜಮ್ಮ ಎಷ್ಟು ಹೇಳಿದರೂ ಅದೆಲ್ಲಾ ಕತೆಯೆಂದು ತಿಳಿದು ಅವಳು ಮುಡಿಯನ್ನು ಬಾಚಿಕೊಳ್ಳದೆ, ಹಲ್ಲುಜ್ಜದೆ, ಮುಖತೊಳೆಯದೆ ಹಠಮಾಡಿಕೊಂಡು ಶಾಲೆಗೆ ಹೋಗದೆ, ಕುರಾನುಕಲಿಯದೆ ಹಗಲಲ್ಲಿ ಹೂವಿನಕೊಲ್ಲಿಯ ಕಾಫಿಯ ಗಿಡಗಳ ನಡುವೆ ಅಡಗಿಕೊಂಡು, ರಾತ್ರಿ ಹಾಸಿಗೆಯಲ್ಲಿ ಮೂತ್ರ ಮಾಡಿಕೊಂಡು ಹಠಮಾರಿಯಂತೆ ಓಡಾಡುತ್ತಿದ್ದಳು. ಶಾಲೆಗೆ ಹೋಗುವ ಅಣ್ಣಂದಿರಾದ ಸೂಫಿ ಮತ್ತು ಇಬ್ರಾಯಿಯನ್ನೂ ಮಾತನಾಡಿಸಿದೆ, ತಂದೆಯ ಎರಡನೇ ಹೆಂಡತಿಯಾದ ಆಯಿಶಾಳನ್ನೂ ಕೇರುಮಾಡದೆ, ಎರಡನೆಯ ಹೆಂಡತಿಯ ಮಕ್ಕಳಾದ ಹಾರೂನ್ ಮತ್ತು ಸಕೀನಾಳನ್ನೂ ಮುದ್ದುಮಾಡದೆ ಮೈಯಲ್ಲಿ ಇಬಿಲೀಸ್ ಹೊಕ್ಕಹಾಗೆ ತಲೆಮರೆಸಿಕೊಂಡು ಓಡಾಡುತ್ತಿದ್ದಳು. ಅವಳನ್ನು ಕಾಫಿಗಿಡಗಳ ಅಡಿಯಿಂದ ಹುಡುಕಿ ಅವಳ ಲಂಗದ ತುದಿಯನ್ನು ಹಿಡಿದುಕೊಂಡು ಎಳೆಯುತ್ತಾ ಬಿಡಾರಕ್ಕೆ ತಂದುಬಿಡುವ ಕುಂಞಿಕಣ್ಣ ಎನ್ನುವ ಮಾಯಾವಿ ಕಾವಲುಗಾರನಿಗೆ ಅವಳ ಹಠ ಅರ್ಥವಾಗುತ್ತಿತ್ತು. ಅವಳನ್ನು ಹುಡುಕಿ ತಂದು ಬಿಡಾರಕ್ಕೆ ಬಿಟ್ಟು ಹೋಗುವಾಗ ಆತ ಒಂದಿಷ್ಟು ಹೊತ್ತು ಪೇರಳೆಯ ಬುಡದಲ್ಲಿ ಬಾಯಿಗೆ ಎಲೆಅಡಿಕೆ ಹಾಕಿಕೊಂಡು ಯೋಚಿಸುತ್ತಿದ್ದ.

ಹಾಜಿರಾ ಪೇರಲೆಯ ಮೇಲಿಂದ ನೋಡುತ್ತಾ ಇದ್ದಳು.

