ಕಾಣೆಯಾದ ಹಾರೂನನು ತನ್ನ ಬಾಪಾ ಉಸ್ಮಾನ್ ರೈಟರ ಹೆಗಲ ಮೇಲೆ ರಾಜಕುಮಾರನಂತೆ ಕಾಲಾಡಿಸಿಕೊಂಡು ಬರುತ್ತಿರುವನು ಎಂಬ ಅರಿವಿಲ್ಲದೆ ಅಕ್ಕ ಹಾಜಿರಾ ಅವನನ್ನು ಹುಡುಕುತ್ತಾ ನೀರು ಸೇದುವ ಸೈದಾಲಿಯ ಹಿಂದೆ ನಡೆಯುತ್ತಿದ್ದಳು. ಹೂವಿನ ಕೊಲ್ಲಿಯ ಬಂಗಲೆಯ ಕಡೆಯಿಂದ ಬರುವ ಕಾಲುದಾರಿ, ಮೇಲಿನ ಪಾಡಿಯಿಂದ ಬರುವ ಕಾಲುಹಾದಿ, ರಾಟೆಮನೆಯಿಂದ ಬರುವ ದಾರಿ ಈ ಮೂರು ದಾರಿಗಳು ಸೇರುವ ಕೂಡುದಾರಿಯ ನಡುವೆ ಬೋರರ್ ಬಂದ ಕಾಪಿಯ ಬೊಡ್ಡೆಗಳಿಗೆ ಬೆಂಕಿ ಹಾಕಿಕೊಂಡು ಉರಿಸುತ್ತಾ, ಉರಿಯುವ ಬೆಂಕಿಗೆ ನೀರು ಹಾಯಿಸಿ ಕೆಡಿಸುತ್ತಾ ಇದ್ದಿಲು ಮಾಡುವ ಸಿಲೋನ್ ಅಣ್ಣಾಚಿ ಮುಖ ಗಂಟುಮಾಡಿಕೊಂಡು ಬೆಂಕಿಯ ಸುತ್ತ ಓಡಾಡುತ್ತಿದ್ದ.
ಹೂವಿನ ಕೊಲ್ಲಿಯ ಸಕಲ ಜೀವ ವ್ಯಾಪಾರಗಳಿಗೂ ಮತ್ತು ತನಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಮುಖಗಂಟು ಮಾಡಿಕೊಂಡು ಬದುಕುತ್ತಿದ್ದ ಸಿಲೋನ್ ಅಣ್ಣಾಚಿ ಇದ್ದಿಲು ಗುಡ್ಡೆಯ ಬೂದಿರಾಶಿಯ ಪಕ್ಕದಲ್ಲಿ ಗೋಣಿ ತಡಿಕೆಯ ಗುಡಿಸಲು ಹಾಕಿಕೊಂಡು ಒಂದೆರೆಡು ಕೋಳಿಗಳನ್ನು ಸಾಕಿಕೊಂಡು ಬೇರೆ ಎಲ್ಲೂ ಇಲ್ಲದ ಕೋಳಿಗಳಂತೆ ಆ ಕೋಳಿಗಳು ತಡಿಕೆಯ ಗುಡಿಸಲಿನ ಸುತ್ತ ಓಡಾಡುತ್ತಿದ್ದವು.
ಸಿಲೋನ್ ಅಣ್ಣಾಚಿ ಯಾರ ಜೊತೆಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಆತ ಕಾಫಿ ಕಾಡಿನೊಳಗಿಂದ ಕಾಡುಕೋಳಿಗಳ ಮೊಟ್ಟೆಗಳನ್ನು ಲಪಟಾಯಿಸಿ ತಂದು ತನ್ನ ಹೆಂಟೆ ಕೋಳಿಗಳಿಂದ ಕಾವು ಕೊಟ್ಟು ಮರಿಮಾಡಿಸಿ ಬೆಳೆಸಿ ಸಿದ್ಧಾಪುರದ ಸಂತೆಯಲ್ಲಿ ಒಂದಕ್ಕೆ ನಾಲ್ಕರಂತೆ ಮಾರಿ ಬದುಕುತ್ತಾನೆ ಎಂದು ಎಲ್ಲರೂ ಹೇಳುತ್ತಿದ್ದರು. ಕೇಳಿದರೆ ಈ ಲೋಕದಲ್ಲಿ ತನಗೆ ಯಾರು ಇಲ್ಲವೆಂದೂ ತನ್ನ ಎಲ್ಲರೂ ಸಿಲೋನಿನ ರಬ್ಬರ್ ತೋಟದಲ್ಲಿ ಬದುಕುತ್ತಿರುವರೆಂದೂ ಆತ ಯಾರಿಗೂ ಅರ್ಥವಾಗದ ತಮಿಳಿನಲ್ಲಿ ಹೇಳುತ್ತಿದ್ದ. ಇಂದಿರಾಗಾಂಧಿಯೇ ತನ್ನನ್ನು ಸಿಲೋನಿನಿಂದ ಇಲ್ಲಿಗೆ ಬಂದು ಇರಲು ಹೇಳಿರುವವರೆಂದೂ ತನಗೆ ಬೇರೆ ಯಾರೂ ಏನೂ ಹೇಳಬೇಕಾಗಿಲ್ಲವೆಂದೂ ಆತ ಗುಡುಗುತ್ತಿದ್ದ. ಆದರೆ ಒಂದು ಕಾಫಿ ಬೊಡ್ಡೆಯೂ ಬೂದಿಯಾಗಿ ಉರಿದು ಹೋಗದಂತೆ ನೀರು ಹನಿಸಿ ಸೊಪ್ಪಿನಿಂದ ಮುಚ್ಚಿ ಇದ್ದಿಲು ಮಾಡುತ್ತಿದ್ದ ಆತನಂತೆ ಬೇರೆ ಯಾರಿಗೂ ಇದ್ದಿಲು ಮಾಡಲು ಬರುತ್ತಿಲ್ಲವಾದ್ದರಿಂದ ಹೂವಿನಕೊಲ್ಲಿಯ ಸಾಹುಕಾರರೂ ರೈಟರೂ ಆಳುಗಳೂ ಅವನ ಮಾತುಗಳನ್ನು ಸಹಿಸಿಕೊಂಡು ಸುಮ್ಮನಿದ್ದರು. ಅದೂ ಅಲ್ಲದೆ ಆತ ಕಾಪಿಗಿಡಗಳ ಬುಡದಲ್ಲಿ ಬಲೆಹರಡಿ, ಬೇಲಿಯ ರಂದ್ರಗಳಿಗೆ ಕುಣಿಕೆ ಹಾಕಿ ಕಾಡುಕೋಳಿಗಳನ್ನು ಕಾಡುಮೊಲಗಳನ್ನೂ ಹಿಡಿದು ತಂದು ಕೊಡುತ್ತಿದ್ದುದರಿಂದ ಆತನ ಮಾತುಗಳು ಒರಟಾಗಿದ್ದರೂ ಸಹಿಸಿಕೊಂಡಿದ್ದರು.
