8. ಈ ಇರುಳು ಯಾರಾದರೂ ಕೇಳಿದರೆ ಏನು ಕಥೆ ಹೇಳುವುದು..?

ಮಳೆನಿಂತು ಎಲ್ಲರೂ ಹೋಗಿ ಆಗಿತ್ತು. ಬರೆಯ ಮೇಲಿಂದ ಕಾಪಿಗೆಲ್ಲುಗಳ ನಡುವಿಂದ, ಕಿತ್ತಳೆಗಿಡಗಳ ಮೇಲಿನಿಂದ ಅರ್ಧ ಚಂದ್ರ ಅರೆಬರೆಯಾಗಿ ಕಾಣಿಸಿಕೊಳ್ಳುತ್ತಿದ್ದ. ಮಳೆಗೆ ಸಿಲುಕಿ ನಲುಗಿ ಹೋಗಿದ್ದ ಬರೆಯ ಮೆಲಿನ ಕಾಡು ಹೂಗಳು ಚೇತರಿಸಿಕೊಂಡು ಹಿತ್ತಲಲ್ಲಿ ಉರಿಯುತ್ತಿದ್ದ ಚಿಮಿಣಿ ದೀಪದ ನಸುಕು ಬೆಳಕಿನಲ್ಲಿ ತೂಗಾಡಿಕೊಂಡು ನಿಂತಿದ್ದವು. ಆ ಕತ್ತಲಲ್ಲಿ ರಂಗೋಲಿ ಪುಡಿಯ ರಂಧ್ರ ಬಾಯಿತೆರೆದುಕೊಂಡು ನಿಂತು ಎಲ್ಲಿಂದಲೋ ಹರಿದು ಅದರೊಳಗೆ ಸೇರಿಕೊಳ್ಳುತ್ತಿದ್ದ ಮಳೆಯ ನೀರು ದಾರೆದಾರೆಯಾಗಿ ಬಂದು ಕೆಳಗೆ ಚರಂಡಿಯಲ್ಲಿ ಸೋರಿ ಹೋಗುತ್ತಿತ್ತು. ಇದು ಯಾವುದರ ಪರಿವೆಯೂ ಇಲ್ಲದೆ ಹಿತ್ತಲಿನಲ್ಲಿ ಮದರಂಗಿ ಅರೆಯುವ ಕಲ್ಲಿನ ಮುಂದೆ ಚಿಮಿಣಿ ದೀಪವೊಂದನ್ನು ಉರಿಸಿ ಇಟ್ಟುಕೊಂಡು ಹಾಜಿರಾ ಮದರಂಗಿಯ ಎಲೆಗಳಿಗೆ ಸುಣ್ಣ ಸೇರಿಸಿ ಅರೆಯುತ್ತಾ ಕುಳಿತಿದ್ದಳು. ಅರೆಯುವ ಮದರಂಗಿಯ ಎಲೆಗಳಿಗೆ ಸುಣ್ಣ ಮತ್ತು ಸಕ್ಕರೆ ಸೇರಿಸಿದಷ್ಟೂ ಹಾಕಿದ ಮದರಂಗಿ ಕೆಂಪಗಾಗುವುದು ಎಂದು ಹಾಜಿರಾ ಆ ದೀಪದ ಬೆಳಕಿನಲ್ಲಿ ಒಬ್ಬಳೇ ಸದ್ದುಮಾಡಿಕೊಂಡು ಸುಣ್ಣ ಸೇರಿಸಿ ಅಡಿಗೆ ಮನೆಯಿಂದ ಕದ್ದುತಂದ ಸಕ್ಕರೆ ಸೇರಿಸಿ ಅರೆಯುತ್ತಿದ್ದಳು.  ಅವಳಿಗೆ ಒಬ್ಬಳಿಗೆ ಮಾತ್ರ ಅದು ಹೇಗೋ ಕಥೆ ಹೇಳುವ ಪಾತಿಂಞ ಯಾರ ಅರಿವಿಗೂ ಬಾರದೆ ಬಚ್ಚಲು ಮನೆಯ ಬೆಂಕಿಯಲ್ಲಿ ಕಾಲು ಕಾಯಿಸಿಕೊಂಡು ಕುಳಿತಿರುವುದು ಅರಿವಿಗೆ ಬಂದಿತ್ತು ಆದರೂ ಅವಳು ಈವತ್ತು ಯಾರುಬೇಡ, ಏನೂಬೇಡ, ಕಥೆಯೂ ಬೇಡ ಮಸಾಲೆಯೂ ಬೇಡ ಎಂದು ಮನಸ್ಸು ಗಟ್ಟಿಮಾಡಿಕೊಂಡು ತಾನೊಬ್ಬಳೇ ದೀಪದ ಬೆಳಕಲ್ಲಿ ಸಣ್ಣಗೆ ಬೆವರುತ್ತಾ ಆಗಾಗ ತನ್ನಷ್ಟಕ್ಕೆ ನಗುತ್ತಾ ಗೊಣಗುತ್ತಾ ತಾಯಿ ಜುಲೈಕಾಳನ್ನು ನೆನೆದುಕೊಳ್ಳುತ್ತಾ ಮದರಂಗಿಗೆ ಬೆರಳುಗಳಿಂದ ನೀರು ಚಿಮುಕಿಸಿ ಒದ್ದೆ ಮಾಡುತ್ತಾ ಕುಳಿತಿದ್ದಳು.

