ದಿನಾ ಬರುವ ವಿಮಾನ ಆಕಾಶದಲ್ಲಿ ಬೆಳ್ಳಗೆ ಗೆರೆ ಎಳೆದುಕೊಂಡು ಈ ದಿನವೂ ಮೂಡಣದಲ್ಲಿ ಸಣ್ಣದಾಗಿ ಕಾಣೆಯಾಗುತ್ತಿತ್ತು.
ದಿನಾ ಬರುವ ವಿಮಾನ ಸಣ್ಣ ಹಕ್ಕಿಯಂತೆ ಮರಗಳ ನಡುವಿಂದ ಆಕಾಶದಲ್ಲಿ ಕಾಣಿಸಿಕೊಂಡರೆ ಹೂವಿನಕೊಲ್ಲಿಯ ಆಳುಗಳು ಕೆಲಸ ಕೈ ಬಿಟ್ಟು ಮಧ್ಯಾಹ್ನದ ಗಂಜಿ ಉಣ್ಣಲು ಕೆಳಗಿನ ಹಾಡಿಗೋ ಮೇಲಿನ ಹಾಡಿಗೋ ಹೋಗುವ ಹೊತ್ತಾಯಿತು ಎಂದುಕೊಳ್ಳುತ್ತಿದ್ದರು. ಹಾಗೆ ಅಂದುಕೊಳ್ಳುತ್ತಿದ್ದಂತೆ ಸಾಹುಕಾರರ ಬಂಗಲೆೆಯ ಹೂವಿನ ತೋಟದ ದಿಬ್ಬದಿಂದ ಹಾಲು ಕರೆಯುವ ನಂಬಿಯಾರರು ಊದುವ ಮಧ್ಯಾಹ್ನದ ತುರಿಯ ಸದ್ದುಮೊಳಗುತ್ತಿತ್ತು.
ಆದರೆ ಈದಿನ ಕಾಪಿ ಕುಯ್ಯುವುದು ಮುಗಿದು, ಕಾಪಿ ಹೆಕ್ಕುವುದು ಮುಗಿದು, ತೋಟದ ಆಳುಗಳು ಬೋನಸ್ಸು ಪಡೆದು ಊರಿಗೆ ಹೊರಟು ಹೋದವರು ಇನ್ನೂ ಬಂದು ತಲುಪಿರಲಿಲ್ಲ. ಸಣ್ಣ ಸಾಹುಕಾರರು ಹಜ್ ಮುಗಿಸಿ ಮಕ್ಕಾದಿಂದ ಇನ್ನೂ ಮರಳಿ ಬಂದಿರಲಿಲ್ಲ. ಮುರುಗಾಮಲೆಯಿಂದ ಕನಸಿನಲ್ಲಿ ಆಪರೇಷನ್ನು ಮುಗಿಸಿಕೊಂಡು ಹೊರಟ ಉಸ್ಮಾನ್ ರೈಟರು ಇನ್ನೂ ಬಂದು ತಲುಪಿರಲಿಲ್ಲ. ದನ ಮೇಯಿಸುವ ಮುದಾರನೂ ಹಾಲು ಕರೆಯುವ ನಂಬಿಯಾರರೂ ಮಾಡಲು ಬೇರೇನೂ ಕೆಲಸವಿಲ್ಲದೆ ಏಲಕ್ಕಿ ತೋಟದ ನಡುವಲ್ಲಿ ಬೇಸಿಗೆಯಲ್ಲಿ ಸಣ್ಣಗೆ ಹರಿಯುತ್ತಾ ಬತ್ತಿದಂತೆ ಕಾಣುತ್ತಿರುವ ತೊರೆಯ ಸಣ್ಣ ಸಣ್ಣ ಚಪ್ಪಟೆ ಕಲ್ಲುಗಳನ್ನು ಸರಿಸಿ ಅಂಗಾತ ಮೇಲೆತ್ತಿ ಅವುಗಳ ಅಡಿಯ ಕೆಸರಿನಿಂದ ಕಾಡುಸಿಗಡಿಗಳನ್ನು ಹಿಡಿದು ಕೆಸದ ಎಲೆಯಲ್ಲಿ ಸಂಗ್ರಹಿಸುತ್ತಿದ್ದರು. ಮಾಡಲು ಬೇರೆ ಏನೂ ಕೆಲಸವಿಲ್ಲವೆಂದು ತಾವು ಕಾಡುಸಿಗಡಿಗಳನ್ನು ಹಿಡಿಯುತ್ತಿರುವೆವು ಎಂಬ ಭಾವವು ಅವರಿಬ್ಬರ ಮುಖದಲ್ಲೂ ಎದ್ದು ಕಾಣುತ್ತಿತ್ತು.
