ನಡುರಾತ್ರಿಯಲ್ಲಿ ಮತ್ತೆ ಹಿಡಿದಿದ್ದ ಮಳೆ ಬೆಳಗಾದರೂ ಬಿಡದೆ ಸುರಿಯುತ್ತಿತ್ತು. 'ಇದೆಂತದು ದೆವ್ವದಂತಹ ಮಳೆ ರೈಟರೇ..' ಎಂದು ಗೊಣಗಿ ಕಾವಲುಗಾರ ಕುಂಞಿಕಣ್ಣ ತಾನು ನೆನೆಯುತ್ತಾ ಕೊಡೆಯನ್ನು ಉಸ್ಮಾನ್ ರೈಟರ ತಲೆಯ ಮೇಲೆ ಹಿಡಿದು ನಿಂತಿದ್ದ. ಉಸ್ಮಾನ್ ರೈಟರು ಹಣೆಯನ್ನು ನೆರಿಗೆ ಮಾಡಿಕೊಂಡು ಬಟ್ಲರ್ ಬಾಣೆಯ ನೆತ್ತಿಯಲ್ಲಿ ಮಳೆ ಅಳೆಯುವ ಕುಪ್ಪಿಯನ್ನು ಪರಿಶೀಲಿಸುತ್ತಿದ್ದರು. ರಾತ್ರಿಯಿಡೀ ಸುರಿದ ಮಳೆಗೆ ಮಳೆ ಅಳೆಯುವ ಕುಪ್ಪಿ ತುಂಬಿ ಹರಿದು ಈ ಹರಿದ ಮಳೆಯ ಲೆಕ್ಕವನ್ನು ಹೇಗೆ ಹಾಕುವುದು ಹೇಗೆ ರೈನ್ ರೆಕರ್ಾಡಿನಲ್ಲಿ ಬರೆದಿಡುವುದು ಎಂದು ಗೊತ್ತಾಗದೆ ಉಸ್ಮಾನ್ ರೈಟರು ತಾವೂ ಮಳೆಯಲ್ಲಿ ನೆನೆಯುತ್ತಿದ್ದರು. ಬೆಳಗಾಗಿರುವುದೂ ಗೊತ್ತಾಗದೆ ಆಕಾಶವೆಲ್ಲ ಕಪ್ಪಿಡಿದು ಬಂಗಲೆಯ ಕಡೆಯಿಂದ ನಂಬಿಯಾರ್ ಊದುತ್ತಿರುವ ಮೊದಲ ತುರಿಯ ಸದ್ದು ಮಳೆಯ ಸದ್ದನ್ನೂ ಮೀರಿ ಹೂವಿನಕೊಲ್ಲಿಯ ನಾನಾ ಮೂಲೆಗಳಲ್ಲಿ ಅಲೆಅಲೆಯಾಗಿ ತೇಲಿ ಹೋಗುತ್ತಿತ್ತು. ಮಣ್ಣಲ್ಲಿ ಮಣ್ಣಾಗಿ ಒಣಗಿ ಬಿದ್ದಿದ್ದ ಇಂಬುಳಗಳು ಮಳೆಗೆ ಜೀವ ಪಡೆದುಕೊಂಡು ಅವರಿಬ್ಬರ ಕಾಲುಗಳಿಗೆ ಹತ್ತಿ ಬರಲು ನೆಗೆದು ಸಿದ್ಧವಾಗುತ್ತಿದ್ದವು. `ಈ ಇಂಬುಳಗಳು ಇಷ್ಟುದಿನ ಎಲ್ಲಿ ಸತ್ತಿದ್ದವು ರೈಟರೇ..' ಎನ್ನುತ್ತ ಕುಂಞಿಕಣ್ಣ ಗಾಳಿಗೆ ಹಾರಿಹೋಗದ ಹಾಗೆ ಒಂದು ಕೈಯಲ್ಲಿ ಕೊಡೆಯನ್ನು ಹಿಡಿದುಕೊಂಡು ಇನ್ನೊಂದು ಕೈಯನ್ನು ತನ್ನ ಸೊಂಟದ ಸಂಚಿಗೆ ತೂರಿಸಿ ಹೊಗೆಸೊಪ್ಪಿನ ಕಟ್ಟು ತೆಗೆದು