ಹಾರೂನ್ ಕಾಣೆಯಾಗಿರುವನು ಎಂಬ ಸಂಗತಿ ಬಹಳ ಹೊತ್ತಿನವರೆಗೆ ಯಾರ ಅರಿವಿಗೂ ಬಂದಿರಲಿಲ್ಲ. ಸಿದ್ಧಾಪುರ ಸಂತೆಯ ಶನಿವಾರ ಬೆಳಬೆಳಿಗ್ಗೆಯೇ ಎಲ್ಲಿಂದಲೋ ಬಂದಿದ್ದ ಅಜ್ಮೀರಿನ ಮಿಠಾಯಿ ಪಾಪಾ ತಮ್ಮ ಮಿಠಾಯಿ ತುಂಬಿದ್ದ ಬಟ್ಟೆಯ ಗಂಟನ್ನು ಹಜಾರದಲ್ಲಿ ಬಿಚ್ಚಿ ಹರಡಿ ಕೂತಿದ್ದರು. ಅವರು ತಮ್ಮ ಹಸಿರು ನಿಲುವಂಗಿಯ ಜೇಬಿನೊಳಗಿಂದ ಬಗೆ ಬಗೆಯ ಅತ್ತರು ಬಾಟಲಿಗಳನ್ನು ತೆಗೆದು ನೆಲದಲ್ಲಿ ಸಾಲಾಗಿ ಜೋಡಿಸಿಟ್ಟು ಇನ್ನೊಂದು ಜೇಬಿನೊಳಗಿಂದ ಕಲ್ಲು ಹರಳುಗಳ ಕೈ ಉಂಗುರಗಳ ಗಂಟನ್ನು ಬಿಚ್ಚಿ ನೆಲದಲ್ಲಿ ಸುರಿದು ಕೂತಿದ್ದರು. ಅವರು `ಯಾ ಖ್ವಾಜಾ.. ಯಾ ಮುಹಿಯುದ್ದೀನ್' ಎಂದು ತಮ್ಮ ಎಲ್ಲ ಬೆರಳುಗಳ ಒಂದೊಂದು ನಟಿಕೆಯನ್ನು ಮುರಿದು ಸದ್ದುಮಾಡಿ ನಡುನಡುವಲ್ಲಿ ಕೆಮ್ಮಿ ಗಂಟಲು ಸರಿಮಾಡಿ ಯಾಕೆ ಯಾರೂ ಬರುತ್ತಲೇ ಇಲ್ಲವಲ್ಲ ಎಂದು ತಮ್ಮ ಅಗಲ ಕಣ್ಣುಗಳಿಂದ ಸುತ್ತಮುತ್ತ ನೋಡುತ್ತಿದ್ದರು.
ಸಿದ್ಧಾಪುರ ಸಂತೆಯ ಶನಿವಾರ ಬೆಳಿಗ್ಗೆ ಮಿಠಾಯಿ ಪಾಪಾ ಬಂದಾಗ ಎಲ್ಲರೂ ಅವರನ್ನು ಗಮನಿಸಿಯೂ ಗಮನಿಸದೆ ಓಡಾಡಿಕೊಂಡಿದ್ದರು. ಆದರೂ ಎಲ್ಲರೂ ಅವರನ್ನು ಅಲ್ಲಲ್ಲಿಂದಲೇ ಗಮನಿಸುತ್ತಿದ್ದರು. ಅವರು ಕುಳಿತಲ್ಲಿಂದ ಬರುತ್ತಿದ್ದ ಕಿತ್ತಳೆಯ ಹಣ್ಣಿನ ಪರಿಮಳದಿಂದಾಗಿ ಅವರು ಎಂದಿನಂತೆ ಇಂದೂ ಬೆಳಗೆಯೇ ಸಾಕಷ್ಟು ಕಿತ್ತಳೆ ಹಣ್ಣುಗಳನ್ನು ಕದ್ದು ತಿಂದು ಬಂದಿದ್ದಾರೆ ಎಂಬುದು ಎಲ್ಲರಿಗೂ ಅರಿವಾಗುತ್ತಿತ್ತು. ಶನಿವಾರ ಸಂತೆಯ ದಿನ ಬೆಳಿಗೆಯೇ ಬರುವ ಮಿಠಾಯಿ ಪಾಪಾ ಕಿತ್ತಳೆ ಹಣ್ಣುಗಳನ್ನು ಕದಿಯುವಾಗ ಅವರನ್ನು ಹಿಡಿಯಬೇಕು ಅಂದುಕೊಂಡು ಅವರನ್ನು ಹೂವಿನಕೊಲ್ಲಿಯ ದೊಡ್ಡ ಗೇಟಿನಿಂದಲೇ ಹಿಂಬಾಲಿಸಿಕೊಂಡು ಬಂದಿದ್ದ ಕುಂಞಕಣ್ಣನಿಗೆ ಅವರು ಯಾವ ಕ್ಷಣದಲ್ಲಿ ಯಾವ ಗಿಡದಿಂದ ಕಿತ್ತಳೆ ಹಣ್ಣುಗಳನ್ನು ಕದ್ದರು ಎಂಬುದು ಗೊತ್ತಾಗಿರಲಿಲ್ಲ. ಆ ಪರಿಮಳದಿಂದ ಅವರು ಕದ್ದಿರುವುದು ಗೊತ್ತಾಗಿತ್ತು. ಆದರೆ ಸಾಕ್ಷಿಯಿಲ್ಲದೆ ಅವರನ್ನು ಹೇಗೆ ಹಿಡಿಯುವುದು ಎಂದು ಗೊತ್ತಾಗದೆ ಆತ ಪೇರಲೆಯ ಮರದಡಿಯಲ್ಲಿ ಮಂಕಾಗಿ ಕುಳಿತಿದ್ದ.
ಮಾಯಾವಿಯಾದ ತನಗೇ ಗೊತ್ತಾಗದ ಹಾಗೆ ಕಿತ್ತಳೆ ಹಣ್ಣುಗಳನ್ನು ಕದಿಯುವ ಈ ಮಿಠಾಯಿ ಪಾಪಾನ ಕಳ್ಳತನವನ್ನು ಕಂಡುಹಿಡಿಯುವ ಬಗೆ ಹೇಗೆ ಎಂಬುದು ಕುಂಞಿಕಣ್ಣನಿಗೆ ಚಿಂತೆಯಾಗಿತ್ತು. ಪೇರಲೆಯ ಮರದಡಿಯಲ್ಲಿ ಕುಳಿತಿದ್ದ ಅವನಿಗೆ ಹಾಜಮ್ಮ ಹಾಲಿಲ್ಲದ ಕಪ್ಪು ಚಾ ಮಾಡಿ ಹಿಂಬಾಗಿಲಿನಿಂದ ಹಾಜಿರಾಳ ಕೈಯಲ್ಲಿ ಕೊಟ್ಟು ಕಳಿಸಿದ್ದಳು. ಹಾಜಿರಾ ಯಾವಾಗಲೂ ಹೇಳುವ ಹಾಗೆ `ನಂಬಿಯಾರ್ ಇನ್ನೂ ಹಾಲುತಂದಿಲ್ಲ ಕುಂಞಿಕಣ್ಣ' ಎಂದು ಹೇಳಿ ಕಪ್ಪು ಚಹಾದ ಸಿಲವಾರದ ಲೋಟವನ್ನು ಅವನ ಕೈಗಿತ್ತು ಮಾಯವಾಗಿದ್ದಳು.