ಹಾಲು ಕರೆಯುವ ನಂಬಿಯಾರರು ತಾವು ಮೀನು ಮಾಂಸ ಸಿಗಡಿಗಳನ್ನು ತಿನ್ನುವುದಿಲ್ಲವಾದರೂ ಬೇರ ಏನೂ ಕೆಲಸವಿಲ್ಲದಿರುವಾಗ ಏಲಕ್ಕಿ ಕಾಡಿನ ನಡುವಿನ ಈ ತೊರೆಯಲ್ಲಿ ಹೀಗೆ ತಮ್ಮ ಜಾರುವ ಪಂಚೆಯನ್ನು ಮೊಣಕಾಲವರೆಗೆ ಎತ್ತಿ ಪಾದಗಳನ್ನು ಕೆಸರಲ್ಲಿ ಹೂತು ಕುಕ್ಕುರುಗಾಲಲ್ಲಿ ಕುಳಿತು ಏಕಾಗ್ರತೆಯಿಂದ ಒಂದೊಂದೇ ಸಿಗಡಿಗಳನ್ನು ಬೊಗಸೆಯಲ್ಲಿ ಹಿಡಿದು ಕೆಸದ ಎಲೆಯಲ್ಲಿ ಹಾಕುತ್ತಿದ್ದರು. ದಿನಾ ಬರುವ ವಿಮಾನ ಈ ದಿನವೂ ಸದ್ದಿಲ್ಲದೆ ಮೇಲೆ ಆಕಾಶದಲ್ಲಿ ಬಿಳಿಯ ಗೆರೆ ಎಳೆದುಕೊಂಡು ಮಾಯವಾಗುತ್ತಿರುವುದು ಅವರಿಗೆ ತೊರೆಯ ಕೆಸರು ನೀರಿನಲಿ ಗೋಚರವಾಗುತ್ತಿತ್ತು. ಆದರೂ ಅವರು ಹಠದಲ್ಲಿ ತಲೆಯತ್ತಿ ನೋಡದೆ ಕೆಸರಿನಲ್ಲೇ ತಮ್ಮ ಕಣ್ಣುಗಳನ್ನು ನೆಟ್ಟುಕೊಂಡು ಅವುಡುಗಚ್ಚಿಕೊಂಡು ಮುದಾರನ ಜೊತೆಗೂ ಮಾತನಾಡದೆ ಸಿಗಡಿ ಹಿಡಿಯುವ ಕೆಲಸವನ್ನ ಮಾಡುತ್ತಿದ್ದರು. ಮುದಾರನೂ ಏನೂ ಹೇಳದೇ ನಡುನಡುವೆ ತಿರುಗಿ ನೋಡಿ ಕೊಯಿದ ಬತ್ತದ ಗದ್ದೆಯಲ್ಲಿ ತಲೆ ತಗ್ಗಿಸಿಕೊಂಡು ಮೇಯುತ್ತಿರುವ ತನ್ನ ಬಾಯಿಬಾರದ ನಾಕಾಲಿಗಳು ಇನ್ನೂ ಮೇಯುತ್ತಲೇ ಇವೆಯೇ ಎಂದು ಖಚಿತಪಡಿಸಿಕೊಂಡು ಮತ್ತೆ ತನ್ನ ಕೆಲಸವನ್ನು ಮುಂದುವರಿಸುತ್ತಿದ್ದನು.
ಕೆಸರು ನೀರಿನಲ್ಲಿ ಅವರಿಬ್ಬರ ಬೊಗಸೆಗಳು ಚಲಿಸುವ ಸದ್ದು, ಮೇಲೆ ನೆರಳಿಗೆ ಬೆಳೆಸಿದ ಪಾಲವಾನದ ಮರಗಳ ಗೆಲ್ಲುಗಳಿಂದ ಕಾಡುಮೈನಾ ಹಕ್ಕಿಗಳ ಹಾಡು, ನಡುನಡುವೆ ಬತ್ತದ ಗದ್ದೆಯ ಮೇಲಿಂದ ರೊಯ್ಯನೆ ಹಾರುವ ಗಿಳಿ ಹಿಂಡುಗಳ ಕಲರವ, ತೊರೆಯ ಕೆಸರಿನ ವಾಸನೆ, ಹಸಿ ಸೀಗಡಿಗಳ ಪೊಡಸು ಪರಿಮಳ - ನಂಬಿಯಾರರು ಎಂದಿನಂತೆ ಈ ಲೋಕ ಹೇಗೆ ಉಂಟಾಯಿತು ಎಂದು ಯೋಚಿಸುತ್ತಿದ್ದರು. ತಮ್ಮ ತಲೆಯಲ್ಲಿ ಉಂಟಾಗುತ್ತಿರುವ ಈ ಯೋಚನೆಗಳನ್ನು ಅಡಿಯನಾದ ಈ ಮುದಾರನಿಗೆ ಹೇಗೆ ಹೇಳುವುದು ಎಂದೂ ಅವರಿಗೆ ಯೋಚನೆಯಾಗುತ್ತಿತ್ತು.
ಮೇಲಿನಿಂದ ರೈಟರ ಬಿಡಾರದಿಂದ ಮಕ್ಕಳು ಕೇಕೆ ಹಾಕಿ ಆಡುವುದು, ಅಳುವುದು ಕೇಳಿಸುತ್ತಿತ್ತು. ಹಾಜಮ್ಮ ತಾನೂ ಒಂದು ಕೋಳಿಯಂತೆ ಕೋಳಿ ಹಿಂಡುಗಳನ್ನು ಹತ್ತಿರಕ್ಕೆ ಕರೆದು ಹುಡಿ ಅಕ್ಕಿ ಎರಚಿ ತಿನ್ನಲು ಕೇಳಿಕೊಳುತ್ತಿರುವುದು ಅಲ್ಲಿಂದಲೇ ಕೇಳಿಸುತ್ತಿತ್ತು. ರೈಟರ ಎರಡನೇ ಹೆಂಡತಿ ಆಯಿಶಾ ಬಟ್ಟೆ ಒಗೆಯುವ ಕಲ್ಲಿಗೆ ಬಟ್ಟೆ ಬಡಿಯುವ ನಿಯಮಿತವಾಗಿ ಬಿಟ್ಟುಬಿಟ್ಟು ಬರುವ ಸದ್ದು, ನಡುನಡುವಲ್ಲಿ ಜುಲೈಕಾ ಎಂಬ ಗಿಳಿಯ ಕೀಟಲೆಯ ಮಾತುಗಳ ಸದ್ದು. ಈಗ ಒಂದು ವಾರದಿಂದ ಸಾಹುಕಾರರ ಬಂಗಲೆಯಿಂದ ಕೆಲಸದ ತುರಿಯನ್ನು ಊದದೆ ಹಾಲು ಕರೆಯುವ ನಂಬಿಯಾರ್ಗೆ ತಮ್ಮ ತುಟಿಗಳು ಒಣಗಿ ಹೋದಂತೆ ಅನ್ನಿಸುತ್ತಿತ್ತು. ಪಂಚೆಯೊಳಗಿನ ತಮ್ಮ ಬಿಳಿಯ ನಿಕ್ಕರಿನ ಜೇಬಿನಿಂದ ವೀಳ್ಯದ ಎಲೆಯೊಂದನ್ನು ತೆಗೆದು ಹಸ್ತಕ್ಕೆ ಉಜ್ಜಿ ಅದನ್ನು ಹಸಿರಾಗಿ ಹೊಳೆಯುವಂತೆ ಮಾಡಿ ಸುಣ್ಣದ ಕರಂಡಕದೊಳಕ್ಕೆ ಕಿರುಬೆರಳನ್ನು ತೂರಿಸಿ ಸುಣ್ಣವನ್ನು ಗೋರಿ ತೆಗೆದು ಎಲೆಗೆ ಹಚ್ಚಿ ಅಡಿಕೆ ಚೂರಿಗಾಗಿ ತಮ್ಮ ನಿಕ್ಕರಿನ ಕಿಸೆಯೊಳಕ್ಕೆ ಕೈಯನ್ನು ತೂರಿಬಿಟ್ಟರು. ಆಗಲೇ ಅವರಿಗೆ ಕಾಲವು ಇಷ್ಟು ಬೇಗ ಎಷ್ಟು ಕಳೆದುಹೋಗಿದೆ ಎಂಬ ಅರಿವಾಯಿತು. ಮುದಾರನ ಮೇಲೆ ಸಿಟ್ಟೂ ಬಂದು ಹೋಯಿತು.
