ಇರುಳು ಅರ್ಧ ಕಳೆದು ಮುಗಿದು ಬಹಳ ಸಮಯವಾಗಿದ್ದರೂ, ಆಕಾಶದತುಂಬ ಚಂದ್ರನಬೆಳಕು ತುಂಬಿಕೊಂಡು, ಮರಿಯಮ್ಮ ಇನ್ನು ಕತ್ತಲಾಗುವುದೇ ಇಲ್ಲವೇನೋ ಎಂಬ ಹೆದರಿಕೆಯಲ್ಲಿ ಕೆಟ್ಟುಹೋಗುತ್ತಿದ್ದ ಬೆಂಕಿಗೆ ಉಳಿದ ಒಣಎಲೆಗಳನ್ನು ತುಂಬಿ, ಊದುಕೊಳವೆಯಿಂದ ಊದಿ, ಹೊಗೆಎಬ್ಬಿಸಿ, ಕಣ್ಣೀರು ತುಂಬಿಕೊಂಡು ಕೂತಿದ್ದರು.
ಹೂವಿನ ಕೊಲ್ಲಿಯ ಕೆಳಗಿನ ಹಾಡಿಯಲ್ಲಿ ಉಳಿದ ಎಲ್ಲರೂ ಚಿಮಿಣಿ ದೀಪ ಕೆಡಿಸಿ ಬಾಗಿಲು ಹಾಕಿಕೊಂಡು ತಮ್ಮ ತಮ್ಮ ಲೈನು ಮನೆಗಳನ್ನು ಕತ್ತಲು ಮಾಡಿಕೊಂಡು ಮೌನವಾಗಿ ನಿದ್ದೆ ಹೋಗಲು ನೋಡುತ್ತಿದ್ದರು. ಮರಿಯಮ್ಮನ ಪಕ್ಕದ ಲೈನುಮನೆಯಿಂದ ಆಸಿಯಾಳ ಆರುತಿಗಳ ಮಗು ಬಾಯಿತೆರೆದು ಅಳುತ್ತಿತ್ತು. ಆಸಿಯಾ ಯಾವುದೋ ಹಾಡುಹೇಳಿ ಆ ಮಗುವನ್ನು ಮಲಗಿಸಲು ನೋಡಿದರೆ ಲೈನುಮನೆಯ ಬೀಡಾಡಿ ನಾಯಿಗಳು ಆ ಮಗುವಿನ ಅಳುವನ್ನು ಅಣಕಿಸುತ್ತಾ ಚಂದ್ರನ ಕಡೆನೋಡಿ ಊಳಿಡುತ್ತಿದ್ದವು. ಆಸಿಯಾಳ ಗಂಡ ಸೈಕಲ್ ಮಹಮ್ಮದ್ ಕ್ಯಾಕರಿಸುತ್ತಾ ಎದ್ದು ಎದುರುಬಾಗಿಲಿನ ಚಿಲಕವನ್ನು ಸದ್ದುಮಾಡಿ ತೆಗೆದು ಹೊರಬಂದು ಬೀಡಾಡಿ ನಾಯಿಗಳನ್ನು ಬೈಯಲೆಂದು ಬಾಯಿತೆರೆದನು. ಅವನಿಗೆ ಮರಿಯಮ್ಮ ಬೆಂಕಿಯ ಮುಂದೆ ಬಾಗಿ ಕೂತಿರುವುದನ್ನು ಕಂಡು ಏನೂ ಹೇಳಲು ಬಾಯಿಬಾರದೆ ಪುನಃ ಬಾಗಿಲು ಹಾಕಿ ಒಳಹೊಕ್ಕು ತಾನೂ ಒಂದು ಹಾಡು ಹೇಳುತ್ತಾ ಮಗುವನ್ನು ಮಲಗಿಸಲು ನೋಡಿದನು.
ಮರಿಯಮ್ಮ ಅವರಿಬ್ಬರ ಹಾಡುಕೇಳುತ್ತಾ, ಮಗುವಿನ ಅಳುಕೇಳುತ್ತಾ, ಕಣ್ಣೀರು ಒರೆಸಿಕೊಂಡು ಮೂಗುಸೀಟಿ ಬೆಂಕಿಯ ಮೇಲೆ ಎರಚಿ ಕೂತಬಂಗಿಯನ್ನು ಬದಲಿಸಿ ಬೆಂಕಿಯ ಇನ್ನೊಂದು ಮಗ್ಗುಲಿಗೆ ಕುಳಿತುಕೊಂಡರು. ಬೆಂಕಿಯ ಬೆಳಕಲ್ಲಿ ಅವರ ಮೂಗುತಿ ಹೊಳೆಯುತ್ತಿತ್ತು. ಅವರಿಗೆ ಯಾಕೋ ಸಂಕಟ ತಡೆದುಕೊಳ್ಳಲಾಗುತ್ತಿಲ್ಲ ಅನ್ನಿಸಿ ಮೇಲೆ ಆಕಾಶನೋಡಿ ಪಡೆದವನನ್ನು ನೆನಪಿಸಿಕೊಂಡರು. ಪಡೆದವನು ಆಕಾಶದಲ್ಲಿ ಇನ್ನೂ ಇರುವನು ಎಂಬಂತೆ ತುಣುಕು ಕಪ್ಪುಮೋಡವೊಂದು ದೂರದಿಂದ ತೇಲುತ್ತಾತೇಲುತ್ತಾ ಬಂದು ಚಂದ್ರನನ್ನು ತಲುಪಲು ಹವಣಿಸುತ್ತಿತ್ತು. ಚಂದ್ರನು ತನ್ನ ಸುತ್ತ ಬೆಳಕು ಹೊದ್ದುಕೊಂಡು ಸುತ್ತಲಿನ ಒಂದೆರಡು ಬೆಳ್ಳಗಿನ ಮೋಡಗಳ ನಡುವೆ ಓಡಾಡುತ್ತಾ ಆ ಕಪ್ಪುಮೋಡಕ್ಕೆ ಹತ್ತಿರಾಗುತ್ತಾ ದೂರ ಹೋಗುತ್ತಾ ಆಟವಾಡುತ್ತಿತ್ತು. ತಣ್ಣನೆಯ ಕುಳಿರ್ಗಾಳಿ ಲೈನುಮನೆಯ ಉದ್ದಕ್ಕೆ ಬೆಳೆದಿದ್ದ ಸಿಲ್ವರ್ ಮರಗಳ ಚೂಪಗಿನ ಎಲೆಗಳನ್ನು