ಕಥೆ ಹೇಳುವ ಬರುವ ಪಾತಿಂಞ ಸುರಿಯುತ್ತಿದ್ದ ಮಳೆಗೆ ಸಿಲುಕಿ ಮೂರುದಾರಿಗಳು ಸೇರುವ ಕೂಡದಾರಿಯಲ್ಲಿ ಸಿಲೋನ್ ಅಣ್ಣಾಚಿಯ ತಡಿಕೆಗೂಡಿನಲ್ಲಿ ನಿಂತಿದ್ದವರು ಮಳೆ ನಿಂತೊಡನೆ ನಡೆಯುತ್ತಾ ಬಂದು ಉಸಾನ್ ರೈಟರ್ ಬಿಡಾರವನ್ನು ಸೇರಿ ಸ್ನಾನದ ಹಂಡೆಯ ಉರಿಯ ಮುಂದೆ ಕಾಲು ಚಾಚಿ ಕುಳಿತು ತಮ್ಮ ಮರಗಟ್ಟಿದ್ದ ಕಾಲುಗಳಿಗೆ ಶಾಖಕೊಡುತ್ತಾ ಕೂತಿದ್ದರು. ಅವರ ಮಗಳು ಬೆರಳು ಚೀಪುವ ನೆಬೀಸಾ ಕಣ್ಣು ಪಿಳಿಪಿಳಿ ಬಿಟ್ಟುಕೊಂಡು ತಾಯಿಯ ಸೆರಗೊಳಗೆ ಸೇರಿ ಬೆರಳು ಚೀಪುತ್ತಾ ಅಳುತ್ತಾ ತಾನೂ ತನ್ನ ಒದ್ದೆಗೊಂಡ ಮೈಯನ್ನು ಬಿಸಿ ಮಾಡಿ ಕೂತಿದ್ದಳು. ಮಳೆಯ ನೀರಿನ ಜೊತೆಗೆ ಅವಳ ಕಣ್ಣೀರೂ ಸಾಕಷ್ಟು ಹರಿದು ಅವಳನ್ನು ಒದ್ದೆಮಾಡಿತ್ತು. ಎಷ್ಟು ಬೇಡವೆಂದರೂ ಹಠ ಹಿಡಿದು ಹೊರಟು ನಡುವಲ್ಲಿ ಮಳೆಗೆ ತಾಯಿಮಗಳಿಬ್ಬರೂ ಸಿಲುಕಿಕೊಂಡಿದ್ದರು. 'ಬೇಡ ಬೇಡವೆಂದರೂ ಯಾಕೆ ಬಂದೆ ಪುಲಿಯಾಡಿ'್ಚ ಎಂದು ಸಿಟ್ಟು ಮಾಡಿಕೊಂಡು ತಾಯಿ ಪಾತಿಂಞ ಕೈಗೆ ಸಿಕ್ಕಿದ ಕಾಪಿಯ ರೆಂಬೆಯೊಂದನ್ನು ಕಿತ್ತು ಮಗಳಿಗೆ ಬಾರಿಸುತ್ತಾ ತನ್ನ ಸೆರಗು ಹಿಡಿದುಕೊಳ್ಳಲು ಬರುತ್ತಿದ್ದ ಅವಳ ಕೈಯನ್ನು ಕಿತ್ತು ಬಿಸುಟು ಮತ್ತೆ ಬಾರಿಸುತ್ತಾ ಮರಗಳಿಂದ ಹನಿಯುತ್ತಿದ್ದ ತೊಟ್ಟುಗಳಿಗೆ ಸಿಲುಕಿ ಮತ್ತೆ ನೆನೆಯುತ್ತಾ ಇಬ್ಬರೂ ಉಸ್ಮಾನ್ ರೈಟರ ಬಿಡಾರವನ್ನು ತಲುಪಿದಾಗ ಮಳೆನಿಂತು ಎಲ್ಲರೂ ಹೋಗಿ ಆಗಿತ್ತು. ರೈಟರ ಬಿಡಾರದೊಳಗಿಂದ ತುಪ್ಪದ ಅನ್ನದ ಪರಿಮಳ ಅಲೆ ಅಲೆಯಾಗಿ ಅಷ್ಟು ದೂರಕ್ಕೇ ತೇಲಿಬರುತ್ತಿತ್ತು. ತೇಲಿ ಬರುತ್ತಿದ್ದ ಆ ಪರಿಮಳದಿಂದಾಗಿ ಪಾತಿಂಜನಿಗೆ ತಾನು ಅಂದುಕೊಂಡಂತೆ ಉಸ್ಮಾನ್ ರೈಟರು ಶನಿವಾರ ಸಂತೆಯದಿನ ಸಂಜೆ ತಲುಪಿರುವುದು ಗೊತ್ತಾಗಿ ಸಮಾಧಾನವಾಯಿತು. ಆದರೆ ಹಾರೂನ್ ನಡುಮಧ್ಯಾಹ್ನ ಕಾಣಿಯಾಗಿ ಸಂಜೆ ಹಿಂತಿರುಗಿರುವ ಸುದ್ದಿ ಇಡೀ ಹೂವಿನ ಕೊಲ್ಲಿಗೆ ತಲುಪಿದ್ದರೂ ಪಾತಿಂಞಳಿಗೆ ಇನ್ನೂ ಗೊತ್ತಾಗಿರಲಿಲ್ಲ.