ಸಿಗಡಿ ಹಿಡಿದು ಕೆಸರಾಗಿದ್ದ ತಮ್ಮ ಕೈಗಳನ್ನು ತೊರೆಯ ತಿಳಿನೀರಿನಲ್ಲಿ ತೊಳೆದುಕೊಂಡು ಪಂಚೆಯ ತುದಿಯಲ್ಲಿ ಒರೆಸಿ ಒಣಗಿಸಿಕೊಂಡು ವೀಳ್ಯದ ಎಲೆಗೆ ಸುಣ್ಣವನ್ನು ಸವರಿ ಅಡಿಕೆಯ ಚೂರುಗಳಿಗಾಗಿ ನಿಕ್ಕರಿನ ಕಿಸೆಯೊಳಗೆ ತೂರಿಬಿಟ್ಟ ಅವರ ಕೈಬೆರಳುಗಳಿಗೆ ಅಡಿಕೆಯ ಚೂರುಗಳು ಸಿಗದೆ ಅವರ ಬಾಯಿಂದ 'ಹೇ ಗುರುವಾಯೂರಪ್ಪಾ....' ಎಂಬ ಶಬ್ದವೊಂದು ಮಾತ್ರ ಕೇಳಿಬಂತು. ಆ ಶಬ್ದವನ್ನು ಕೇಳಿದ ಮುದಾರ ತಾನೂ ಬೆಚ್ಚಿಬಿದ್ದು ತಲೆಯೆತ್ತಿ ನೋಡಿ ಅವನಿಗೆ ಎಲ್ಲಾ ಗೊತ್ತಾಗಿ ಅವನಿಗೆ ಈಗ ಎಲ್ಲಿಂದ ಅಡಿಕೆಯ ಚೂರುಗಳನ್ನು ತಂದುಕೊಡುವುದು ಎಂದು ಗೊತ್ತಾಗದೆ ತಲೆ ತಗ್ಗಿಸಿ ಕುಳಿತು ಬಿಟ್ಟನು.
ಹೂವಿನ ಕೊಲ್ಲಿಯ ಹುಲ್ಲಿನ ಬಾಗೆಯಲ್ಲಿ ಆಕಾಶಕ್ಕೆ ತಲೆಯತ್ತಿ ನಿಂತಿದ್ದ ಒಂದೇ ಒಂದು ಒಂಟಿ ಅಡಿಕೆಯ ಮರ ಹಜ್ ಹಬ್ಬಕ್ಕೆ ನಾಲ್ಕು ದಿನದ ಮೊದಲು ಬೀಸಿದ ಗಾಳಿಗೆ ಗೋಣು ಮುರಿದುಕೊಂಡು ಬಿದ್ದು ಅದರ ತಲೆ ಅರ್ಧದಿಂದ ಮರದಲ್ಲೇ ನೇತಾಡುತ್ತಿತ್ತು. ಅದರ ಅಡಿಗೆ ಮಕ್ಕಳೂ ಹೋಗುವುದು ಬೇಡ, ಯಾರೂ ಹೋಗುವುದೂ ಬೇಡ ಹೋದವರ ತಲೆಯ ಮೇಲೇನಾದರೂ ಅದು ಕಳಚಿ ಬಿದ್ದರೆ ಯಾರೂ ಜವಾಬ್ಧಾರರಲ್ಲ ಎಂದು ಉಸ್ಮಾನ್ ರೈಟರು ಮುರುಗಾಮಲೆಗೆ ಹೋಗುವ ಮೊದಲು ಆರ್ಡರು ಮಾಡಿ ಹೋಗಿದ್ದರು.
ನನಗೆ ಕಾಲಕಾಲಕ್ಕೆ ಸಲ್ಲಬೇಕಾಗಿರುವುದನ್ನೆಲ್ಲಾ ಯಾವುದೇ ಒಂದು ಅನಿಷ್ಠ ಶಕ್ತಿ ಬೇಕು ಬೇಕೆಂತಲೇ ಸಲ್ಲದ ಹಾಗೆ ಮಾಡುತ್ತಿದೆಯೆಂದು ನಂಬಿಯಾರರಿಗೆ ಯಾವಾಗಿನಿಂದಲೋ ಅನ್ನಿಸುತ್ತಿತ್ತು. ಈಗ ಇದ್ದ ಆ ಒಂದು ಅಡಿಕೆಯ ಮರವೂ ಗಾಳಿಗೆ ತಲೆಕಡಿದುಕೊಂಡು ನೇತಾಡಲು ತೊಡಗಿದ ಮೇಲೆ ಅವರಿಗೆ ಅದು ಹಸಿ ಸತ್ಯವೆಂದು ಗೊತ್ತಾಗಿ ಹೋಗಿತ್ತು. ಇಲ್ಲವಾದರೆ ತಾವು ಯಾಕೆ ಸಿದ್ದಾಪುರದ ಸಂತೆ ಬೀದಿಯಲ್ಲಿದ್ದ ತಮ್ಮ ವಾಚು ರಿಪೇರಿಯ ಅಂಗಡಿಯನ್ನು ತ್ಯಜಿಸಿ ಈ ಹೂವಿನ ಕೊಲ್ಲಿಯ ಸಾಹುಕಾರರ ಬಂಗಲೆಯ ದನದ ಕೊಟ್ಟಿಗೆಯಲ್ಲಿ ಹಾಲು ಕರೆದುಕೊಂಡು, ಕಾಲಕಾಲಕ್ಕೆ ಕೆಲಸದ ತುರಿಯನ್ನು ಊದಿಕೊಂಡು ಸತ್ತುಕೊಂಡು ಇರಬೇಕಾಗಿತ್ತು ಎಂದು ಅವರಿಗೆ ಯಾವಾಗಲೂ ಅನ್ನಿಸುತ್ತಿತ್ತು. ಅವರ ಮನಸ್ಸಿಗೆ ಅನ್ನಿಸುತ್ತಿರುವುದು ಎಲ್ಲ ಅಲ್ಲದಿದ್ದರೂ ಸ್ವಲ್ಪವಾದರೂ ಮುದಾರನ ಮನಸ್ಸಿಗೂ ಅರ್ಥವಾಗುತ್ತಿತ್ತು. ಅದಕ್ಕೆಂದಲೇ ಅವನು ಯಾವಾಗಲೂ ಅಡಿಕೆ ಸುಲಿದು ಒಣಗಿಸಿ ಚೂರು ಮಾಡಿದ ಮೇಲೆ ಒಂದಿಷ್ಟು ಹೆಚ್ಚು ಚೂರುಗಳನ್ನೇ ನಂಬಿಯಾರರಿಗೆ ಕೊಡುತ್ತಿದ್ದ. ಆದರೆ ಈಗ ಅಡಿಕೆ ಮರವೇ ಬಿದ್ದ ಮೇಲೆ ತಾನೇನು ಮಾಡುವುದು ಎಂದು ಮುದಾರನ ತಲೆಯಲ್ಲಿ ಹೊಳೆಯದೆ ನಂಬಿಯಾರರು ಸಿಟ್ಟಾದರೆ ಸಿಟ್ಟಾಗಲಿ ಎಂದು ಆತನೂ ಮಾತನಾಡದೆ ಸಿಕ್ಕಿದ ಸಿಗಡಿಗಳನ್ನು ಕೆಸದ ಎಲೆಯಲ್ಲಿ ತುಂಬಿಸಿಕೊಂಡು ಎದ್ದು ನಿಂತ.