ತಾಯಿಯ ಕೈಯಿಂದ ಇಲ್ಲದ ಹೇನು ಹೆಕ್ಕಿಸಿಕೊಂಡು ಬೆತ್ತಲೆಯಾಗಿ ಕೂತಿದ್ದ ಎರಡು ವರ್ಷದ ಹಾರೂನ್ ಏನೂ ಗೊತ್ತಿಲ್ಲದ ಹಸುಳೆಯಂತೆ ಎದ್ದುನಿಂತು ಬಗಲಲ್ಲಿ ಹುಂಜ ಸಿಗಿಸಿಕೊಂಡು ಬರುತ್ತಿದ್ದ ದೂಮಣ್ಣನನ್ನು ಕಂಡು ಹೆದರಿ ಪುನಃ ತಾಯಿಯ ಸೆರಗಲ್ಲಿ ಅವಿತುಕೊಂಡನು. ಅವನ ತಾಯಿ ಆಯಿಶಾ ಅವನ ಕೈ ಹಿಡಕೊಂಡು ಮಡಿಲಲ್ಲಿ ನಿದ್ದೆ ಹೋಗಿದ್ದ ಸಕೀನಾಳನ್ನು ಹೆಗಲಿಗೆ ಹಾಕಿಕೊಂಡು ಎದ್ದು ಸದ್ದಿಲ್ಲದೇ ಬಚ್ಚಲು ಕೋಣೆಯ ಒಲೆಯಿಂದ ಬರುತ್ತಿದ್ದ ಹೊಗೆಯಲ್ಲಿ ನುಸುಳಿಕೊಂಡು ಬಿಡಾರದೊಳಕ್ಕೆ ಮಾಯವಾದಳು. ಸುಮ್ಮನೇ ಕುಳಿತಿದ್ದ ಹಾಜಮ್ಮ ಜುಲೈಕಾ ಎಂಬ ಗಿಳಿಯ ಪಕ್ಷಿ ಮಾತುಗನ್ನು ಅರ್ಥಮಾಡಿಕೊಂಡು ದೂಮಣ್ಣ ಕೇಳುವ ಮೊದಲೇ ಕೊಡಬೇಕೆಂದು ಅಕ್ಕಿಯ ಪಾವು ಹುಡುಕಿಕೊಂಡು ಬಿಡಾರದೊಳಕ್ಕೆ ಮಾಯವಾದರು. ಮೇಲಿನಿಂದ ಕಾಲು ಹಾದಿಯಲ್ಲಿ ಕವಣೆ ಹಿಡಕೊಂಡು ಬರುತ್ತಿದ್ದ ಕಾವಲುಗಾರ ಕುಂಞಿಕಣ್ಣ ದೂಮಣ್ಣನಿಗೆ ಕೊಡಲು ತನ್ನ ಸಂಚಿಯಿಂದ ಹಳೆಯದಾದ ವೀಳ್ಯದ ಎಲೆಗಳನ್ನು ವಿಂಗಡಿಸಿ ತೆಗೆದಿಟ್ಟುಕೊಂಡು ನಡೆದು ಬರುತ್ತಿದ್ದ. ಕೆಳಗಿನ ಗದ್ದೆಯಿಂದ ಹಾಲು ಕರೆಯುವ ನಂಬಿಯಾರ್ ಕಾಲೆಳೆಯುತ್ತಾ ಮೆಟ್ಟಿಲು ಹತ್ತಿ ಬಿಡಾರದ ಮುಂದಿನ ಮಣ್ಣಿನ ಅಂಗಳ ತಲುಪಿದ್ದ. ದೂರದಲ್ಲಿ ಟಾರು ರಸ್ತೆಯಲ್ಲಿ ಮೀನಿನ ಸೈಕಲ್ಲಿನ ಬಳಿ ಮಾತುಮುಗಿಸಿ ದೂಮಕ್ಕ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ತಲೆಯಮೇಲೆ ಕೆಸದ ಗಂಟುಹೊತ್ತುಕೊಂಡು ನಡೆದು ಬರುತ್ತಿದ್ದರು. ದನ ಮೇಯಿಸುವ ಮುದಾರ ಬೇಲಿಯ ಬಳಿಯಿಂದ ಬಾಳೆಯ ಎಲೆಯೊಂದನ್ನು ಕಿತ್ತುಕೊಂಡು ಮೀನು ಮಾರುವ ಹೈದರ್ ಅದರೊಳಕ್ಕೆ ಮೀನುಗಳನ್ನು ಎಣಿಸಿ ಹಾಕಿ ಕಟ್ಟಿಕೊಡುತ್ತಿದ್ದ.ಅದು ಯಾವಾಗಲೋ ಕದ್ದ ಕಿತ್ತಳೆ ಹಣ್ಣುಗಳನ್ನು ತಿಂದು ಮುಗಿಸಿದ್ದ ಹಾಜಿರಾಳ ಅಣ್ಣಂದಿರಿಬ್ಬರೂ ಮೈಯನ್ನೆಲ್ಲಾ ಕಿತ್ತಳೆ ಪರಿಮಳ ಮಾಡಿಕೊಂಡು ಏಲಕ್ಕಿ ಕಾಡುದಾಟಿ, ಕೆಸರಿನ ಗದ್ದೆ ದಾಟಿ, ಬೇಲಿದಾಟಿ ಕಾಡುಮಾವಿನ ಮರಕ್ಕೆ ಕಲ್ಲು ಹೊಡೆದು ಕಾಯಿಗಳನ್ನು ಬೀಳಿಸಲು ನೋಡುತ್ತಿದ್ದರು.