ಹೂವಿನ ಕೊಲ್ಲಿಯ ಅಳುವ ಮಕ್ಕಳು ಸಿಲೋನ್ ಅಣ್ಣಾಚಿಯ ಹೆಸರು ಹೇಳಿದರೆ ಹೆದರಿ ಸುಮ್ಮನಾಗುತ್ತಿದ್ದರು. ಆದರೆ ಯಾರಿಗೂ ಹೆದರದ ಹಾಜಿರಾ ಅಣ್ಣಾಚಿಗೂ ಹೆದರದೆ ಆತ ದುರುಗುಟ್ಟಿಕೊಂಡು ನೋಡಿದರೆ ತಾನೂ ತಿರುಗಿ ದುರುಗುಟ್ಟಿ ನೋಡಿ ಆತ ಆಕೆಯನ್ನು ಯಾರಿಗೂ ಹೆದರದ ಕಾಡುಕೋಳಿ ಎಂದು ಹೆಸರು ಇಟ್ಟು ತಮಾಷೆ ಮಾಡಲು ನೋಡುತ್ತಿದ್ದ. ಇವತ್ತು ಹಾಜಿರಾಳಿಗೂ ಹೆದರಿಕೆಯಾಗುತ್ತಿತ್ತು. ಮೂರುದಾರಿಗಳು ಸೇರುವ ಕೂಡುದಾರಿಯಲ್ಲಿ ಬೂದಿಯ ಗುಡ್ಡೆ ಮಾಡಿ ಮೈಯನ್ನೆಲ್ಲಾ ಕರಿ ಇದ್ದಿಲು ಮಾಡಿಕೊಂಡು ಒಂದು ಮಾಸಿದ ಹಳದಿ ಬನಿಯನ್ನು ಧರಿಸಿಕೊಂಡು ಹರಿದ ಪಟ್ಟೆ ಪಟ್ಟೆಯ ಹಸಿರು ಬಣ್ಣದ ಮೌಲಾನಾ ಲುಂಗಿಯನ್ನು ಸುತ್ತಿಕೊಂಡು ಕಾಫಿಯ ಹಸಿ ರೆಂಬೆಗಳಿಂದ ಬೆಂಕಿಯನ್ನು ಕೆಡಿಸುತ್ತಾ ನೀರು ಎರಚಿ ಆರಿಸುತ್ತಾ ದಾರಿಯನ್ನೆಲ್ಲಾ ಹೊಗೆಮಾಡಿಕೊಂಡು ನಿಂತಿದ್ದ. ಸೈದಾಲಿ ಆತನೊಡನೆ ಕಾಣಿಯಾಗಿರುವ ಹಾರೂನನ್ನು ನೋಡಿರುವೆಯೊ ಎಂದು ತನ್ನ ತುಂಡು ತಮಿಳಿನಲ್ಲಿ ಕೇಳುತ್ತಿದ್ದ. ಅಣ್ಣಾಚಿ ಅರ್ಥವಾಗದನಂತೆ ಮುಖಗಂಟುಹಾಕಿಕೊಂಡು ತನ್ನ ಕೆಲಸವನ್ನು ತಾನು ಮಾಡುತ್ತಿದ್ದ ಆತನ ಗೋಣಿ ತಡಿಕೆಯ ಬಿಡಾರದೊಳಗಿಂದ ಹುಂಜವೊಂದು ಕೋಳಿಯೊಂದನ್ನು ಅಟ್ಟಿಸಿಕೊಂಡು ಹೊರಬಂದು ಅದರ ಸುತ್ತ ರೆಕ್ಕೆ ಹರಡಿ ಗಿರಕಿ ಹೊಡೆದು, ಆ ಕೋಳಿ ತಪ್ಪಿಸಿಕೊಂಡು ಪುನಃ ಬಿಡಾರದ ಒಳಹೊಕ್ಕರೆ ಅಲ್ಲಿಗೂ ಓಡಿಸಿಕೊಂಡು ಆಟವಾಡುತ್ತಿತ್ತು. ಸೈದಾಲಿ ಎಲ್ಲ ಅರ್ಥವಾದವನಂತೆ ಅಣ್ಣಾಚಿಯ ಮುಖನೋಡಿ ನಗಲು ನೋಡುತ್ತಿದ್ದ.
`ಏನು ಮುಖನೋಡಿ ನಗುತ್ತೀಯಾ.. ಹುಡುಕಲು ಬಂದವರು ಹುಡುಕಲು ಹೋಗಿ. ಇಲ್ಲಿ ಯಾಕೆ ನಿಂತಿರುವಿರಿ' ಎಂದು ಅಣ್ಣಾಚಿ ತಮಿಳಿನಲ್ಲಿ ಗದರಿದ.
ಸೈದಾಲಿ ಹಾಜಿರಾಳ ತೋಳುಗಳನ್ನು ಮೆಲ್ಲಗೆ ತನ್ನ ಭುಜದಿಂದ ಸೋಕಿ ಅವರಿಬ್ಬರೂ ಕೂಡುದಾರಿಯನ್ನೂ ದಾಟಿ ಮುಂದೆ ನಡೆಯ ತೊಡಗಿದರು.
ಹೂವಿನ ಕೊಲ್ಲಿಯಲ್ಲಿ ಕತ್ತಲು ಆವರಿಸುತ್ತಿತ್ತು. ಆಗಲೇ ಗಿಡಮರಗಳನ್ನು ಬಂದು ಸೇರಿಕೊಳ್ಳುತ್ತಿದ್ದ ನಾನಾ ಜಾತಿಯ ಹಕ್ಕಿಗಳು ನಾನಾ ಸ್ವರದಲ್ಲಿ ಹಾಡು ತೊಡಗಿದ್ದವು. ಕಾಲುದಾರಿಯಲ್ಲಿ ಏನೇನೋ ಹುಡುಕಿಕೊಂಡು ನಡೆದಾಡುತ್ತಿದ್ದ ಕಾಡುಪಾರಿವಾಳಗಳು ಗಿಡಗಳ ಅಡಿಯಲ್ಲಿ ದಾರಿಮಾಡಿಕೊಂಡು ಕಣ್ಮರೆಯಾಗುತ್ತಿದ್ದವು. ಕಿತ್ತಳೆಯ ಗಿಡಗಳಲ್ಲಿ ಬಂಗಾರದ ಬಣ್ಣದಿಂದ ಹೊಳೆಯುತ್ತಿದ್ದ ಕಿತ್ತಳೆಯ ಹಣ್ಣುಗಳು ಬೆಳಕು ಮರೆಯಾಗುತ್ತಿದ್ದಂತೆ ಬಣ್ಣ ಕಳೆದುಕೊಂಡು ನೆರಳಿನಂತೆ ಗಾಳಿಗೆ ಅಲ್ಲಾಡಲು ತೊಡಗಿದ್ದವು. ಅಬ್ಯಾಲೆಯ ಮಲೆಗಳ ಸಾಲಿನಿಂದ ತೇಲಿ ಬರುತ್ತಿದ್ದ ಕಾವಳ ಹೂವಿನ ಕೊಲ್ಲಿಯೊಳಗೆ ಬಂದು ಸೇರಿಕೊಂಡು ಸೂರ್ಯ ಮಲೆಯ ಮೇಲಿಂದ ಇಳಿಯಲು ನೋಡುತ್ತಿದ್ದ.