ನಂಬಿಯಾರರು ಕೆಸರಿನಿಂದ ಏಳಲಾಗದೆ ಅವರ ಕಾಲುಗಳು ನೀರಿನಲ್ಲಿ ಜೋಮುಕಟ್ಟಿಕೊಂಡು ಅವರು ತಮ್ಮ ಬಕ್ಕ ತಲೆಯ ಮೇಲೆ ಕೈಗಳನ್ನಿಟ್ಟುಕೊಂಡು ಮುಖವನ್ನು ಸಂಕಟಮಾಡಿಕೊಂಡು ತೊರೆಯ ನಡುವೆ ಕುಳಿತಲ್ಲೇ ಕುಳಿತಿದ್ದರು. ಅವರನ್ನು ಅಲ್ಲಿಂದ ಎಬ್ಬಿಸಲು ಅವರನ್ನು ಹೇಗೆ ಮುಟ್ಟುವುದು ಎಂದು ತಿಳಿಯದೆ ಮುದಾರ ಸುಮ್ಮನೆ ನೋಡುತ್ತಾ ನಿಂತಿದ್ದ. ನೀನು ಹೋಗುವ ದಿಕ್ಕಿಗೆ ಹೋಗು ನನ್ನ ಕಾಲುಗಳು ತನಗೆ ತಾನೇ ಸರಿಯಾದ ಮೇಲೆ ನಾನೇ ಎದ್ದು ಬರುವೆನು ಎಂಬಂತೆ ನಂಬಿಯಾರರು ಅವನನ್ನು ನೋಡಿದರು. ಅದನ್ನು ಅರಿತುಕೊಂಡ ಮುದಾರ ಬೇರೆ ಹೆಚ್ಚು ಯೋಚನೆ ಮಾಡದೆ ಕೈಗಳಲ್ಲಿ ಸಿಗಡಿ ತುಂಬಿದ್ದ ಕೆಸದ ಎಲೆಯನ್ನು ಬಿಗಿಯಾಗಿ ಹಿಡಿದುಕೊಂಡು ನಡೆಯುತ್ತಾ ಹುಲ್ಲುಬಾಗೆಯ ಮೂಲೆಯನ್ನು ತಲುಪಿ ಮೊದಲೇ ಜೋಡಿಸಿಟದ್ದ ಪಾಲವಾನದ ಒಣಕಡ್ಡಿಗಳಿಗೆ ಬೆಂಕಿ ಹಚ್ಚಿ ಅವುಗಳು ಉರಿಯುತ್ತಿದ್ದಂತೆ ಆ ಅಗ್ನಿಯಲ್ಲಿ ಹಸಿ ಕಾಡು ಸಿಗಡಿಗಳನ್ನು ಸುಡಲುತೊಡಗಿದ.