ಹಾಜಿರಾಳಿಗೆ ಮರದ ಮೇಲಿನಿಂದಲೇ ಹಸಿಮೀನಿನ ಪರಿಮಳ ಮೂಗಿಗೆ ಬಡಿಯುತ್ತಿತ್ತು. ದೊಡ್ಡಕಣ್ಣುಗಳಿರುವ ಮೀನುಗಳನ್ನು ತರಬೇಕೆಂದು ಅವಳು ಯಾವಾಗಲೂ ಮುದಾರನ ಬಳಿ ಹಠಮಾಡುತ್ತಿದ್ದಳು. ಅವಳ ತಾಯಿ ಜ್ಹುಲೈಕಾ ಬೀಬಿ ಮೀನುಸಾರು ಮಾಡಿದಾಗಲೆಲ್ಲಾ ಸಾರಲ್ಲಿ ಬಿದ್ದಿರುತ್ತಿದ್ದ ಮೀನಿನ ಕಣ್ಣುಗಳನ್ನು ಅವಳಿಗೇ ಹುಡುಕಿ ತೆಗೆದು ತಿನ್ನಿಸುತ್ತಿದ್ದಳು. ಮೀನಿನ ಕಣ್ಣುಗಳನ್ನು ತಿನ್ನಿಸಿತಿನ್ನಿಸಿ ಕೊಂಡಾಟಮಾಡಿ ಹಾಜಿರಾಳನ್ನು ಹಾಳುಮಾಡಿದ್ದು ಜ್ಹುಲೈಕಾಳೇ ಎಂದು ಹಾಜಮ್ಮನವರು ಆಗಾಗ ಆಯಿಶಾಳನ್ನು ಸಾಂತ್ವನಗೊಳಿಸುತ್ತಿದ್ದರು. ಈಗಲೂ ಹಾಗೆಯೇ ದೊಡ್ಡಕಣ್ಣುಗಳುಳ್ಳ ಮೀನುಗಳನ್ನು ಮುದಾರ ತರಬಹುದೆಂದು ಪೇರಲೆಯ ಮೇಲಿನಿಂದ ಹಾಜಿರಾ ಕಾಯುತ್ತಿದ್ದಳು.