ಸೈದಾಲಿ ಸುಮ್ಮನೆ ಹಾಜಿರಾಳ ಮೈಯನ್ನು ಸೋಕಿಕೊಂಡು ನಡೆಯುತ್ತಿದ್ದ. ಆತನಿಗೆ ಆಕೆಯ ಕೈಗಳನ್ನು ಹಿಡಿದುಕೊಂಡು ನಡೆಯಬೇಕು ಅನ್ನಿಸುತ್ತಿತ್ತು. ಹಾಜಿರಾ ಕಾಣೆಯಾಗಿರುವ ಹಾರೂನನ ಮುಖವನ್ನು ಊಹಿಸಲು ನೋಡುತ್ತಿದ್ದಳು. ಹಾರೂನನ ಮುಖ ಅವಳ ಕಣ್ಣಿನ ಎದುರು ಬರುತ್ತಿರಲಿಲ್ಲ. ಇದನ್ನು ಸೈದಾಲಿಗೆ ಹೇಗೆ ಹೇಳುವುದು ಗೊತ್ತಾಗಲಿಲ್ಲ. ಏನೂ ಹೇಳದೆ ಅವನನ್ನು ಮುಂದೆ ಹೋಗಲು ಬಿಟ್ಟು ತಾನು ಹಿಂದೆ ಉಳಿದುಕೊಂಡು ನಡೆಯತೊಡಗಿದಳು.
ಸೈದಾಲಿ ಏನನ್ನೋ ಕಂಡುಕೊಂಡವನಂತೆ ಒಮ್ಮೆಗೆ ಬಲಕ್ಕೆ ತಿರುಗಿ ರೋಬಸ್ಟಾ ಗಿಡಗಳ ಅಡಿಯಲ್ಲಿ ನುಸುಳಿಕೊಂಡು ಬರೆ ಹತ್ತಿ ಚಾಮುಂಡಿ ಬಾಣೆಯ ದಿಬ್ಬವನ್ನು ಹತ್ತಿ ಮೇಲಕ್ಕೆ ಓಡತೊಡಗಿದ. ಹಾಜಿರಾ ಗಾಳಿಗೆ ಸಿಲುಕಿದ ತರಗೆಲೆಯಂತೆ ತಾನೂ ಓಡತೊಡಗಿದಳು. ಅವರಿಬ್ಬರೂ ಓಡುತ್ತಾ ಚಾಮುಂಡಿ ಬಾಣೆಯ ತುದಿಯನ್ನು ತಲುಪಿ ನೋಡಿದರೆ ದೂರದಲ್ಲಿ ತಗ್ಗಿನಲ್ಲಿ ಸಿದ್ಧಾಪುರ ಸಂಜೆ ಸೂರ್ಯನ ಬೆಳಕಿನಲ್ಲಿ ಮಂಕಾಗಿ ಹೊಳೆದುಕೊಂಡು ಮಲಗಿತ್ತು. ಅವರಿಬ್ಬರೂ ನಿಂತ ಹಾಗೇ ನಿಂತುಕೊಂಡು ನೋಡತೊಡಗಿದರು. ಅಬ್ಯಾಲೆಯ ಮಲೆಗಳ ತಲೆಯನ್ನು ಸವರುತ್ತಿದ್ದ ಸೂರ್ಯನ ಕಿರಣಗಳನ್ನು ಅದೆಲ್ಲಿಂದಲೋ ಹುಟ್ಟಿ ಮೇಲೇಳುತ್ತಿದ್ದ ಮೋಡದ ತೆರೆಯೊಂದು ಮರೆ ಮಾಡಲು ನೋಡುತ್ತಿತ್ತು. ಸೈದಾಲಿ ನಿಧಾನಕ್ಕೆ ಅವಳತ್ತ ನೋಡಿ ಸುಮ್ಮನಿರುವಂತೆ ಹೇಳಿ ನೆಲದಲ್ಲಿ ಬಿದ್ದಿದ್ದ ಕೋಲೊಂದನ್ನು ಸದ್ದಾಗದಂತೆ ಎತ್ತಿಕೊಂಡು ಕೈಯೆತ್ತಿ ಕೋಲಿನಿಂದ ಹೊಡೆಯಲು ತಯಾರಾಗುತ್ತಿದ್ದ. ಹಾಜಿರಾ ಅದೇನೆಂದು ನೋಡಲು ಅತ್ತಕಡೆ ಕಣ್ಣು ಹಾಯಿಸಿದಳು.