ಮೆಲ್ಲಗೆ ಅಲುಗಾಡಿಸಿ, ಮರಿಯಮ್ಮನ ಮುಖಕ್ಕೆ ಸೋಕಿ, ತೆರೆದೇ ಇದ್ದ ಅವಳ ಖಾಲಿ ಲೈನುಮನೆಯ ಮುಂಬಾಗಿಲಿನಿಂದ ನುಸುಳಿ, ಹಿಂಬಾಗಿಲಿನಿಂದ ಕಾಫಿ ಗಿಡಗಳ ನಡುವೆ ಸುಳಿದು ಮಾಯವಾಗುತ್ತಿತ್ತು. ಮನೆಯ ಮುಂದೆ ಬೆಳೆಸಿದ್ದ ಮಲ್ಲಿಗೆಯ ಬಳ್ಳಿ, ಚೆಂಡು ಹೂವಿನಗಿಡ, ಬಸಳೆಯ ಚಪ್ಪರ, ಸಿಹಿಗೆಣಸಿನ ಪೊದೆ ಎಲ್ಲವೂ ಆ ಬೆಳದಿಂಗಳಿನಲ್ಲಿ ಮಿಂದು ಗಾಳಿಗೆ ಅಲ್ಲಾಡಿಕೊಂಡು ಮರಿಯಮ್ಮನನ್ನು ಸುಮ್ಮನೆ ನೋಡುತ್ತಿದ್ದವು. ಎಲ್ಲವೂ ತನ್ನನ್ನೇ ಆ ಬೆಳಕಿನಲ್ಲಿ ಗಮನಿಸಿ ನೋಡುತ್ತಿವೆ ಅನ್ನಿಸಿ ಮರಿಯಮ್ಮ ಇನ್ನು ತಾನು ಬದುಕುವುದು ಬೇಡ ಎಂದು ಎಂದಿನಂತೆ ಅಂದುಕೊಂಡು ಕುಳಿತಲ್ಲೇ ಕಣ್ಣುಮುಚ್ಚಿಕೊಂಡು ತೂಕಡಿಸಲು ನೋಡಿದರು. ಆ ಬೆಳದಿಂಗಳಿನಲ್ಲಿ ಕಾಫಿಗಿಡದ ಬುಡದಲ್ಲಿ ಕಾಣಿಸಿಕೊಂಡ ಕಾಡುಮೊಲವೊಂದನ್ನು ಓಡಿಸಿಕೊಂಡು ಹೋಗಿದ್ದ ಮರಿಯಮ್ಮನ ಸಾಕುನಾಯಿ ಜಿಮ್ಮಿ ಅದೆಲ್ಲಿಂದಲೋ ಮರಳಿಬಂದು ಕೆಟ್ಟುಹೋಗುತ್ತಿದ್ದ ಬೆಂಕಿಯ ಬಿಸಿಯಬೂದಿಯ ಪಕ್ಕ ಮಲಗಿ ಕಾಲುಗಳ ಮೇಲೆ ತಲೆಯಿಟ್ಟುಕೊಂಡು ಅವರನ್ನೇ ಕೊಂಚ ಹೊತ್ತು ನೋಡಿ ಆಮೇಲೆ ತಾನೂ ಕಣ್ಣುಮುಚ್ಚಿಕೊಂಡು ನಿದ್ದೆ ಹೋಗಲು ನೋಡಿತು.
ಮರಿಯಮ್ಮನವರಿಗೆ ಆ ಇರುಳಿನಲ್ಲಿ ಜಿಮ್ಮಿ ಮರಳಿಬಂದು ತನ್ನನ್ನೇ ನೋಡುತ್ತಾ ಅಂಗುಲ ದೂರದಲ್ಲಿ ಮಲಗಿರುವುದು ಕಂಡು ಆಶ್ವಾಸ ಸಿಕ್ಕಿದಂತಾಯಿತು. ಬೇರೆ ಎಲ್ಲ ಮನುಷ್ಯನಾಯಿಗಳು ತನ್ನನ್ನು ಕಡೆಯಾಗಿ ಕಂಡರೇನು. ಈ ನಾಯಿ ಇದೆಯಲ್ಲ ಅಂದುಕೊಂಡು ಮನಸ್ಸಿನಲ್ಲೇ ಕೊಂಚ ನಗಲು ನೋಡಿದರು. ನಗಲು ಆಗಲಿಲ್ಲ. ಅಯ್ಯೋ ನನ್ನ ಎದೆಯ ಸಂಕಟ ಎನ್ನೂ ಹಾಗೆಯೇ ಉಳಿದಿದೆಯಲ್ಲಾ ಪಡೆದವನೇ ಎಂದು ಅರ್ಧತೆರೆದ ಕಣ್ಣಿನಿಂದ ಆಕಾಶ ನೋಡಿದರು.
ಅದು ಹೇಗೋ ಆ ಕಪ್ಪುಮೋಡ ಚಂದ್ರನನ್ನು ತಬ್ಬಿ ಮರೆಮಾಡಲು ನೋಡುತ್ತಿತ್ತು. ಚಂದ್ರ ತಪ್ಪಿಸಿಕೊಳ್ಳಲು ನೋಡುತ್ತಿದ್ದ. ಮೋಡದ ನೆರಳು ಕಾಫಿ ತೋಟದ ಮೇಲೆ ಹರಡಿ ಒಮ್ಮೆಗೇ ಆಕಾಶದಲ್ಲಿ ಒಂದೆರೆಡು ಗ್ರಹ ನಕ್ಷತ್ರಗಳು ಕಾಣಿಸಿಕೊಂಡು ಮತ್ತೆ ಬೆಳಕಾಗಿ ಅವುಗಳು ಮಾಯವಾದವು. ಮರಿಯಮ್ಮನ ಮುಂದೆ ಉರಿಯುತ್ತಿದ್ದ ಬೆಂಕಿ ಪೂತರ್ಿಕೆಟ್ಟುಹೋಗಿ ಅವರಿಗೆ ಚಳಿಯಾಗುತ್ತಿದೆ ಅನ್ನಿಸಿತು. ಅವರು ತಮ್ಮ ತಲೆಯ ಹಸಿರು ಬಟ್ಟೆಯನ್ನು ಮುಖದ ಮೇಲೆ ಎಳೆದುಕೊಂಡು ಬೆಂಕಿಗೆ ಹಾಕಲು ಇನ್ನೂ ಒಣ ಎಲೆಗಳು ಸಿಗುವುದೇನು ಎಂದು ಹುಡುಕಿಕೊಂಡು ನಡೆದಾಡಲು ತೊಡಗಿದರು.