ಜುಲೈಕಾ ಇರುವಾಗ ತಲೆಯ ಮೇಲೆ ಮೀನಿನ ಪೆಟ್ಟಿಗೆಯನ್ನು ಹೊತ್ತು ಹೂವಿನ ಕೊಲ್ಲಿಗೆ ಮಾರಲು ತರುತ್ತಿದ್ದದ್ದು ಹೈದರನ ತಂದೆ ಸೈದಾಲಿ. ಸೈದಾಲಿ ಕ್ಷಯ ಬಂದು ತೀರಿ ಹೋಗಿದ್ದರು. ಅವರು ತೀರಿಹೋದ ಮೇಲೆ ಅವರ ಮಗ ಹೈದರ್ ಸೈಕಲಿನಲ್ಲಿ ಮೀನುಪೆಟ್ಟಿಗೆ ಇಟ್ಟುಕೊಂಡು ಬರುತ್ತಿದ್ದನು. ಹಾಗೆ ಬರುತ್ತಿದ್ದವನು ಮೀನು ಮಾರುತ್ತಾ ತೋಟದ ಆಳುಗಳ ಲೈನು ಮನೆಯಲ್ಲಿ ಪ್ರಾಯಕ್ಕೆ ಬಂದ ಹೆಣ್ಣುಮಕ್ಕಳಿಗೆ ಸ್ವಲ್ಪ ಹೆಚ್ಚೇ ಮೀನುಕೊಡುತ್ತಿದ್ದಾನೆಂದೂ ಹೋಗುವಾಗ ತೋಟದ ಕಿತ್ತಳೆಹಣ್ಣುಗಳನ್ನೂ, ಬಿದ್ದ ಕಾಫಿಬೀಜಗಳನ್ನೂ, ಕರಿಮೆಣಸಿನ ಗೊಂಚಲುಗಳನ್ನೂ ಮೀನಿನ ಪೆಟ್ಟಿಗೆಯಲ್ಲಿ ತುಂಬಿಕೊಂಡು ಹೋಗುವನೆಂದೂ ಕಾವಲುಗಾರ ಕುಂಞಿಕಣ್ಣನಿಗೆ ಗೊತ್ತಾಗಿ ಅವರು ಕವಣೆಯಿಂದ ಅವನಿಗೆ ಕಲ್ಲು ಹೊಡೆದು ಕುಚ್ಚಿಚಾತನ್ ದೈವದ ಹೆಸರಿನಲ್ಲಿ ಶಾಪ ಹಾಕಿ ಉಸ್ಮಾನ್ ರೈಟರಿಗೆ ರಿಪೋರ್ಟ್ ಮಾಡಿ ಅವನು ತೋಟದೊಳಕ್ಕೆ ಬರದಂತೆ ಬಂದೋಬಸ್ತು ಮಾಡಿದ್ದರು. ಆದರೆ ಹೈದರ್ ಬಿಡಾರದಲ್ಲಿ ರೈಟರು ಇಲ್ಲದ ಸಮಯ ನೋಡಿಕೊಂಡು ಬೇಲಿಹಾರಿಬಂದು ಹಾಜಮ್ಮಳ ಜೊತೆ ಕಷ್ಟಸುಖ ಮಾತನಾಡಿ ಮೀನುಕೊಟ್ಟು ಹೋಗುತ್ತಿದ್ದನು. ಈವತ್ತೂ ಹಾಗೇ ಬಂದವನು ಗದ್ದೆಯ ಬದಿಯಲ್ಲಿ ರಾಟೆಮನೆಯ ದೂಮಕ್ಕನನ್ನು ಸುಂದರಿಯರಾದ ಅವರ ಹೆಣ್ಣುಮಕ್ಕಳನ್ನೂ ಕಂಡೂ ಅಲ್ಲೇ ಸ್ಥಗಿತನಾಗಿ ತಿರುಗಿ ಹೋಗಿದ್ದನು. ಅವನು ಕದ್ದು ಬರುವುದನ್ನು ಕಂಡುಹಿಡಿಯಬೇಕೆಂದು ಹಠ ತೊಟ್ಟಿದ್ದ ಮಾಯಾವಿ ಕಾವಲುಗಾರ ಕುಂಞಿಕಣ್ಣನಿಗೆ ಈಗ ಕೆಲವು ವರ್ಷಗಳಿಂದ ಕಣ್ಣಿನಲ್ಲಿ ಪೊರೆಬೆಳೆದು ದೂರದ ಏನೂ ಕಾಣಿಸುತ್ತಿರಲಿಲ್ಲ. ಹಾಗಾಗಿ ಅವನು ಮನಸಿನಲ್ಲೇ ಹೈದರನಿಗೆ ಶಾಪ ಹಾಕುತ್ತಾ ಕುಚ್ಚಿಚಾತನ್ ಎಂಬ ದೈವ ಬಲದಿಂದ ಅವನನ್ನು ಕಟ್ಟಿಹಾಕಲು ನೋಡುತ್ತಾ ಏನೂ ಆಗದೆ ಅಸಹಾಯಕರಾಗಿ ಓಡಾಡುತ್ತಿದ್ದನು.

