4. ಮೂಸಾಕುಟ್ಟಿಯೂ ಕುಂಞಿಪಾತುಮ್ಮಳೂ

ಹೂವಿನಕೊಲ್ಲಿಯ ಕೆಳಗಿನಹಾಡಿಯ ಲೈನುಮನೆಯ ಆಫೀಸು ರೂಮಿನಲ್ಲಿ ಹರಕು ಹಾಸಿಗೆಯ ಮೇಲೆ ಮರಣವನ್ನು ಎದುರುನೋಡುತ್ತಾ ವರ್ಷಗಳಿಂದ ಮಲಗಿರುವ ಕುಂಞಿಪಾತುಮ್ಮ ಪ್ರತಿಯೊಂದು ಉಸಿರಿನಲ್ಲೂ ತಾನು ಈ ಲೋಕವನ್ನು ಬಿಟ್ಟು ಹೋಗುವೆನೆಂದು ಮೂಸಕಾಕನನ್ನು ಹೆದರಿಸುತ್ತಿದ್ದಳು. ಪ್ರತಿಯೊಂದು ಸಲವೂ ತಿನ್ನಲು ಕೊನೆಯದಾಗಿ ಏನಾದರೂ ಬೇಕೆಂದು ಕಣ್ಣಲ್ಲೇ ಬೇಡಿಕೊಂಡು ಮೂಸಕಾಕಾ ಪ್ರತಿಸಲವೂ ರಾತ್ರಿ ಕಾವಲು ಮುಗಿಸಿ ಬರುವಾಗ ತೋಟದಿಂದ ಹಲಸಿನ ತೊಳೆಗಳನ್ನೋ, ನೇರಳೆಯ ಹಣ್ಣುಗಳನ್ನೋ, ಕಿತ್ತಳೆಯ ಹಣ್ಣುಗಳನ್ನೋ ಯಾರೂ ಕಾಣದ ಹಾಗೆ ತಮ್ಮ ಮಳೆಕೋಟಿನ ಜೇಬಿನಲ್ಲಿ ಅಡಗಿಸಿಕೊಂಡು ಬರುತ್ತಿದ್ದರು. ಈ ಕಾರಣಕ್ಕಾಗಿಯೇ ಅವರು ಉಸ್ಮಾನ್ ರೈಟರಿಗೆ ಹೇಳಿ ಹೂವಿನ ಕೊಲ್ಲಿಯ ದೊಡ್ಡ ಗೇಟಿನ ಕಾವಲು ಕಾಯುವ ಕೆಲಸವನ್ನು ಬದಲಿಸಿಕೊಂಡು ರಾತ್ರಿ ಕಾವಲಿನ ಕೆಲಸವನ್ನು ಕಷ್ಟವಾದರೂ ವಹಿಸಿಕೊಂಡಿದ್ದರು. ರಾತ್ರಿಯಾದರೆ ಕಾಫಿಕಾಡಿಗೆ ನುಗ್ಗುವ ಕಾಡುಪಾಪಗಳ ಜೊತೆ ಹೊಡೆದಾಡಿ ಅವುಗಳ ಪಾಲಾಗುವ ಹಣ್ಣುಗಳನ್ನು ಕುಂಞಿಪಾತುಮ್ಮಳ ಬಾಯಿಗೆ ತಿನ್ನಿಸುತ್ತಿದ್ದರು. ನಡುನಡುವಲ್ಲಿ ನಿದ್ದೆ ತೂಗುತ್ತಾ ಮಧ್ಯಾಹ್ನದ ಗಂಜಿಬೇಯಿಸಿ ಹೆಂಡತಿಯ ಬಾಯಿಗಿಟ್ಟು ಅವಳ ತಲೆಯ ಬಳಿಯೇ ನಿದ್ದೆ ಹೋಗಿ, ಕತ್ತಲಾಗುವ ಮೊದಲೇ ತಡಬಡಿಸಿ ಎದ್ದು, ಮಳೆಯ ಕೋಟು ಹಾಕಿ, ಟೊಪ್ಪಿ ತಲೆಗೇರಿಸಿ, ಗಂಬೂಟಿನೊಳಗೆ ಕಾಲು ತೂರಿಸಿ, ಟಾರ್ಚ್ ಕೈಗೆತ್ತಿ ಹೊರಡುತ್ತಿದ್ದರು. ಹೊರಡುವಾಗ ಅವರು ಹೆಂಡತಿಯ ತೆರೆದ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿ ನಾನು ತಿರುಗಿಬರುವವರೆಗೆ ತೀರಿಹೋಗಬೇಡ ಎನ್ನುವಂತೆ ಬೇಡಿಕೊಳ್ಳುತ್ತಿದ್ದರು. ಆಗಬಹುದು ಎನ್ನುವಂತೆ ಕುಂಞಿಪಾತುಮ್ಮ ತೆರೆದ ಕಣ್ಣುಗಳಲ್ಲೇ ನಸುನಗುತ್ತಿದ್ದರು.

ಕುಂಞಿಪಾತುಮ್ಮ ತಮ್ಮ ಮರಣದ ಹಾಸಿಗೆಯ ತಲೆಯ ಮೂಲೆಯಲ್ಲಿ ಪವಿತ್ರ ಮೆಕ್ಕಾದ ಝಂ ಝಂ ಎಂಬ ಪವಿತ್ರ ಜಲದ ಶೀಷೆಯನ್ನು ಬಿರಡೆಯಿಂದ ಮುಚ್ಚಿ ಇಟ್ಟುಕೊಂಡಿದ್ದರು. ಆ ಜಲವು ಹಲವು ವರ್ಷಗಳಿಂದ ಆ ಶೀಷೆಯಲ್ಲಿ ಅಡಗಿಕುಳಿತು ಹೊರಬರಲು ತವಕಿಸುವುದನ್ನೂ ಮರೆತು ಹಲವು ಕಾಲಗಳಾಗಿತ್ತು. ಆ ಪವಿತ್ರ ಜಲದ ಶೀಷೆಯನ್ನು ಕುಂಞಿಪಾತುಮ್ಮಳ ಬಾಪಾ ಮೇಲಿನಹಾಡಿಯ ಲೈನುಮನೆಯ ಅರಬಿಕಲಿಸುವ ಮೊಲ್ಲಾಕ ಬಹಳ ವರ್ಷಗಳ ಹಿಂದೆ ಮೆಕ್ಕಾದಿಂದ ತಂದಿದ್ದರು. ಅವರು ಹಾಯಿಹಡಗಿನಲ್ಲಿ ಅರಬಿಕಡಲನ್ನು ದಾಟಿ, ಮರಳುಗಾಡಿನಲ್ಲಿ ಹಲವುದಿನ ನಡೆದು, ಮೆಕ್ಕಾಪಟ್ಟಣ ತಲುಪಿ, ಹಜ್ ಮುಗಿಸಿ, ಬರುವಾಗ ಕೈಯಲ್ಲಿ ಪವಿತ್ರ ಝಂ ಝಂ ಜಲದ ಮೂರು ಶೀಷೆಗಳನ್ನು ತಂದಿದ್ದರು. ಒಂದು ತಾವು ತೀರಿಹೋಗುವ ಮೊದಲು ಕುಡಿಯಲು ಎಂದು ತಮ್ಮಲ್ಲೇ ಇಟ್ಟುಕೊಂಡಿದ್ದರು. ಇನ್ನೊಂದನ್ನು ಅವರ ಹೆಂಡತಿ ಬೀಬಿಪಾತಿಮಾ ಚಳಿಜ್ವರ ಬಂದು ತೀರಿಹೋಗುವ ಮೊದಲು ಕುಡಿದು ಮುಗಿಸಿದ್ದರು. ಮೂರನೆಯ ಶೀಷೆಯನ್ನು ಅವರ ಮಗಳು ಕುಂಞಿಪಾತುಮ್ಮ ಮೂಸಕಾಕನ ಜೊತೆ ಮದುವೆಯಾಗಲು ಓಡಿಬರುವಾಗ ತಂದೆಯ ಬಳಿಯಿಂದ ಕಿತ್ತುಕೊಂಡು ತಂದಿದ್ದಳು. ಅವಳ ಬೆಂಕಿಯಂತಹ ಕೋಪಕ್ಕೆ ನಡುಗಿದ್ದ ಮೊಲ್ಲಾಕ ಏನು ಮಾತಾಡದೆ ಆ ಕೊನೆಯ ಶೀಷೆಯನ್ನು ಮಗಳ ಕೈಯಲ್ಲಿಟ್ಟು `ಇನ್ನು ನೀನು ನನ್ನ ಮುಖವನ್ನು ನೋಡಬೇಡ' ಎಂದು ಶಾಪಹಾಕಿ ಬಾಗಿಲು ಮುಚ್ಚಿದ್ದರು.