ನಡೆದಲ್ಲೆಲ್ಲ ಮಂಜುಬಿದ್ದು ನೆಲಒದ್ದೆಯಾಗಿತ್ತು. ಒಣಗಿದ ಹುಲ್ಲಿನಮೇಲೆ ಮಂಜು ಚಂದ್ರನಬೆಳಕಿನಲ್ಲಿ ಹೊಳೆಯುತ್ತಿತ್ತು. ಮರಗಳ ಟೊಂಗೆಯ ಮೇಲೆ ಮಣಿಗಟ್ಟಿದ ಮಂಜು ಬಿದ್ದ ಎಲೆಗಳ ಮೇಲೆ ಸಣ್ಣಗೆ ಸದ್ದು ಮಾಡುತ್ತಾ ಉದುರುತ್ತಿತ್ತು. ಮರಿಯಮ್ಮನವರು ತಮ್ಮ ನೀಳದೇಹವನ್ನು ಹಿಂಡಿ ಹಿಡಿಮಾಡಿಕೊಂಡು ಆ ಇರುಳಿನಲ್ಲಿ ಇನ್ನಷ್ಟು ಒಣಎಲೆಗಳನ್ನು ಹುಡುಕಲು ಲೈನುಮನೆಯ ಮುಂದಿನ ಕಾಲುದಾರಿಯಲ್ಲಿ ನಡೆಯತೊಡಗಿದರು. ಜಿಮ್ಮಿ ನಾಯಿ ಅವರನ್ನು ಹಿಂಬಾಲಿಸಲು ಬೂದಿಯಿಂದ ಮೈಕೊಡವಿ ಎದ್ದಿತು.
ಎದುರಿನಿಂದ ತಲೆಯ ಮೇಲೊಂದು ಪ್ಲಾಸ್ಟಿಕ್ಕಿನ ಟೊಪ್ಪಿ ಹಾಕಿಕೊಂಡು, ಕೈಯಲ್ಲಿ ಆರಿಸಿದ ಟಾಚರ್್ಲೈಟ್ ಬೀಸಿಕೊಂಡು, ಕಪ್ಪಗಿನ ಮಳೆ ಕೋಟಿನೊಳಕ್ಕೆ ತಮ್ಮ ದೇಹವನ್ನು ತೂರಿಸಿಕೊಂಡು, ಗಂಬೂಟಿನೊಳಗೆ ತಮ್ಮ ಕಾಲುಗಳನ್ನುಹಾಕಿಕೊಂಡು ಹೆಜ್ಜೆಹಾಕುತ್ತಾ ರಾತ್ರಿಕಾವಲುಗಾರ ಕೊಂಬಿನಮೀಸೆಯ ಮೂಸಾಕಾಕಾ ನಡೆದುಬರುತ್ತಿದ್ದರು. ಅವರಿಗೆ ಆ ಇರುಳಿನಲ್ಲಿ ಎದುರಿನಿಂದ ನಡೆದು ಬರುತ್ತಿರುವುದು ಮಕ್ಕಳನ್ನುಆಡಿಸುವ ಮರಿಯಮ್ಮ ಎಂದು ಅಷ್ಟುದೂರದಿಂದಲೇ ಗೊತ್ತಾಗಿತ್ತು. ಸಂಕಟ ಜಾಸ್ತಿಆದಾಗಲೆಲ್ಲಾ ಮರಿಯಮ್ಮ ಹೀಗೆ ಹೂವಿನಕೊಲ್ಲಿಯ ಕಾಲುದಾರಿಗಳಲ್ಲಿ ಕತ್ತಲೆಯಲ್ಲಿ ಪ್ರೇತದಂತೆ ಓಡಾಡುವುದನ್ನು ಮೂಸಾಕಾಕ ಬಹಳಕಾಲದಿಂದ ನೋಡುತ್ತಿದ್ದರು.
'ಇನ್ನೊಂದುಸಲ ಆ ಮರಿಯ ಕತ್ತಲೆಯಲ್ಲಿ ಓಡಾಡುವುದ ನೋಡಿದರೆ ಕಿತ್ತಳೆಯ ಗಿಡಕ್ಕೆ ಕಟ್ಟಿಹಾಕು. ನಾನೇಬಂದು ಅವಳ ಮೈಯಲ್ಲಿನ ಸೈತಾನನನ್ನ ಬಿಡಿಸುತ್ತೇನೆ ಎಂದು ಸಣ್ಣಸಾಹುಕಾರರು ಹಜ್ಜ್ಗೆ ಹೋಗುವ ಮೊದಲು ಮೈಮೇಲೆ ಬಂದವರಂತೆ ಗಜರ್ಿಸಿದ್ದರು. ಅದನ್ನು ಕೇಳಿಸಿಕೊಂಡು ತಲೆ ತಗ್ಗಿಸಿಕೊಂಡು ನಿಂತಿದ್ದ ಉಸ್ಮಾನ್ ರೈಟರು ಚಕ್ರೋಲ್ ಮುಗಿದ ಮೇಲೆ ಮೂಸಾಕಾಕಾನನ್ನು ಕೆಳಗಿನಹಾಡಿಗೆ ಕಳಿಸಿ ಮರಿಯಮ್ಮನನ್ನು ಕರೆಸಿಕೊಂಡು ಎದುರ ನಿಲ್ಲಿಸಿದ್ದರು.
'ಮರಿಯಮ್ಮಾ ನಿನಗೆ ನಿಜವಾಗಿಯೂ ಮೈಮೇಲೆ ಸೈತಾನ್ಬರುವುದೋ ಅಲ್ಲಾ ನೀನು ನಾಟಕಆಡುವುದೋ?, ನೀನು ಹೀಗೆ ಮಾಡಿದರೆ ಆಳುಗಳ ಲಿಸ್ಟಿನಿಂದ ನಿನ್ನ ಹೆಸರು ತೆಗೆದುಹಾಕಿ ತೋಟದಿಂದ ಓಡಿಸಬೇಕಾಗುತ್ತದೆ' ಎಂದು ಮೆಲ್ಲಗೆ ಗದರಿದ್ದರು.