ಕಣ್ಣಿನ ಪೊರೆಯ ಕುರಿತು ಹೇಳಿದರೆ ಉಸ್ಮಾನ್ ರೈಟರು ಮಕ್ಕಾಗೆ ಹೋಗಿರುವ ಸಣ್ಣ ಸಾಹುಕಾರರು ಮರಳಿ ಬರಲಿ, ಅವರು ಬಂದರೆ ಅವರಿಂದ ಅಡ್ವಾನ್ಸ್ ತೆಗೆದುಕೊಂಡು ಇಬ್ಬರೂ ಮುರುಗಾಮಲೆಗೆ ಹೋಗಿ ಬರುವಾ ಎಂದು ವಿಶ್ವಾಸತೋರಿಸಿದ್ದರು. ಮಕ್ಕಾಗೆಹೋಗಿದ್ದ ಸಣ್ಣ ಸಾಹುಕಾರರು ಹಜ್ ಹಬ್ಬ ಕಳೆದು ಎರಡು ವಾರವಾದರೂ ಇನ್ನೂ ಬಂದು ತಲುಪಿರಲಿಲ್ಲ. ಹಾಗಾಗಿ ಅವರು ಕುಂಞಿಕಣ್ಣನನ್ನು ಈಸಲವೂ ಒಯ್ಯಲಾಗದೆ ಜುಲೈಕಾ ಎಂಬ ಮಾತನಾಡುವ ಗಿಳಿಯಿಂದ ಬೆರಳು ಕಚ್ಚಿಸಿಕೊಂಡು ಒಬ್ಬರೇ ನೋವಿನಲ್ಲಿ ಹೋಗಿದ್ದರು. ರೈಟರಿಲ್ಲದೆ ಯಾಕೋ ಒಂಟಿಯಾಗಿರುವೆ ಅನಿಸಿ ಕುಂಞಿಕಣ್ಣ ತನ್ನ ಕಣ್ಣಿನ ಪೊರೆಯೊಳಗಿನಿಂದಲೇ ಎಲ್ಲವನ್ನೂ ಕಾಣುತ್ತಾ ತಾನೂ ಬಿಡಾರದ ಮುಂದಿನ ಮಣ್ಣಿನ ಅಂಗಳ ತಲುಪಿದನು. ಹಾಜಿರಾ ನಿಧಾನಕ್ಕೆ ಪೇರಲೆಯ ಮರದ ನುಣುಪು ಕಾಂಡವನ್ನು ಜಾರುತ್ತಾ ಇಳಿದಳು.