ಅವರ ಶಾಪದ ಸದ್ದು ಕೇಳಿದಾಗಲೇ ಕುಂಞಿಪಾತುಮ್ಮನ ಎದೆಯಲ್ಲಿ ಏನೋ ನೋವು ಕಾಣಿಸಿಕೊಂಡ ಹಾಗಾಗಿತ್ತು. ಅಂದು ತೊಡಗಿಕೊಂಡ ಆ ನೋವು, ಅವರನ್ನು ಹಿಂಬಾಲಿಸಿಬಂದು ಈ ಮರಣದ ಹಾಸಿಗೆಗೆ ತಂದು ಮಲಗಿಸಿತ್ತು. `ತಾಯಿಯಿಲ್ಲದ ನಿನ್ನನ್ನು ತಾಯಿಯಂತೆ ನೋಡಿಕೊಂಡ ನಿನ್ನ ಈ ಬಾಪಾನ ಎದೆಯಮೇಲೆ ನೀನು ನಡೆದು ಆ ಮೂಸಾ ಎಂಬ ಅರಿವಿಲ್ಲದವನ ಹಿಂದೆ ಹೋದೆಯಲ್ಲಾ ಮಗಳೇ ನಿನಗೆ ಒಳ್ಳೆಯದು ಏನಾದರೂ ಇದ್ದರೆ ಅದು ಹೇಗೆ ಆಗುತ್ತದೆ' ಎಂದು ಮೊಲ್ಲಾಕ ಶಾಪ ಹಾಕಿದ್ದರು. ಆ ಶಾಪ ನನಗೆ ಸರಿಯಾಗಿಯೇ ತಾಕಿತು ಎಂದುಕೊಂಡು ಕುಂಞಿಪಾತುಮ್ಮ ರಾತ್ರಿ ಒಬ್ಬರೇ ಮಲಗಿ ಕಣ್ಣೀರು ಹಾಕುತ್ತಿದ್ದರು. ಮೂಸಕಾಕಾ ರಾತ್ರಿ ಕಾವಲು ಮುಗಿಸಿ ಬರುವವರೆಗೆ ಅವರು ಕಣ್ಣು ತೆರೆದಿಟ್ಟು ತನ್ನ ತೀರಿಹೋದ ತಾಯಿ ಬೀಬಿಫಾತಿಮಾಳ ಜೊತೆ ಮಾತನಾಡಿ ಕಾಲಕಳೆಯುತ್ತಿದ್ದರು. `ನಾನು ಹೇಳಲಿಲ್ಲವಾ ಮಗಳೇ, ನಿನ್ನ ಬಾಪಾ ಶಾಪ ಹಾಕಿದರೆ ಅದು ಎದೆಗೇ ಹೊಡೆಯುವುದೆಂದು. ಬೇರೆ ಯಾರು ಏನು ಹೇಳಿದರೂ ನಿನಗಾದರೂ ಗೊತ್ತಾಗಬಾರದಾ ಮಗಳೇ ನಿನ್ನ ಬಾಪಾನಿಗೆ ಅಲ್ಲಾಹುವಿನ ಕೃಪೆ ಇದೆಯೆಂದು..' ತೀರಿಹೋದ ಬೀಬಿಪಾತಿಮಾಳೂ ಮಗಳೊಡನೆ ರಾತ್ರಿಯಿಡೀ ಮಾತಿನಲ್ಲಿ ಕಳೆಯುತ್ತಿದ್ದರು.

ರಾತ್ರಿ ಕಾವಲು ಮುಗಿಸಿ ಮೂಸಕಾಕಾ ಲೈನುಮನೆಗೆ ಬಂದರೆ ಮುಚ್ಚಿಹೋಗಿದ್ದ ಕಿಟಕಿ ತೆರೆದುಕೊಂಡಿರುತ್ತಿತ್ತು. ಹೆಂಡತಿ ಕುಂಞಿಪಾತುಮ್ಮಳ ಮರಣದಹಾಸಿಗೆ ಯಾರೋ ಕಾದಾಡಿ ಹೋಗಿರುವಂತೆ ಕಾಣಿಸುತ್ತಿತ್ತು. `ಈವತ್ತೂ ಬಂದಿತ್ತಾ ಅದು ನಿನ್ನ ಜೀವ ಹಿಡಿಕೊಳ್ಳಲು' ಎಂದು ಮೂಸಕಾಕಾ ಸಿಟ್ಟುತೋರಿಸದೆ ತೋಟದಿಂದ ತಂದ ಹಣ್ಣುಗಳನ್ನು ಅವಳ ಬಾಯಿಗಿಡುತ್ತಾ ಮೆಲುದನಿಯಲ್ಲಿ ಕೇಳುತ್ತಿದ್ದರು. ಕುಂಞಿಪಾತುಮ್ಮ ಮಗುವಿನಂತೆ ಆಗತಾನೇ ಕಿಟಕಿಯಿಂದ ನುಗ್ಗುತ್ತಿದ್ದ ಬೆಳಗಿನ ಬೆಳಕನ್ನು ಸುಮ್ಮನೆ ನೋಡುತ್ತಾ ಕ್ಷೀಣವಾಗಿ ನಗುತ್ತಿದ್ದರು. ಅದುವರೆಗೂ ಅವರು ಹಿಡಿದಿಟ್ಟುಕೊಂಡಿದ್ದ ನಿದ್ದೆ ಅವರ ಕಣ್ಣುರೆಪ್ಪೆಗಳನನು ಸೋಕಿ ಅವರ ತುಟಿಗಳನ್ನು ಸವರಿ ಅವರು ಅರ್ಧತಿಂದ ಕಿತ್ತಳೆಯ ತೋಳೆಯೊಂದನ್ನು ಹಾಗೇ ಬಾಯಲ್ಲಿಟ್ಟು ನಿದ್ದೆ ಹೋಗುತ್ತಿದ್ದರು.