ಮಿಠಾಯಿ ಪಾಪಾ ಇನ್ನೂ ಇಷ್ಟು ಹೊತ್ತಾದರೂ ತಮ್ಮ ಕೈಗೆ ಚಹಾದ ಬಟ್ಟಲು ಬರದಿರುವುದನ್ನು ಗಮನಿಸಿಕೊಂಡು `ಯಾ ಖ್ವಾಜಾಮುಹಿಯುದ್ದೀನ್ ಈ ಬಿಡಾರದಲ್ಲಿ ಜೀವಿಸಿರುವವರು ಯಾರೂ ಇಲ್ಲವೇ' ಎಂದು ಜೋರಾಗಿ ಗೊಣಗಿದರು. ಅದನ್ನೂ ಎಲ್ಲರೂ ಕೇಳಿಸಿಕೊಳ್ಳದವರಂತೆ ನಟಿಸುತ್ತಿದ್ದರು. ಉಸ್ಮಾನ್ ರೈಟರ್ ಮೊದಲ ಹೆಂಡತಿಯ ಗಂಡು ಮಕ್ಕಳಾದ ಸೂಫಿ ಮತ್ತು ಇಬ್ರಾಹಿಂ ತೋಳಿಗೆ ಶಾಲೆಯ ಚೀಲ ಹಾಕಿ ಕೈಯಲ್ಲಿ ಮದರಸದ ಅರಬಿ ಪುಸ್ತಕ ಹಿಡಕೊಂಡು ಬಾಗಿಲ ಹಿಂದಿನಿಂದ ಚಪ್ಪಲಿಗಳನ್ನು ತೆಗೆದು ಕಾಲಿಗೆ ಹಾಕಿ ಮೆಟ್ಟಲಿಳಿದು ಮಾಯವಾದರು. ಎಂದೂ ಹಾಗೆ ಮಾಡದ ಹಾಜಿರಾ ಇಂದು ಬಟ್ಟೆಯಿಲ್ಲದೆ ಬೆತ್ತಲೆಯಾಗಿದ್ದ ಹಾರೂನನ್ನು ಹೆಗಲ ಮೇಲೆ ಕೂರಿಸಿ ಜುಲೈಕಾ ಎಂಬ ಮಾತನಾಡುವ ಗಿಳಿಯ ಪಂಜರದ ಬಳಿ ನಿಂತುಕೊಂಡು ಅವನ ಕೈಯ್ಯಿಂದ ಆ ಗಿಳಿಗೆ ಬಾಳೆಯಹಣ್ಣನ್ನು ತಿನ್ನಿಸುತ್ತಿದ್ದಳು. ಆ ಗಿಳಿಯೂ ಇಂದು ಸದ್ದಿಲ್ಲದೆ ಹಾರೂನನ ಕೈಯಲ್ಲಿದ್ದ ಬಾಳೆಹಣ್ಣಿನ ಚೂರನ್ನು ಪಂಜರದ ಸಂದಿನಿಂದ ಕೊಕ್ಕು ಹೊರಹಾಕಿ ತಿನ್ನುತ್ತಿತ್ತು.
ಒಳಗೆ ಹೊಗೆಯಲ್ಲಿ ಒಲೆಯ ಮುಂದೆ ಮಣೆಯಲ್ಲಿ ಕುಳಿತುಕೊಂಡು ಉಸ್ಮಾನ್ ರೈಟರ ಎರಡನೇ ಹೆಂಡತಿ ಆಯಿಶಾ ದುಂಡಗಿನ ಹಲಗೆಯ ಮೇಲೆ ಅಕ್ಕಿಯ ರೊಟ್ಟಿಯನ್ನು ತಟ್ಟಿ ಅಗಲ ಮಾಡಿ ಕಾದ ಹೆಂಚಿನ ಮೇಲೆ ಹಾಕುತ್ತಿದ್ದಳು. ಅವಳ ಮಡಿಲಲ್ಲಿದ್ದ ಮಗು ಶಕೀನಾ ಕಣ್ಣು ತೆರೆದುಕೊಂಡು ಎಲ್ಲವನ್ನೂ ನೋಡುತ್ತಾ ಅಲುಗುತ್ತಾ ಮಲಗಿಕೊಂಡಿತ್ತು. ಹಾಜಮ್ಮ ನಡುನಡುವೆ ಅಲ್ಲಿಂದ ಇಲ್ಲಿಂದ ಧಾವಿಸಿ ಬಂದು ಸುಟ್ಟ ರೊಟ್ಟಿಗಳನ್ನು ಕೆಂಡದ ಮೇಲಿಟ್ಟು ಹೊಕ್ಕುಳ ಬರಿಸಿ ಪೇರಿಸಿಡುತ್ತಿದ್ದರು. ಮಗ ಉಸ್ಮಾನ್ ರೈಟರು ಇದ್ದಿದ್ದರೆ ರೊಟ್ಟಿಗೆ ಹೊಕ್ಕುಳ ಬರುತ್ತಿದ್ದ ಹಾಗೆ ಅವರ ತಟ್ಟೆಗೆ ಒಂದೊಂದನ್ನಾಗಿ ಇಟ್ಟು, ಮಗ ತಿನ್ನುತ್ತಿದ್ದ ಹಾಗೆ ಅದನ್ನು ನೋಡಿ ತಾನೂ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಹಾಜಮ್ಮನಿಗೆ ಮುರುಗಾಮಲೆಗೆ ಹೋಗಿರುವ ಮಗ ಇನ್ನೂ ತಿರುಗಿ ತಲುಪುದಿರುವುದು ಯೋಚನೆಯಾಗಿತ್ತು.