ತೊರೆಯ ಕೆಸರಿನಲ್ಲಿ ನಂಬಿಯಾರರ ಕಾಲುಗಳು ಜೋಮು ಕಟ್ಟಿಕೊಂಡು ಅವರು ಅಲ್ಲಿಂದಲೇ ಎಲ್ಲವನ್ನೂ ನೋಡುತ್ತಿದ್ದರು. ಅವರಿಗೆ ಏನೂ ಅರ್ಥವಾಗುತ್ತಿರಲಿಲ್ಲ. ಸಿದ್ಧಾಪುರದ ಸಂತೆ ಪೇಟೆಯಲ್ಲಿ ವಾಚು ರಿಪೇರಿಮಾಡಿಕೊಂಡು ಕುಳಿತಿರಬೇಕಾಗಿದ್ದ ತಾನು ಈ ಹೂವಿನ ಕೊಲ್ಲಿಯ ಏಲಕ್ಕಿಕಾಡಿನ ನಡುವಲ್ಲಿ ಕೆಸರಲ್ಲಿ ಕಾಲು ಸಿಕ್ಕಿಹಾಕಿಕೊಂಡು ಈ ಅಡಿಯನಾದ ಮುದಾರ ಸಿಗಡಿ ಸುಡುವುದನ್ನು ನೋಡುತ್ತಾ ಕುಳಿತಿರಬೇಕಾದ ಕರ್ಮಫಲವೇನು ಎಂಬುದು ಅವರಿಗೆ ಅರ್ಥವಾಗಲಿಲ್ಲ. ಬೆಳಗೆ ಎರಡುಸಲ, ಮಧ್ಯಾಹ್ನ ಎರಡು ಸಲ, ಸಂಜೆ ಒಂದು ಸಲ- ಹೀಗೆ ದಿನಕ್ಕೆ ಐದು ಸಲ ಕಾಲಕಾಲಕ್ಕೆ ಸರಿಯಾಗಿ ಹೂವಿನ ಕೊಲ್ಲಿಯ ಕೆಲಸದ ಆಳುಗಳಿಗೆ ಏಳುವ ಹೊತ್ತಾಯಿತು, ಕೆಲಸಕ್ಕೆ ಹೊರಡುವ ಹೊತ್ತಾಯಿತು, ಮಧ್ಯಾಹ್ನ ಗಂಜಿ ಕುಡಿಯುವ ಹೊತ್ತಾಯಿತು, ಕುಡಿದು ಮರಳುವ ಹೊತ್ತಾಯಿತು, ಸಂಜೆ ಹಾಡಿಗೆ ಹಿಂತಿರುಗುವ ಹೊತ್ತಾಯಿತು ಎಂಬುದನ್ನು ಸಾಹುಕಾರರ ಬಂಗಲೆಯ ಹೂವಿನ ತೋಟದ ನಡುವಿನ ದಿಬ್ಬಹತ್ತಿ ತುರಿಯನ್ನು ಊದಿ ಮೊಳಗಿಸುತ್ತಾ ತೋಟದ ನಾಲ್ಕೂ ಮೂಲೆಗೆ ತಿರುಗಿ ಊದುತ್ತಾ ತಿಳಿಸುತ್ತಿದ್ದ ನಂಬಿಯಾರರಿಗೆ ರಾತ್ರಿ ಕೊಟ್ಟಿಗೆಯ ಮೂಲೆಯಲ್ಲಿರುವ ತಮ್ಮ ಕೋಣೆಯಲ್ಲಿ ಮಲಗಿದರೆ ನಿದ್ದೆಯೇ ಬರುತ್ತಿರಲಿಲ್ಲ. ತಾನು ಎಲ್ಲಿಂದ ಬಂದೆ ಇಲ್ಲಿ ಯಾಕೆ ಇರುವೆ ಎಂದೂ ಅರ್ಥವಾಗುತ್ತಿರಲಿಲ್ಲ.
ವಿಮಾನವೊಂದು ಮಧ್ಯಾಹ್ನದ ಸೂರ್ಯ ನಡು ನೆತ್ತಿ ಇಳಿಯುತ್ತಿದ್ದಂತೆ ಪಡುವಣದಿಂದ ಮೂಡಣದ ಕಡೆಗೆ ಆಕಾಶದಲ್ಲಿ ಹೊಗೆಯ ಗೆರೆ ಎಳೆದುಕೊಂಡು ಸಾಗಿ ಕಾಣದಾಗುತ್ತಿತ್ತು. ಸಾಯಂಕಾಲದ ಕೊನೆಯ ತುರಿಯಾಗುವ ಮೊದಲು ಅದೇ ವಿಮಾನ ಮೂಡಣದಿಂದ ಪಡುವಣದ ಕಡೆಗೆ ಸದ್ದಿಲ್ಲದೆ ಹಾರಿ ಹೋಗುತ್ತಿತ್ತು. ಎಷ್ಟು ಬೇಡವೆಂದರೂ ಆಳುಗಳು ತುರಿಯ ಸದ್ದನ್ನು ಅನುಸರಿಸದೆ ಆಕಾಶದಲ್ಲಿ ವಿಮಾನದ ಬಿಳಿಗೆರೆಯನ್ನು ನೋಡಿಕೊಂಡು ಕೆಲಸ ಕೈಬಿಟ್ಟು ಹಾಡಿಗೆ ನಡೆಯುತ್ತಿದ್ದರು. ಹೂವಿನ ಕೊಲ್ಲಿಯ ಮಕ್ಕಳು 'ದಿನಾ ಬರುವ ವಿಮಾನ ದಿನಾ ಬರುವ ವಿಮಾನ' ಎಂದು ಕೈಚಪ್ಪಾಳೆ ತಟ್ಟಿ ಕುಣಿದಾಡುತ್ತಿದ್ದರು.
ಪ್ರತಿ ಬಾರಿಯೂ ಕಾಪಿ ಹಣ್ಣುಗಳನ್ನು ಕೊಯ್ಯುವುದು ಮುಗಿದು ಬಿದ್ದ ಕಾಪಿ ಬೀಜಗಳನ್ನು ಹೆಕ್ಕುವುದು ಮುಗಿದು ಬೋನಸ್ಸಾದ ಮೇಲೆ ನಂಬಿಯಾರರು ಉಸ್ಮಾನ್ರೈಟರ್ ಮುಂದೆ ಗಂಭೀರವಾಗಿ ಕೈಕಟ್ಟಿ ನಿಂತು, 'ನನ್ನ ಇಷ್ಟು ವರ್ಷದ ಬೋನಸ್ಸು ಲೆಕ್ಕ ಹಾಕಿ ಕೊಡಿ ರೈಟರೇ ನಾನು ಹೋಗುತ್ತೇನೆ ಇನ್ನು ಬರುವುದಿಲ್ಲ' ಎಂದು ಹೇಳುತ್ತಿದ್ದರು. ಪ್ರತಿ ಬಾರಿಯೂ ರೈಟರು ಸುಮ್ಮನೆ ನಂಬಿಯಾರನ್ನು ಕರುಣೆಯಿಂದ ನೋಡುತ್ತಿದ್ದರು. ನಂಬಿಯಾರರಿಗೆ ರೈಟರ ನೋಟ ಅರ್ಥವಾಗಿ ಅವರು ನಿಂತಲ್ಲೇ ಕೊಂಚ ಹೊತ್ತು ಸುಮ್ಮನೇ ನಿಂತು ದುಗುಡದಲ್ಲಿ ಹೊರಟು ಹೋಗುತ್ತಿದ್ದರು.