'ನೀವೇಅಲ್ಲವಾ ರೈಟರೇ ಈ ಹೂವಿನಕೊಲ್ಲಿಕಾಡಿಗೆ ನನ್ನನ್ನು ಸೇರಿಸಿದ್ದು?. ಏನು ಬೇಕಾದರೂ ಮಾಡಿ. ಆದರೆ ಓಡಿಸುವಮೊದಲು ನನ್ನ ಗಂಡಸಿನ ಹೋದಜೀವವನ್ನು ನನಗೆ ತಿರುಗಿ ತರಿಸಿಕೊಡಿ ನಾವಿಬ್ಬರೂ ಸಿದ್ಧಾಪುರ ಸಂತೆಯಲ್ಲಿ ಮತ್ತೆ ಬೇಡಿಯಾದರೂ ಬದುಕಿಕೊಳ್ಳುತ್ತೇವೆ' ಎಂದು ಬಹುಶಃ ಜೀವ ಹೋಗಿರುವ ತನ್ನ ಗಂಡ ಡ್ರೈವರ್ ಹಂಸಾಕನ ಜೀವವನ್ನು ರೈಟರು ಮರಳಿ ತಂದು ಕೊಡಬಲ್ಲರು ಎನ್ನುವ ಆಶೆಯಲ್ಲಿ ಉತ್ತರಿಸಿ ಮಿಂಚು ಹೊಡೆದವಳಂತೆ ಅವರ ಎದುರಿನಿಂದ ಮಾಯವಾಗಿದ್ದಳು.
ಅವಳನ್ನು ಹಾಡಿಯಿಂದ ಕರೆದು ತಂದಿದ್ದ ಮೂಸಾಕಾಕ, 'ಹೋಗಲಿ ಬಿಡಿ ರೈಟರೇ ಅವಳ ಸಂಕಟ ಸಾಹುಕಾರರಿಗೆ ಎಲ್ಲಿ ಅರಿವಾಗುವುದು.. ಅವಳ ಪಾಡಿಗೆ ಅವಳು ಕತ್ತಲಲ್ಲಿ ತಿರುಗಾಡಿಕೊಂಡಿರಲಿ. ಅವಳಿಗೆ ಏನೂ ಆಗದಹಾಗೆ ನಾನು ನೋಡಿಕೊಳ್ಳತ್ತೇನೆ' ಎಂದಿದ್ದರು.ಅಂದಿನಿಂದ ಮರಿಯಮ್ಮ ಕತ್ತಲೆಯಲ್ಲಿ ಒಣಎಲೆ ಹುಡುಕುವ ಒಂಟಿಸವಾರಿ ಹೊರಟಾಗಲೆಲ್ಲ ಟಾರ್ಚ್ ಆರಿಸಿಕೊಂಡು ಅವಳಿಗೆ ಅರಿವಾಗದಂತೆ ಅವಳ ಹಿಂದೆ ಮುಂದೆ ಅಂತರದಲ್ಲಿ ನಡೆಯುತ್ತಾ ಕಾವಲು ಕಾಯುತ್ತಿದ್ದರು.
ಆದರೆ ಇಂದು ಚಂದಿರನಬೆಳಕಿನಲ್ಲಿ ಹಗಲಿನಂತೆ ಕಾಣಿಸುವ ಕಾಲುದಾರಿಯಲ್ಲಿ ಅವರಿಬ್ಬರು ಒಬ್ಬರನ್ನೊಬ್ಬರು ದೂರದಿಂದಲೇ ಗುರುತುಹಿಡಿದಿದ್ದರು. ಮರಿಯಮ್ಮನವರ ಹಿಂದೆ ಸದ್ದಿಲ್ಲದೆ ನಡೆದುಬರುತ್ತಿದ್ದ ಜಿಮ್ಮಿ ಮೂಸಾಕಾಕಾ ಕಾಣಿಸಿಕೊಂಡಂತೆ ನೆಗೆದುಬಂದು ವಿಧೇಯನಾಗಿ ತಲೆತಗ್ಗಿಸಿ ಬಾಲವಲ್ಲಾಡಿಸಿ ಕೊಂಚ ದೂರ ನಿಂತುಕೊಂಡಿತು. ಅದಕ್ಕೆ ತನ್ನನ್ನು ಮಟ್ಟಿಸಿಕೊಳ್ಳುವವರು ಯಾರು ಮುಟ್ಟಿಸಿಕೊಳ್ಳದವರು ಯಾರು ಎಂದು ಗೊತ್ತಿತ್ತು. ಮೂಸಕಾಕಾನ ಕೋಟಿನಜೇಬಿನೊಳಗೆ ಯಾವಾಗಲಾದರೊಮ್ಮೆ ಮೊಲವೋ, ಕಾಡುಕೋಳಿಯೋ ಜೀವಕಳೆದುಕೊಂಡು ಮಲಗಿದ್ದರೆ ಅದರಪಾಲು ಅದಕ್ಕೆಸಿಗುತ್ತಿತ್ತು. ಆದರೆ ಇಂದು ಅವರ ಮಳೆಕೋಟಿನ ಜೇಬಿನೊಳಗಿಂದ ಹಲಸಿನ ತೊಳೆಗಳ ವಾಸನೆ ಮೂಗಿಗೆ ಅಡರುತ್ತಿತ್ತು.
ಮರಿಯಮ್ಮ ತನ್ನ ಮನಸಿನಲ್ಲಿರುವ ಯಾವುದೇ ಸಂಕಟಗಳು ಯಾರಿಗೂ ಅರಿವಾಗಬಾರದು ಎನ್ನುವಂತೆ 'ಇದೇನು ಮೂಸಕಾಕಾ ಹಲಸಿನ ಹಣ್ಣು ಬರ್ಕೆಯೋ ತುಳುವನೋ?' ಎಂದು ಕೇಳಿ ಮಾತನಾಡಲು ನಿಂತರು. ಇದೇನು ಈ ಹೆಂಗಸಿಗೆ ಹಗಲು ರಾತ್ರಿಯ ಅಂತರವಿಲ್ಲವೇ ಎಂದು ಮೂಸಕಾಕಾನಿಗೆ ಹೆದರಿಕೆಯಾದರೂ ಅದನ್ನು ತೋರಿಸಿಕೊಳ್ಳದೆ ಇದು ಮೈದಾನಿ ಬಾಣೆಯ ದೊಡ್ಡ ಬರಕೆಯ ಮರದ್ದು. ರಾತ್ರಿಹೊತ್ತು ಕಾಡುಪಾಪಗಳು ಬೀಳಿಸಿ ಹಾಕುತ್ತಿದ್ದವು. ಅವುಗಳನ್ನು ಓಡಿಸಿ ತೋಳೆ ಬಿಡಿಸಿ ತಂದೆ. ಬೆಳಕಾಗಲು ಆಯಿತಲ್ಲವಾ ನೀವು ಏನು ಹೀಗೆ ರಾತ್ರಿಯಲ್ಲಿ ಅಲೆದಾಡುವುದು ಬನ್ನಿ ಹೋಗುವಾ ಮರೀಂಞ' ಎಂದು ಕರೆದರು.