ಅದನ್ನು ಮರೆಯಲು ಇನ್ನೊಂದು ಸುತ್ತು ಸುನ್ನತ್ ನಮಾಜ್ ಮಾಡಲು ಆಪೀಸು ರೂಮಿಗೆ ಹೋಗಬೇಕೆಂದುಕೊಂಡರೆ ಬಾಗಿಲ ಬಳಿ ಹಜಾರದಲ್ಲಿ ಮಿಠಾಯಿ ಪಾಪಾ ಬೆಳಬೆಳಿಗೆಯೇ ಅಂಗಡಿ ತೆರೆದುಕೊಂಡು ಕೂತಿತ್ತು. ಮಿಠಾಯಿಪಾಪಾನ ಬಾಯಿಗೆ ಸಿಲುಕಿದರೆ ದೊಡ್ಡ ಕತೆಯನ್ನೇ ಕೇಳಬೇಕಾಗುತ್ತದೆ ಎಂದು ಹೆದರಿ ಹಾಜಮ್ಮ ಅಡಿಗೆ ಕೋಣೆಯೊಳಗೇ ಸುಳಿದಾಡುತ್ತಾ ಆಗಾಗ ರೊಟ್ಟಿಯನ್ನು ಹೊಕ್ಕುಳ ಬರಿಸುತ್ತಾ ಅಲ್ಲೇ ಓಡಾಡುತ್ತಿದ್ದರು. ಹೊಗೆಯ ನಡುವಲ್ಲಿ ಕಣ್ಣಲ್ಲಿ ನೀರು ತುಂಬಿಕೊಂಡು ರೊಟ್ಟತಟ್ಟುತ್ತಾ ಹಂಚಿಗಿಡುತ್ತಿದ್ದ ಆಯಿಶಾಳಿಗೆ ಇದನ್ನೆಲ್ಲ ಕಂಡು ಯಾಕೆ ಯಾರಾದರೂ ಒಮ್ಮೆ ಹೋಗಿ ಮಿಠಾಯಿಪಾಪಾನನ್ನು ಮಾತನಾಡಿಸಿ ಏನಾದರೂ ಖರೀದಿಸಿ ಕಳಿಸಿಬಿಡಬಾರದು ಎನಿಸುತ್ತಿತ್ತು. ನಡುನಡುವಲ್ಲಿ ಸಣ್ಣಗೆ ನಗುವೂ ಬರುತ್ತಿತ್ತು.
ವಯಸ್ಸು ಕಾಲದಲ್ಲಿ ಗಂಡಸರಿಗೆ ಉಂಟಾಗುವ ಹುಚ್ಚು ಬುದ್ದಿಗಳನ್ನು ನೆನೆದುಕೊಂಡು ಆಯಿಶಾಳಿಗೆ ನಗುಬರುತ್ತಿತ್ತು. ಆಗಲೇ ಸ್ವರ್ಗದಲ್ಲಿ ಒಂದು ಕಾಲನ್ನು ಇಟ್ಟುಕೊಂಡು ಇನ್ನೊಂದು ಕಾಲಿನಲ್ಲಿ ಭೂಮಿಯ ಮೇಲೆ ನಡೆಯುತ್ತಿರುವ ಈ ಮಿಠಾಯಿಪಾಪಾ ಈ ಹೂವಿನಕೊಲ್ಲಿಗೆ ಪ್ರತಿ ಶನಿವಾರ ಬೆಳಿಗ್ಗೆ ಬರುವುದು ಮಿಠಾಯಿ ಮಾರಲು ಮಾತ್ರ ಅಲ್ಲ ಎಂಬುದನ್ನು ಉಸ್ಮಾನ್ ರೈಟರು ಕಳೆದ ಶನಿವಾರ ಮಧ್ಯಾಹ್ನ ಊಟಮಾಡಲು ಬಂದವರು ಮಲಗಿಕೊಂಡು ರೇಡಿಯೋದಲ್ಲಿ ವಾರ್ತೆ ಕೇಳುತ್ತಾ ನಡುನಡುವಲ್ಲಿ ಪಿಸುಗುಟ್ಟಿದ್ದರು. ಇದು ಯಾರಿಗೂ ಗೊತ್ತಾಗುವುದು ಬೇಡ ಎಂದು ಹೇಳಿದ್ದರು. ಆದರೆ ಆಯಿಶಾಳಿಗೆ ಅದರಲ್ಲಿ ಅಂತಹ ವಿಶೇಷವೇನೂ ಅನಿಸಿರಲಿಲ್ಲ. ಗಂಡಸರು ಎಷ್ಟು ವಯಸ್ಸಾದರೂ ಗಂಡಸರೇ ಎಂದು ಆಕೆ ಮನಸಿನಲ್ಲೇ ಅಂದು ಸುಮ್ಮನಾಗಿದ್ದಳು. ಆಮೇಲೆ `ಮರಿಯಮ್ಮನ ಮನಸ್ಸನ್ನು ಅರಿಯದೆ ನೀವು ಹೀಗೆ ತೋಟದ ಗಂಡಸರು ಸುದ್ದಿ ಹಬ್ಬಿಸುವುದು ಸರಿ ಅಲ್ಲ' ಎಂದು ಹೇಳಿದ್ದಳು. ಆದರೆ ಕಳೆದ ಶನಿವಾರ ಏನೋ ಇದೆ ಎಂದು ಆಯಿಶಾಳಿಗೂ ಅನ್ನಿಸಿತ್ತು. ಶನಿವಾರ ತನ್ನ ಮಿಠಾಯಿ ಅಂಗಡಿ ತೆರೆದುಕೊಂಡೇ ಕೂತಿದ್ದ ಮಿಠಾಯಿ ಪಾಪಾ ಸಂಜೆಯಾದರೂ ಮರಿಯಮ್ಮ ಆ ಕಡೆ ಸುಳಿಯದಿರುವುದನ್ನು ಕಂಡು ವ್ಯಾಕುಲಗೊಂಡು ರಾತ್ರಿ ರಾಟೆಮನೆಯಿಂದ ಉಸ್ಮಾನ್ ರೈಟರು ಲಾರಿಯಲ್ಲಿ ಕಾಫಿ ಹತ್ತಿಸಿ ಮಂಗಳೂರಿಗೆ ಕಳಿಸಿ ಬರುವವರೆಗೂ ಕಾದು ಆ ಕತ್ತಲೆಯಲ್ಲಿಯೇ ತನ್ನ ಮನಸಿನಲ್ಲಿರುವುದನ್ನು ರೈಟರ ಮುಂದೆ ತೆರೆದಿಟ್ಟಿದ್ದರು.