'ಪುತ್ರಶೋಕವೆಂಬುದು ಎಲ್ಲ ಶೋಕಗಳಿಗಿಂತಲೂ ಅತಿದೊಡ್ಡ ಶೋಕ. ಆ ಶೋಕವು ಹೊರಟು ಹೋಗಬೇಕಾದರೆ ತಂದೆಯಾದ ನಾನೇ ಈ ಲೋಕದಿಂದ ಹೊರಟು ಹೋಗಬೇಕು' ಎಂದು ನಂಬಿಯಾರರು ತೋಟದ ಕಾವಲುಗಾರ ಕುಂಞಿಕಣ್ಣನಿಗೆ ಆಗಾಗ ಸೂಕ್ಷ್ಮವಾಗಿ ಹೇಳುತ್ತಿದ್ದರು. ತನ್ನ ಮನಸ್ಸು ಈ ಹೂವಿನ ಕೊಲ್ಲಿಯಲ್ಲಿ ಯಾರಿಗಾದರೂ ಅರ್ಥವಾಗುವುದಾದರೆ ಅದು ಸ್ವಲ್ಪವಾದರೂ ಅರ್ಥವಾಗುವುದು ಈ ಕುಂಞಿಕಣ್ಣನಿಗೇ ಎಂದು ನಂಬಿಯಾರರು ತಿಳಿದಿದ್ದರು. ಆದರೆ ಹೂವಿನಕೊಲ್ಲಿಯ ಎಲ್ಲರಿಗೂ ನಂಬಿಯಾರರ ಶೋಕವು ಎಂತಹದು ಎಂಬುದು ತಿಳಿದಿತ್ತು. ಆದರೆ ಏನು ಮಾಡುವುದು ಎಂದು ಗೊತ್ತಾಗದೆ ಅವರೆಲ್ಲರು ಸುಮ್ಮನಿದ್ದರು. ನಂಬಿಯಾರರು ಬಿಡಾರಕ್ಕೆ ಬಂದರೆ ಹಾಜಮ್ಮ ಹಾಲು ಕೊಂಚ ಜಾಸ್ತಿಯೇ ಹಾಕಿ ಚಾ ಮಾಡಿಕೊಡುತ್ತಿದ್ದರು. ಆದರೆ ಅದು ತಾನು ಬಂಗಲೆಯಿಂದ ಹಾಲಿಗೆ ನೀರು ಹಾಕದೇ ತಂದು ಕೊಡುತ್ತಿರುವುದಕ್ಕಾಗಿ ಎಂದು ನಂಬಿಯಾರರು ತಿಳಿದಿದ್ದರು. ಆದರೆ ಅದು ಹಾಗೆ ಆಗಿರಲಿಲ್ಲ.
ಹೂವಿನ ಕೊಲ್ಲಿ ಕಾಪಿ ತೋಟದಿಂದ ಸಿದ್ಧಾಪುರಕ್ಕೆ ಹೋಗುವ ದಾರಿಯಲ್ಲಿ ಅಬ್ಯಾಲೆ ಎಂಬಲ್ಲಿ ಒಂದು ದೊಡ್ಡ ಮೈದಾನ ಬರುತ್ತದೆ. ಆ ಮೈದಾನದ ನಡುವಲ್ಲಿ ಅಲ್ಲಲ್ಲಿ ಚದುರಿಹೋದಂತೆ ನೂರಾರು ಸಮಾದಿಯ ಕಲ್ಲುಗಳಿವೆ. ನಡುವಲ್ಲಿ ಯಾರಿಗೂ ಹೆಸರು ಗೊತ್ತಿಲ್ಲದ ದೊಡ್ಡ ಎಲೆಗಳ ಮರವೊಂದಿದೆ. ಆ ಮರದ ಕೆಳಗೆ ಒಂದು ಹಳೆಯ ಬಾವಿಯಿದೆ. ಅವುಗಳು ಯಾರ ಸಮಾದಿಯ ಕಲ್ಲುಗಳು ಎಂಬುದು ಯಾರಿಗೂ ತಿಳಿದಿಲ್ಲ. ಟೀಪೂವಿನ ಜೊತೆಯಲ್ಲಿ ಬಂದ ಫ್ರೆಂಚರದು ಎಂದು ಕೆಲವರು ಹೇಳಿದರೆ ಟೀಪೂವನ್ನು ಸೋಲಿಸಿದ ಬ್ರಿಟಿಷರದು ಎಂದು ಕೆಲವರು ಹೇಳುತ್ತಾರೆ. ಆ ಕಲ್ಲುಗಳ ಮೇಲೆ ಆ ಬಾವಿಯ ಸುತ್ತ ಶಾಲೆಗೆ ಹೋಗುವ ಮಕ್ಕಳೂ, ಮದರಸದಲ್ಲಿ ಅರಬಿ ಕಲಿಯುವ ಹುಡುಗರೂ ಆ ಮರದ ನೆರಳಿನಲ್ಲಿ ಆಟವಾಡುತ್ತಿರುತ್ತಾರೆ. ಆ ಬಾವಿಯಲ್ಲಿ ಒಂದು ಹಗಲು ಜೀವವಿಲ್ಲದ ದೇಹವೊಂದು ತೇಲುತ್ತಾ ಕಾಣಿಸಿಕೊಂಡು ಅದು ಯಾರ ದೇಹವೆಂದು ಅದರೊಳಗೆ ಯಾರೋ ಇಳಿದು ಅದನ್ನು ತಿರುಗಿಸಿ ನೋಡಿದರೆ ಬಾವಿಯ ಕಟ್ಟೆಯಿಂದ ಇಣುಕುತ್ತಿದ್ದ ನಂಬಿಯಾರರು 'ಹೇ ಗುರುವಾಯೂರಪ್ಪಾ' ಎಂದು ಕೂಗಿಕೊಂಡಿದ್ದರು. ಆ ದೇಹವು ಅವರ ಮಗ ಕುಟ್ಟಪ್ಪನದಾಗಿತ್ತು. ಅವರ ಮಗನನ್ನು ಕಮ್ಯುನಿಷ್ಟನೆಂದು ತಿಳಿದು ಯಾರೋ ಬಾವಿಗೆ ಹಾಕಿದ್ದರು.