ರೈಟರು ಇಲ್ಲದಿರುವಾಗ ಅವಳು ಮರಹತ್ತಿಹತ್ತಿ ಜಾರುತ್ತಾ ಜಾರಿಜಾರಿ ಇಳಿಯುತ್ತಾ ಪೇರಲೆಯ ಕಾಂಡ ನುಣುಪಾಗಿ ಹೋಗಿದೆ ಎಂದು ಮುದಾರ ತಮಾಷೆ ಮಾಡುತ್ತಿದ್ದನು. `ಹೆಂಗಸರು ಮರಹತ್ತಿ ಗಂಡಸರು ಒಲೆ ಊದಿ ಎಲ್ಲವೂ ತಲೆಕೆಳಗಾಗಿ ಪ್ರಳಯವಾಗುವುದು' ಎಂದು ಹಾಜಮ್ಮ ತುಳುವಿನಲ್ಲಿ ದೂಮಣ್ಣ ಮತ್ತು ಮುದಾರರ ಜೊತೆ ಗಂಟೆಗಟ್ಟಲೆ ಹರಟೆ ಹೊಡೆಯುತ್ತಿದ್ದರು. ಉಸ್ಮಾನ್ ರೈಟರು ಇಲ್ಲದಿರುವಾಗ ಅವರೆಲ್ಲರೂ ಹೀಗೆ ಬಿಡಾರದ ಮಣ್ಣಿನ ಅಂಗಳದಲ್ಲಿ ಕತ್ತಲಾಗುವವರೆಗೆ ಹರಟೆ ಹೊಡೆದುಕೊಂಡು ಮಲಯಾಳ ಮಾತನಾಡುವ ಕಾವಲುಗಾರ ಕುಂಞಿಕಣ್ಣನೂ ಅದರಲ್ಲಿ ಸೇರಿಕೊಂಡು ಅವರೆಲ್ಲರೂ ನಾನಾ ದೈವಗಳ, ಭೂತಗಳ, ಯಕ್ಷಿಗಳ,ದೇವರುಗಳ ಹೆದರಿಕೆ ಹುಟ್ಟಿಸುವ ಕತೆ ಹೇಳಿಕೊಂಡು ಆ ಕತೆಗಳನ್ನು ರೈಟರ ಹೆಂಡತಿಯೂ, ಮಕ್ಕಳೂ, ಗಿಳಿಯೂ, ಪಟದಲ್ಲಿರುವ ಪಷರ್ಿಯನ್ ಬೆಕ್ಕೂ ಕೇಳಿಸಿಕೊಂಡು ಕೂತಿರುತ್ತಿದ್ದವು.

ಈವತ್ತು ಅವರ ಜೊತೆ ಸೇರಿಕೊಳ್ಳಲು ಹಾಲುಕರೆಯುವ ನಂಬಿಯಾರೂ, ಕೆಸದ ಗಂಟು ಹೊತ್ತುಕೊಂಡ ದೂಮಕ್ಕನೂ ಅವರ ಹೆಣ್ಣು ಮಕ್ಕಳೂ ಬರುತ್ತಿದ್ದರು. ಬಗಲಲ್ಲಿದ್ದ ಹುಂಜವನ್ನು ಪೇರಲೆಯ ಮರಕ್ಕೆ ಕಟ್ಟಿಹಾಕಿದ ರಾಟೆಮನೆಯ ದೂಮಣ್ಣ ತಲೆಯ ಮೇಲೆ ಕಾಡುಕೆಸ ಹೊತ್ತುಕೊಂಡು ಮುಖವೆಲ್ಲಾ ಕೆಸರು ಮಾಡಿಕೊಂಡು ಬರುತ್ತಿರುವ ದೂಮಕ್ಕ ಮತ್ತು ಅವಳ ಮಕ್ಕಳಿಗೂ ಮತ್ತು ತನಗೂ ಏನೂ ಸಂಬಂಧವೇ ಇಲ್ಲ. ತಾನು ಅವರ ಗಂಡನೇ ಅಲ್ಲ ಮತ್ತು ಆ ಮಕ್ಕಳ ತಂದೆಯೇ ಅಲ್ಲ ಎನ್ನುವಂತೆ ಮುಖಮಾಡಿಕೊಂಡು 'ಅಮ್ಮಾ ಹುಡಿ ಅಕ್ಕಿ ತೌಡು ಉಂಟಾ' ಎಂದು ಎಂದಿನಂತೆ ಜೋರುದನಿಯಲ್ಲಿ ಕೂಗು ಹಾಕಿ ಮುಂಡಾಸನ್ನು ಬಿಚ್ಚಿ ನೆಲಕ್ಕೆ ಹಾಸಿ ಅದರ ಮೇಲೆ ಕುಳಿತುಕೊಂಡನು.

Post new comment

The content of this field is kept private and will not be shown publicly.
2 + 4 =
Solve this simple math problem and enter the result. E.g. for 1+3, enter 4.