ಹಾಗೆ ನೋಡಿದರೆ ಕೊಂಬಿನ ಮೀಸೆಯ ಈ ಮೂಸಕಾಕಾ ಹೂವಿನಕೊಲ್ಲಿಗೆ ಬಂದ ಕತೆ ಸಣ್ಣ ಸಂಗತಿಯೇನೂ ಆಗಿರಲಿಲ್ಲ. ಕೇರಳದ ಮಲಪುರಜಿಲ್ಲೆಯ ನದಿಯ ಬದಿಯ ಗ್ರಾಮವೊಂದರ ದೊಡ್ಡ ತರವಾಡುಮನೆಯ ತಡಿಕೆ ಕಟ್ಟಿದ ಮೂಲೆಯೊಂದರಲ್ಲಿ ತನ್ನ ತಾಯಿ ಕುಂಞಿತುಮ್ಮನ ಜೊತೆ ಜೀವಿಸುತ್ತಿದ್ದ ಮೂಸಕುಟ್ಟಿ ತನ್ನ ತಾಯಿಯ ಮಾತನ್ನೂ ಮೀರಿ ಉಟ್ಟ ಉಡುಗೆಯಲ್ಲೇ ಕಾಣೆಯಾದ ತನ್ನ ಪ್ರಿಯತಮೆ ಕುಂಞಿಪಾತುಮ್ಮಳನ್ನೂ ಅವಳ ತಂದೆ ಮುಲ್ಲಾಕನನ್ನು ತಾಯಿ ಬೀಬಿಫಾತಿಮಾಳನ್ನು ಹಠತೊಟ್ಟು ಹುಡುಕಿಕೊಂಡು ಹೂವಿನ ಕೊಲ್ಲಿ ಎಂಬ ಈ ಕಾಫಿಕಾಡಿಗೆ ಓಡಿಬಂದಿದ್ದನು. ಅವರಿಗೆ ಈಗಲೂ ಅದನ್ನು ನೆನಪಿಸಿಕೊಂಡರೆ ಮೈಯಲಿ ಮುಳ್ಳುಗಳು ಏಳುತ್ತಿದ್ದವು.

ಏಳುಕಡಲುಗಳನ್ನು ದಾಟಿಯಾದರೂ ಸರಿಯೇ ಏಳುಭೂಮಿಗಳನ್ನು ಹುಡುಕಿಯಾದರೂ ಸರಿಯೇ ತನಗಾಗಿ ಈ ಭೂಮಿಯಲ್ಲಿ ಹುಟ್ಟಿರುವ ಕುಂಞಿಪಾತುಮ್ಮಳನ್ನು ಹುಡುಕಿ ತೆಗೆಯುವೆನು ಎಂದು ಮೂಸಕುಟ್ಟಿ ರೈಲುಬಂಡಿ ಹತ್ತಿ ಕಣ್ಣೂರಿನಲ್ಲಿ ಇಳಿದು, ಯಾವುದೋ ಕಾಫಿಲಾರಿಯನ್ನು ಹತ್ತಿ ಕೊಡಗಿಗೆ ಬಂದಾಗ ಸಿದ್ಧಾಪುರದ ಸಂತೆಮುಗಿದಿತ್ತು. ಕತ್ತಲಾಗಿ, ಜನರೆಲ್ಲಾ ಮುಗಿದು, ಮಳೆಬಂದು ರಸ್ತೆಯೆಲ್ಲಾ ಕೆಸರಾಗಿ, ಸಿದ್ಧಾಪುರದ ಮಸೀದಿಯ ಒಳಗೆ ಒಂದೇ ಒಂದು ಚಿಮಿಣಿದೀಪ ಉರಿಯುತ್ತಿತ್ತು. ಇದುವರೆಗೂ ಪಡೆದವನಲ್ಲಿ ಪ್ರಾರ್ಥನೆ ಸಲ್ಲಿಸದ ತಾನು ಇಲ್ಲಿ ಯಾಕೆ ಪ್ರಾರ್ಥಿಸಲು ಹೋಗುವುದು ಎಂದು ಮೂಸಕುಟ್ಟಿ ಮಸೀದಿಯ ಒಳಗೆ ಹೋಗದೆ ಮಳೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ. ಗಾಳಿ ಬೇರೆ ಜೋರಾಗಿ ಹುಯ್ಯಲಿಡುತ್ತಾ ಬೀಸಲು ತೊಡಗಿ ಅದರಿಂದ ತಪ್ಪಿಸಿಕೊಳ್ಳು ಸಂತೆಕಟ್ಟೆಯನ್ನು ಸೇರಿಕೊಂಡಿದ್ದ. ಸಂತೆಕಟ್ಟೆಯ ಒಳಗೂ ಮಳೆರಾಚುತ್ತಿತ್ತು. ಮೂಲೆಯಲ್ಲಿ ಒಂದೇ ಒಂದು ಚಿಮಣಿ ದೀಪ ಉರಿದು ಗಾಳಿಗೆ ಕೆಟ್ಟುಹೋಗಲು ನೋಡುತ್ತಿತ್ತು. ಆ ಚಿಮಿಣಿದೀಪ ಆರಿಹೋಗದಂತೆ ಅದರ ಸುತ್ತ ಗೋಡೆಕಟ್ಟಿಕೊಂಡು ಹೂವಿನಕೊಲ್ಲಿಯ ಮಾಯಾವಿ ಕಾವಲುಗಾರ ಕುಂಞಿಕಣ್ಣನೂ, ಕಾದಾಟದ ಕೋಳಿ ಬಗಲಲ್ಲಿ ಇಟ್ಟುಕೊಂಡು ರಾಟೆ ಮನೆಯ ದೂಮಣ್ಣನೂ, ದನ ಮೇಯಿಸುವ ಮುದಾರನೂ ನಿಂತುಕೊಂಡು ಸುಟ್ಟಮೀನು ನಂಜಿಕೊಳ್ಳುತ್ತಾ ಕುಡಿಯುತ್ತಾ ಮಾತನಾಡದೆ ಮಳೆಯ ಕಡೆಗೆ ನೋಡುತ್ತಿದ್ದರು. ಅವರೊಡನೆ ಮಾತನಾಡುವುದು ಹೇಗೆ, ತಾನು ಬಂದಿರುವ ಕಥೆ ಹೇಳುವುದು ಹೇಗೆ ಎಂದು ಗೊತ್ತಾಗದೆ ಮೂಸಕುಟ್ಟಿ ಉಟ್ಟ ಲುಂಗಿಯನ್ನು ಮೈಮೇಲೆ ಸುತ್ತಿಕೊಂಡು ಚಳಿಗಾಳಿಗೆ ನಡುಗುತ್ತಾ ಚಿಮಿಣಿ ದೀಪದ ಬಳಿ ಬಂದಿದ್ದ. ಅವನು ಬರುತ್ತಿದ್ದಂತೆ ಎಣ್ಣೆ ಮುಗಿದು ಆ ದೀಪವೂ ಆರಿಹೋಗಿ ಸಾರಾಯಿ ಮಾರುವ ಹೆಂಗಸು ಆ ಕತ್ತಲೆಗೆ ಶಾಪ ಹಾಕಿ ಎದ್ದು ಹೋಗಿದ್ದಳು. ಅಲ್ಲೇ ಉಳಿದಿದ್ದ ಕತ್ತಲಲ್ಲಿ ದೂಮಣ್ಣನ ಕಾದಾಟದ ಹುಂಜ ಗೊಣಗುತ್ತಾ ಕೊಕ್ಕರಿಸುತ್ತಾ ತನ್ನಷ್ಟಕ್ಕೆ ಸದ್ದುಮಾಡಿಕೊಂಡು ಆಯ್ತು ಇನ್ನು ಹೋಗುವಾ ಎಂದು ಅವರೆಲ್ಲರನ್ನೂ ಅಲ್ಲಿಂದ ಎಬ್ಬಿಸಲು ನೋಡುತ್ತಿತ್ತು.