ನಂಬಿಯಾರರು ಅಂದಿನಿಂದ ಸಿದ್ಧಾಪುರದ ತಮ್ಮ ವಾಚಿನ ಅಂಗಡಿಯ ಬಾಗಿಲನ್ನು ತೆರೆದಿರಲಿಲ್ಲ. ಹಿಂದಿನ ಬಾಗಿಲಿನಿಂದ ಅಂಗಡಿ ತೆರೆದು ಯಾರ ಯಾರ ವಾಚುಗಳು ಯಾರು ಯಾರಿಗೆ ಸೇರಬೇಕೋ ಅವರಿಗೆ ತಲುಪಿಸಿ ಉಳಿದ ವಾಚುಗಳನ್ನು ಬಟ್ಟೆಯ ಗಂಟಲ್ಲಿ ಸುತ್ತಿ ಆ ಗಂಟನ್ನು ಸಿದ್ಧಾಪುರದ ಸಂತೆಕಟ್ಟೆಯ ನಡುವಲ್ಲಿ ಇಟ್ಟು ಲೋಕದ ಎಲ್ಲಾ ದೇವಾದಿದೇವತೆಗಳಿಗೂ, ಎಲ್ಲ ಸಾಹುಕಾರರಿಗೂ, ಆಳುಗಳಿಗೂ, ಅಂಗಡಿಯವರಿಗೂ ಶಾಪ ಹಾಕಿ ಮಗ ಕುಟ್ಟಪ್ಪನ ಹೆಸರು ಹಿಡಿದು ಕೂಗಿಕೊಂಡು ಟಾರು ರೋಡಿನಲ್ಲಿ ಹುಚ್ಚನಂತೆ ನಡೆಯಲು ಶುರುಮಾಡಿದ್ದರು.
ಸಂತೇಪೇಟೆಯಿಂದ ಟ್ರಾಕ್ಟರಿನ ಟ್ರಾಲರಿನಲ್ಲಿ ಗೊಬ್ಬರದ ಚೀಲಗಳನ್ನು ಹಾಕಿಸಿಕೊಂಡು ಬರುತ್ತಿದ್ದ ಉಸ್ಮಾನ್ ರೈಟರು ಆಗ ಟ್ರಾಕ್ಟರು ನಡೆಸುತ್ತಿದ್ದ ಬಾಸ್ಕರನಿಗೆ ಟ್ರಾಕ್ಟರ್ ನಿಲ್ಲಿಸಲು ಹೇಳಿ ನಂಬಿಯಾರನ್ನು ಹತ್ತಿಸಿಕೊಂಡು ತಂದು ಹೂವಿನ ಕೊಲ್ಲಿಯಲ್ಲಿ ತುರಿ ಊದುವ ಕೆಲಸವನ್ನು ಕೊಡಿಸಿದ್ದರು. ಉಳಿದ ಸಮಯದಲ್ಲಿ ಹಾಲು ಕರೆಯುವ ಕೆಲಸವನ್ನು ವಹಿಸಿದ್ದರು. ಅವರಿಗೂ ಬಹಳ ಸಂಕಟವಾಗಿ ಹೋಗಿತ್ತು. ಸಿದ್ದಾಪುರದಿಂದ ಹೂವಿನ ಕೊಲ್ಲಿಗೆ ಮದುವೆಯ ಪೊಟೋಗಳನ್ನು ತೆಗೆಯಲು ಬರುತ್ತಿದ್ದ ಸ್ಟುಡಿಯೋ ಕುಟ್ಟಪ್ಪ ಕಮ್ಯುನಿಷ್ಟ್ ಎಂದು ಅವರಿಗೂ ಗೊತ್ತಿರಲಿಲ್ಲ. ತಮ್ಮ ಮಗ ಉಸ್ಮಾನ್ ರೈಟರ್ ಹಾಗೂ ಸೊಸೆ ಜುಲೈಕಾ ಜೊತೆ ತಾವೂ ನಿಂತು ಒಂದು ಪೊಟೋ ತೆಗೆಸಿಕೊಂಡಿದ್ದ ಹಾಜಮ್ಮನಿಗೂ ಸ್ಟುಡಿಯೋ ಕುಟ್ಟಪ್ಪ ಕಮ್ಯುನಿಸ್ಟ್ ಎಂದು ಗೊತ್ತಿರಲಿಲ್ಲ. ಆದರೂ ಕುಟ್ಟಪ್ಪನ ದೇಹ ಬಾವಿಯಲ್ಲಿ ಕಾಣಿಸಿದಾಗ ಹೂವಿನಕೊಲ್ಲಿಯ ಎಲ್ಲರಿಗೂ ಸಂಕಟವಾಗಿತ್ತು. ಹಾಗಾಗಿ ಅವರೆಲ್ಲರೂ ನಂಬಿಯಾರನ್ನು ಕಂಡಾಗ ಅವರ ನೋವನ್ನು ಅರ್ಥಮಾಡಿಕೊಂಡು ಒಳಗೊಳಗೇ ಸಂಕಟಪಡುತ್ತಿದ್ದರು. ಆದರೆ ನಂಬಿಯಾರ್ ತಮ್ಮ ಸಂಕಟ ಅರ್ಥವಾಗುವುದು ಹಗಲು ಕಾವಲಿನ ಕುಂಞಿಕಣ್ಣನಿಗೆ ಮಾತ್ರ ಎಂದು ತಿಳಿದುಕೊಂಡಿದ್ದರು. ಏಕೆಂದರೆ ಕುಂಞಿಕಣ್ಣನ ಮೊದಲನೆಯ ಹೆಂಡತಿಯ ಹಿರಿಯ ಮಗ ಬಾಸ್ಕರ ಟ್ರಾಕ್ಟರು ಮಗುಚಿಕೊಂಡು ತೀರಿಹೋಗಿದ್ದ. ಅವನು ತೀರಿ ಹೋದಾಗ ನಂಬಿಯಾರರು ಹೂವಿನ ಕೊಲ್ಲಿಗೆ ಬಂದು ಒಂದುವರ್ಷವೂ ಆಗಿರಲಿಲ್ಲ. ಕುಂಞಿಕಣ್ಣನನ್ನು ನಂಬಿಯಾರೇ ಸಂತೈಸಿದ್ದರು. ಪುತ್ರಶೋಕವು ಎಲ್ಲ ಶೋಕಗಳಿಗಿಂತಲೂ ಅತಿದೊಡ್ಡ ಶೋಕವೆಂದು ಸಮಾಧಾನ ಹೇಳಿದ್ದರು...