ರೈಟರು ಮಿಠಾಯಿ ಪಾಪಾನನ್ನು ಅಲ್ಲಿಂದ ಓಡಿಸಿಬಿಟ್ಟರು. ಡ್ರೈವರ್ ಹಂಸಕಾಕಾ ತೀರಿಹೋಗಿ ಒಂದುವರ್ಷವೂ ಆಗದಿರುವಾಗ ಇಂತಹ ಮನಸ್ಸು ಹೇಗೆ ಬಂತೆಂದು ಕೇಳಿದ್ದರು. ಅದೂ ಅಲ್ಲದೆ ಹೂವಿನಕೊಲ್ಲಿಯ ಒಳಗೆ ಮಯರ್ಾದೆಯಿಂದ ಬೆನೆ ಬಂದು ಬದುಕುತ್ತಿರುವ ಅನಾಥ ಹೆಂಗಸೊಂದನ್ನು ಬೀದಿಯಲ್ಲಿ ಮಿಠಾಯಿಮಾರುವ ಫಕೀರನೊಬ್ಬನಿಗೆ ಕೊಡುವ ಅಗತ್ಯವಿಲ್ಲವೆಂದೂ ಇನ್ನು ಮುಂದೆ ಮಿಠಾಯಿಪಾಪಾ ಹೂವಿನಕೊಲ್ಲಿಯ ಬೇಲಿಯ ಒಳಗೆ ಕಾಣಿಸಿಕೊಳ್ಳಬಾರದೆಂದೂ ತಾಕೀತು ಮಾಡಿದ್ದರು.
ಆದರೆ ಈಗ ನೋಡಿದರೆ ಕಾವಲುಗಾರ ಕುಂಞಿಕಣ್ಣನ ಪೊರೆಬಂದ ಕಣ್ಣುಗಳಿಂದ ತಪ್ಪಿಸಿ ಅದು ಹೇಗೋ ಬೆಳಿಗ್ಗೆಯೇ ಕಿತ್ತಳೆ ಹಣ್ಣುಗಳನ್ನು ಕಿತ್ತು ತಿಂದು ಮಿಠಾಯಿಪಾಪಾ ಕಣ್ಣುಗಳನ್ನು ಅಗಲಮಾಡಿ ಮರಿಯಮ್ಮ ಬರುವಳೇ ಎಂದು ಕಾದು ಕುಳಿತಿದ್ದರು. ಸಂತೆಗೆ ಹೋಗುವ ದಾರಿ ರೈಟರ ಬಿಡಾರದ ಮುಂದೆಯೇ ಹಾದು ಹೋಗುವುದರಿಂದ ಮರಿಯಮ್ಮ ಅದೇ ದಾರಿಯಲ್ಲಿ ಬರುವಳೆಂದು ಮಿಠಾಯಿಪಾಪಾ ರೈಟರ ಮನೆಯ ಹಜಾರದಲ್ಲಿ ಅಂಗಡಿ ತೆರೆದು ಕೂತಿದ್ದರು. ಮುದುಕ ಬೆಳಬೆಳಿಗ್ಗೆಯೇ ಆ ಆಸೆಯಿಂದ ಕೂತಿರುವುದನ್ನು ಕಂಡು ಆಯಿಶಾಳಿಗೂ ಸಣ್ಣಗೆ ನಗುಬರುತ್ತಿತ್ತು. ಇದೆಲ್ಲವನ್ನೂ ಹೇಗೋ ಸಣ್ಣಗೆ ಅರಿತಿದ್ದ ಹಾಜಿರಾ ಶಾಲೆಗೂ ಹೋಗದೆ, ಮದರಸಕ್ಕೂ ಹೋಗದೆ, ಹಾರೂನನನ್ನು ಹೆಗಲಮೇಲೆ ಕೂರಿಸಿ, ಈವತ್ತು ಏನಾಗುವುದೋ ಎಂದು ಕಾಯುತ್ತಾ, ಗಿಳಿಗೆ ಬಾಳೆಯಹಣ್ಣು ತಿನ್ನಿಸಿ, ನೀರುಕುಡಿಸಿ, ಹೊಸಮಾತುಗಳನ್ನು ಕಲಿಸಿ ಅಲ್ಲೇ ಅಡ್ಡಾಡುತ್ತಿದ್ದಳು.
ಅಷ್ಟು ಹೊತ್ತಿಗೆ ಹಾಲುಕರೆಯುವ ನಂಬಿಯಾರರು ಚೊಂಬಲ್ಲಿ ನೊರೆ ಹಾಲು ತುಂಬಿಸಿಕೊಂಡು ಬಂದು, `ಹೋ ಮಿಠಾಯಿಯ ಮುದುಕ ಬಂದು ಅಂಗಡಿ ತೆರೆದಾಯಿತಾ' ಎಂದು ಉದ್ಗರಿಸಿದರು. ಹಾಲಿನ ಚೊಂಬು ಹಾಜಿರಾಳ ಕೈಗೆ ಇತ್ತು, ಹಾರೂನನ ಕೆನ್ನೆ ಸವರಿ, ತಾನೂ ಚಾ ಗಾಗಿ ಕಾಯುತ್ತಾ, ಪೇರಲೆಯ ಅಡಿಯಲ್ಲಿ ಕುಂಞಿಕಣ್ಣನ ಪಕ್ಕದಲ್ಲಿ ಕುಳಿತುಕೊಂಡರು.
ಹಾಲು ಕರೆದು ಮುಗಿಸಿದ ಹಸುಗಳನ್ನೂ, ಆಡುಗಳನ್ನೂ, ಎಮ್ಮೆ ಕೋಣಗಳನ್ನೂ ಬಂಗಲೆಯ ಕಡೆಯಿಂದ ಕಾಲುದಾರಿಯಲ್ಲಿ ನಡೆಸುತ್ತಾ ಬಂದ ಮುದಾರ ಅವುಗಳನ್ನು ಹುಲ್ಲು ಬಾಣೆಯ ಕಡೆಗೆ ಕಳಿಸಿ ತಾನೂ ದೂರದಲ್ಲಿ ಚಾ ಗೆ ಕಾಯುತ್ತಾ ಚಾ ದ ಲೋಟ ಹಿಡಕೊಂಡು ಕುಳಿತನು. ಅವರು ಮೂವರೂ ಕಣ್ಣಲ್ಲೇ ಸನ್ನೆಮಾಡಿಕೊಂಡು ಮಿಠಾಯಿಪಾಪಾನ ಹುಚ್ಟಿನ ಕುರಿತು ಕಣ್ಣಲ್ಲೇ ಮಾತನಾಡಿಕೊಂಡು ಪೇರಲೆಯ ಬುಡದಲ್ಲಿ ಬಿಸಿಲು ಕಾಯಿಸುತ್ತಾ ಕುಳಿತಿದ್ದರು. ಹಾಜಿರಾ ಲೋಟದಲ್ಲಿ ಕಪ್ಪು ಚಾ ತಂದು ನಂಬಿಯಾರರ ಕೈಗಿಟ್ಟು, ಇನ್ನೊಂದು ಲೋಟದಲ್ಲಿದ್ದ ಚಾ ವನ್ನು ಮುದಾರನ ಲೋಟಕ್ಕೆ ಸುರಿದು, ಹಾರೂನನ್ನು ಸೊಂಟಕ್ಕೆ ಸಿಗಿಸಿಕೊಂಡು ಪುನಃ ಗಿಳಿಯ ಕಡೆಗೆ ಹೋಗಿದ್ದಳು.
ಅಷ್ಟರಲ್ಲಿ ಮೇಲಿನ ಹಾಡಿಯ ಕಡೆಯಿಂದ ನೀರು ಸೇದುವ ಸೈದಾಲಿ ಎಂಬ ಕಪ್ಪುಹುಡುಗ ಕಾಲುದಾರಿಯಲ್ಲಿ ಜಿಗಿಯುತ್ತಾ ಬಂದನು. ಅವನು ಹಿಂದಿನ ಬಾಗಿಲಿನಿಂದ ಬಚ್ಚಲು ಮನೆಗೆ ನುಗ್ಗಿ ಎರಡೂ ಕೈಗಳಲ್ಲಿ ಎರಡು ಚೊಂಬಿನ ಖಾಲಿ ಕೊಡಪಾನಳನ್ನು ಹಿಡಕೊಂಡು ಹೊರಬಂದು, ಜಿಗಿಯುತ್ತಾ ಮೆಟ್ಟಿಲು ಇಳಿದು, ಕೆಳಗೆ ಸಾರುಬಾಳೆಯ ತೋಟದ ನಡುವೆ ಇದ್ದ ಬಾವಿಯ ಕಡೆಗೆ ಓಡುತ್ತಾ ಹೋದ. ಅವನು ಬಂದುದನ್ನು ತನ್ನ ಕಡೆಗಣ್ಣಿನಲ್ಲೇ ಕಂಡ ಹಾಜಿರಾ ಬಚ್ಚಲು ಮನೆಗೆ ನುಗ್ಗಿದ್ದಳು. ಖಾಲಿ ಕೊಡಪಾನವೊಂದನ್ನು ಕೈಯಲ್ಲಿ ಹಿಡಿದು ಇನ್ನೊಂದು ಕೈಯಲ್ಲಿ ಹಾರೂನನ ಕೈಬೆರಳುಗಳನ್ನು ಹಿಡಿದುಕೊಂಡು ಅವನನ್ನು ಮೆಲ್ಲಗೆ ಮೆಟ್ಟಿಲು ಇಳಿಸಿ ನಡೆಸುತ್ತಾ ತಾನೂ ಬಾವಿಗೆ ಹೋಗುವ ದಾರಿಯ ಇಳಿಜಾರಿನಲ್ಲಿ ಮರೆಯಾಗಿದ್ದಳು.
ಅವಳಿಗೆ ಬಾಳೆಯ ತೋಟದ ನಡುವೆ ಬಾವಿಯ ರಾಟೆಗೆ ಹಗ್ಗ ಹಾಕಿಕೊಂಡು ಕೊಡಪಾನ ಬಾವಿಗಿಳಿಸುತ್ತಿದ್ದ ಸೈದಾಲಿಯ ಮುಖ ಅಲ್ಲಿಂದಲೇ ಕಾಣಿಸುತ್ತಿತ್ತು. ಸೈದಾಲಿ ನೀರು ಸೇದುವುದನ್ನು ಅರಿತ ತೋಟದ ಬಾಯಿಬಾರದ ಒಂದೆರೆಡು ನಾಕಾಲಿಗಳು ಆಗಲೇ ಬಾವಿಯ ಪಕ್ಕದ ನೀರಿನ ತೊಟ್ಟಿಯ ಸುತ್ತ ತಲೆ ಅಲ್ಲಾಡಿಸಿ ಸದ್ದು ಮಾಡುತ್ತಾ ನಿಂತವು. ಅವುಗಳ ದೇಹದ ವಾಸನೆ ಗಾಳಿಯಲ್ಲಿ ಅಡರಿಬಂದು ಹಾರೂನ್ ಮುಖ ಸಿಂಡರಿಸಿಕೊಂಡು ಮೂಗಿನ ಹೊಳ್ಳೆಗಳನ್ನು ಕಿರಿದುಗೊಳಿಸಿ ಮೆಟ್ಟಿಲುಗಳನ್ನು ಇಳಿಯುತ್ತಿದ್ದ.
'ಏ ಮುದುಕಾ, ನಿನ್ನ ಅಂಗಡಿ ಇನ್ನೂ ಮುಗಿದಿಲ್ಲವಾ. ಹೋಗಿ ಸಂತೆಯಲ್ಲಿ ಅಂಗಡಿ ಹಾಕು ನನಗೆ ಸುನ್ನತ್ ನಮಾಜು ಮಾಡಲು ದಾರಿ ಬಿಡು' ಎಂದು ಕೂಗಿ ಹಾಜಮ್ಮ ಮಿಠಾಯಿ ಪಾಪಾ ಅಲ್ಲಿಂದ ಏಳುವುದನ್ನೂ ಕಾಯದೆ ಬಿಳಿಯ ಕಮೀಸು ದರಿಸಿಕೊಂಡು ಆಪೀಸು ರೂಮಿಗೆ ಹೊಕ್ಕು ಬಾಗಿಲು ಹಾಕಿಕೊಂಡಿದ್ದರು. ಅವರು ಬಾಗಿಲು ಹಾಕಿಕೊಂಡೊಡನೆ ಕೈಯಲ್ಲಿ ಚಹಾದ ಲೋಟ ಹಿಡಕೊಂಡು ಬಂದ ಆಯಿಶಾ ಅದನ್ನು ಮಿಠಾಯಿಪಾಪಾನ ಮುಂದಿಟ್ಟು `ಮರಿಯಾ ಈ ದಾರಿಯಲ್ಲಿ ಬರುವುದಿಲ್ಲ ನೀವು ಸುಮ್ಮನೆ ಹೋಗಿ' ಎಂದು ಮೆಲ್ಲಗೆ ಗದರಿದ್ದಳು. ಹಾರೂನನ ಹರ್ನಿಯಾ ಕಾಯಿಲೆಗೆ ಕಸ್ತೂರಿ ಮಾತ್ರೆಗಳನ್ನು ಮಿಠಾಯಿ ಪಾಪಾನ ಕೈಯಿಂದ ಇಸಕೊಂಡು ಅವರ ಚೀಲಕ್ಕೆ ಚಿಲ್ಲರೆ ಕಾಸು ಸುರಿದು ತಾನೂ ಅಡಿಗೆ ಕೋಗೆಯ ಕತ್ತಲಲ್ಲಿ ಮರೆಯಾಗಿದ್ದಳು.