ಈ ಅವಸಾನದಂತಹ ಮಳೆಯಲ್ಲಿ ಇನ್ನು ಹೇಗೆ ಹೂವಿನಕೊಲ್ಲಿಯನ್ನು ಸೇರುವುದು ಎಂದು ಅವರಿಗೆ ಗೊತ್ತಾಗದೆ ಅವರು ನಿಂತಲ್ಲಿ ಹಾಗೇ ನಿಂತಿದ್ದರು. ಮುದಾರ ಸಂತೆ ಕಟ್ಟೆಯಲ್ಲಿ ಉಳಿದು ಬಿದ್ದುಕೊಂಡಿದ್ದ ಕಾಗದ ಕಡ್ಡಿಗಳನ್ನು ಹೆಕ್ಕಿತಂದು ಬೆಂಕಿಹಾಕಿದ್ದ. ಆ ಬೆಂಕಿ ಉರಿಯುತ್ತಿದ್ದ ಹಾಗೆ ಅಲ್ಲೆಲ್ಲ ಬೆಳಕಾಗಿ ಮೂಸಕುಟ್ಟಿ ಅವರ ಹತ್ತಿರ ಯಾವ ಭಾಷೆಯಲ್ಲಿ ಮಾತನಾಡುವುದು ಗೊತ್ತಾಗದೆ `ಇಲ್ಲಿ ಯಾರಾದರೂ ಮಲಯಾಳ ಅರಿತವರು ಇರುವರೇ' ಎಂದು ತನ್ನಷ್ಟಕ್ಕೆ ಜೋರಾಗಿ ಗೊಣಗಿಕೊಂಡಿದ್ದ.

ಅದನ್ನು ಕೇಳಿಸಿಕೊಂಡ ಕಾವಲುಗಾರ ಕುಂಞಿಕಣ್ಣ, 'ಇಲ್ಲಿ ಎಲ್ಲ ಭಾಷೆಗಳನ್ನು ಅರಿತವರೂ ಇದ್ದಾರೆ. ಏನು ಬೇಕಾಗಿತ್ತು' ಎಂದು ತಾನೂ ಬೆಂಕಿ ಕಾಯಿಸಿಕೊಂಡು ಮಲಯಾಳದಲ್ಲಿ ಗೊಣಗಿದ್ದ. ಅದನ್ನು ಕೇಳಿಸಿಕೊಂಡ ಮೂಸಕುಟ್ಟಿ ಬೆಂಕಿಗೆ ಇನ್ನಷ್ಟು ಹತ್ತಿರ ಬಂದು ನಿಧಾನವಾಗಿ ತನ್ನ ಕಥೆಯನ್ನು ಹೇಳಿಕೊಂಡಿದ್ದ. ಅಷ್ಟು ಹೊತ್ತಿಗೆ ತೋಟದ ಟ್ರಾಕ್ಟರನ್ನು ಸರಿಪಡಿಸಿಕೊಂಡು ಹೋಗುವಾಗ ದಾರಿಯಲ್ಲಿ ಸಂತೆಕಟ್ಟೆಯಲ್ಲಿ ಯಾರಾದರೂ ಇನ್ನೂ ಮಳೆಯಲ್ಲಿ ಕುಡಿದು ಸಿಲುಕಿಕೊಂಡು ಉಳಿದಿರುವವರೇ ಎಂದು ನೋಡಿ ಹೋಗಲು ಬಂದ ಟ್ರಾಕ್ಟರ್ ಡ್ರೈವರ್ ವೇಲಾಯುದ ತಾನೂ ಒಂದಿಷ್ಟು ಒಣಮೀನು ನಂಜಿಕೊಂಡು ಬಾಯಿ ಒದ್ದೆ ಮಾಡಿ ಹೋಗಬೇಕು ಎಂದು ಕೊಂಡಿದ್ದವನು ಅಲ್ಲಿ ಏನೂ ಕಾಣದೆ ನಿರಾಶನಾಗಿ ಬನ್ನಿ ಕುಳಿತುಕೊಳ್ಳಿ ಎಂದು ಅವರೆಲ್ಲರನ್ನೂ ಹಿಂದೆ ಕೂರಿಸಿಕೊಂಡು ಸದ್ದುಮಾಡುತ್ತಾ ಟ್ರಾಕ್ಟರು ಶುರುಮಾಡಿದ್ದ. ಮೂಸಕುಟ್ಟಿ ಕಥೆ ಅರ್ಧ ಹೇಳಿದಾಗಲೇ ಕತೆ ಪೂರ್ತಿ ಅರ್ಥಮಾಡಿಕೊಂಡಿದ್ದ ಕುಂಞಿಕಣ್ಣ ಮೂಸಕುಟ್ಟಿಯನ್ನೂ ಟ್ರಾಕ್ಟರ್ ಹತ್ತಿಸಿಕೊಂಡು ತಾನೂ ಯಾವುದೋ ಸಾಹಸದಲ್ಲಿ ಭಾಗಿಯಾದ ಹಾಗೆ ಏನನ್ನೋ ಗೊಣಗತೊಡಗಿದ್ದ.