ಚಾಮುಂಡಿ ಬಾಣೆಯ ಇಳಿಜಾರಿನಲ್ಲಿ ರಾಕ್ಷಸನಂತೆ ಹರಡಿಕೊಂಡು ನಿಂತಿದ್ದ ರೋಬಸ್ಟಾ ಕಾಪಿ ಗಿಡದ ಅಡಿಯಲ್ಲಿ ತರಗೆಲೆಗಳ ಮೇಲೆ ಸುತ್ತಿಸುರುಳಿಕೊಂಡು ಎರಡು ಎಣೆ ಹಾವುಗಳು ಆಟವಾಡುತ್ತಿದ್ದವು. ಆ ಇಳಿಬಿಸಿಲನ ನಸು ಕತ್ತಲಲ್ಲಿ ಅಲ್ಲಲ್ಲಿ ಹೊಳೆದು ಆಡುತ್ತಿರುವ ಆ ಹಾವುಗಳನ್ನು ಬದುಕಲು ಬಿಡುವುದೋ ಸಾಯಲು ಬಿಡುವುದೋ ಎಂದು ಯೋಚಿಸಿಕೊಂಡು ಸೈದಾಲಿ ಎತ್ತಿದ ಕೈಗಳನ್ನು ಹಾಗೇ ಎತ್ತಿ ಹಿಡಿದುಕೊಂಡು ನೋಡುತ್ತಿದ್ದ. ಬಂದು ಸೇರಿಕೊಳ್ಳುತ್ತಿದ್ದ ಮೋಡಗಳು, ಇಲ್ಲವಾಗುತ್ತಿದ್ದ ಬೆಳಕು, ತರಗೆಲೆಗಳ ಮೇಲೆ ಆಟವಾಡುತ್ತಿರುವ ಎಣೆ ಹಾವುಗಳ ಸರಸರಸದ್ದು, ಅಬ್ಯಾಲೆಯ ಬತ್ತದ ಕೊಲ್ಲಿಯ ಗದ್ದೆಗಳ ಮೇಲಿನಿಂದ ಹಾಲು ತೆನೆಗಳನ್ನು ತಿಂದು ಬಂದು ಹೂವಿನ ಕೊಲ್ಲಿಯ ನೆರಳಿನ ಮರಗಳ ಪೊಟರೆಗಳನ್ನು ಆಗಲೇ ಸೇರಿಕೊಂಡಿದ್ದ ಹಸಿರು ಗಿಳಿಗಳ ಕಲರವ, ಮೆಲ್ಲಗೆ ಬಂದು ಸೇರುತ್ತಿದ್ದ ಕತ್ತಲು. ಹಾಜಿರಾಳ ಮುದ್ದು ಮುಖದಲ್ಲಿ ಬೆವರೊಡೆಯುತ್ತಿತ್ತು. ಅವಳ ಕೆದರಿದ್ದ ಮುಡಿಯಲ್ಲಿ ಕಾಡು ಹೂಗಳು ಹರಡಿ, ಅವಳ ಉಡುಪಿನಲ್ಲಿ ನುಗ್ಗೆ ಮುಳ್ಳುಗಳು ಸಿಲುಕಿ ಹಾವುಗಳ ಆಟವನ್ನು ನೋಡುತ್ತಾ ಅವಳಿಗೆ ಹೆದರಿಕೆಯಾಗುತ್ತಿತ್ತು. ರೋಬಸ್ಟಾ ಗಿಡದ ಗಂಟುಗಂಟಿನ ಬೊಡ್ಡೆ ತನ್ನ ತೋಳಗೆಲ್ಲುಗಳನ್ನು ಆ ಕತ್ತಲಲ್ಲಿ ಸುತ್ತಲೂ ಹರಡಿ ಮಳೆಗೆ ಕಾಯುತ್ತಿರುವ ರೆಂಬೆಗಳಲ್ಲಿ ಅಲ್ಲಲ್ಲಿ ಕೆಂಪಿರುವೆಗಳು ಎಲೆಗಳನ್ನು ಕೋದು ಮನೆ ಮಾಡಿಕೊಂಡಿದ್ದವು. ದೊಡ್ಡ ಜೇಡರ ಹುಳವೊಂದು ತನ್ನ ಬಲೆಯ ನಡುಸೇರಿ ಅಡಗಿಕೊಂಡು ಹಾವುಗಳು ಆಟವಾಡುವ ಸದ್ದನ್ನು ಸುಮ್ಮನೆ ಆಲಿಸುತ್ತಿತ್ತು.
ಚಾಮುಂಡಿ ಬಾಣೆಯ ತುದಿಯ ಆ ಜಾಗ ಹಾಜಿರಾ ಯಾವಾಗಲಾದರೂ ಒಮ್ಮೊಮ್ಮೆ ಮದರಸಾಕ್ಕೂ ಹೋಗದೆ ಶಾಲೆಗೂ ಹೋಗದೆ ತನ್ನ ಬಾಪಾ ಉಸ್ಮಾನ್ ರೈಟರ ಮೇಲೆ ಸಿಟ್ಟುಮಾಡಿ ಉಮ್ಮಾ ಜುಲೈಕಾಳನ್ನು ನೆನಪುಮಾಡಿಕೊಂಡು ಅಡಗಿಕೂರುವ ಜಾಗವಾಗಿತ್ತು. ಆದರೆ ಈಗ ಈ ನಸುಗತ್ತಲಿನಲ್ಲಿ ಆಕೆಗೆ ಆಜಾಗ ಬೇರೆ ಯಾವುದೋ ಜಾಗದಂತೆ ಕಾಣುತ್ತಿತ್ತು. ಅವಳು ಅವಿತುಕೊಳ್ಳುವ ಬೇರೆ ಎಲ್ಲಾ ಜಾಗಗಳನ್ನು ಕಂಡುಹಿಡಿಯುವ ಕಾವಲುಗಾರ ಕುಂಞಿಕಣ್ಣ ಆ ಜಾಗವನ್ನು ಮಾತ್ರ ಕಂಡು ಹಿಡಿಯದೆ ಸುಮ್ಮನಿದ್ದ. ಆದರೆ ಆ ಜಾಗ ತನಗೆ ಮೊದಲೇ ಗೊತ್ತಿದೆ ಎನ್ನುವಂತೆ ನೀರು ಸೇದುವ ಸೈದಾಲಿ ಹಾವುಗಳನ್ನು ಕಂಡು ಕೈಯಲ್ಲಿ ಕೋಲೆತ್ತಿ ನಿಂತುನೋಡುತ್ತಿದ್ದ. ಅವನಿಗೂ ಬಾಯಿಬಾರದ ಹಾಗಾಗಿತ್ತು. ಹಾಜಿರಾಳೂ ಸುಮ್ಮನೆ ನೋಡುತ್ತಿದ್ದಳು. ಆಟವಾಡಿ ಮುಗಿಸಿದ ಹಾವುಗಳು ಸರಕ್ಕನೆ ಮೈಬಿಡಿಸಿಕೊಂಡು ಒಂದರ ಹಿಂದೆ ಒಂದು ಹಿಂಬಾಲಿಸಿ ತರಗೆಲೆಗಳ ನಡುವೆ ಕತ್ತಲಿನಲ್ಲಿ ಮರೆಯಾದವು.