ಆ ಧ್ವನಿಯಲ್ಲಿದ್ದ ಪ್ರೀತಿ ಮರಿಯಮ್ಮನವರಿಗೆ ಗೊತ್ತಾಗಿ ಹೋಗಿ ಮಾತುಬಾರದಂತಾಗಿ ಸುಮ್ಮನೆ ಅವರು ಮೂಸಕಾಕಾನ ಹಿಂದೆ ಹಾಡಿಯ ಕಡೆಗೆ ನಡೆಯಕತೊಡಗಿದರು. ಅವರಿಬ್ಬರ ಹಿಂದೆ ತರಗೆಲೆಗಳ ಮೇಲೆ ಸದ್ದು ಮಾಡಿಕೊಂಡು ಜಿಮ್ಮಿ ಹಿಂಬಾಲಿಸುತ್ತಿತ್ತ. ಚಂದಿರ ಪುನಃ ಪೂರ್ತಿ ಬೆಳಕಿನಲ್ಲಿ ಹೊಳೆಯಲು ಶುರುವಾಗಿದ್ದ. ಬೆಳಕಾಗಿದೆಯೆಂದು ತಪ್ಪು ತಿಳಿದುಕೊಂಡು ಒಂದೊಂದು ಹಕ್ಕಿಗಳು ಮರದಲ್ಲಿ ಸದ್ದು ಮಾಡಲು ಶುರುಮಾಡಿದ್ದವು. ದೂರದಲ್ಲೆಲ್ಲೋ ಕಾಡಾಡೊಂದು ಉದ್ದವಾಗಿ ಕೇಕೆ ಹಾಕುತ್ತಿತ್ತು. ಬಾವಲಿಗಳು ರೆಕ್ಕೆ ಬಡಿಯುತ್ತಾ ಬೆಳದಿಂಗಳಲ್ಲಿ ಕಪ್ಪಗೆ ಸಾಲುಸಾಲಾಗಿ ತೇಲುತ್ತಾ ಗೋಳಿಮರದ ಹಣ್ಣುಗಳಿಗೆ ಗುರಿಯಿಟ್ಟುಕೊಂಡು ಇರುಳಿನ ಪರಿವೆಯಿಲ್ಲದೆ ಹಾರುತ್ತಿದ್ದವು. ಮೂಸಕಾಕಾ ಏನೋ ಹೇಳಬೇಕೆಂದು ಗಂಟಲು ಸರಿಮಾಡಿಕೊಂಡವರು ಮಾತುಗಳನ್ನು ನುಂಗಿಕೊಂಡು ಹಿಂದೆ ತಿರುಗಿನೋಡಿ ಮತ್ತೆ ಸುಮ್ಮನಾದರು.
***
ಮೂಸಕಾಕಾನಿಗೆ ಎಲ್ಲವೂ ನಿನ್ನೆ ಮೊನ್ನೆ ನಡೆದುಹೋದಂತೆ ಆ ಇರುಳಿನಲ್ಲಿ ಅನ್ನಿಸುತ್ತಿತ್ತು. ಮರಿಯಮ್ಮಳ ಗಂಡ ಡ್ರೈವರ್ ಹಂಸಾಕ ಮಡಿಕೇರಿಯಿಂದ ಬರುವಾಗ ಚೆಟ್ಟಳ್ಳಿಯ ಬಳಿಯ ಚಡಾವಿನಲ್ಲಿ ಕಾರುಉರುಳಿ ತೀರಿಹೋಗಿ ಈ ಹಜ್ಹಬ್ಬಕ್ಕೆ ಒಂದು ವರ್ಷವಾಗಿತ್ತು. ಕಾರು ಉರುಳಿ ಹೋದಾಗ ಕಾರಿನಲ್ಲಿದ್ದ ದೊಡ್ಡಸಾಹುಕಾರರು ಕಾರಿನೊಳಗೇ ತೀರಿಹೋಗಿದ್ದರು. ದೊಡ್ಡಸಾಹುಕಾರರು ಕಾರಿನೊಳಗೇ ತೀರಿಹೋಗಿ ಹನ್ನೆರೆಡು ದಿನಕ್ಕೆ ಮಡಿಕೇರಿಯ ಸರಕಾರೀ ಆಸ್ಪತ್ರೆಯಲ್ಲಿ ಡ್ರೈವರ್ ಹಂಸಾಕ ತೀರಿಹೋಗಿದ್ದರು. ದೊಡ್ಡಸಾಹುಕಾರರು ಸ್ವರ್ಗದಲ್ಲಿ ತಮ್ಮ ಕಾರುನಡೆಸಲು ಡ್ರೈವರ್ ಹಂಸಾಕನ ಪ್ರಾಣಪಕ್ಷಿಯನ್ನೂ ಎಳೆದುಕೊಂಡು ಹೋದರು ಎಂದು ಅಜ್ಮೀರಿನಿಂದ ಮಿಠಾಯಿ ಹೊತ್ತುಕೊಂಡು ಬಂದು ತೋಟದ ಮಕ್ಕಳಿಗೆ ಹಂಚುವ ಮಿಠಾಯಿಪಾಪ ಎಂಬ ಮುದುಕ ಹೇಳಿಕೊಂಡು ತಮಾಷೆಮಾಡಿ ನಿಟ್ಟುಸಿರಿಟ್ಟಿದ್ದ.
ಹಾಗೆ ಅವನು ಹೇಳಿದ್ದು ತೋಟದಲ್ಲೆಲ್ಲ ಸುದ್ದಿಯಾಗಿ ಇನ್ನು ಮೇಲೆ ಹೂವಿನ ಕೊಲ್ಲಿಯೊಳಗೆ ಆ ಮಿಠಾಯಿ ಮುದುಕನೂ ಬರುವುದು ಬೇಡ ಎಂದು ಉಸ್ಮಾನ್ ರೈಟರ್ ಆರ್ಡರು ಮಾಡಿದ್ದರು. ಆದರೂ ಆ ಮುದುಕ ಹೇಗೋ ಮಾಯದಲ್ಲಿ ಹೂವಿನ ಕೊಲ್ಲಿಯೊಳಗೆ ಸುಳಿದು ಮಿಠಾಯಿ ಹಂಚಿ ಹೋಗುತ್ತಿದ್ದ. ಆ ಮಿಠಾಯಿ ಪಾಪ ಮನುಷ್ಯ ಜೀವಿಯಲ್ಲ, ಅವನು ಯಾವುದೋ ಮಾಯಾವಿ ಜಿನ್ ಇರಬಹುದು ಎಂದೂ ಸುದ್ಧಿಯಾಗಿ ತೋಟದ ಸಣ್ಣ ಸಾಹುಕಾರರೂ ಆ ಮುದುಕನಿಗೆ ಹೆದರಿ ಸುಮ್ಮನಿದ್ದರು. ರಾತ್ರಿ ಕಾವಲುಗಾರ ಮೂಸಾಕಾಕಾನಿಗೆ ಮರಿಯಮ್ಮ ಮತ್ತು ಡ್ರೈವರ್ ಹಂಸಾಕ ಹೂವಿನ ಕೊಲ್ಲಿಗೆ ಬಂದು ಬದುಕಲು ಶುರುಮಾಡಿದ್ದು ನಿನ್ನೆ ಮೊನ್ನೆ ಎಂದು ಆ ಇರುಳಿನಲ್ಲಿ ಅನ್ನಿಸುತ್ತಿತ್ತು.