ಕಬ್ಬಿಣದ ಆನೆಯಂತಹ ಹೂವಿನ ಕೊಲ್ಲಿಯ ಟ್ರಾಕ್ಟರ್ ಕುಲುಕಾಡುತ್ತಾ ಮುಲಕಾಡುತ್ತಾ ನಿಂತಿದ್ದ ಮಳೆಯ ನಡುವೆ ಮುಗ್ಗರಿಸಿಕೊಂಡು ಆ ಕತ್ತಲೆಯ ನಡುವೆ ಇಳಿಜಾರಿನಲ್ಲಿ ಕ್ಷೀಣವಾಗಿ ಬೆಳಕು ಚೆಲ್ಲಿ ಸಾಗುತ್ತಿತ್ತು. ಮೂಸಕುಟ್ಟಿ ತಾನು ಕುಂಞಿಪಾತುಮ್ಮಳನ್ನು ಹುಡುಕಿಕೊಂಡು ಎಲ್ಲಿ ಬಂದು ತಲುಪಿರುವೆ ಎಂದು ಗೊತ್ತಾಗದೆ ಮುಖವನ್ನೆಲ್ಲ ಗಾಬರಿಮಾಡಿ ಆ ಕುಳಿರಲ್ಲಿ ನಡುಗುತ್ತಾ ಟ್ರಾಕ್ಟರಿನ ಟೈರಿನ ಮೇಲಿನ ಜಾಗದಲ್ಲಿ ಆ ಕತ್ತಲಿನಲ್ಲಿ ಕಣ್ಣು ಪಿಳಿಪಿಳಿ ಬಿಟ್ಟುಕೊಂಡು ಕುಳಿತಿದ್ದನು. ಮಲಯಾಳ ಮಾತನಾಡುವ ಕುಂಞಿಕಣ್ಣ ಪಕ್ಕದಲ್ಲಿ ಕುಳಿತು ಅರಬಿ ಕಲಿಸುವ ಮುಲ್ಲಾಕನೂ ಅವರ ಹೆಂಡತಿಯೂ ಮೂವರು ಹೆಣ್ಣುಮಕ್ಕಳೂ ಹೂವಿನ ಕೊಲ್ಲಿಯನ್ನು ಬಂದು ಸೇರಿ ತಿಂಗಳಾಗಿದೆಯೆಂದೂ ತಾನೇ ಅವರನ್ನು ಸಿದ್ಧಾಪುರ ಸಂತೆಯಿಂದ ಹೂವಿನ ಕೊಲ್ಲಿಗೆ ಕರೆದುತಂದುದಾಗಿಯೂ ಹೆದರ ಬೇಕಾಗಿಲ್ಲವೆಂದೂ ಎಲ್ಲವೂ ಆ ಮೇಲಿರುವ ಪಡೆದವನ ಆಟವೆಂದೂ, ಇಲ್ಲವಾದರೆ ತಾವು ಸಂತೆಕಟ್ಟೆಯಲ್ಲಿ ಕೂತಿರುವಾಗಲೇ ಹೇಗೆ ಮೂಸಕುಟ್ಟಿಯು ಅಲ್ಲಿಗೇ ಬಂದು ತಲುಪುತ್ತಿದ್ದನೆಂದೂ, ಒಂದು ವೇಳೆ ಮಳೆ ಹತ್ತು ಮಿನೀಟು ಮೊದಲೇ ನಿಂತುಹೋಗಿದ್ದರೆ ತಾವು ಆತನಿಗೆ ಸಿಗುತ್ತಲೇ ಇರಲಿಲ್ಲವೆಂದೂ, ಎಲ್ಲವೂ ಹೇಗೆ ಹಾಳಾಗಿ ಹೋಗುತ್ತಿತ್ತೆಂದೂ ಆ ಕತ್ತಲೆಯಲ್ಲಿಯೇ ಲೊಚಗುಟ್ಟಿದ್ದರು.

ದೂಮಣ್ಣನ ಕಾದಾಡುವ ಹುಂಜ ಕುಪ್ಪಲೆ ಟ್ರಾಕ್ಟರಿನ ಕುಲುಕಾಟಕ್ಕೆ ಸಣ್ಣದಾಗಿ ರೋಷಗೊಂಡು ತಾನೂ ಅದರ ಸದ್ದಿಗೆ ಸರಿಯಾಗಿ ಸಣ್ಣಗೆ ಕೊಕ್ಕರಿಸುತ್ತಾ ಆ ಕತ್ತಲಲ್ಲಿ ಮೂಸಕಾಕನನ್ನು ದುರುಗುಟ್ಟಿ ನೋಡುತ್ತಿತ್ತು. ಅದನ್ನು ಅರ್ಥಮಾಡಿಕೊಂಡ ದೂಮಣ್ಣ, 'ಅದೆಲ್ಲಾ ಸರಿ ಕುಂಞಿಕಣ್ಣಾ ಈ ಇವನು ಆ ಮೊಲ್ಲಾಕನಿಗೆ ಸರಿಯಾಗಿ ಏನಾಗಬೇಕು ಕೇಳಿ ನೋಡು' ಎಂದು ಆ ಕುಲುಕಾಟದ ನಡುವೆಯೇ ತುಳುವಿನಲ್ಲಿ ಕೇಳಿದ್ದರು. ಕುಂಞಿಿಕಣ್ಣ ಅದನ್ನು ಮಲಯಾಳದಲ್ಲಿ ಮೂಸಕುಟ್ಟಿಯ ಬಳಿ ಕೇಳಿದ್ದನು.