ಹಾಜಿರಾ ತಾನು ಒಮ್ಮೊಮ್ಮೆ ಅಡಗಿಕೂರುವ ಆ. ಜಾಗವನ್ನು ದುಃಖದಲ್ಲಿ ನೋಡುತ್ತಿದ್ದಳು. ಸೈದಾಲಿ ಕಾಣೆಯಾಗಿರುವ ಹಾರೂನನ ಹೆಸರನ್ನು ಸುಮ್ಮನೆ ಕರೆಯುತ್ತ ಸುತ್ತಮುತ್ತ ನೋಡುತ್ತಿದ್ದ. ಅಲ್ಲೆ ಬೆಳೆದು ನಿಂತಿದ್ದ ಅತ್ತಿಯ ಮರದಿಂದ ಕೊಳೆತ ಕಣ್ಣುಗಳು ಬಿದ್ದು ಆ ಬಿದ್ದ ಹಣ್ಣುಗಳ ಮೇಲೆಲ್ಲಾ ಇರುವೆಗಳೂ ನುಸಿಗಳೂ ಸರಿದಾಡುತ್ತಿದ್ದವು. ಹಾಜಿರಾ ಉಸಿರನ್ನು ಸಣ್ಣಗೆ ಸದ್ದಾಗದಂತೆ ಬಿಡುತ್ತಿದ್ದಳು. ಸೈದಾಲಿ ಕೈಯಲ್ಲಿದ್ದ ಕೋಲನ್ನು ನೆಲಕ್ಕೆ ಬೀಳಿಸಿ 'ಹೆದರಿಕೆಯಾಗುತ್ತಿದೆಯಾ ಹಾಜಿರಾ' ಎಂದು ಕೇಳಿಬಿಟ್ಟ. ಹಾಜಿರಾಳಿಗೆ ನಿಜಕ್ಕೂ ಹೆದರಿಕೆಯಾಗುತ್ತಿತ್ತು. 'ನಿಜಕ್ಕೂ ಹೆದರಿಕೆ ಆಗುತ್ತಿದೆಯಾ ಹಾಜಿರಾ' ಎಂದು ಆತ ಕೇಳಿದ. ಆಕೆ ಕಣ್ಣರಳಿಸಿ ತಲೆಯಾಡಿಸಿದಳು. ಹಾಗಾದರೆ ಬೆನ್ನು ಬಗ್ಗಿಸಿ ನಿಂತು ಕಣ್ಣು ಮುಚ್ಚಿಕೋ' ಎಂದ. ಆಕೆ ಬೆನ್ನು ಬಗ್ಗಿಸಿ ನೆಲದ ಕಡೆಗೆ ಮುಖ ಬಾಗಿಸಿ ಕಣ್ಣು ಮುಚ್ಚಿದಳು. 'ನೋವಾದರೆ ಹೆದರಬೇಡ' ಅಂದ. ಆಕೆ ಅವಡುಗಚ್ಚಿಕೊಂಡಳು. 'ಹಾಗಾದರೆ ಈಗ ಹೆದರಿಕೆ ಹೋಯಿತು ನೋಡು ಎಂದು ಸೈದಾಲಿ ತನ್ನ ಹಸ್ತವನ್ನು ಮುಷ್ಟಿಮಾಡಿಕೊಂಡು `ಧುಂ' ಎಂದು ಅವಳ ಬೆನ್ನಿಗೆ ಗುದ್ದಿದ. ಆ ಗುದ್ದಿಗೆ ಆಕೆಯ ಹೆದರಿಕೆ ಹೋಯಿತು 'ಇನ್ನು ಓಡು' ಎಂದು ಆತ ಚಾಮುಂಡಿ ಬಾಣೆಯ ದಿಬ್ಬ ಇಳಿದು ಓಡಲು ತೊಡಗಿದ. ಹಾಜಿರಾ ಅವನನ್ನು ಹಿಂಬಾಲಿಸಿಕೊಂಡು ಓಡತೊಡಗಿದಳು. ಅವರಿಬ್ಬರೂ ರೋಬಸ್ಟಾ ಗಿಡಗಳ ಅಡಿಯಲ್ಲಿ ದಾರಿ ಮಾಡಿಕೊಂಡು ಗೆಲ್ಲುಗಳನ್ನು ಸರಿಸುತ್ತಾ ಬೊಡ್ಡೆಗಳಿಗೆ ಡಿಕ್ಕಿ ಹೊಡೆಯುತ್ತಾ ಪಾತಿಗಳ ನಡುವೆ ದಾರಿ ಮಾಡಿಕೊಂಡು ಜಿಗಿಯುತ್ತಾ ಓಡಿಬಂದು ಮೂರುದಾರಿಗಳು ಸೇರುವ ಕೂಡುದಾರಿಯಲ್ಲಿ ಬಂದು ಸೇರಿಕೊಂಡರು.
ಕೂಡುದಾರಿಯಲ್ಲಿ ಇದ್ದಲಿನ ಕೆಂಡವನ್ನು ಆರಿಸಿ ತಣ್ಣಗೆ ಮಾಡಿ, ತನ್ನ ತಡಿಕೆ ಗುಡಿಸಲಿನ ಬಾಗಿಲನ್ನು ಗೋಣಿ ಚೀಲದಿಂದ ಮುಚ್ಚಿ, ಕೋಳಿಗಳನ್ನು ಬಿದಿರಿನ ಬುಟ್ಟಿಯಲ್ಲಿ ಬೋರಲು ಹಾಕಿ ಮುಚ್ಚಿ ಇದ್ದಲು ಮಾಡುವ ಸಿಲೋನ್ ಅಣ್ಣಾಚಿ ಎಲ್ಲಿಗೋ ಹೋಗಿದ್ದನು. ಅಣ್ಣಾಚಿ ಇದ್ದಲಿನ ಕೆಂಡಕ್ಕೆ ನೀರು ಎರಚಲು ಗುಡಿಸಲಿನ ಬದಿಯಲ್ಲಿ ನೀರಿನ ಗುಂಡಿ ಮಾಡಿಕೊಂಡು ಆ ಗುಂಡಿಯ ಸುತ್ತ ಹುಲುಸಾಗಿ ಹುಲ್ಲು ಬೆಳೆದಿತ್ತು. ಇದ್ದಲಿನ ರಾಶಿಯಿಂದ ಹಬೆ ಏಳುತ್ತಿತ್ತು. ಎತ್ತಲಿಂದಲೋ ಕತ್ತಲಿನಲ್ಲಿ ಕಾಡುಕೋಳಿಗಳು ಕೊಕ್ಕರಿಸುವ ಸದ್ದು. ಅಲ್ಲೇ ಎಲ್ಲೋ ಹತ್ತಿರದಿಂದ ಅಣ್ಣಾಚಿ ಬೀಡಿ ಎಳೆದುಕೊಂಡು ಕಾಪಿ ಗಿಡಗಳ ನಡುವೆ ನಡೆದಾಡುವ ಸದ್ದು ಕೇಳಿಸುತ್ತಿತ್ತು.
ನೀರು ಸೇದುವ ಸೈದಾಲಿ ಮೂರುದಾರಿಗಳು ಸೇರುವ ಕೂಡುದಾರಿಯಲ್ಲಿ ಹಾಜಿರಾಳನ್ನು ಒಬ್ಬಳನ್ನೇ ಬಿಟ್ಟು ಬಲೆಹಾಕಿ ಕಾಡುಕೋಳಿಗಳನ್ನು ಹಿಡಿಯುವ ಸಿಲೋನ್ ಅಣ್ಣಾಚಿಯನ್ನು ಸೇರಿಕೊಳ್ಳಲು ಕಾಪಿಗಿಡಗಳ ನಡುವಲ್ಲಿ ಮರೆಯಾಗಲು ಯೋಚಿಸುತ್ತಿದ್ದ. ನಿಂತುಕೊಂಡ ಅವನನ್ನು ಹಾಗೆಯೇ ನಿಂತುಕೊಳ್ಳಲು ಬಿಟ್ಟು ಹಾಜಿರಾ ಕಾಲುದಾರಿಯಲ್ಲಿ ನಡೆಯತೊಡಗಿದಳು. ಅವಳು ಯಾವಾಗಲೂ ಇಷ್ಟು ಕತ್ತಲಿನಲ್ಲಿ ಕಾಲುದಾರಿಯಲ್ಲಿ ಒಬ್ಬಳೇ ನಡೆದಿರಲಿಲ್ಲ. ಹೂವಿನ ಕೊಲ್ಲಿಯ ಆಕಾಶದಲ್ಲಿ ಬೆಳ್ಳಗೆ ಕಾವಳ ಹರಡಿಕೊಂಡು ಆಗಲೇ ಅಲ್ಲೊಂದು ಇಲ್ಲೊಂದು ನಕ್ಷತ್ರಗಳು ಗೋಚರವಾಗುತ್ತಿದ್ದವು. ದೂರದಲ್ಲೆಲ್ಲೋ ಸುರಿಯುತ್ತಿರುವ ಕಾಪಿ ಹೂವಿನ ಮಳೆ ತಂಪುಗಾಳಿಯನ್ನು ಹೂವಿನ ಕೊಲ್ಲಿಯ ಕಡೆಗೆ ಕಳಿಸುತ್ತಿದ್ದವು. ಮೆಲ್ಲಗೇ ಆಕಾಶದಲ್ಲಿ ಅಲ್ಲಲ್ಲಿ ಒಂದೆರೆಡು ಮಿಂಚುಗಳು ಮಿಂಚಿ ದೂರದಲ್ಲಿ ಎಲ್ಲಿಂದಲೋ ಗುಡುಗಿನ ಕ್ಷೀಣ ಧ್ವನಿ ಕೇಳಿಸುತ್ತಿತ್ತು.
ಉಸ್ಮಾನ್ ರೈಟರ ಬಿಡಾರದಲ್ಲಿ ದೀಪ ಉರಿಯುತ್ತಿತ್ತು. ಬಾಪಾನ ಹೆಗಲೇರಿ ಬಂದಿದ್ದ ಹಾರೂನ್ ಈಗಲೂ ಅವರ ಮೈಗೆ ಅಂಟಿಕೊಂಡು ಕುಳಿತು ಕಕ್ಕಾವಿಕ್ಕಿಯಾಗಿ ಎಲ್ಲ ಕಡೆ ನೋಡುತ್ತಿದ್ದ. ಎಲ್ಲರೂ ಹೆದರಿಕೊಂಡಂತಿದ್ದ ಅವನ ಚಲನವಲನಗಳನ್ನು ತದೇಕ ಚಿತ್ತರಾಗಿ ನೋಡುತ್ತಿದ್ದರು. ಉಸ್ಮಾನ್ ರೈಟರು ನೋಡಲು ತುಂಬ ಇಳಿದು ಹೋದಂತೆ ಕಾಣಿಸುತ್ತಿದ್ದರು. ಮುರುಗಾ ಮಲೆಯಲ್ಲಿ ಅವರಿಗೆ ಈ ಬಾರಿ ಕನಸಿನಲ್ಲಿ ಆಪರೇಷನ್ನ ಮಾಡಿಸಿಕೊಂಡು ಬರಲು ಆಗಿರಲಿಲ್ಲ. ಅವರ ಕನಸಿನಲ್ಲಿ ದಿನವೂ ಬಂದು 'ಇನ್ನೂ ಒಂದು ದಿನ ಇರು, ಇನ್ನೂ ಒಂದುದಿನ ಇರು' ಎಂದು ಕಾಯಿಸುತ್ತಿದ್ದ ಸೂಫಿ ಬಾಬಾ ಕೊನೆಯದಿನ ಕನಸಿನಲ್ಲಿ ಬಂದು `ಈಸಲ ನಿನ್ನ ಕರ್ಮಫಲ ಸರಿಯಿಲ್ಲ. ಹೂವಿನ ಕೊಲ್ಲಿಗೆ ತಿರುಗಿ ಹೋಗು ಪುನಃ ಕರೆದಾಗ ಬಾ' ಎಂದು ಕಳುಹಿಸಿ ಬಿಟ್ಟಿದ್ದರು. ಹಾಗೇ ದುಃಖದಲ್ಲಿ ನೋವಿನಲ್ಲಿ ಬಸ್ಸು ಹತ್ತಿ ಸಿದ್ದಾಪುರದಲ್ಲಿ ಇಳಿದು ನಮಾಜು ಮುಗಿಸಿ ಹೋಗುವಾ ಎಂದು ಸಿದ್ದಾಪುರ ಮಸೀದಿಯ ಒಳಗೆ ಹೋಗಿದ್ದರು.