ಮಕ್ಕಳಿಲ್ಲ ಎನ್ನುವ ದುಃಖದಲ್ಲಿ ಸಿದ್ಧಾಪುರದ ಸಂತೆಯಲ್ಲಿ ಕಣ್ಣೀರು ಹಾಕಿಕೊಂಡು ಕುಳಿತಿದ್ದ ಅವರಿಬ್ಬರನ್ನು ಮಿಠಾಯಿಪಾ ಎಬ್ಬಿಸಿಕೊಂಡು ತಂದು ಹೂವಿನಕೊಲ್ಲಿಯ ಸಾಹುಕಾರರ ಬಂಗಲೆಯ ಬಾಗಿಲು ಮುಂದೆ ನಿಲ್ಲಿಸಿದ್ದರು. ಆಗ ದೊಡ್ಡಸಾಹುಕಾರರಿಗೆ ವಯಸ್ಸಾಗಿದ್ದರೂ ಇನ್ನೂ ತಲೆ ಕೆಟ್ಟಿರಲಿಲ್ಲ. ಮುಟ್ಟಿದರೆ ನೆತ್ತರು ಒಸರುವವರಂತೆ ಕೆಂಪಗೆ ಕಾಣಿಸುತ್ತಿದ್ದ ದೊಡ್ಡಮೈಕಟ್ಟಿನ ದೊಡ್ಡ ಸಾಹುಕಾರರು ಅವರಿಬ್ಬರನ್ನು ಬಂಗಲೆಯ ಬಾಗಿಲಲ್ಲಿ ನಿಲ್ಲಿಸಿಕೊಂಡು ಅವರಿಬ್ಬರಿಗೆ ಮಲಯಾಳದಲ್ಲಿ ಪ್ರಶ್ನೆಗಳನ್ನು ಕೇಳಿ ಅವರಿಬ್ಬರು ಗಂಡ ಹೆಂಡತಿಯರು ಎಂದು ಖಚಿತ ಮಾಡಿಕೊಂಡಿದ್ದರು. ಅವರಿಬ್ಬರ ಹೆಸರುಗಳನ್ನು ಕೇಳಿ ಅವರಿಬ್ಬರು ಸತ್ಯ ವಿಶ್ವಾಸಿಗಳಲ್ಲ ಎಂದು ಖಚಿತಮಾಡಿಕೊಂಡಿದ್ದರು. ಅವರಿಬ್ಬರನ್ನು ಸತ್ಯ ವಿಶ್ವಾಸಿಗಳನ್ನಾಗಿ ಮಾರ್ಪಡಿಸಿಕೊಂಡುಬರಲು ಹೂವಿನಕೊಲ್ಲಿಯ ಮಕ್ಕಳಿಗೆ ಅರಬಿಕಲಿಸುವ ಮೇಲಿನ ಹಾಡಿಯ ಮೊಲ್ಲಾಕನಿಗೆ ಹೇಳಿದ್ದರು. ಹೀಗೆಲ್ಲಾ ಕಂಡಕಂಡ ಪಶುಪಕ್ಷಿಗಳನ್ನೆಲ್ಲಾ ಸತ್ಯವಿಶ್ವಾಸಿಗಳನ್ನಾಗಿ ಮಾಡಲಾಗುವುದಿಲ್ಲ ಎಂದು ಮೊಲ್ಲಾಕ ಸಾಹುಕಾರರಿಗೆ ಎದುರು ಹೇಳಿದ್ದರು. ಆಮೇಲೆ ಸಾಹುಕಾರರ ಕಠಿಣ ದೃಷ್ಟಿಯನ್ನು ಎದುರಿಸಲಾಗದೆ ಮಲಬಾರಿನ ಪೊನ್ನಾಣಿಗೆ ಅವರನ್ನು ಕರೆದುಕೊಂಡುಹೋಗಿ ಸತ್ಯ ವಿಶ್ವಾಸಿಗಳನ್ನಾಗಿ ಮಾರ್ಪಡಿಸಿ ಅವರಿಬ್ಬರ ಹೆಸರುಗಳನ್ನು ಬದಲಿಸಿ ಹೂವಿನಕೊಲ್ಲಿಗೆ ಮರಳಿ ತಂದು ಅವರಿಬ್ಬರಿಗೆ ಕೆಳಗಿನ ಹಾಡಿಯ ಲೈನುಮನೆಯಲ್ಲಿ ಬಿಡಾರವನ್ನೂ ನೀಡಿದ್ದರು.
ಕಾರು ಓಡಿಸಲು ಮೊದಲೇ ಕಲಿತಿದ್ದ ಹಂಸ ಅಂದಿನಿಂದ ದೊಡ್ಡ ಸಾಹುಕಾರರ ಡ್ರೈವರಾಗಿ ಬಹಳವರ್ಷ ಅವರನ್ನು ಎಲ್ಲಕಡೆ ಕಾರಿನಲ್ಲಿ ಓಡಿಯಾಡಿಸಿದ್ದರು. ಹೆಂಡತಿ ಮರಿಯಳನ್ನು ತೋಟದ ಕೆಲಸಕ್ಕೆ ಕಳುಹಿಸದೆ ಮುದ್ದಿನಿಂದ ನೋಡಿಕೊಂಡು ಬೆಂಗಳೂರಿನಿಂದ, ಮಡಿಕೇರಿಯಿಂದ ಕಾರಿನಲ್ಲಿ ಮರಳಿ ಬರುವಾಗ ಸೇಬಿನ ಹಣ್ಣುಗಳನ್ನೂ, ಮಲ್ಲಿಗೆಯ ಮಾಲೆಯನ್ನೂ, ಕುರಿಯಮಾಂಸವನ್ನೂ ಸಾಹುಕಾರರಿಗೆ ಗೊತ್ತಾಗದ ಹಾಗೆ ಅಡಗಿಸಿ ತಂದು ಮುದ್ದುಮಾಡುತ್ತಿದ್ದರು. ಆದರೂ ಅವರಿಗೆ ಮಕ್ಕಳಾಗಿರಲಿಲ್ಲ. ಮತ ಬದಲುಮಾಡಿದರೂ ಮಗುವೊಂದು ಆಗಲಿಲ್ಲವಲ್ಲಾ ಪಡೆದವನೇ ಎಂದು ಅವರು ಒಮ್ಮೊಮ್ಮೆ ಮರಿಯಾಳ ಮುಂದೆ ಕಣ್ಣೀರು ಹಾಕುತ್ತಿದ್ದರು. ಮರಿಯಾ ಯಾಕೋ ಮಾತನಾಡದೆ ಸುಮ್ಮನಿರುತ್ತಿದ್ದಳು.