ಲೋಕಕ್ಕೆಲ್ಲಾ ಗೊತ್ತಿರುವ ಸಂಗತಿಗಳು ಪಾತಿಂಞಳಿಗೆ ಗೊತ್ತಾಗುತ್ತಿರಲಿಲ್ಲ. ಆದರೆ ಯಾರಿಗೂ ಅರ್ಥವಾಗದ ಸಂಗತಿಗಳನ್ನು ಪಾತಿಂಜ ಕಥೆ ಮಾಡಿಕೊಂಡು ರಾತ್ರಿ ಬೆಳಕಾಗುವವರೆಗೆ ಬೇಕಾದರೂ ಮಕ್ಕಳಿಗೆ ಹೇಳಿಕೊಂಡು ಮಲಗಿರುತ್ತಿದ್ದರು. ಪಾತಿಂಜ ಕಥೆ ಹೇಳುತ್ತಾರೆಂದರೆ ದೊಡ್ಡವರೂ ನಿದ್ದೆಮಾಡಿದಂತೆ ನಟಿಸಿಕೊಂಡು ಎದ್ದಿರುತ್ತಿದ್ದರು. ಮಕ್ಕಳೆಲ್ಲಾ ಹೂಂಗುಟ್ಟುವುದನ್ನು ನಿಲ್ಲಿಸಿದ ಮೇಲೆ ಪಾತಿಂಞ ಕಥೆ ಹೇಳುವುದನ್ನು ನಿಲ್ಲಿಸಲು ನೋಡಿದರೆ ಹಾಜಿರಾ ಹೂಂಗುಟ್ಟ ತೊಡಗುತ್ತಿದ್ದಳು. ಹಾಜಿರಾಳೂ ಹೂಂಗುಟ್ಟುವುದನ್ನು ನಿಲ್ಲಿಸಿ ಪಾತಿಂಞ ಕಥೆ ಹೇಳುವುದನ್ನು ನಿಲ್ಲಿಸಲು ನೋಡಿದರೆ ಹಾಜಮ್ಮ ನಿದ್ದೆಯಲ್ಲಿ ಹೂಂಗುಟ್ಟಿಕೊಂಡು ಕಥೆ ಹೇಳುವುದನ್ನು ನಿಲ್ಲಿಸದಿರುವಂತೆ ಕೇಳಿಕೊಳ್ಳುತ್ತಿದ್ದರು. ಒಮ್ಮೊಮ್ಮೆ ಆಯಿಷಾಳೂ ಉಸ್ಮಾನ್ ರೈಟರ ಮಗ್ಗಲಿಂದ ಎದ್ದು ಬಂದು ಗೋಡೆಗೆ ಆತು ಕೂತು ಕಥೆ ಕೇಳಿಸಿಕೊಳ್ಳುತ್ತಿದ್ದರು. ಎಲ್ಲರೂ ಕಥೆ ಕೇಳುವುದನ್ನು ನಿಲ್ಲಿಸಿದ ಮೇಲೆ ಪಾತಿಂಞ ಕಥೆ ಹೇಳುವುದನ್ನು ನಿಲ್ಲಿಸಲು ನೋಡಿದರೆ ಅವರ ಎದೆಗೆ ಬಾಯಿಟ್ಟುಕೊಂಡು ಚೀಪುತ್ತಾ ಮಲಗಿರುತ್ತಿದ್ದ ಆರು ವರ್ಷದ ಮಗಳು ನೆಬೀಸಾ ಅಮ್ಮನ ಎದೆಗೆ ತಲೆಯಿಂದ ಗುದ್ದಿ ಕಥೆ ಹೇಳುವುದನ್ನು ನಿಲ್ಲಿಸದಿರುವಂತೆ ಒತ್ತಾಯ ಮಾಡುತ್ತಿದ್ದಳು.
ರಾತ್ರಿಯಿಡೀ ನಿದ್ದೆ ಮಾಡಲು ಬಿಡದ ಮಗಳು ನೆಬೀಸಾ ಮೇಲಿನ ಪಾಡಿಯಿಂದ ತನ್ನ ಜೊತೆಗೆ ಬರುವುದೇ ಬೇಡವೆಂದು ಎಷು ಹೇಳಿದರೂ ಅವಳು ಕೇಳಿರಲಿಲ್ಲ. ನೆಬೀಸಾ ಆರುವರ್ಷವಾದರೂ ಬೆರಳು ಚೀಪಿ ಮೊಲೆಗೆ ಬಾಯಿಹಾಕಿ ಯಾವಾಗಲೂ ಕಣ್ಣೀರು ಸುರಿಸಿಕೊಂಡು ನಾಚಿಕೆಯಿಲ್ಲದೆ ಬದುಕುತ್ತಿರುವುದನ್ನು ಹೇಗೆ ಸರಿಮಾಡುವುದೆಂದು ಅರಿವಾಗದ ಪಾತಿಂಞ ಈ ಬಾರಿ ಮುರುಗಾಮಲೆಯಿಂದ ಬರುವಾಗ ಮಂತ್ರಿಸಿದ ನೀರನ್ನು ತಂದು ಕೊಡಬೇಕೆಂದು ಹೇಳಿ ಉಸ್ಮಾನ್ ರೈಟರ ಕೈಯಲ್ಲಿ ವರ್ಷದ ಹರಕೆಯ ಹಣವನ್ನು ಕೊಟ್ಟು ಕಳಿಸಿದ್ದರು. ಈ ಶನಿವಾರ ಅಸರ್ ನಮಾಜಿನ ಸಂಜೆಯ ಹೊತ್ತಿಗೆ ಉಸ್ಮಾನ್ ರೈಟರು ಕೈಯಲ್ಲಿ ಮಂತ್ರಿಸಿದ ನೀರನ್ನು ಹಿಡಿದುಕೊಂಡು ಬರುವರೆಂದು ಖಂಡಿತ ಗೊತ್ತಿದ್ದ ಪಾತಿಂಞ ಆಗಲೇ ಹೋದರೆ ಮಕ್ಕಳು ಖಂಡಿತ ಕಥೆ ಹೇಳದೇ ವಾಪಾಸು ಬರಲು ಬಿಡುವುದಿಲ್ಲ ಹೇಗೂ ರಾತ್ರಿ ಅಲ್ಲೇ ಮಲಗಿ ಎದ್ದು ಬಂದರಾಯಿತು ಎಂದು ತಡವಾಗಿ ಮೇಲಿನ ಪಾಡಿಯಿಂದ ಹೊರಟು ಮಳೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಎಲ್ಲಿ ಹೋದರೂ ನಾಯಿಮರಿಯಂತೆ ತನ್ನನ್ನು ಹಿಂಬಾಲಿಸುವ ಈ ಮಗಳ ಮಮಕಾರವನ್ನು ಹೇಗೆ ಕಡಿಮೆ ಮಾಡುವುದು ಎಂದು ಗೊತ್ತಾಗದೆ ಮಳೆಯಲ್ಲಿ ಅವಳಿಗೆ ಕಾಪಿ ರೆಂಬೆಯಿಂದ ಪೂಜೆ ಮಾಡುತ್ತಾ ನಡೆದು ಬಂದು ರೈಟರ ಬಿಡಾರ ಸೇರಿದ್ದರು. ಬಂದು ನೋಡಿದರೆ ಮಳೆನಿಂತು ಎಲ್ಲರೂ ಹೋಗಿ ಬಿಡಾರದ ಮುಂದಿನ ಸೀಬೆಯಮರದಿಂದ ಹನಿಗಳು ಸದ್ದು ಮಾಡುತ್ತಾ ತೊಟ್ಟಿಕ್ಕುತ್ತಿತ್ತು. ಬಿಡಾರದ ಎಲ್ಲ ಬಾಗಿಲುಗಳೂ ತೆರೆದುಕೊಂಡು ತುಪ್ಪದ ಅನ್ನದ ಪರಿಮಳ ಅಲ್ಲೆಲ್ಲಾ ತುಂಬಿಕೊಂಡು ನಿಂತಿತ್ತು ಈ ಮಗಳನ್ನು ಕರೆದುಕೊಂಡು ಯಾವ ಬಾಗಿಲಿನಿಂದ ಒಳಹೋಗುವುದು ಎಂದು ಗೊತ್ತಾಗದೆ ಬಚ್ಚಲುಮನೆಯ ಬಾಗಿಲಿನಿಂದ ಒಳನುಗ್ಗಿ ಅಲ್ಲೇ ಉರಿಯುತ್ತಿದ್ದ ಹಂಡೆಯ ಒಲೆಯ ಮುಂದೆ ಯಾರಿಗೂ ಹೇಳದೆ ಕಾಲುಚಾಚಿಕುಳಿತು ತಮ್ಮ ಮರಗಟ್ಟಿದ ಕಾಲುಗಳಿಗೆ ಶಾಖ ಕೊಡುತ್ತಾ ಕುಳಿತುಕೊಂಡಿದ್ದರು.
ಕಥೆ ಹೇಳುವ ಪಾತಿಂಞ ತನ್ನ ಬೆರಳು ಚೀಪುವ ಮಗಳ ಜೊತೆ ಆ ಕತ್ತಲೆಯಲ್ಲಿ ಒಳಬಂದು ಸೇರಿಕೊಂಡಿರುವುದು ಬೇರೆ ಯಾರ ಅರಿವಿಗೂ ಬಂದಿರಲಿಲ್ಲ. ಉಸ್ಮಾನ್ ರೈಟರು ಅಡಿಗೆ ಕೋಣೆಯಲ್ಲಿ ಮಣೆಯೊಂದನ್ನು ಹಾಕಿ ಕುಳಿತು ಅಡಿಗೆ ಒಲೆಯ ಮುಂದೆ ತಾವೂ ಕಾಲು ಚಾಚಿ ಕುಳಿತು ಸುಮ್ಮನೇ ಯೋಚಿಸುತ್ತಿದ್ದರು. ತಾಯಿ ಹಾಜಮ್ಮ ಮಗನ ಬದಿಯಲ್ಲಿ ತಾವೂ ಒಂದು ಮಣೆ ಹಾಕಿ ಕುಳಿತು ಒಲೆಯಲ್ಲಿ ಕುದಿಯುತ್ತಿರುವ ಕೋಳಿಯ ಸಾರಿಗೆ ಆಗಾಗ ಸೌಟು ಹಾಕಿ ತಿರುಗಿಸುತ್ತಾ ನಡುನಡುವಲ್ಲಿ ಎದ್ದು ಅಲ್ಲಿ ಇಲ್ಲಿ ಓಡಾಡುತ್ತಾ ಮಗನ ಜೊತೆ ಹೇಗೆ ಮಾತು ಶುರುಮಾಡುವುದು ಎಂದು ಯೋಚಿಸುತ್ತಿದ್ದರು. ರೈಟರ ಹೆಂಡತಿ ಸಕೀನಾ ಅರೆಯುವ ಕಲ್ಲಿನಲ್ಲಿ ನೆನೆದ ಅಕ್ಕಿ ತುಂಬಿಸಿಕೊಂಡು ಬೆಳಗಿನ ರೊಟ್ಟಿಗೆ ಅರೆಯುತ್ತಾ ಕೂತಿದ್ದರು. ಅವರ ಪಕ್ಕ ಸಣ್ಣ ಮಣೆಯಲ್ಲಿ ಕುಳಿತು ತಾಯಿಯ ಮಡಿಲೊಳಗೆ ತಲೆ ಸೇರಿಸಿಕೊಂಡು ಹಾರೂನ್ ಅಲ್ಲಾಡುತ್ತಾ ನಿದ್ದೆ ಹೋಗಲು ನೋಡುತ್ತಿದ್ದ. ಹೊರಗೆ ಆಪೀಸು ಕೋಣೆಯಲ್ಲಿ ಖುರಾನನ್ನು ಕೈಯಲ್ಲಿ ಹಿಡಿದುಕೊಂಡು ಸೂಫಿ ಮತ್ತು ಇಬ್ರಾಹಿಂ ಖುರಾನಿನ ಅದು ಯಾವುದೋ ಸೂರಾ ಒಂದನ್ನು ರಾಗವಾಗಿ ಓದುತ್ತಾ ನಡುನಡುವಲ್ಲಿ ಶಾಲೆಯ ಚೀಲದೊಳಗಿಂದ ಕನ್ನಡ ಪಾಠ ಪುಸ್ತಕಗಳನ್ನು ತೆರೆದು ನೋಡಿ ಮುಚ್ಚಿಡುತ್ತಾ ಕುಳಿತಿದ್ದರು.