ಕೆಂಡದಲ್ಲಿ ಸಿಡಿದು ಅರಳಿ ಸೆಟೆದು ನಿಲ್ಲುತ್ತಿದ್ದ ಸಿಗಡಿಗಳನ್ನು ಒಂದೊಂದನ್ನಾಗಿ ಹೆಕ್ಕಿ ಆರಿಸಿಕೊಂಡು ಬಾಯಿಗಿಡುತ್ತಿದ್ದ ಮುದಾರನನ್ನು ತೊರೆಯ ನೀರಲ್ಲಿ ಕುಳಿತಲ್ಲಿಂದಲೇ ನೋಡುತ್ತಿದ್ದ ನಂಬಿಯಾರರಿಗೆ ಬಾಯಿಕಟ್ಟಿದಂತಾಗುತ್ತಿತ್ತು. ಅವರು ಅಲ್ಲಿಂದಲೇ ಏನೇನೆಲ್ಲಾ ಒಳಿತುಕೆಡುಕುಗಳನ್ನು ಯೋಚಿಸಿಕೊಂಡು ಇದ್ದಕ್ಕಿದ್ದಂತೆ ಸಮಯವಾಗಿ ಹೋಗಿದೆಯಲ್ಲಾ ಎಂದು ಆಕಾಶನೋಡಿಕೊಂಡು ಈವತ್ತೂ ತುರಿ ಊದಬೇಕಾಗಿಲ್ಲವಲ್ಲಾ ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದರು. ಈ ಯಾವುದರ ಪರಿವೆಯೂ ಇಲ್ಲದೆ ಸುಟ್ಟ ಸಿಗಡಿಗಳನ್ನು ಬಾಯಿಗೆ ಹಾಕಿಕೊಳ್ಳುತ್ತಿರುವ ಈ ಮುಷಂಡಿ ಮುದಾರ ಎಲ್ಲಿಂದಾದರೂ ಅಡಿಕೆಯ ಹೋಳೊಂದನ್ನು ಸಂಪಾದಿಸಿ ತಂದಿದ್ದರೆ ತನ್ನ ಜೋಮುಗಟ್ಟಿರುವ ಕಾಲುಗಳಿಗೆ ಏಳಲು ಬಲವಾದರೂ ಬರುತ್ತಿತ್ತಲ್ಲಾ ಎಂದುಕೊಂಡು ಅವರು ಅಲ್ಲಿಂದ ಏಳಲು ನೋಡುತ್ತಿದ್ದರು. ಆದರೆ ಆಗುತ್ತಿರಲಿಲ್ಲ.
ಮೇಲಿನಿಂದ ಬಿಡಾರದ ಕಡೆಯಿಂದ ಇದ್ದಕ್ಕಿದ್ದಂತೆ ಹಾಹಾಕಾರ ಕೇಳಿಬರಲುತೊಡಗಿತು. ಹಾಜಮ್ಮ ಬೊಬ್ಬೆ ಹೊಡೆದುಕೊಂಡು ಅರಲುವುದು ಕ್ಷೀಣವಾಗಿ ಕೇಳಿಸುತ್ತಿತ್ತು. ಹಾಜಿರಾ ಜೋರಾಗಿ ಕಿರುಚಿಕೊಂಡು ಓಡಿಬರುತ್ತಿದ್ದಳು. ಅವಳ ಹಿಂದೆ ರಾಟೆಮನೆಯ ದೂಮಣ್ಣ ದೂಮಕ್ಕರ ಇಬ್ಬರು ಹೆಣ್ಣುಮಕ್ಕಳಾದ ಶಾಂತಿ ಮತ್ತು ಸೇವಂತಿ ಕೈಬಾಯಿ ಅಲ್ಲಾಡಿಸುತ್ತಾ ಇತ್ತ ಕಡೆಯೇ ಓಡಿಬರುತ್ತಿದ್ದರು.
ಮುದಾರ ಸಿಗಡಿ ತಿನ್ನುವುದನ್ನು ನಿಲ್ಲಿಸಿ ಕಿವಿ ನಿಮಿರಿಸಿಕೊಂಡು, 'ಏನಾಯ್ತು.. ಏನಾಯ್ತಕ್ಕಾ.. ಏನಾಯ್ತು ಹಾಜಿರಾ.. ಎಂದು ತುಳುವಿನಲ್ಲಿ ಕೂಗಿಕೊಳ್ಳುತ್ತಿದ್ದ. ನೋಡಿದರೆ ಮೇಲಿನಿಂದ ಓಡಿ ಬರುತ್ತಿರುವ ಆ ಮೂವರು ಹುಡುಗಿಯರೂ ಗಂಟಲಲ್ಲಿ ಉಸಿರು ಸಿಕ್ಕಿಹಾಕಿಕೊಂಡು ಕೈಬಾಯಿ ಆಡಿಸುತ್ತಾ ಏನನ್ನೋ ಹೇಳುತ್ತಿದ್ದರು. ಅವರ ಮಾತುಗಳನ್ನು ಕೇಳಿಸಿಕೊಂಡ ಮುದಾರ ತಾನೂ ಎಲ್ಲವನ್ನೂ ಅಲ್ಲೇ ಬಿಟ್ಟು ಅವರ ಹಿಂದೆ ನಡೆಯತೊಡಗಿದ ಅವರು ನಾಲ್ವರೂ ತೊರೆಯ ಹತ್ತಿರ ಬರುತ್ತಿದ್ದಂತೆ 'ಏನು ಅವಘಡ ಆಯಿತು ಗುರುವಾಯೂರಪ್ಪಾ' ಎಂದು ನಂಬಿಯಾರರೂ ಕೂಗಿಕೊಂಡರು.
'ಉಸ್ಮಾನ್ ರೈಟರ ಎಳೆಯ ಮಗ ಹಾರೂನ್ ಬೆಳಗಿನಿಂದ ಕಾಣಿಸುತ್ತಿಲ್ಲವಂತೆ ನಂಬಿಯಾರೇ.. ಈಗ ಗೊತ್ತಾಯಿತಂತೆ... ಅಯ್ಯೋ" ಎಂದು ಮುದಾರ ನಿಲ್ಲದೆ ಓಡತೊಡಗಿದ. ನಂಬಿಯಾರರು ತೊರೆಯ ನೀರಲ್ಲಿ ಕುಳಿತಲ್ಲಿಂದಲೇ ನಿಟ್ಟುಸಿರು ಬಿಟ್ಟು ಎದ್ದು ನಿಲ್ಲಲು ಪ್ರಯತ್ನಿಸತೊಡಗಿದರು.





Post new comment