ಅದನ್ನು ಮಳೆಯ ನೀರಲ್ಲಿ ನೆನೆಸಿ ಹುಡಿಮಾಡಿ ರೈಟರ ಕಾಲುಗಳಿಗೆ ಉಜ್ಜಲು ನೋಡುತ್ತಿದ್ದ. ಏನೂ ಮಾಡಲು ಆಗದಂತೆ ಮಳೆ ನಾನಾ ದಿಕ್ಕಿನಿಂದ ರಾಚಿ ಅವರಿಬ್ಬರನ್ನು ಬೆಳಬೆಳಗೆಯೇ ಕಂಗಾಲು ಮಾಡಲು ನೋಡುತ್ತಿತ್ತು. ಬಟ್ಲರ್ ಬಾಣೆಯ ಒಂದು ಮೂಲೆಯಲ್ಲಿ ಒಂಟಿಯಾಗಿ ನಿಂತಿದ್ದ ಬಕರ್ೆ ಹಲಸಿನ ಮರದ ಕೊಂಬೆ ಕೊಂಬೆಗಳಲ್ಲಿ ನೇತಾಡುತ್ತಿದ್ದ ಹಲವು ಹಲಸಿನ ಹಣ್ಣುಗಳಲ್ಲಿ ಕೆಲವು ಕೊಳೆತು ಅವುಗಳ ಅದಮ್ಯ ಪರಿಮಳ ಸುತ್ತೆಲ್ಲ ಹರಡಿ ಆ ಮಳೆಯೂ, ಆ ಗಾಳಿಯೂ, ಆ ಪರಿಮಳವೂ ಒಂದರೊಳಗೊಂಡು ಬೆರೆತು ನಂಬಿಯಾರ್ ಊದುತ್ತಿದ್ದ ತುರಿಯ ಸದ್ದು ನಿಧಾನಕ್ಕೆ ಅಡಗಿ ಬೇರೆ ಏನೂ ಕೇಳಿಸದಂತೆ ಮಳೆಯ ಸದ್ದು ಮಾತ್ರ ಅಲ್ಲಿ ಸ್ಥಿರವಾಗಿ ನಿಂತುಕೊಂಡಿತ್ತು.
ನಿನ್ನೆ ರಾತ್ರಿಯ ಮಳೆಯ ಸದ್ದಿಗೆ ನಿದ್ದೆಯಿಲ್ಲದೆ ಯೋಚಿಸುತ್ತಿದ್ದ ಉಸ್ಮಾನ್ ರೈಟರು ಇನ್ನೂ ಕತ್ತಲಿರುವಾಗಲೇ ಎದ್ದು ಹಜಾರದಲ್ಲಿ ಹಾಸಿಕೊಂಡು ಮಲಗಿದ್ದ ಪಾತಿಂಞಳನ್ನೂ ಅವಳ ಸುತ್ತ ಕಥೆ ಕೇಳುತ್ತಾ ನಿದ್ದೆ ಹೋಗಿದ್ದ ಹಾಜಿರಾಳನ್ನೂ, ನೆಬೀಸಾಳನ್ನೂ, ತಾಯಿ ಹಾಜಮ್ಮಳನ್ನೂ ದಾಟಿದ್ದರು. ಹಜಾರದ ತಿಣ್ಣೆಯಲ್ಲಿ ಇಟಿದ್ದ ನೀರಿನ ಗಿಂಡಿಯನ್ನು ಕೈಗೆತ್ತಿಕೊಂಡು ಬೆಳಗಿನ ಸುಬೈ ನಮಾಜéಿಗೆ ಶುದ್ಧಿಮಾಡಲು ಹೊರಬಂದವರು ಈ ಮಳೆಗೆ ಹೇಗೆ ಅಂಗಳಕ್ಕೆ ಕಾಲಿಡುವುದು ಎಂದು ಗೊತ್ತಾಗದೆ ಹಾಗೇ ನಿಂತುಕೊಂಡಿದ್ದರು. ಪಂಜರದಲ್ಲಿ ನಿದ್ದೆ ತೂಗುತ್ತಿದ್ದ ಜುಲೈಕಾ ಅಲ್ಲಿಂದ ಇಲ್ಲಿಂದ ಸಣ್ಣದಾಗಿ ಕೇಳಿಸುತ್ತಿದ್ದ ಗುಡುಗಿನ ಸದ್ದನ್ನು