ಮದರಂಗಿ ಅರೆಯುವ ಕಲ್ಲನ್ನು ತನ್ನ ತಾಯಿ ಜುಲೈಕಾ ಬೀಬಿ ಹಿತ್ತಲಿನಲ್ಲಿ ತಂದು ಇಟ್ಟದ್ದು ಎಂದು ಹಾಜಿರಾ ಅದನ್ನು ಯಾರಿಗೂ ಮುಟ್ಟಲು ಬಿಡುತ್ತಿರಲಿಲ್ಲ. ತನ್ನ ತಾಯಿಯೇ ಮದರಂಗಿ ಗಿಡವನ್ನು ಬರೆಯ ಕೆಳಗೆ ಮೂಲೆಯಲ್ಲಿ ನೆಟ್ಟು ನೀರು ಹಾಕಿ ಬೆಳೆಸಿದ್ದು ಎಂದು ಯಾರಿಗೂ ಅದರ ಎಲೆಗಳನ್ನು ಕೊಯ್ಯಲು ಬಿಡುತ್ತಿರಲಿಲ್ಲ. ಸಣ್ಣ ಹಬ್ಬಕ್ಕೆ ದೊಡ್ಡ ಹಬ್ಬಕ್ಕೆ ಯಾರಾದರೂ ಮದರಂಗಿ ಹಾಕಲು ಕೇಳಿದರೆ ಮನಸ್ಸಾದರೆ ತಾನೇ ಕೆಲವು ಎಲೆಗಳನ್ನು ಹರಿದು ಕೊಡುತ್ತಿದ್ದಳು. ಇಲ್ಲವಾದರೆ ಇಲ್ಲ ಎನ್ನುತ್ತಿದ್ದಳು. ಹಾಗಾಗಿ ಯಾರಾದರೂ ಬೇಕಾದರೆ ಹಾಜಿರಾ ಮದರಂಗಿ ಅರೆದು ಮುಗಿಸಿದ ಮೇಲೆ ತಾವೇ ಅವಳ ಪಕ್ಕ ಕುಳಿತು ಅವಳ ಕೈಯಿಂದ ತಮಗೆ ಬೇಕಾದಷ್ಟು ಮದರಂಗಿ ಹಾಕಿಸಿಕೊಂಡು ಹೋಗುತ್ತಿದ್ದರು. ಒಂದೊಂದು ಸಲ ಸಾಹುಕಾರರ ಬಂಗಲೆಯ ಹೆಂಗಸರೂ ಬಂದು ಹಾಜಿರಾಳ ಕೈಯಿಂದ ಮದರಂಗಿ ಹಾಕಿಸಿಕೊಳ್ಳುತ್ತಿದ್ದರು. ಶಾಂತಿ ಮತ್ತು ಸೇವಂತಿಯೂ ಮದರಂಗಿ ಹಾಕಿಸಿಕೊಳ್ಳುತ್ತಿದ್ದರು. ಗಂಡಸರು ಮದರಂಗಿ ಹಾಕುವುದು ನಿಷೇದಿತವಾಗಿರುವುದರಿಂದ ಗಂಡು ಹುಡುಗರು ಯಾರೂ ಮದರಿಂಗಿ ಹಾಕುತ್ತಿರಲಿಲಲ. ಆದರೆ ಒಮ್ಮೊಮ್ಮೆ ಮನಸಾದರೆ ಹಾಜಿರಾ ಹಾರೂನನನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಅವನ ಅಂಗೈಯಲ್ಲಿ ಗಿಳಿಯ ರೂಪದ ಮದರಂಗಿ ಹಾಕಿ ತನ್ನ ಕೈಗಳಿಗೆ ತಾನೇ ಮದರಂಗಿ ಹಾಕಿ ಅವನನ್ನು ಪಕ್ಕದಲ್ಲಿ ಮಲಗಿಸಿಕೊಂಡು ಅವನ ಮದರಂಗಿ ಹಾಳಾಗದಂತೆ ತಬ್ಬಿ ತಾನೂ ತನ್ನ ಕೈಗಳನ್ನು ಎತ್ತಿ ಹಿಡಿದು ನಿದ್ದೆ ಹೋಗುತ್ತಿದ್ದಳು.