ಶನಿವಾರ ಸಂತೆಯ ದಿನವಾಗಿರುವುದರಿಂದ ಮಸೀದಿಯ ಒಳಗೆ ಖತೀಬರಾದ ದೊಡ್ಡ ಉಸ್ತಾದರೂ ಅವರಿಗೆ ಸಹಾಯಮಾಡುವ ಸಣ್ಣ ಉಸ್ತಾದರೂ, ಮಸೀದಿಯನ್ನು ಒರೆಸಿ ಸ್ವಚ್ಛವಾಗಿಡುವ ಹಜರೆ ಸಾಹೇಬರು ಮಾತ್ರ ಇದ್ದರು. ಬೇರೆಯಾರೂ ಬಂದಿರಲಿಲ್ಲ. ಅವರು ಮೂವರೂ ನಮಾಜಿಗೆ ಸಮಯವಾಗಿದೆ ಎನ್ನುವುದನ್ನೂ ಮರೆತು ಬೆತ್ತಲೆಯಾಗಿ ಮಸೀದಿಯೊಳಕ್ಕೆ ಬಂದು ಸೇರಿದ್ದ ಹಾರೂನನ್ನು ಇದು ಯಾರ ಮಗು ಎಂದು ಗೊತ್ತಾಗದೆ ಈ ಮಗು ಮುಸಲ್ಮಾನನೋ ಕಾಫಿರನೋ ಎಂದೂ ಅರಿವಾಗದೆ ನಾನಾ ಭಾಷೆಗಳಲ್ಲಿ ಪ್ರಶ್ನಿಸುತ್ತಿದ್ದರು. ಹಾರೂನನು ಕಣ್ಣು ಪಿಳಿಪಿಳಿ ಬಿಟ್ಟುಕೊಂಡು ನೋಡುತ್ತಿದ್ದವನು ಮಸೀದಿಯೊಳಕ್ಕೆ ಬಂದ ಬಾಪಾನನ್ನು ಕಂಡು `ಬಾಪಾ..' ಎಂದು ಅತ್ತುಕೊಂಡು ಅವರನ್ನು ಅವುಚಿ ಹಿಡಕೊಂಡಿದ್ದ.
ದುಃಖದಿಂದಲೂ ಅವಮಾನದಿಂದೂ ಏನೂ ಹೇಳಲಾಗದೆ ಬಾಯಿಕಟ್ಟಿ ಉಸ್ಮಾನ್ ರೈಟರು ಮಗ ಹಾರೂನನ್ನು ಹಾಗೇ ಹೆಗಲಲ್ಲಿ ಎತ್ತಿಕೊಂಡು ಬಂದು ಏನು ಹೇಳುವುದು ಎಂದು ಗೊತ್ತಾಗದೆ ಅವನನ್ನು ಬಿಡಾರದ ಅಂಗಳದಲ್ಲಿ ಇಳಿಸಿ ಮೌನವಾಗಿ ಕೂತಿದ್ದರು. ಮಗು ಹಾರೂನನು ಬರೆ ಇಳಿದು, ಬತ್ತದ ಗದ್ದೆಯನ್ನು ದಾಟಿ, ಏಲಕ್ಕಿ ಕಾಡು ದಾಟಿ, ತೊರೆಯ ಪಾಲವನ್ನು ದಾಟಿ, ಬರೆ ಹತ್ತಿ ,ಬೇಲಿ ದಾಟಿ ರಸ್ತೆ ತಲುಪಿ, ನಡೆಯುತ್ತಾ ಸಿದ್ಧಾಪುರವನ್ನು ಹೇಗೆ ತಲುಪಿದನು ಎಂದು ಎಲ್ಲರಿಗೂ ಚೋದ್ಯವಾಗುತ್ತಿತ್ತು. ಎಲ್ಲರೂ ಏನಾಯ್ತು ಎಂಬುದನ್ನು ಹೇಗೆ ಕೇಳುವುದು ಎಂದು ಹೆದರಿಕೊಂಡು ಉಸ್ಮಾನ್ ರೈಟರನ್ನು ನೋಡುತ್ತಿದ್ದರು. ಅವರು ಹಜಾರದ ಈಸಿ ಚೇರಿನಲ್ಲಿ ಕುಳಿತುಕೊಂಡು ಕತ್ತಲೆಯನ್ನು ನೋಡುತ್ತಿದ್ದರು. ಕುಂಞಿಕಣ್ಣನೂ, ನಂಬಿಯಾರೂ, ಮುದಾರನೂ, ಮೂಸಾಕಾಕಾ, ಮರಿಯಾ, ದೂಮಣ್ಣ, ದೊಮಕ್ಕ, ಶಾಂತಿ, ಸೇವಂತಿ ಮತ್ತು ಹೂವಿನ ಕೊಲ್ಲಿಯ ಇನ್ನೂ ಹಲವು ಆಳುಗಳು, ಮೇಸ್ತ್ರಿಗಳು ಎಲ್ಲರೂ ಮೌನವಾಗಿ ಉಸ್ಮಾನ್ ರೈಟರು ಏನು ಹೇಳುವರೋ ಎಂದು ಕಾಯುತ್ತಿದ್ದರು.
ಅಷ್ಟರಲಿ ಮಿಂಚು ಜೋರಾಗಿ, ಗುಡುಗು ಜೋರಾಗಿ, ಬಿಡಾರದ ಕರೆಂಟಿನ ಲೈಟು ಆರಿಹೋಗಿ, ಗಾಳಿಬೀಸಿ ತಂಪಾಗಿ, ಎಲ್ಲೋ ಬರುತ್ತಿರುವ ಹೊಸ ಮಳೆಯ ವಾಸನೆ ತೇಲಿಬರಲು ತೊಡಗಿತು. 'ಕಾಪಿ ಹೂವಿನ ಮಳೆ ಈ ಸಲ ಇಷ್ಟು ಬೇಗನೆ' ಎಂದು ಹಾಜಮ್ಮ ಗೊಣಗಿದ್ದು ಬಿಡಾರದ ಹಂಚಿನ ಮೆಲೆ ಆಲಿಕಲ್ಲುಗಳು ಬೀಳುವ ಸದ್ದಿನಲ್ಲಿ ಕರಗಿಹೋಯಿತು. ಅಂಗಳದಲ್ಲಿ ಕೂತಿದ್ದವರೆಲ್ಲಾ ಹಜಾರವನ್ನು ಸೇರಿಕೊಂಡರು. ಕತ್ತಲಲ್ಲಿ ಮಳೆಯಲ್ಲಿ ನೆನೆಯುತ್ತಾ ಬಂದ ಹಾಜಿರಾ ಯಾಕೋ ಈವತ್ತು ಬಾಪಾ ಉಸ್ಮಾನ್ ರೈಟರಿಗೆ ಹೆದರದೆ, ಒಳಕ್ಕೆ ಬಂದು, ಹಾರೂನನ್ನು ಕಂಡು, ಆತನನ್ನು ಎತ್ತಿಕೊಂಡು, ಅಲ್ಲೇ ಮೂಲೆಯಲ್ಲಿ ನಿಂತು, ಕಿಟಕಿಯಿಂದ ಆಲಿಕಲ್ಲುಗಳು ಬೀಳುವುದನ್ನು ತೋರಿಸತೊಡಗಿದಳು.
ಇದು ಯಾವುದರ ಪರಿವೆಯೂ ಇಲ್ಲದೆ ಗಿಳಿ ಜುಲೈಕಾ ಉಸ್ಮಾನ್ ರೈಟರು ತಂದಿದ್ದ ಹಣ್ಣುಗಳನ್ನು ಹಸಿದುಕೊಂಡು ತಿನ್ನುತ್ತಾ ಸದ್ದುಮಾಡುತ್ತಿತ್ತು.