'ಹಂಸಾ, ಒಂದುಸಲ ಸಾಹುಕಾರರ ಬಳಿ ಕಾರುಕೇಳಿಕೊಂಡು ನಾವು ಮೂವರೂ ಮುರುಗಾಮಲೆಗೆ ಹೋಗಿ ಬರುವಾ. ಅಲ್ಲಿ ಹೋದರೆ ಎಲ್ಲ ಸರಿಯಾಗಬಹುದು' ಎಂದು ಉಸ್ಮಾನ್ ರೈಟರು ಹೇಳಿ ಒಂದು ವಾರವಾಗಿರಲಿಲ್ಲ. ಅಷ್ಟು ಬೇಗ ದೊಡ್ಡಸಾಹುಕಾರರಿಗೆ ತಲೆ ಹಾಳಾಗಿಹೋಗಿ ಅವರೂ ಕಂಡಕಂಡಲ್ಲಿ ತಿರುಗುವುದು, ಕಂಡಕಂಡವರಿಗೆ ಹೊಡೆಯುವುದು ಬಡಿಯುವುದು ಶುರುಮಾಡಿದ್ದರು.
ದೊಡ್ಡ ಸಾಹುಕಾರರಿಗೆ ಬೆಳ್ಳಕ್ಕಾರ ಬ್ರಿಟಿಷ್ದೊರೆಯ ಕೊಪ್ಪರಿಗೆಯ ಐಶ್ವರ್ಯಕಂಡು ತಲೆಕೆಟ್ಟುಹೋಗಿದೆ ಎಂದು ತೋಟದಲ್ಲಿ ಸುದ್ದಿಯಾಗಿತ್ತು.
ಭಾರತಕ್ಕೆ ಸ್ವಾತಂತ್ರ ಬಂದು ಬ್ರಿಟಿಷರು ದೇಶಬಿಟ್ಟು ಹೋಗುವಾಗ ಹೂವಿನ ಕೊಲ್ಲಿಯ ಬಿಳಿಯದೊರೆ ಮಿಸ್ಟರ್ ವೈಟ್ ತಾನು ತೋಟವನ್ನು ದೊಡ್ಡಸಾಹುಕಾರರಿಗೆ ಮಾರಿಹೋಗುವಾಗ ತನ್ನ ಬಂಗಲೆಯ ಅಡಿಪಾಯದೊಳಗಿದ್ದ ಚಿನ್ನದ ಕೊಪ್ಪರಿಗೆಯನ್ನು ಹಾಗೇ ಬಿಟ್ಟು ಹೋಗಿರುವನೆಂದೂ ಅದು ಹೂವಿನ ಕೊಲ್ಲಿಯ ಚಾಮುಂಡಿ ಬಾಣೆಯ ಒಂದು ಮೂಲೆಯಲ್ಲಿ ನೂರಾರು ವರ್ಷಗಳಿಂದ ಇರುವ ಕಾಯರಕಾಯಿಯ ಮರದ ಬುಡದಲ್ಲಿ ಇರುವ ಗುಳಿಗನ ಕಾವಲಿನಲ್ಲಿರುವುದೆಂದೂ ಯಾರಾದರೂ ಆ ಕೊಪ್ಪರಿಗೆಯ ಮೇಲೆ ಕಣ್ಣು ಹಾಕಿದರೆ ಅವರಿಗೆ ತಲೆಕೆಟ್ಟುಹೋಗಿ ಹುಚ್ಚು ಹಿಡಿಯುವುದೆಂದೂ ತೋಟದಲ್ಲಿ ಮೊದಲೇ ಸುದ್ದಿ ಇತ್ತು.
ದೊಡ್ಡ ಸಾಹುಕಾರರಿಗೆ ಆ ಐಶ್ವರ್ಯ ಕಂಡು ತಲೆಕೆಟ್ಟು ಒಂದುವಾರದಲ್ಲೇ ಚಟ್ಟಳ್ಳಿ ಚಡಾವಿನಲ್ಲಿ ಅವರ ಕಾರು ಉರುಳಿಬಿದ್ದಿತ್ತು. ಕೊಪ್ಪರಿಗೆಕಂಡು ತಲೆಕೆಟ್ಟು ಸಾಹುಕಾರರು ಕಾರು ಚಡಾವು ಇಳಿಯುತ್ತಿದ್ದಂತೆ ಹಿಂದಿನಿಂದ ತಮ್ಮ ಡ್ರೈವರ್ ಹಂಸನ ಕುತ್ತಿಗೆ ಹಿಡಿದಿದ್ದರು. ಕಾರುಮಗಚಿ ಅವರು ಕಾರಿನಲ್ಲೇ ತೀರಿಹೋಗಿದ್ದರು. ತೀರಿಹೋಗಿ ಹನ್ನೆರೆಡುದಿನಕ್ಕೆ ಅವರು ಡ್ರೈವರ್ ಹಂಸಕಾಕನ ಪ್ರಾಣ ಪಕ್ಷಿಯನ್ನು ಸ್ವರ್ಗಕ್ಕೆ ಕರೆಸಿಕೊಂಡಿದ್ದರು. ಬಿಳಿ ಬೆಳ್ಳಕ್ಕಾರ ದೊರೆಯ ಹಾಳಾದ ಕೊಪ್ಪರಿಗೆಯ ದೆಸೆಯಿಂದಾಗಿ ನನ್ನ ಗಂಡಸಿನ ಪ್ರಾಣಪಕ್ಷಿ ಹಾರಿ ಹೋಯಿತಲ್ಲಾ ಪಡೆದವನೇ ಎಂದು ಅಂದಿನಿಂದ ಮರಿಯಾ ರಾತ್ರಿಹೊತ್ತು ಒಬ್ಬಳೇ ಕಾಲುದಾರಿಯಲ್ಲಿ ನಡೆಯಲು ಶುರುಮಾಡಿದ್ದಳು.