ಆದರೆ ಇಂದು ಹಾರೂನನೂ ಹೆದರಿಕೊಂಡು ತಾಯಿ ಸಕೀನಾಳ ಮಡಿಲನ್ನು ಸೇರಿಕೊಂಡಿದ್ದ. ಯಾರಿಗೂ ಬೇಡ ಏನೂ ಬೇಡ ಎಂದು ಸಣ್ಣಗೆ ಸಿಟ್ಟು ಮಾಡಿಕೊಂಡು ಆಗಾಗ ಮುಗುಳ್ಳಗುತ್ತಾ ಹಾಜಿರಾ ಅರೆಯುತ್ತಾ ಕೂತಿದ್ದಳು. ಅವಳಿಗೆ ಇಂದು ತನ್ನ ತಾಯಿ ಜುಲೈಕಾ ಖಂಡಿತ ತನ್ನ ಜೊತೆ ಕನಸಿನಲ್ಲಿ ಮಾತನಾಡುವರು ಅನ್ನಿಸಿ ಖುಷಿಯಾಗಿತ್ತು. ಆದರೆ ಕಥೆ ಹೇಳುವ ಪಾತಿಂಞ ಬಂದು ಕಥೆ ಹೇಳುತ್ತಾ ತಾನು ಕನಸು ಕಾಣುವುದು ಯಾವಾಗ ಎಂದು ಅವಳಿಗೆ ಸಿಟ್ಟು ಬರುತ್ತಿತ್ತು. ಚಾಮುಂಡಿ ಬಾಣೆಯ ಕಾಪಿಗಿಡದ ಅಡಿಯಲ್ಲಿ ಕಾಣಿಸಿಕೊಂಡ ಎಣೆ ಹಾವುಗಳು, ನೀರು ಸೇದುವ ಸೈದಾಲಿ ಹೆದರಿಕೆ ಹೋಗಲು ತನ್ನ ಬೆನ್ನಿಗೆ 'ದುಂ' ಎಂದು ಗುದ್ದಿರುವುದು ಎಲ್ಲವನ್ನೂ ಕನಸಿನಲ್ಲಿ ತಾಯಿ ಜುಲೈಕಾ ಬೀಬಿಯ ಜೊತೆ ಹೇಳಬೇಕು ಎಂದುಕೊಂಡು ಮದರಂಗಿ ಹಚ್ಚಿ ನಿದ್ದೆ ಹೋಗಲು ಕಾಯುತ್ತಿದ್ದವಳಿಗೆ ಕಥೆ ಹೇಳುವ ಪಾತಿಂಞ ಮಗಳು ನೆಬೀಸಾಳ ಜೊತೆ ಬಂದಿರುವುದು ಗೊತ್ತಾಗಿ ಕಿರಿಕಿರಿಯಾಗುತ್ತಿತ್ತು.
ಇದು ಯಾವುದೊ ಗೊತ್ತಿಲ್ಲದ ಪಾತಿಂಞ ಈ ರಾತ್ರಿ ಯಾವ ಕಥೆ ಹೇಳುವುದು ಎಂದು ತಾವು ಇದುವರೆಗೆ ಹೇಳದ ಕಥೆಗಳನ್ನು ಜೋಡಿಸಿಕೊಳ್ಳಲು ನೋಡುತ್ತಿದ್ದರು. ಎಲ್ಲ ಕಥೆಗಳೂ ಕೊನೆಗೆ ಒಂದೊಂದು ಅರ್ಥವನ್ನು ಪಡೆದು ಕೇಳಿದ ಒಬ್ಬೊಬ್ಬರೂ ಒಂದೊಂದು ಬಗೆಯಲ್ಲಿ ನಿಟ್ಟುಸಿರು ಹಾಕಿ ನಿದ್ದೆಬಾರದೆ ಮಲಗುವುದನ್ನು ಕಂಡಿದ್ದ ಪಾತಿಂಞಳಿಗೆ ತಾನು ಕಥೆ ಹೇಳುವ ಈ ಹಾಳು ಅಭ್ಯಾಸವನ್ನು ಯಾರಿಂದ ಕಲಿತುಕೊಂಡೆ ಎಂದು ನೆನಪಾಗದೆ ಬಚ್ಟಲಿನ ಒಲೆಯ ಮುಂದೆ ಕುಳಿತುಕೊಂಡಲ್ಲೇ ಕೊಂಚ ಹಿಂದೆ ಸರಿದು ಸೊಂಟಕ್ಕೆ ಸುತ್ತಿಕೊಂಡಿದ್ದ ಬಟ್ಟೆಯ ಸಂಚಿಯನ್ನು ತೆರೆದು ಅದರೊಳಗೆ ಕೈಹಾಕಿ ಬೀಡಿಯ ಕಟ್ಟನ್ನು ಹೊರತೆಗೆದು ಅದರಿಂದ ಒಂದು ಬೀಡಿಯನ್ನು ತೆಗೆದರು. ನೆಲದಲ್ಲಿ ಬಿಸುಟಿದ್ದ ಇಕ್ಕುಳದಿಂದ ಒಲೆಯೊಳಗಿನ ಕೆಂಡವೊಂದನ್ನು ಅಮುಕಿ ತೆಗೆದು ಬೀಡಿ ಹಚ್ಚಿಕೊಂಡು ತಮ್ಮ ಕರುಳನ್ನು ತಲುಪುವವರೆಗೆ ಹೊಗೆಯನ್ನು ಒಳಕ್ಕೆ ಎಳೆದುಕೊಂಡರು. ಮೂಗಿನ ಬಲ ಹೊಳ್ಳೆಯಿಂದ ಹೊಗೆಯನ್ನು ಹೊರಕ್ಕೆ ಬಿಟ್ಟರು. ಅವರ ಸೆರಗಲ್ಲಿ ಸದ್ದು ಮಾಡದೆ ಬೆರಳು ಚೀಪಿಕೊಂಡು ಕುಳಿತಿದ್ದ ಮಗಳು ನೆಬೀಸಾ ಬೆರಳನ್ನು ಬಾಯಿಂದ ಹೊರಗಳೆದು