ಇನ್ನೇನು ಮಾಡುವುದು ಎಂದು ಅರಿಯದ ಮಿಠಾಯಿಪಾಪಾ ತಮ್ಮ ಜೋಳಿಗೆಯನ್ನು ಎತ್ತಿಕೊಂಡು, ಎದ್ದು ನಿಂತು, ಹೆಗಲಿಗೆ ಹಾಕಿ ಕೈ ಬೆರಳುಗಳ ನಟಿಕೆಯನ್ನು ಮುರಿದು ಸದ್ದು ಮಾಡಿ ಎಲ್ಲರಿಗೆ ಕೇಳಿಸಿ ತಮ್ಮ ಹತ್ತೂ ಬೆರಳುಗಳ ಹರಳು ಉಂಗುರಗಳನ್ನು ಎಲ್ಲರಿಗೂ ತೋರಿಸಿ ಮೆಟ್ಟಿಲು ಇಳಿದು ದೊಡ್ಡ ಗೇಟಿನ ಕಾಲುದಾರಿಯಲ್ಲಿ ತೂರಾಡುತ್ತಾ ನಡೆಯ ತೊಡಗಿದರು ಅವರ ಮುಖದಲ್ಲಿದ್ದ ವೇದನೆಯನ್ನು ಗಮನಿಸದಂತೆ ಪೇರಲೆಯ ಅಡಿಯಿಂದ ಎದ್ದು ನಿಂತ ಕಾವಲುಗಾರ ಕುಂಞಿಕಣ್ಣ, 'ಇಲ್ಲೇ ಇರಿ ನಂಬಿಯಾರೇ, ನಾನು ಈ ಮುದುಕನ ಹಿಂದೆ ಗೇಟಿನವರೆಗೆ ಹೋಗಿ ಬರುತ್ತೇನೆ' ಎಂದು ನಡೆಯತೊಡಿಗಿದನು.
`ಬನ್ನಿ ನಂಬಿಯಾರೇ ಇನ್ನು ಇಲ್ಲಿ ಏನು ಮಾಡುವುದು. ತೋಡಿನಿಂದ ಸೀಗಡಿಯಾದರೂ ಹಿಡಿಯೋಣ' ಎಂದು ಮುದಾರನೂ ಎದ್ದುನಿಂತು ನಂಬಿಯಾರರು ತಮ್ಮ ನೋವಿನ ಕಾಲುಗಳನ್ನು ನೀವಿ ಸರಿಪಡಿಸಿಕೊಂಡು ತಾವೂ ಎದ್ದು ಮೆಟ್ಟಿಲು ಇಳಿದು ಏಲಕ್ಕಿ ಕಾಡಿನ ಕಡೆಗೆ ನಡೆಯತೊಡಗಿದ್ದರು. ಕೆಳಗಿನಿಂದ ಬಾವಿಯ ಕಡೆಯಿಂದ ತಲೆಯಲ್ಲೊಂದು ಕೊಡಪಾನ ಹೊತ್ತು, ಕೈಯಲ್ಲಿ ಒಂದನ್ನು ಎತ್ತಿ ಮುಖದ ಮೇಲೆಲ್ಲಾ ನೀರು ಚಿಮ್ಮಿಸಿಕೊಂಡು ನೀರು ಸೇದುವ ಸೈದಾಲಿ ನಡೆದು ಬರುತ್ತಿದ್ದ. ಅವನ ಹಿಂದೆ ಸೊಂಟದಲ್ಲಿ ಕೊಡಪಾನ ಸಿಲುಕಿಸಿ ಹಾಜಿರಾ ಮೆಟ್ಟಲು ಏರುತ್ತಿದ್ದಳು. ನಂಬಿಯಾರರೂ ಮುದಾರನೂ ಅವರಿಬ್ಬರಿಗೆ ದಾರಿ ಸರಿದು ಕೊಟ್ಟು ಮತ್ತೆ ಕೆಳಗಿಳಿಯತೊಡಗಿದ್ದರು.
ಸ್ವಲ್ಪ ಹೊತ್ತಲ್ಲಿ ರಾಟೆ ಮನೆಯ ಕಡೆಯಿಂದ ದೂಮಣ್ಣ ದೂಮಕ್ಕರ ಹೆಣ್ಣು ಮಕ್ಕಳಾದ ಶಾಂತಿ ಮತ್ತು ಸೇವಂತಿ ಕೈಯಲ್ಲಿ ಪುಟ್ಟ ಬಕೆಟ್ಟುಗಳನ್ನು ಹಿಡಿದು ಬಂದು ರೈಟರ ಬಿಡಾರದ ಹಿಂದಿನ ಮಣ್ಣಿನ ಬರೆಯಿಂದ ಬಿಳಿಯ ರಂಗೋಲಿಯ ಪುಡಿಯನ್ನು ಕೆರೆದು ತೆಗೆದು ಬಕೆಟ್ಟಿಗೆ ತುಂಬಿಸಿಕೊಳ್ಳ ತೊಡಗಿದ್ದರು. ಅವರಿಬ್ಬರು ಹೀಗೆ ಆಗಾಗ ಬಿಳಿಯ ರಂಗೋಲಿಯ ಪುಡಿಯನ್ನು ಕೆರೆದು ತೆಗೆದು ತೆಗೆದು ಮಣ್ಣಿನ ಬರೆಯಲ್ಲಿ ದೊಡ್ಡ ಮೂಟೆಯೇ ಉಂಟಾಗಿತ್ತು. ಮಣ್ಣಿನ ಬರೆಯನ್ನು ಹಬ್ಬಿಕೊಂಡು ಬೆಳೆದಿದ್ದ ಕಾಡು ಹುಲ್ಲು ಬಳ್ಳಿಗಳು ನಾನಾ ಬಣ್ಣದ ಹೂಗಳನ್ನು ಮೈತುಂಬಾ ಬಿಟ್ಟು ಮೇಲಕ್ಕೆ ಹಬ್ಬಿ ಹೋಗಿತ್ತು. ಆ ಹೂ ಬಳ್ಳಿಗಳ ನಡುವೆ ಬಿಳಿ ರಂಗೋಲಿ ಪುಡಿಯ ದೊಡ್ಡ ರಂಧ್ರ ಅವರಿಬ್ಬರ ಕೈಗಳಿಗೆ ಸಿಲುಕಿ ಕಾಲ ಕಳೆದಂತೆ ಆ ರಂಧ್ರ ಆಳ ಅಗಲವಾಗಿ ಅದರೊಳಗೆ ಮಕ್ಕಳು ಅಡಗಿ ಕುಳಿತು ಆಟವಾಡುವಷ್ಟು ದೊಡ್ಡದಾಗಿ ಹೋಗಿತ್ತು. ಆದರೂ ಶಾಂತಿ ಮತ್ತು ಸೇವಂತಿ ಉಸ್ಮಾನ್ ರೈಟರಿಲ್ಲದಿರುವಾಗ ಬಂದು ಆದಷ್ಟು ಪುಡಿಯನ್ನು ಕೆರೆದು ತುಂಬಿಸಿಕೊಂಡು ಹೋಗುತ್ತಿದ್ದರು. ಕೆಲವೊಮ್ಮೆ ಅವರಿಬ್ಬರ ಜೊತೆ ಸೇರಿಕೊಳ್ಳುತ್ತಿದ್ದ ಹಾಜಿರಾ ಒಂದಿಷ್ಟು ಬಿಳಿಯ ಪುಡಿಯನ್ನು ಕೆರೆದು ತೆಗೆದಿಟ್ಟುಕೊಂಡು ಬಾಪಾ ಇಲ್ಲದಿರುವಾಗ ತಾನೂ ಬಿಡಾರದ ಅಂಗಳದ ಮಣ್ಣಲ್ಲಿ ಗೆರೆಗಳನ್ನು ಬಿಡಿಸಲು ನೋಡುತ್ತಿದ್ದಳು.