ಮೂಸಕುಟ್ಟಿಗೆ ಆ ಕತ್ತಲಲ್ಲಿ ಇದನ್ನೆಲ್ಲ ಅವರಿಗೆ ಹೇಗೆ ವಿವರಿಸಿ ಹೇಳುವುದು ಗೊತ್ತಾಗಲಿಲ್ಲ. ಏನೂ ಆಗಬೇಕಾಗಿಲ್ಲ ಎಂದು ತಿಳಿಕೊಂಡರೆ ಅವನು ಕುಂಞಿಪಾತುಮ್ಮನಿಗೆ ಏನೂ ಆಗಬೇಕಾಗಿರಲ್ಲ. ಎಲ್ಲವೂ ಆಗಬೇಕೆಂದುಕೊಂಡರೆ ಏನೆಲ್ಲಾ ಆಗಬೇಕಾಗಿತ್ತು. ಆಗಬೇಕಿದಯೋ ಆಗಬೇಕಿಲ್ಲವೋ ಎನ್ನುವುದನ್ನೆಲ್ಲಾ ಮರೆತುನೋಡಿದರೆ ಕುಂಞಿ ಪಾತುಮ್ಮನ ಬಾಪಾ ಮೊಲ್ಲಾಕ ಮೂಸಕುಟ್ಟಿಯ ತಾಯಿ ಕುಂಞಾತುಮ್ಮನ ಒಡಹುಟ್ಟಿದ ಅಣ್ಣನಾಗಬೇಕಿತ್ತು. ಕುಂಞಿ ಪಾತುಮ್ಮನ ತಾಯಿ ಬೀಬಿಫಾತಿಮಾ ಹಾಗೂ ಮೂಸಕುಟ್ಟಿಯ ಬಾಪಾ ಪೋಕರ್ ಕಾಕಾ ಒಡಹುಟ್ಟಿದವರಾಗಿದ್ದರು. ಒಬ್ಬರಿಗೊಬ್ಬರು ಎಲ್ಲವೂ ಆಗಬೇಕಿದ್ದ ಆ ಕೋಯಾಗಳ ಕುಟುಂಬ ಕೇರಳದ ಮಲಪ್ಪುರ ಜಿಲ್ಲೆಯ ನದಿಯಬದಿಯ ಗ್ರಾಮವೊಂದರ ತರವಾಡು ಮನೆಯೊಂದರಲ್ಲಿ ಒಂದುಕಾಲದಲ್ಲಿ ಗ್ರಾಮಕ್ಕೆಲ್ಲಾ ರಾಜರುಗಳ ಹಾಗೆ ಬಾಳುತ್ತಿದ್ದರು. ನಂತರ ಯಾಕೋ ಶಾಪಗ್ರಸ್ತರಾದವರಂತೆ ತಮ್ಮ ತಮ್ಮಲ್ಲೇ ಮಾಟ,ಮಾಯ,ಮಂತ್ರ ಮಾಡಿಕೊಂಡು ಒಬ್ಬರ ಆತ್ಮವನ್ನು ಇನ್ನೊಬ್ಬರು ಹಿಡಿದು ಶೀಷೆಯೊಳಕ್ಕೆ ತುರುಕಿ ಬಿರಡೆ ಹಾಕಿಕೊಂಡು ಕೊನೆಗೆ ಒಬ್ಬೊಬ್ಬರಾಗಿ ಎತ್ತೆತ್ತಲೋ ಚಲ್ಲಾಪಿಲ್ಲಿಯಾಗಿ ಹೋಗಿದ್ದರು.

ಅವರೆಲ್ಲರ ಮೂಲ ಪುರುಷ ನೂರಾರು ವರ್ಷಗಳ ಹಿಂದೆ ಸಿರಿಯಾದೇಶದ ಬಸಾ ಪಟ್ಟಣದಿಂದ ಹಾಯಿದೋಣಿಯಲ್ಲಿ ತೇಲಿಬಂದು ಲಕ್ಷದ್ವೀಪ ತಲುಪಿ ಅಲ್ಲಿಂದ ಮಲಯಾಳ ರಾಜ್ಯವನ್ನು ತಲುಪಿ ಮೀನು ಹಿಡಿಯುವ ಮರಕಾಲ ಹೆಂಗಸೊಂದನ್ನು ವಿವಾಹ ಮಾಡಿಕೊಂಡು ಅದರ ಸಂತತಿಯೇ ತಾವೆಂಬುದನ್ನು ಅವರೆಲ್ಲರೂ ಅರಿತುಕೊಂಡಿದ್ದರು. ಆದರೂ ಅವರಿಗೆ ಹಸಿವೆಯಾಗುವಾಗ ನದಿಯ ಬದಿಯಲ್ಲಿ ತೆಂಗಿನಿಂದ ಕಾಯಿಯೊಂದು ಬಿದ್ದರೂ ಅದಕ್ಕಾಗಿ ಅವರಲ್ಲಿ ಯುದ್ಧವಾಗುತ್ತಿತ್ತು. ಮಾಟ, ಮಂತ್ರ, ಇಸ್ಮು, ತಾಯತ, ಶಾಪ, ಉರುಕ್ಕುಗಳ ಪ್ರಯೋಗವಾಗುತ್ತಿತ್ತು. ಹೀಗೇ ಒಂದು ಸಲ ಮಂತ್ರಯುದ್ಧವಾದಾಗ ತಾನು ಮತ್ತು ತನ್ನ ಹೆಂಡತಿ ಮತ್ತು ಮೂವರು ಹೆಣ್ಣುಮಕ್ಕಳು ಇನ್ನೂ ಈ ನರಕದಲ್ಲಿ ಬಾಳುವುದಿಲ್ಲವೆಂದೂ ತನ್ನ ಅರಬಿ ವಿದ್ಯೆಯಿಂದ ಎಲ್ಲಾದರೂ ಬದುಕುವೆನೆಂದೂ ಮೊಲ್ಲಾಕನೆಂಬ ಆ ಅರಬಿ ಪಂಡಿತ ರಾತ್ರೋರಾತ್ರಿ ರೈಲು ಹತ್ತಿ ಲಾರಿ ಹತ್ತಿ ಕೊಡಗಿನ ಕಾಡುಸೇರಿ ಹೂವಿನಕೊಲ್ಲಿ ತಲುಪಿದ್ದರು.

ಅವರಿಗೆ ಯಾರಿಗೂ ಆ ಯುದ್ದದ ನಡುವೆ ಮೂಸಕುಟ್ಟಿ ಹಾಗೂ ಕುಂಞಿ ಪಾತುಮ್ಮ ಒಬ್ಬರನೊಬ್ಬರು ಬಿಟ್ಟು ಅಗಲಲಾರದ ಪ್ರೇಮಿಗಳಾಗಿ ಹೋಗಿರುವುದು ಗೊತ್ತಾಗಿಯೇ ಇರಲಿಲ್ಲ. ಮುಲ್ಲಾಕ ಹೆಂಡತಿ ಮಕ್ಕಳೊಡನೆ ಊರುಬಿಟ್ಟ ಮರುಕ್ಷಣದಲ್ಲಿ ತಮ್ಮ ಮಗ ಮೂಸಕುಟ್ಟಿಯೂ ಮುಲುಗಿಕೊಂಡು ಉಟ್ಟಬಟ್ಟೆಯಲ್ಲಿ ಹೊರಟು ನಿಂತಿದ್ದು ಕಂಡು ಕುಂಞಿ ಪಾತುಮ್ಮ ರೋಷತಪ್ತಳಾಗಿ ಮಗನಿಗೆ ಶಾಪ ಹಾಕಿದ್ದರು. `ಮಾಟಮಾಡಿ ನಿನ್ನ ಬಾಪಾನ ಶರೀರವನ್ನು ಇಲ್ಲದಂತೆ ಮಾಡಿದ ನನ್ನ ಹಾಳಾದ ಅಣ್ಣನ ಮೊದಲ ಮಗಳ ಶರೀರವನ್ನು ನೀನು ಇಷ್ಟಪಟ್ಟಿರುವೆಯಾ ಇಬಿಲೀಸೇ ನಿನ್ನ ಹಸಿಕರುಳನ್ನು ಕಿತ್ತು ಹೊರಗೆ ಎಳೆಯುತ್ತೇನೆ ಮಗನೇ' ಎಂದು ಅವರು ಮಣ್ಣಿಗೆ ಹಸ್ತಗಳನ್ನು ಬಡಿದುಕೊಂಡು ಅತ್ತಿದ್ದರು. ಆದರೂ ಮೂಸಕುಟ್ಟಿ ಕುಂಞಿಪಾತುಮ್ಮಳ ಮಾಯಕ್ಕೆ ಸಿಲುಕಿ ಅವಳ ಮೈಯ್ಯ ಪರಿಮಳವನ್ನು ಹಿಂಬಾಲಿಸುತ್ತಾ ಸಿದ್ಧಾಪುರ ತಲುಪಿದ್ದರು.