ಬೀಡಿ ವಾಸನೆ ತಾಳಲಾರದೆ ಎದ್ದು ನಿಂತಳು. ಪಾತಿಂಞ ಹೊಣೆಯನ್ನು ಇನ್ನೊಮ್ಮೆ ಒಳಕ್ಕೆಳೆದು ಮೂಗಿನ ಎಡ ಹೊಳ್ಳೆಯಿಂದ ಬಿಟ್ಟರು. ಅವರಿಗೆ ಈ ರಾತ್ರಿ ಯಾರಾದರೂ ಒತ್ತಾಯಿಸಿದರೆ ಯಾವ ಕಥೆ ಹೇಳುವುದು ಎಂದು ನಿಧಾನಕ್ಕೆ ಅರಿವಾಗುತ್ತಿತ್ತು. ಹಾಗೇ ಹೊಗೆಯನ್ನು ಒಳಗೆಳೆಯುತ್ತಾ ಮೂಗಿನ ಹೊಳ್ಳೆಗಳನ್ನು ಬದಲಾಯಿಸಿ ಹೊರಬಿಡುತ್ತಾ ಕೂತಿದ್ದವರಿಗೆ ಆ ಕತ್ತಲಿನಲ್ಲಿ ಕತೆ ಹೇಳುವ ಮೊದಲು ಒಂದು ಸಿಂಗಲ್ ಕರಿಮೆಣಸಿನ ಕಾಪಿ ಕಷಾಯ ಕುಡಿದರೆ ಚಳಿಗೆ ಚೆನ್ನಾಗಿರಬಹುದು ಅನಿಸಿತು. ಉಸ್ಮಾನ್ ರೈಟರು ಅಡಿಗೆ ಒಲೆಯ ಮುಂದೆ ಕುಳಿತಿರುವಾಗ ಹೇಗೆ ಕೇಳುವುದು ಗೊತ್ತಾಗಲಿಲ್ಲ. ಇಲ್ಲೇ ಬಚ್ಚಲು ಒಲೆಯಲ್ಲಿ ಕಷಾಯ ಮಾಡಿ ಕುಡಿಯ ಬಹುದಲ್ಲ ಎಂದುಕೊಂಡು ಕಾಪಿ ಕಾಯಿಸುವ ಪಾತ್ರೆ ಇಲ್ಲೇ ತೆಗೆದುಕೊಂಡು ಬಾ ಎಂದು ಮಗಳು ನೆಬೀಸಾಳನ್ನು ಹಾಜಮ್ಮನ ಬಳಿ ಅಡಿಗೆ ಮನೆಗೆ ಕಳಿಸಿದರು. ನೆಬೀಸಾ ನೇರವಾಗಿ ಹೇಗೆ ಹೋಗುವುದು ಎಂದು ಹೆದರಿ ಹಿತ್ತಲಿನ ಬಾಗಿಲಿನಿಂದ ಹೋಗುವಾ ಎಂದು ಹೊರಗೆ ಬಂದು ಹಿಂದಿನಿಂದ ಹಿತ್ತಲಿನ ಕಡೆ ಹೋದವಳು ಹಿತ್ತಲಿನಲ್ಲಿ ಹಾಜಿರಾ ಮದರಂಗಿ ಅರೆಯುತ್ತಿರುವುದನ್ನು ಕಂಡು ಆಶೆಯಾಗಿ ಎಲ್ಲಮರೆತು ಹೋಗಿ ಅಲ್ಲೇ ನಿಂತುಕೊಂಡಳು.
ಅಡಿಗೆ ಮನೆಯೊಳಗೆ ಬಂದು ಸೇರುತ್ತಿದ್ದ ಬೀಡಿಯ ವಾಸನೆಯಿಂದಾಗಿ ಪಾತಿಂಞ ಬಚ್ಚಲು ಮನೆಯನ್ನು ಬಂದು ಸೇರಿಕೊಂಡಿರುವುದು ಉಸ್ಮಾನ್ ರೈಟರಿಗೆ ಗೊತ್ತಾಗಿತ್ತು ಆದರೂ ಬೇಕಾದರೆ ಅವಳೇ ಬಂದು ಮಾತಾಡಿಸಲಿ ಎಂದುಕೊಂಡು ಸುಮ್ಮನಿದ್ದರು. ಹೂವಿನ ಕೊಲ್ಲಿಯಲ್ಲಿ ಯಾರಿಗೂ ಇಲ್ಲದ ಸದರವನ್ನು ತನ್ನ ಮೇಲೆ ತೋರಿಸುತ್ತಿದ್ದ ಪಾತಿಂಞಳನ್ನು ಕಂಡರೆ ಉಸ್ಮಾನ್ ರೈಟರಿಗೆ ಮೇಲೆ ಸಿಟ್ಟಿದ್ದರೂ ಒಳಗೆ ಯಾವುದೋ ರೀತಿಯ ಪ್ರೀತಿ ಹರಿಯುತ್ತಿತ್ತು. ಪಾತಿಂಞ ಏನನ್ನಾದರೂ ಮುಖಕ್ಕೆ ಹೊಡೆದ ಹಾಗೆ ಹೇಳಿ ಆಮೇಲೆ ತಾನು ಅದನ್ನು ಹೇಳಿಯೇ ಇಲ್ಲ ಎನ್ನುವಂತೆ ಬೇರೆ ಏನನ್ನೋ ಹೇಳಲು ಶುರುಮಾಡುತ್ತಿದ್ದಳು. ಕೇಳಲು ಒಂದಕ್ಕೊಂದು ಸಂಬಂಧವಿಲ್ಲದಂತೆ ಕೇಳುತ್ತಿದ್ದ ಅವಳ ಮಾತುಗಳು ಕೊನೆಯಲ್ಲಿ ಏನೋ ಅರ್ಥವನ್ನು ಹೇಳುತ್ತಿದ್ದವು. ಪಾತಿಂಞ ಹೇಳುತ್ತಿದ್ದ ಮಾತುಗಳು ತುಂಬಾ ಕಾಲದ ನಂತರ ನಿಜವಾಗುತ್ತಿದ್ದವು.