ನೀರು ಸೇದುವ ಸೈದಾಲಿ ಬರೆಯಿಂದ ಬಿಳಿಯ ಪುಡಿಯನ್ನು ಕೆರೆದು ತೆಗೆಯ ಬಾರದೆಂದು ಅವಳಿಗೆ ಆಗಾಗ ಹೆದರಿಸುತ್ತಿದ್ದ. ದೊಡ್ಡ ಸಾಹುಕಾರರಿಗೆ ತೋಟ ಮಾರಿಹೋಗಿದ್ದ ಬಿಳಿಯ ದೊರೆ ತನ್ನ ಕುದುರೆ ತೀರಿ ಹೋದಾಗ ಅಲ್ಲಿ ಗುಂಡಿ ತೆಗೆದು ಹೂತು ಹಾಕಿರುವನೆಂದೂ, ಆ ಕುದುರೆಯ ಮೂಳೆಗಳು ಬಿಳಿಯ ಪುಡಿಯಾಗಿ ಬರುತ್ತಿದೆಯೆಂದೂ, ಇನ್ನೂ ಕೆರೆದರೆ ಇನ್ನೂ ಏನೇನೋ ಸಿಗಬಹುದೆಂದೂ ಆತ ಹೆದರಿಸುತ್ತಿದ್ದ. ನೀರು ಸೇದಲು ತನ್ನೊಡನೆ ಬರುತ್ತಿದ್ದ ಹಾಜಿರಾ ರಂಗೋಲಿಯ ಪುಡಿಯನ್ನು ಕೆರೆದು ತೆಗೆಯುವುದನ್ನು ಆತ ಇಷ್ಟ ಪಡುತ್ತಿರಲಿಲ್ಲ. ಅದೂ ಅಲ್ಲದೆ ಆತನ ಎಲ್ಲ ವಿಷಯಗಳನ್ನೂ ಶಾಂತಿ ಮತ್ತು ಸೇವಂತಿ ಹಾಜಿರಾಳ ಬಳಿ ಹೇಳಿಬಿಡಬಹುದೆಂದೂ ಆತ ಹೆದರಿದ್ದ.
ಇಂದು ಯಾಕೋ ಹಾಜಿರಾ ಶಾಂತಿ ಮತ್ತು ಸೇವಂತಿಯರ ಜೊತೆ ಸೇರಿಕೊಳ್ಳದೆ ಸೈದಾಲಿಯ ಜೊತೆ ಲಗುಬಗೆಯಲ್ಲಿ ನೀರು ತುಂಬಿಸುತ್ತಿದ್ದಳು. ಅಡುಗೆ ಮನೆಯ ಹಿತ್ತಾಳೆಯ ಹಂಡೆಗಳನ್ನು ತುಂಬಿಸಿ, ಬಚ್ಚಲುಮನೆಯ ಉರಿ ಹಂಡೆಯನ್ನು ತುಂಬಿಸಿ, ಬಟ್ಟೆ ಒಗೆಯುವ ತೊಟ್ಟಿಯನ್ನು ತುಂಬಿಸಿ ಎಲ್ಲವೂ ತುಂಬಿದ ಮೇಲೆ ತುಂಬಿದ ಕೊಡಗಳನ್ನು ಹಿತ್ತಲಲ್ಲಿ ಇರಿಸಿದ್ದಳು.
ಅಷ್ಟರಲ್ಲಿ ಇದ್ದಕ್ಕಿದ್ದಂತೆ ಹಾಜಮ್ಮ 'ಏ ಹಾಜಿರಾ, ಹಾರೂನ್ ಎಲ್ಲಿ' ಎಂದು ಕೂಗಿಕೊಂಡಿದ್ದರು.
ಹಾಜಮ್ಮ ಹಾಗೆ ಕೂಗಿಕೊಂಡಾಗ ಹೂವಿನಕೊಲ್ಲಿಯ ರಾತ್ರಿಕಾವಲುಗಾರ ಮೂಸಕಾಕ ಅಲ್ಲಿದ್ದರು. ಅವರು ಮರಣದ ಹಾಸಿಗೆಯಲ್ಲಿ ಮಲಗಿದ್ದ ತನ್ನ ಹೆಂಡತಿ ಕುಂಞಿಪಾತುಮ್ಮಳ ಉಸಿರಾಟದ ತೊಂದರೆಗೆ ತೇದುಕೊಡಲು ಕಸ್ತೂರಿ ಮಾತ್ರೆಯೇನಾದರೂ ಸಿಗುವುದೋ ಎಂದು ಕೇಳಿಕೊಂಡು ಬಂದಿದ್ದರು. ಹಾಗೆ ಕೇಳಿಕೊಂಡು ಬಂದವರು ಕಸ್ತೂರಿ ಮಾತ್ರೆ ತರಲು ಹೋದ ಆಯಿಶಾ ಹೊರಬರುವುದನ್ನೇ ಕಾಯುತ್ತ ಜುಲೈಕಾ ಎಂಬ ಗಿಳಿಯೊಡನೆ ಮಾತನಾಡುತ್ತಾ ನಿಂತಿದ್ದರು. ಜುಲೈಕಾ ಎಂದೂ ಇಲ್ಲದಂತೆ ಇಂದು ಅವರ ಬಳಿ ಮಾತನಾಡುತ್ತಿತ್ತು. ಮೂಸಕಾಕಾ ಗಿಳಿಯ ಮಾತುಗಳನ್ನು ಕೇಳುತ್ತಾ ತಮ್ಮ ನೋವೆಲ್ಲವನ್ನೂ ಮರೆತು `ನೋಡು ಬೆಕ್ಕು ನಿನ್ನನ್ನು ತಿನ್ನುತ್ತದೆ ನೋಡು ಬೆಕ್ಕು ನಿನ್ನನ್ನು ತಿನ್ನುತ್ತದೆ' ಎಂದು ತಮಾಷೆಗೆ ಅದನ್ನು ಹೆದರಿಸುತ್ತಾ ನಿಂತಿರುವಂತೆ 'ಏ ಹಾಜಿರಾ ಹಾರೂನ್ ಎಲ್ಲಿ' ಎಂದು ಹಾಜಮ್ಮ ಕೂಗಿಕೊಂಡಿದ್ದರು.