ಮೂಸಕಾಕಾ ತಿರುಗಿ ನೋಡಿದರು. ಮರಿಯಾ ನಡೆದುಬರುತ್ತಿದ್ದವಳು ಬಗ್ಗಿ ಕುಳಿತು ಒದ್ದೆ ತರಗೆಲೆಗಳನ್ನು ಹೆಕ್ಕುತ್ತಿದ್ದಳು. ಜಿಮ್ಮಿನಾಯಿ ಹಿಂಗಾಲಿನಲ್ಲಿ ಕುಳಿತುಕೊಂಡು ಆ ಬೆಳದಿಂಗಳಿನಲ್ಲಿ ಬಾಲವಾಡಿಸುತ್ತಾ ಕಣ್ಣು ಪಿಳಿಪಿಳಿಮಾಡುತ್ತಾ ನೋಡುತ್ತಿತ್ತು. ಲೈನುಮನೆ ಹತ್ತಿರವಾಗಿತ್ತು. ಸೂರ್ಯ ಹುಟ್ಟುವ ಜಾಗದಲ್ಲಿ ದೊಡ್ಡನಕ್ಷತ್ರವೊಂದು ಮುಖವನ್ನು ಅಷ್ಟು ದೊಡ್ಡದು ಮಾಡಿಕೊಂಡು ನೋಡುತ್ತಿತ್ತು. ಆಸಿಯಾಳ ಮಗು ಅಳುತ್ತಲೇ ಇತ್ತು. ಅದರ ತಂದೆ ಸೈಕಲ್ ಮಹಮ್ಮದ್ ಶಾಪ ಹಾಕಿಕೊಂಡು ಅದನ್ನು ಸುಮ್ಮನಾಗಿಸುತ್ತಿದ್ದ. ಆಸಿಯಾ ಹಾಡು ಹೇಳುವುದೂ ನಡುನಡುವಲ್ಲಿ ಹಾಡು ನಿಲ್ಲಿಸಿ ಸೊಳ್ಳೆಗಳನ್ನು ಕೊಲ್ಲುವುದೂ ದೂರದಿಂದಲೇ ಕೇಳಿಸುತ್ತಿತ್ತು. ಆಸಿಯಾಳ ಆರುತಿಂಗಳ ಮಗು ಬಾಲವಾಡಿಯಲ್ಲಿ ಹುಣಸೆ ಬೀಜವನ್ನು ಮೂಗಿಗೆ ಹಾಕಿಕೊಂಡು ಅದು ಮೂಗಲ್ಲಿ ಸಿಕ್ಕುಹಾಕಿಕೊಂಡು ಅಳಲು ಶುರುಮಾಡಿದ್ದು ಅಳು ನಿಲ್ಲಿಸಿರಲೇ ಇಲ್ಲ.
ದೊಡ್ಡಸಾಹುಕಾರರ ಕಾರುಡ್ರೈವರ್ ಹಂಸಾಕಾಕ ತೀರಿಹೋದಮೇಲೆ ಅವರ ಹೆಂಡತಿ ಮರಿಯಾಳ ಸಂಕಟ ಕಂಡು ಸಹಿಸಲಾರದೆ ಉಸ್ಮಾನ್ ರೈಟರ ತಾಯಿ ಹಾಜಮ್ಮ ಮಗನಿಗೆ ಹೇಳಿ ಬಾಲವಾಡಿಯಲ್ಲಿ ಹೆಣ್ಣಾಳುಗಳ ಹಾಲುಕುಡಿಯುವ ಮಕ್ಕಳನ್ನು ನೋಡಿಕೊಳ್ಳುವ ಕೆಲಸವನ್ನು ಕೊಡಿಸಿದ್ದರು.
ಒಂದುವರ್ಷದಿಂದ ಬಾಲವಾಡಿಯಲ್ಲಿ ಹೀಗೆ ಏನಾದರೊಂದು ಆಗುತ್ತಲೇ ಇತ್ತು. ಮಕ್ಕಳನ್ನು ಹೆತ್ತುಗೊತ್ತಿಲ್ಲದ ಮರಿಯಮ್ಮಳ ಕೈಗೆ ಹಸುಗೂಸುಗಳನ್ನು ಕೊಡಬೇಡಿ ಎಂದು ಆಳುಗಳು ಗಲಾಟೆಮಾಡಿದ್ದರು. ಆದರೂ ಉಸ್ಮಾನ್ ರೈಟರು ಕೇಳಿರಲಿಲ್ ಲ.ಈವತ್ತು ನೋಡಿದರೆ ಆಸಿಯಾಳ ಮಗು ಮೂಗಲ್ಲಿ ಹುಣಸೆಬೀಜ ತುರುಕಿಸಿಕೊಂಡು ಅದು ದೊಡ್ಡ ಗಲಾಟೆಯಾಗ ಿಹೋಗಿತ್ತು ಉಸ್ಮಾನ್ ರೈಟರು ಮುರುಗಾಮಲೆಯಿಂದ ತಿರುಗಿಬಂದಮೇಲೆ ಸಣ್ಣ ಸಾಹುಕಾರರು ಮೆಕ್ಕಾದಿಂದ ಹಜ್ ಮುಗಿಸಿಬಂದಮೇಲೆ ಏನಾದರೂ ಒಂದು ತೀರ್ಮಾನವಾಗಬೇಕು ಎಂದು ಎಲ್ಲರೂ ಸುಮ್ಮನಾಗಿದ್ದರು.
ಯಾರು ಏನು ತೀರ್ಮಾನಿಸುವುದು ಎಂದು ರಾತ್ರಿ ಕಾವಲುಗಾರ ಮೂಸಕಾಕ ಮಂಜು ಬಿದ್ದ ನೆಲದ ಮೇಲೆ ಸದ್ದಿಲ್ಲದೆ ನಡೆದು ಲೈನುಮನೆಯ ತಮ್ಮ ಬಿಡಾರ ತಲುಪಿ ಬಾಗಿಲ ಬಳಿ ಗಂಬೂಟು ಬಿಚ್ಚಿಟ್ಟು. ಟೊಪ್ಪಿ ತೆಗೆದಿಟ್ಟು, ಟಾರ್ಚ್ ಲೈಟನ್ನು ಮೆಟ್ಟಿಲ ಮೇಲಿಟ್ಟು, ರೈನ್ ಕೋಟ್ ಬಿಚ್ಚಿ ತಲೆಯ ಬೆವರು ಒರೆಸಿಕೊಂಡು ಮರಿಯಮ್ಮಳನ್ನೂ, ಜಿಮ್ಮಿಯನ್ನೂ ನೋಡತೊಡಗಿದರು. ಯಾಕೋ ಅವರಿಗೂ ದುಃಖ ಒತ್ತರಿಸಿ ಬರಲು ತೊಡಗಿತು.





Post new comment