Hedarike AAguthideyaa Haajira?
Hello Rashid Sir,
I just love the way you've portrayed 'ceylon Annachi'. I personally wish that you should develop the character more and let us know more about him. He is so dear to me somehow.. well, I particularly liked this episode.
ಸಿಲೋನ್ ಅಣ್ಣಾಚಿ
ಪ್ರಿಯರೇ
ಸಿಲೋನ್ ಅಣ್ಣಾಚಿ ಯಾಕೋ ನನಗೂ ಕುತೂಹಲಕಾರಿಯಾಗಿ ಕಾಣಿಸುತ್ತಾನೆ.ಹೂವಿನಕೊಲ್ಲಿಯ ಇದುವರೆಗಿನ ಅಧ್ಯಾಯಗಳಲ್ಲಿ ಈತ ಮಾತ್ರ ಕೊಂಚ ಕಾಲ್ಪನಿಕ.ಹಾಗಾಗಿ ಅಣ್ಣಾಚಿಗೆ ರೋಲ್ ಮೋಡೆಲ್ ಇಲ್ಲ.ಹಾಗಾಗಿ ಆತ ಇನ್ನು ಮುಂದೆ ಹೇಗೆ ಬರುತ್ತಾನೆ ಅನ್ನುವುದು ನನಗೂ ಕುತೂಹಲ!let us wait......
rasheed.
ಸಿಲೋನ್ ಅಣ್ಣಾಚಿ
ಸಿಲೋನ್ ಅಣ್ಣಾಚಿ ಇಷ್ಟೊಂದು ಜನರನ್ನು ಸೆಳೆದಿದ್ದು ಆಶ್ಚರ್ಯ ಅಲ್ಲ. ನನಗೂ ಅವನು ಇಷ್ಟ. ನಾಕಾರು ಸಾಲುಗಳಲ್ಲೇ ಎಷ್ಟು ಸಮಗ್ರವಾಗಿ ಮೂಡಿಬಂದಿದ್ದಾನೆ ಅವನು!
ಮಾಂಡವಿ
ಹಾಜಿರಾ ಎಂಬ ಹುಡುಗಿ
ಸೈದಾಲಿ ಹೇಗೆ ಒಳ್ಳೆಯವನಾ? ಹಾಜಿರಾ ಒಳ್ಳೆಯ ಹುಡುಗಿ. ಅವಳಿಗೆ ಸೈದಾಲಿಯ ಬಗ್ಗೆ ಆಕರ್ಷಣೆ ಇದೆಯಾ ಅಥವಾ ಸೈದಾಲಿ ಹಾಗೆ ಭಾವಿಸಿಕೊಂಡಿದ್ದಾನಾ?
ಹಾಜಿರಾ ಮತ್ತು ಸೈದಾಲಿ
ಪ್ರಿಯ ಯಾಮಿನಿ,
ಹಾಜಿರಾಗೆ ಮಹತ್ವಾಕಾಂಕ್ಷೆ ಇಲ್ಲ.ಸೈದಾಲಿಗೆ ಇದೆ.ಯಾರು ಒಳ್ಳೆಯವರು ಯಾರು ಅಲ್ಲ ಅಂತ ಹೇಗೆ ಹೇಳಲಿ?
ಅವಳಿಗೆ ಆಕರ್ಷಣೆ ಇದೆ.ಸೈದಾಲಿಗೆ ಕುತೂಹಲ ಇದೆ.ಯಾಮಿನಿ ಅಂದ ಹಾಗೆ ನೀವು ಯಾರು? ನನಗೆ ನಿಮ್ಮ ಬಗೆಗೂ ಕುತೂಹಲ ಇದೆ.ಅನ್ಯಥಾ ಭಾವಿಸದೆ ಉತ್ತರಿಸಿ.
ರಶೀದ್.
ನಾನು ಯಾಮಿನಿ
ನೀವು ಯಾರು? ಎಂಬ ಪ್ರಶ್ನೆಗೆ ಯಾರೇ ಆದರೂ ಉತ್ತರಿಸುವುದು ಕಷ್ಟ. ನಿಮಗೇ ನಾನು ಆ ಪ್ರಶ್ನೆ ಕೇಳಿದರೆ?
ನೀವು ಈ ಪ್ರಶ್ನೆಯನ್ನು ಲೌಕಿಕವಾಗಿ ಕೇಳಿದ್ದೀರೆಂದು ಭಾವಿಸಿ ಈ ಉತ್ತರ ಬರೆಯುತ್ತಿದ್ದೇನೆ. ನಾನು ಯಾಮಿನಿ. ಮಂಗಳೂರಿನವಳು. ಸದ್ಯಕ್ಕೆ ಸಮಾಜಕಾರ್ಯ ಅಧ್ಯಯನ ನಡೆಸುತ್ತಿದ್ದೇನೆ. ನನ್ನ ಅಧ್ಯಯನಕ್ಕೆ ಅಗತ್ಯವಿರುವಷ್ಟು ಕಂಪ್ಯೂಟರ್ ತಿಳಿದಿದೆ. ನನಗೆ ಅಷ್ಟೇನೂ ಇಷ್ಟವಾಗದಿದ್ದರೂ ಅಪ್ಪನಿಗೆ ವ್ಯಾಸರಾಯ ಬಲ್ಲಾಳರು, ಶಿವರಾಮ ಕಾರಂತರಂಥ ಲೇಖಕರು ಇಷ್ಟ. ಅವರ ಇಷ್ಟಗಳೆಲ್ಲವೂ ಅವರ ಮಕ್ಕಳ ಹೆಸರುಗಳಲ್ಲಿ ಪ್ರತಿಬಿಂಬಿಸಿದೆ. ನೀವು ಮಂಗಳೂರು ಆಕಾಶವಾಣಿಯಲ್ಲಿ ಇದ್ದಿರಲ್ಲವೇ? ಕದ್ರಿ ಪಾರ್ಕ್ ನಲ್ಲಿ ಕುಳಿತುಕೊಳ್ಳುವ ಪ್ರೇಮಿಗಳ ಸಂದರ್ಶನ ಕೇಳಿದ್ದೆ. 'ಮಾತಿನ ಮನೆ' ಈಗ ನಿಂತೇ ಹೋಗಿದೆಯಲ್ಲಾ...
-ಯಾಮಿ
Hedakire...Haajira
Dear Rasheed, I like the character Hajeera...poor baby, she is missing her mom and trying to find love by being arrogant. Please, let her find someone really wonderful and find peace in life :) best regards
Post new comment