ಮೂಸಕುಟ್ಟಿ ಆ ಮಳೆಯ ಇರುಳಿನಲ್ಲಿ ಹೂವಿನಕೊಲ್ಲಿ ಒಂದು ತಲುಪಿದಾಗ ಉಸ್ಮಾನ್ ರೈಟರ ಮೊದಲ ಹೆಂಡತಿ ಜುಲೈಕಾ ಇನ್ನೂ ಓಡಿಹೋಗಿರಲಿಲ್ಲ ಅಲ್ಲಿಯೇ ಇದ್ದರು. ಉಸ್ಮಾನ್ ರೈಟರ ತಾಯಿ ಹಾಜಮ್ಮನವರಿಗೆ ಇನ್ನೂ ಅಷ್ಟು ವಯಸ್ಸಾಗಿರಲಿಲ್ಲ. ಅವರು ಬೆಳ್ಳಕ್ಕಾರ ಬಿಳಿಹೆಂಗಸಿನಂತೆ ನೀಳವಾಗಿ ನಿಂತುಕೊಂಡು, ಅವರ ಎರಡೂ ಕಿವಿಗಳಲ್ಲಿ ಜೊಂಪೆಜೊಂಪೆಯಾಗಿ ಬೆಳ್ಳಿಯ ಅಲಿಕತ್ತುಗಳು ತೂಗಿ ನಲಿದಾಡುತಿದ್ದವು. ಅವರ ಕನ್ನಾಡಿ ಮಾಳಿಗೆಯ ತಲೆಯಬಟ್ಟೆ ಗಾಳಿಗೆ ಅಲ್ಲಾಡಿ ಅವರು ಆಗತಾನೇ ಹುಟ್ಟಿ ತಿಂಗಳಾಗಿದ್ದ ಉಸ್ಮಾನ್ ರೈಟರ್ ಮೊದಲ ಮಗನನ್ನು ಸೀರೆ ಬಟ್ಟೆಯ ತೊಟ್ಟಿಲಿನಲ್ಲಿ ತೂಗಿ ಬದರ್ ಯುದ್ಧದ ಹಾಡುಗಳನ್ನು ಹಾಡುತ್ತಾ ನಿದ್ದೆ ತೂಗಿಸಲು ನೋಡುತ್ತಿದ್ದರು. ಹಾಜಿರಾಳ ತಾಯಿ ಜುಲೈಕಾ ತನಗೂ ತನ್ನ ಸಂಸಾರಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಆ ಕತ್ತಲಲ್ಲಿ ಬಿಡಾರದ ದಾರಂದದಲ್ಲಿ ಕುಳಿತುಕೊಂಡು ನಿಂತ ಮಳೆಯನ್ನು ನೋಡುತ್ತಾ ಮನಸ್ಸಿನಲ್ಲೇ ನಗುತ್ತಿದ್ದರು.

ಉಸ್ಮಾನ್ ರೈಟರು ಇದನ್ನೆಲ್ಲಾ ನೋಡುತ್ತಾ ಆ ಕತ್ತಲಲ್ಲಿ ಏನು ಮಾಡುವುದು ಎಂದು ಗೊತ್ತಾಗದೆ ತಮ್ಮ ವಾಲ್ವ್ ರೇಡಿಯೋದ ಮರದ ಪೆಟ್ಟಿಗೆಯೊಳಗಿಂದ ಬೀಡಿಯೊಂದನ್ನು ತೆಗೆದು ಬೆಂಕಿಹಚ್ಚಿಕೊಳ್ಳಲು ಮರೆತು ಅದನ್ನು ಹಾಗೇ ತುಟಿಯಲ್ಲಿಟ್ಟುಕೊಂಡು ಕುಳಿತಿದ್ದರು. ಯಾವುದರಲ್ಲೂ ಆಸಕ್ತಿ ಇಲ್ಲದ ತಮ್ಮ ಹೆಂಡತಿಯ ಅನ್ಯಮನಸ್ಕತೆಯಿಂದ ಅವರಿಗೆ ಭಯಂಕರ ಸಿಟ್ಟು ಬರುತ್ತಿತ್ತು. ಆದರೂ ತಾಯಿ ಹಾಜಮ್ಮನವರು ಹಾಡುತ್ತಿರುವ ಬದರ್ಯುದ್ಧ ಹಾಡುಗಳನ್ನು ಕೇಳಿಸಿಕೊಂಡು ಸುಮ್ಮನಿರಲು ನೋಡುತ್ತಿದ್ದರು.

ಆ ಹೊತ್ತಿನಲ್ಲೇ ವೇಲಾಯುಧ ನಡೆಸಿಕೊಂಡು ಬಂದ ಟ್ರಾಕ್ಟರು ಬಿಡಾರದ ಅಂಗಳ ತಲುಪಿ ಅದರಿಂದ ದೂಮಣ್ಣ ಸದ್ದಾಗದ ಹಾಗೆ ಇಳಿದು ತನ್ನ ಹುಂಜವನ್ನು ದೂರದಲ್ಲಿ ಚೀಲದೊಳಗಿಟ್ಟು ಬಂದಿದ್ದ. ಆನಂತರ ಕುಂಞಿ ಕಣ್ಣ ಅದರಿಂದ ಇಳಿದು ತನ್ನ ಬಾಯಿಂದ ವಾಸನೆ ಬರಬಾರದೆಂದು ಕೈಯನ್ನು ಬಾಯಿಗೆ ಅಡ್ಡ ಹಿಡಿದುಕೊಂಡು ನಿಂತಿದ್ದನು. ಅವನ ಹಿಂದೆ ಮುದಾರನೂ ಇಳಿದು ದೂರದಲ್ಲಿ ನಿಂತುಕೊಂಡನು. ಕೊನೆಗೆ ಮೂಸಕುಟ್ಟಿಯೂ ಇಳಿದುಬಂದು ಯಾರಲ್ಲಿ ಏನು ಹೇಳುವುದು ಎಂದು ಗೊತ್ತಾಗದೆ ಸುಮ್ಮನೆ ನಿಂತುಕೊಂಡಿದ್ದನು.

`ಅವರು ಅಷ್ಟು ಮಂದಿ ಗಂಡಸರು ಬಂದಿರುವುದು ಇನ್ನೂ ನಿನ್ನ ಅರಿವಿಗೆ ಬಂದಿಲ್ಲವೇ ಜುಲೈಕಾ. ಒಳಗೆಹೋಗಿ ಕನಸು ಕಂಡುಕೊಂಡು ಮಲಗಿಕೋ' ಎಂದು ಹಾಜಮ್ಮ ಗದರಿದ್ದರು.