'ನಿಮಗೆ ಇವಳು ಸರಿಯಾದ ಹೆಣ್ಣಲ್ಲ ರೈಟರೇ' ಎಂದು ಜುಲೈಕಾ ಉಸ್ಮಾನ್ ರೈಟರನ್ನು ಮದುವೆಯಾಗಿ ಹೂವಿನಕೊಲ್ಲಿಗೆ ಬಂದ ಎರಡು ದಿನದಲ್ಲೇ ಪಾತಿಂಞ ಹೇಳಿದ್ದರು. ಮೂವರು ಮಕ್ಕಳು ಹುಟ್ಟಿದ ಮೇಲೆ ಅದು ನಿಜವಾಗಿತ್ತು. ಹುಟ್ಟುವಾಗಲೇ ಹನರ್ಿಯಾವನ್ನು ಹೊತ್ತುಕೊಂಡು ಬಂದ ಹಾರೂನ್ ಬದುಕುವುದಿಲ್ಲ ಎಂದುಕೊಂಡು ಅವನನ್ನು ಬಚ್ಚಲು ಮನೆಯಲ್ಲೇ ಬಿಟ್ಟುಬಂದಿದ್ದ ಸಕೀನಾಳನ್ನು ಪಾತಿಂಞ ಬೈದು ಮಗುವನ್ನು ಎತ್ತಿಕೊಂಡು ತಂದು ತಾನೂ ಹಾಲು ಉಣ್ಣಿಸಿ ಇವನ ತಲೆಯಲ್ಲಿ ಸಾಹುಕಾರನಾಗುವ ಸುಳಿಗಳಿವೆ ಎಂದಿದ್ದರು. ಇಂದು ಹಾರೂನ್ ಕಾಣೆಿಯಾಗಿ ತಿರುಗಿಸಿಕ್ಕಿದ ಮೇಲೆ ರೈಟರಿಗೆ ಅದೂ ನಿಜವೆನಿಸಿತ್ತು. ಮರ ಹತ್ತಲು ಕಲಿತಿರುವ ಹಾಜಿರಾಳನ್ನು ತಾಯಿಯಂತೆ ಆಗಲು ಬಿಡಬಾರದು ರೈಟರೇ ಎಂದು ಪಾತಿಂಞ ಅಂದಿದ್ದರು. ನೀರು ಸೇದುವ ಸೈದಾಲಿಗೆ ರಾಜಯೋಗವಿದೆ ಎಂದು ನುಡಿದಿದ್ದರು. ಹಾಲು ಕರೆಯುವ ನಂಬಿಯಾರರ ಮರಣ ಹಸುವಿನ ಕೈಯಿಂದಲೇ ಸಂಭವಿಸುವುದು ಎಂದು ಹೇಳಿದ್ದರು. ಕುಂಞಿತುಮ್ಮ ತೀರಿ ಹೋದರೆ ಮೂಸಕಾಕಾನ ಬಾಳು ಮೂರಾಬಟ್ಟೆಯಾಗುವುದು ಅಂದಿದ್ದರು. ಪಾತಿಂಞ ಹೇಳಿದ ಎಲ್ಲವೂ ನಿಜವಾದರೆ ಪ್ರಳಯ ಸಂಭವಿಸುವ ಎಲ್ಲ ಸಂಭವಗಳಿವೆ ಎಂದು ಹೇಳಿ ಹಾಜಮ್ಮ ಪಾತಿಂಞಳ ಬಾಯಿಮುಚ್ಚಿಸಿ ನಗುತ್ತಿದ್ದರು. ಎಲ್ಲವನನೂ ಮನುಷ್ಯನೇ ಹೇಳಬಹುದಾದರೆ ಪಡೆದವನು ಪಡೆದವನಾಗಿ ಆಕಾಶದಲ್ಲಿ ಇರುವುದೇಕೆ ಎಂದು ಸವಾಲು ಹಾಕುತ್ತಿದ್ದರು.
ಮಳೆಬಂದು ಮಳೆನಿಂತು ಗಾಳಿ ಬೀಸಿ ಮರಗಳು ಅಲ್ಲಾಡಿ ನಡು ನಡುವೆ ಹೂವಿನಕೊಲ್ಲಿಯ ಎಲ್ಲೆಲ್ಲಿಂದಲೋ ತೇನೆ ಹಕ್ಕಿಗಳು ಹಾಡಿ ಕುತ್ತಿರಿ ಹಕ್ಕಿಗಳು ಗೂಡುಗಳನ್ನು ಮಳೆಯಲ್ಲಿ ಕಳೆದುಕೊಂಡು ಕಿರುಚಾಡುತ್ತಿದ್ದವು. ಹಾಜಿರಾ ಮದರಂಗಿ ಅರೆದು ಮುಗಿಸಿ ಅರೆದ ಮದರಂಗಿಯನ್ನು ಬಟ್ಟಲಲ್ಲಿ ಹಾಕಿ ಎದ್ದುನಿಂತು ಬೆರಳು ಚೀಪುವ ನೆಬೀಸಾ ಅವಳ ಹಿಂದೆ ದೀಪ ಕೈಯಲ್ಲಿ ಹಿಡಿದು ಬೆಳಕು ಸೂಸಿಕೊಂಡು ನಿಂತಿದ್ದಳು. ಉಸ್ಮಾನ್ ರೈಟರು ಅಡುಗೆ ಮನೆಯಿಂದ ಹೋಗದೆ ಯಾರೂ ಅಲ್ಲಿಗೆ ಹೋಗುವಂತಿರಲಿಲ್ಲ.
ಕಥೆ ಹೇಳುವ ಪಾತಿಂಞ ಈ ಇರುಳು ಯಾರಾದರೂ ಕಥೆ ಕೇಳಿದರೆ ಏನು ಕಥೆ ಹೇಳುವುದೆಂದು ಮನಸ್ಸಿನ್ಲೇ ಗುರುತು ಹಾಕಿಕೊಂಡು ಕಥೆ ಹೇಳಲು ಯಾರಾದರೂ ತನ್ನನ್ನು ಕೇಳಿ ಕೊಳ್ಳಲಿ ಎಂದು ಕಾಯುತ್ತಿದ್ದರು.

Comment viewing options

Select your preferred way to display the comments and click "Save settings" to activate your changes.

good one

tuMbaa cennaagide idara bagge bahaLa aalOcane maaDidaShToo manassoLage lagge iTTubiDuttade

Post new comment

The content of this field is kept private and will not be shown publicly.
5 + 4 =
Solve this simple math problem and enter the result. E.g. for 1+3, enter 4.