ಆ ಮಾತನ್ನು ಕೇಳುತ್ತಿದ್ದಂತೆ ನೀರು ಸೇದುವ ಸೈದಾಲಿ ಅದೆಲ್ಲಿಂದಲೋ ಜಿಗಿದುಹಾರಿ ಬಾಳೆಯ ತೋಟದ ನಡುವಿನ ಬಾವಿಯ ಕಡೆಗೆ ಓಡಿಹೋಗಿದ್ದ. ಮೂಸಕಾಕಾ 'ಯಾ ಪಡೆದವನೇ' ಎಂದು ದೊಡ್ಡಗೇಟಿನ ಕಡೆಗೆ ಹೋಗುವ ಕಾಲುದಾರಿಯಲ್ಲಿ ಓಡತೋಡಗಿದ್ದರು. ಆಯಿಶಾ ತೋಳಲ್ಲಿದ್ದ ಮಗುವನ್ನು ಬಟ್ಟೆಯ ತೊಟ್ಟಿಲಿನಲ್ಲಿ ಮಲಗಿಸಿ ಮನೆಯೊಳಗಿನ ಕತ್ತಲೆಯಲ್ಲಿ ಮಂಚದ ಅಡಿಯಲ್ಲಿ ಬಾಗಲಿನ ಸಂಧಿಯಲ್ಲಿ ಹುಡುಕತೊಡಗಿದ್ದಳು.
ಹಾಜಮ್ಮ ಏನೋ ನೆನಪಾದವರಂತೆ ತಾವೆಲ್ಲಾದರೂ ಮರೆವಿನಲ್ಲಿ ಹಾರೂನನ್ನು ಹಾಸುಗೆಯ ನಡುವೆಯೋ ಚಾಪೆಯ ಒಳಗೆಯೋ ಸೀರೆಗಳ ಗಂಟಿನಲ್ಲೋ ಮಡಚಿಬಿಟ್ಟಿರುವೆನೋ ಪಡೆದವನೇ ಎಂದು ಎಲ್ಲವನ್ನೂ ಬಿಡಿಸಲು ತೊಡಗಿದರು.
ಹಾಜಿರಾ ತಾನೂ ಬಾವಿಯ ಕಡೆಗೆ ಓಡಲು ತೊಡಗಿದ್ದಳು. ಅಲ್ಲಿ ಇಲ್ಲ ಎನ್ನುವಂತೆ ಸೈದಾಲಿ ಮೆಟ್ಟಲು ಹತ್ತಿ ರಾಟೆ ಮನೆಯ ದಾರಿಯಲ್ಲಿ ಓಡುತ್ತಿದ್ದ. ಶಾಂತಿ ಮತ್ತು ಸೇವಂತಿ, `ಅಯ್ಯೋ ದೇವರೇ ಮಗುವೇನಾದರೂ ಟಾರುರೋಡಿಗೆ ತಲುಪಿ ಬಸ್ಸು ಕಾರುಗಳ ನಡುವಲ್ಲಿ ಸಿಲುಕಿರುವನೋ' ಎಂದು ಹಾಜಿರಾಳ ಹಿಂದೆ ಗದ್ದೆಯ ಬದುವಿನಲ್ಲಿ ಓಡುತ್ತಾ ದನಕಾಯುವ ಮುದಾರನೂ ಅವರ ಹಿಂದೆ ಸೇರಿದ್ದ. ತೊರೆಯ ಕೆಸರಲ್ಲಿ ಕಾಲು ಸಿಕ್ಕಿಹಾಕಿಸಿ ಕುಳಿತಿದ್ದ ಹಾಲು ಕರೆಯುವ ನಂಬಿಯಾರೂ ಕಷ್ಟಪಟ್ಟು ಎದ್ದುಕುಳಿತು ತಮ್ಮ ಪಂಚೆಯನ್ನು ಸರಿಪಡಿಸಿಕೊಂಡು `ಹೇ ಗುರುವಾಯೂರಪ್ಪಾ' ಎಂದು ನಡೆಯಲು ತೊಡಗಿದರು.
ಇಳಿ ಮಧ್ಯಾಹ್ನದ ಸೂರ್ಯ ಅವರೆಲ್ಲರ ಮೇಲೆ ಬೆಳಕು ಚೆಲ್ಲುತ್ತಿದ್ದ. ಬೇಲಿಯ ಬದಿಯಲ್ಲಿದ್ದ ದೊಡ್ಡ ಕಾಡುಮಾವಿನಮರದ ನೆರಳು ಹತ್ತಿರ ಹತ್ತಿರವಾಗುತ್ತಿತ್ತು. ಗದ್ದೆ ಕಳೆದು, ತೊರೆಯ ಮೇಲಿನ ಅಡಿಕೆಯ ಪಾಲ ಕಳೆದು, ಬರೆಹತ್ತಿ, ಕಾಪಿಗಿಡಗಳ ನಡುವೆ ಅವರು ಹಾರೂನನ ಹೆಸರು ಹಿಡಿದು ಕೂಗುತ್ತಾ, ಕಾಪಿಗಿಡಗಳ ಅಡಿಯಲ್ಲಿ,ಕಿತ್ತಳೆಮರಗಳ ಕೆಳಗೆ ಹುಡುಕುತ್ತಾ ನಡೆದು ಬರುತ್ತಿದ್ದರೆ ಎದುರಲ್ಲಿ ಹೂವಿನಕೊಲ್ಲಿಯ ಆ ದೊಡ್ಡ ಕಾಡುಮಾವಿನ ಅಡಿಯ ಹಲಗೆಯ ಗೇಟನ್ನು ಸೇರಿಸಿ ಉಸ್ಮಾನ್ ರೈಟರು ನಡೆದು ಬರುತ್ತಿದ್ದರು. ಅವರ ಹೆಗಲಮೇಲೆ ಎರಡೂ ಕಡೆ ಕಾಲುಗಳನ್ನು ಹಾಕಿಕೊಂಡು, ಬಟ್ಟೆಯಿಲ್ಲದೆ ಬೆತ್ತಲೆಯಾಗಿ ಕೂತುಕೊಂಡು, ಕೈಯಲ್ಲಿ ಖರ್ಜೂರದ ಪೊಟ್ಟಣವನ್ನು ಹಿಡಿದುಕೊಂಡು ರಾಜಕುಮಾರನಂತೆ ಹಾರೂನ್ ಅಲ್ಲಾಡುತ್ತಾ ಬರುತ್ತಿದ್ದ.





Post new comment