ಮೂಸಕುಟ್ಟಿ ಏನು ಹೇಳುವುದು ಎಂದು ಗೊತ್ತಾಗದೆ ಆಮೇಲೆ ಹೆದರಿಕೊಂಡು ಸುಳ್ಳುಹೇಳಿದ್ದ. ತನಗೆ ಕುಂಞಿಪಾತುಮ್ಮಳ ಜೊತೆ ಮದುವೆ ಆಗಿರುವುದೆಂದೂ ಆದರೂ ಮೊಲ್ಲಾಕ ಮಗಳ ತಲೆಕೆಡಿಸಿ ಅವಳನ್ನೂ ಎಳಕೊಂಡು ಹೂವಿನಕೊಲ್ಲಿಗೆ ಬಂದಿರುವುದಾಗಿಯೂ ಹೇಗಾದರೂ ಮಾಡಿ ತನಗೆ ಕುಂಞಿ ಪಾತುಮ್ಮಳನ್ನು ಮರಳಿ ಕೊಡಬೇಕಾಗಿಯೂ, ಸಾಧ್ಯವಾದರೆ ತನಗೂ ಹೂವಿನಕೊಲ್ಲಿಯಲ್ಲಿ ಕೆಲಸವೊಂದನ್ನು ಕೊಡಿಸಿದರೆ ತಾವಿಬ್ಬರೂ ಇಲ್ಲಿಯೇ ಕೆಲಸ ಮಾಡಿಕೊಂಡು ಸಂಸಾರ ಮಾಡಿಕೊಂಡು ಬದುಕುವುದಾಗಿಯೂ ಬೇಡಿಕೊಂಡಿದ್ದರು.

ಮೇಲಿನಹಾಡಿಯ ಲೈನುಮನೆಯಲ್ಲಿ ಮುಖ ಊದಿಸಿಕೊಂಡು ಮಲಗಿದ್ದ ಕುಂಞಿ ಪಾತುಮ್ಮಳಿಗೆ ನಿದ್ದೆಯಲ್ಲೇ ಅದು ಹೇಗೋ ಮೂಸಕುಟ್ಟಿ ತನ್ನನ್ನು ಹುಡುಕುತ್ತಾ ಹುಡುಕುತ್ತಾ ಬಹಳ ಹತ್ತಿರ ಬಂದು ತಲುಪಿರುವುದು ಗಾಳಿಯಲ್ಲಿ ತೇಲಿಬಂದ ಪರಿಮಳವೊಂದರಿಂದ ಗೊತ್ತಾಗಿಹೋಗಿತ್ತು.

ಮಾರನೆಯ ಬೆಳಗೆ ಚಕ್ರೋಲಿನಲ್ಲಿ ಕೈಕಟ್ಟಿ ತನ್ನನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದ ಮೂಸಕುಟ್ಟಿಯನ್ನು ಕಾಣುತ್ತಿದ್ದಂತೆ ಅವಳ ಬಾಯಿಯಿಂದಲೂ ಸುಳ್ಳೊಂದು ಬಂದುಬಿಟ್ಟಿತ್ತು. ತಮಗಿಬ್ಬರಿಗೂ ಮದುವೆಯಾಗಿರುವುದಾಗಿಯೂ ತಮ್ಮಿಬ್ಬರನ್ನೂ ತೋಟದಲ್ಲಿ ಬದುಕಲು ಬಿಡಬೇಕೆಂದು ಅವಳು ಉಸ್ಮಾನ್ ರೈಟರಲ್ಲಿ ಧೈರ್ಯಮಾಡಿ ಬೇಡಿಕೊಂಡಿದ್ದಳು.

ಈ ನಾಟಕವನ್ನೆಲ್ಲ ನೋಡಲು ಮೊಲ್ಲಾಕ ಅಲ್ಲಿರಲಿಲ್ಲ. ಅವರು ಸಾಹುಕಾರರ ಬಂಗಲೆಯಲ್ಲಿ ನಾಗರಬೆತ್ತ ಹಿಡಕೊಂಡು ಸಾಹುಕಾರರ ಮಕ್ಕಳಿಗೆ ಅರಬಿಕಲಿಸುತ್ತಿದ್ದರು. ಆ ಮಕ್ಕಳನ್ನು ದುರುಗುಟ್ಟಿ ನೋಡುತ್ತಾ ನಗುತ್ತಾ ತಮ್ಮನ್ನು ತಾವು ಮನಸಿನಲ್ಲೇ ಮಾಯಾವಿಯಂತೆ ಊಹಿಸಿಕೊಂಡು ಕುಳಿತಿದ್ದರು. ಅವರ ಬಾಯಿಂದ ನಿಯಮಿತವಾಗಿ ಕುರಾನಿನ ಅರಬಿ ಪದಗಳು ಬರುತ್ತಿದ್ದರೂ ಅವರ ಮನಸ್ಸು ದೂರದ ಅರಬಿಸ್ಥಾನದ ಮರಳುಗಾಡಿನಲ್ಲಿ ಅಲೆಯುತ್ತಿತ್ತು. ಹೇಗಾದರೂ ಇನ್ನೊಂದು ಸಲ ಹಾಯಿ ಹಡಗಿನಲ್ಲಿ ಕುಳಿತು ಅರಬಿಕಡಲನ್ನು ದಾಟಿ ಅಲ್ಲಿ ಹೋಗಿ ಸೇರುವುದು ಹೇಗೆ ಎಂದು ಲೆಕ್ಕಹಾಕುತ್ತಿದ್ದರು. ಸಾಹುಕಾರರ ಮಕ್ಕಳು ಅವರ ಕಣ್ಣಪಾಪೆಯ ಚಲನೆಗೆ ಹೆದರಿಕೊಂಡು ಮಂತ್ರ ಮುಗ್ಧರಾಗಿ ತುಟಿಗಳನ್ನು ಚಲಿಸುತ್ತಾ ಕೂತಿದ್ದರು.

Comment viewing options

Select your preferred way to display the comments and click "Save settings" to activate your changes.

ರಶೀದರೇ, ಬ್ಲ

ರಶೀದರೇ,

ಬ್ಲಾಗಂಬರಿ ಬಹಳ ಚೆನ್ನಾಗಿ ಬರುತ್ತಿದೆ. ಅಂದಹಾಗೆ ೧೩ನೇ ಪ್ಯಾರಾದಲ್ಲಿ ಮೂಸಕುಟ್ಟಿಯ ತಾಯಿಯ ಹೆಸರು ಕುಂಞಾತುಮ್ಮ ಆಗಬೇಕಿತ್ತಲ್ಲವೇ? ಸ್ವಲ್ಪ ಗೊಂದಲವಾಗಿದೆ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

Post new comment

The content of this field is kept private and will not be shown publicly.
7 + 13 =
Solve this simple math problem and enter the result. E.g. for 1+3, enter 4.