ಆಲಿಸಿಕೊಂಡು `ಮಳೆ ರೈಟರೇ.. ಮಳೆರೈಟರೇ..' ಎಂದು ನಿದ್ದೆಯಲ್ಲಿ ಮಾತನಾಡುತ್ತಿತ್ತು. ಗೋಡೆಯಲ್ಲಿ ಅಲ್ಲಾಡುತ್ತಿದ್ದ ಪಷರ್ಿಯನ್ ಬೆಕ್ಕಿನ ಚಿತ್ರ ಆಗ ತಾನೇ ನಿದ್ದೆ ಹೋದಂತೆ ನಟಿಸುತ್ತಿತ್ತು. ಉಸ್ಮಾನ್ ರೈಟರಿಗೆ ಬೆಳಬೆಳಗೆಯೇ ತಲೆಕೆಟ್ಟು ಹೋಗಿತ್ತು. ಬಚ್ಚಲು ಕೋಣೆಗೆ ನಡೆದುಬಂದು ಒಲೆಯಲ್ಲಿ ಬೆಚ್ಚಗೆ ಕೂತಿದ್ದ ಹಂಡೆಯಿಂದ ಬಿಸಿಯ ನೀರನ್ನು ಗಿಂಡಿಗೆ ತುಂಬಿಸಿಕೊಂಡು ಅಲ್ಲೇ ಕುಕ್ಕುರುಗಾಲಲ್ಲಿ ಕೂತು ಶುದ್ಧಿ ಮಾಡಿಕೊಂಡಿದ್ದರು. ಅವರಿಗೆ ಈ ನರಕದಲ್ಲಿ ಬೆನೆ ಬರಲು ಯಾಕಾದರೂ ಬೆಳಬೆಳಗೆಯೇ ನಮಾಜು ಮಾಡಬೇಕು ಅನ್ನಿಸುತ್ತಿತ್ತು. ಇರುಳಿಡೀ ಕಥೆ ಹೇಳುತ್ತಿದ್ದ ಪಾತಿಂಞ ಕಥೆಯೊಳಗೆ ತನ್ನನ್ನೂ, ತನ್ನ ಮೊದಲ ಹೆಂಡತಿಯನ್ನೂ, ನ್ನ ತಾಯಿಯನ್ನೂ, ತನ್ನ ಮೊದಲ ಹೆಂಡತಿಯ ಮಕ್ಕಳನ್ನೂ, ಹೊಸ ಹೆಂಡತಿಯನ್ನೂ ಸೇರಿಸಿಕೊಂಡು ತನಗೂ ಕೇಳುವ ಹಾಗೆ ಅಲ್ಲಲ್ಲಿ ಧನಿಎತ್ತರಿಸಿಕೊಂಡು ಹೇಳಿದ್ದನ್ನು ಉಸ್ಮಾನ್ ರೈಟರೂ ಅಲ್ಲಲ್ಲಿ ಕೇಳಿಸಿಕೊಂಡಿದ್ದರು. ಪಾತಿಂಞಿ ಹೇಳಿದ ಕಥೆಯನ್ನು ಅಲ್ಲಲಿ ಕೇಳಿಸಿಕೊಂಡ ಅವರಿಗೆ ರಾತ್ರಿಯಿಡೀ ನಿದ್ದೆ ಬಂದಿರಲಿಲ್ಲ. ಹೆಂಡತಿ ಆಯಿಷಾ ತಾನೂ ಕಣ್ಣು ಬಿಟ್ಟುಕೊಂಡು ಮಾಡಿನ ಮೇಲೆ ಬೀಳುತ್ತಿದ್ದ ಮಳೆಯ ಸದ್ದನ್ನು ಕೇಳುತ್ತಾ ಹೆಂಚಿನ ಕನ್ನಡಿಯಿಂದ ಕಾಣುವ ಮಿಂಚಿನ ಬೆಳಕನ್ನು ನೋಡುತ್ತಾ ಮಲಗಿದ್ದವಳು ನಿದ್ದೆಯಲ್ಲಿ ಕನವರಿಸುತ್ತಿದ್ದಳು. ಅವಳಿಗೂ ಈ ಹೂವಿನಕೊಲ್ಲಿಯ ಬದುಕು ಸರಿ ಆಗುತ್ತಿಲ್ಲ ಅಂತ ಉಸ್ಮಾನ್ ರೈಟರಿಗೆ ಗೊತ್ತಾಗುತ್ತಿತ್ತು. ತನ್ನನ್ನು ನಂಬಿಕೊಂಡಿರುವ ಯಾರಿಗೂ ಸರಿ ಆಗುತ್ತಿಲ್ಲ. ತನಗೂ ಸರಿಯಾಗುತ್ತಿಲ್ಲ. ಎಲ್ಲವನ್ನೂ ಸರಿಮಾಡಬೇಕಾಗಿರುವ ಆ ಪಡೆದವನಿಗೆ ಕಣ್ಣೂ ಕಾಣಿಸುತ್ತಿಲ್ಲ. ಕಿವಿಯೂ ಕೇಳಿಸುತ್ತಿಲ್ಲ. ಸುರಿಯುತ್ತಿರುವ ಈ ಮಳೆಯೂ ನಿಲ್ಲುವುದಿಲ್ಲ. ಅಯ್ಯೋ ಪಡೆದವನೇ.. ಎಂದು ಶುದ್ಧಿ ಮುಗಿಸಿ ಬಚ್ಚಲಿಂದ ಎದ್ದ ಅವರು ಪುನಃ ಹಜಾರವನ್ನು ದಾಟಿ ಆಫೀಸು ಕೋಣೆಯೊಳಕ್ಕೆ ಹೊಕ್ಕು ಬಾಗಿಲು ಹಾಕಿಕೊಂಡು ಚಿಮಿಣಿದೀಪ ಹಚ್ಚಿ ಆ ಮಿಣಿ ಮಿಣಿ ಬೆಳಕಿನಲ್ಲಿ ಕಹಬಾದ ಕಡೆ ಮುಖಮಾಡಿ ಬೆಳಗಿನ ನಮಾಜಿಗೆ ಕೈಕಟ್ಟಿದ್ದರು. ಆಪೀಸು ರೂಮಿನ ತೆರೆದೇ ಇದ್ದ ಕಿಟಕಿಯಿಂದ ಸಾಕಷ್ಟು ಮಳೆಯ ನೀರು ಒಳಕ್ಕೆ ನುಗ್ಗಿ ಅಲ್ಲಿ ಒದ್ದೆಯಾಗಿತ್ತು. ಆ ಒದ್ದೆಯಲ್ಲೇ ಚಾಪೆ ಹಾಕಿಕೊಂಡು, ನಮಾಜು ಮುಗಿಸಿ, ಸಲಾತ್ ಹೇಳಿ, ಕೊಂಚ ಹೊತ್ತು ಹಾಗೇ ಕುಳಿತಿದ್ದು ದುವಾ ಮಾಡಿ, ತಮ್ಮ ಬೊಗಸೆಗಳನ್ನು ಮುಖದ ಬಳಿ ತಂದು ಚುಂಬಿಸಿ ಎದ್ದು ಬಾಗಿಲು ತೆರೆದು ನೋಡಿದರೆ ಹಜಾರದಲ್ಲಿ ಸಣ್ಣಗೆ ಬೆಳಕು ತುಂಬಿಕೊಳ್ಳುತ್ತಿತ್ತು.
ಹಜಾರದಲ್ಲಿ ಹಾಸಿಕೊಂಡು ಕಥೆ ಹೇಳಿ ನಿದ್ದೆ ಹೋಗಿದ್ದ ಪಾತಿಂಞಳ ಎದೆಗೆ ಆತುಕೊಂಡು ಮಗಳು ನೆಬೀಸಾ ತಾಯಿಯ ಸೊಂಟದ ಮೇಲೆ ಕಾಲು ಎಸೆದುಕೊಂಡು ತನ್ನ ಮದರಂಗಿ ಬಳಿದ ಬೆರಳು ಚೀಪಿಕೊಂಡು ಮಲಗಿದ್ದಳು. ಅವಳ ಪಾದಗಳಿಗೆ ಬಳಿದಿದ್ದ ಮದರಂಗಿ ಹಾಗೇ ಹಸುರಾಗಿ ಅಂಟಿಕೊಂಡಿತ್ತು. ತಾಯಿ ಹಾಜಮ್ಮ ಬಾಯಿ ತೆರೆದುಕೊಂಡು ಗೊರಕೆ ಹೊಡೆದುಕೊಂಡು ಏನೋ ಗೊಣಗುತ್ತಾ ಮಲಗಿದ್ದರು. ಪಾತಿಂಞಳ ಮುಖದಲ್ಲಿ ಏನೋ ಒಂದು ತರಹದ ನಗುವಿತ್ತು. ಹಾಜಿರಾ ಕೈಕಾಲುಗಳಿಗೆಲ್ಲಾ ಮದರಂಗಿ ಹಚ್ಚಿಕೊಂಡಿದ್ದವಳು ತನಗೆ ಈ ಲೋಕದಲ್ಲಿ ಯಾರೂ ಇಲ್ಲ ಎನ್ನುವ ಹಾಗೆ ಒಂದು ಮೂಲೆಯಲ್ಲಿ ಗೋಡೆಗೆ ಅಂಟಿಕೊಂಡು ನಿದ್ದೆ ಹೋಗಿದ್ದಳು. ಅವಳ ತಲೆಯ ಬಟ್ಟೆ ನಿದ್ದೆಯಲ್ಲಿ ಕೊಂಚ ಸರಿದು ಅವಳ ಮುಡಿ ಮುಖದಲ್ಲೆಲ್ಲ ಹರಡಿ ಹಜಾರದ ಒಳಗೆ ತುಂಬಿಕೊಳ್ಳುತ್ತಿದ್ದ ಬೆಳಕಿನಲ್ಲಿ ಅವಳ ಮುಖವೂ ಸಂಕಟದಲ್ಲಿರುವಂತೆ ಉಸ್ಮಾನ್ ರೈಟರಿಗೆ ಕಂಡಿತು. ಯಾರ ಮುಖದಲ್ಲೂ ಖುಷಿ ಇರುವ ಹಾಗೆ ಕಾಣಿಸುತ್ತಿಲ್ಲವಲ್ಲ ಪಡೆದವನೇ ಎಂದು ಅಡುಗೆ ಕೋಣೆಯ ಕಡೆ ಬಂದವರಿಗೆ ಆಗಲೇ ಎದ್ದಿದ್ದ ಆಯಿಷಾ ಕಾಫಿ ಮಾಡಿಕೊಟ್ಟಿದ್ದಳು. ಈಗ ನೋಡಿದರೆ ಇಡೀ ಹೂವಿನಕೊಲ್ಲಿಯಲ್ಲಿ ಈ ಬೆಳಗಿನ ಸುರಿಯುವ ಮಳೆಯಲ್ಲಿ ನಿಮಗಿರುವುದು ನಾನೊಬ್ಬನೇ ರೈಟರೇ ಎನ್ನುವ ಹಾಗೆ ಕಾವಲುಗಾರ ಕುಂಞಿಕಣ್ಣ ಕೈಯಲ್ಲಿರುವ ಹೊಗೆ ಸೊಪ್ಪಿನ ಉಂಡೆಯಿಂದ ಕಾಲುಗಳಿಗೆ ಉಜ್ಜಲು ನೋಡುತ್ತಿದ್ದ. 'ಕರಡಿಯಂತಹ ಪ್ರೀತಿ ನನ್ನದು ರೈಟರೇ..' ಎಂದು ತನ್ನನ್ನು ಹೂವಿನ ಕೊಲ್ಲಿಯ ಉದ್ದಕ್ಕೂ ಹಿಂಬಾಲಿಸಿಕೊಂಡು ಬರುವ ಈ ಕುಂಞಿಕಣ್ಣ ಮಾಯಾವಿಯೋ, ಕಾವಲುಗಾರನೋ, ವೈದ್ಯನೋ ಇಲ್ಲ ತನ್ನದೇ ನೆರಳೋ ಎಂದು ಉಸ್ಮಾನ್ ರೈಟರಿಗೆ ಈವರೆಗೂ ಅರಿವಿಗೆ ಬಂದಿರಲಿಲ್ಲ. ಅಳುವ ಮಕ್ಕಳನ್ನು ಎತ್ತಿಕೊಂಡು ಗಾಳಿಯಲ್ಲಿ ಬೀಸಿ ಒಗೆದು ಕೆಳಗೆ ಬೀಳದಂತೆ ಹಿಡಿದು ನೆಲಕ್ಕೆ ಇಳಿಸುವ ಕುಂಞಿಕಣ್ಣು- ಯಾರಿಗೆ ಉಳುಕಿದರೂ ತೈಲ ಹಚ್ಚಿ ನೀವಿ, ಬೆರಳು ಹಿಡಿದು ನಡಿಕೆ ತೆಗೆದು, ಆಕಾಶ ನೋಡಿ ಮಂತ್ರಿಸಿ ಉಳುಕು ತೆಗೆಯುವ ಕುಂಞಿಕಣ್ಣ- ತೋಟದೊಳಗೆ ಹುಟ್ಟಿಕೊಂಡ ಅಣಬೆಗಳನ್ನು ತನ್ನ ತಲೆ ವಸ್ತ್ರದಲ್ಲಿ ಸುತ್ತಿ ತಂದು ಹಜಾರದ ಅಂಗಳದಲ್ಲಿ ಸುರಿದು ಬಿಡುವ ಕುಂಞಕಣ್ಣ- ಹಾವು ಕಚ್ಚಿದ ಜಾಗಕ್ಕೆ ಜೀವ ಇರುವ ಕೋಳಿಯ ಗುದದ್ವಾರವನ್ನು ಒತ್ತಿ ಹಿಡಿದು ವಿಷಹೀರಿಸಿ ಹಾವು ಕಚ್ಚಿದವರನ್ನು ಬದುಕಿಸುವ ಕುಂಞಿಕಣ್ಣ - ಈ ಕುಂಞಿಕಣ್ಣ ಹೂವಿನ ಕೊಲ್ಲಿಗೆ ಹೇಗೆ ಯಾವಾಗ ಎಲ್ಲಿಂದ ಬಂದ ಎಂಬುದು ಯಾರ ಅರಿವಿಗೂ ಬಂದಿರಲಿಲ್ಲ. ತೀರಿಹೋದ ದೊಡ್ಡ ಸಾಹುಕಾರರ ಕಾಲದಲ್ಲಿ ತಾನು ಕೆಲಸ ಮಾಡುತ್ತಿದ್ದ ಏಲಕ್ಕಿ ಮಲೆಯನ್ನು ಬಿಟ್ಟುಬಂದ ಉಸ್ಮಾನ್ ರೈಟರು ತಾಯಿ ಹಾಜಮ್ಮಳ ಜೊತೆ ಹೂವಿನ ಕೊಲ್ಲಿಗೆ ಬಂದು ರೈಟರ ಕೆಲಸದ ಚಾಜರ್ು ತೆಗೆದುಕೊಂಡಾಗ ಕುಂಞಿಕಣ್ಣ ತನ್ನ ತಲೆಯ ಬೆಳ್ಳಗಿನ ವಸ್ತ್ರದಲ್ಲಿ ಒಂದುಮುಷ್ಟಿ ಸಕ್ಕರೆ, ಒಂದು ಮುಷ್ಟಿ ಚಹಾದ ಹುಡಿ, ಕಟ್ಟಿಕೊಂಡು ಶೀಷೆಯಲ್ಲಿ ಅರ್ಧ ಸೇರು ಹಸುವಿನ ಹಾಲು ತುಂಬಿಸಿ ತಂದು ನೆಲದಲ್ಲಿಟ್ಟು `ಇದು ಕುಂಞಿಕಣ್ಣನ ಮೊದಲ ಮಯರ್ಾದೆ ರೈಟರೇ..' ಅಂದಿದ್ದ. ಮಳೆಯ ಮಾಸಗಳನ್ನೂ ಮಳೆಯ ನಕ್ಷತ್ರಗಳನ್ನೂ ತಾನೇ ಕಂಡು ಹಿಡಿದವನಂತೆ ಮಾತನಾಡುತ್ತಿದ್ದ ಕುಂಞಿಕಣ್ಣ `ಮಳೆಯನ್ನು ನರಮನುಷ್ಯರಿಂದ ಅಳೆಯಲು ಆಗುತ್ತದೆಯಾ ರೈಟರೇ..' ಎಂದು ತಮಾಷೆಗೆ ಹೇಳುತ್ತಿದ್ದ. ಈವತ್ತು ಬೆಳಬೆಳಗೆಯೇ ಕೊಡೆ ಹಿಡಿದುಕೊಂಡು ಅಂಗಳದಲ್ಲಿ ಹಾಜರಾಗಿ ರೈಟರಿ ತಲೆಯ ಮೇಲೆ ಕೊಡೆ ಹಿಡಿದುಕೊಂಡು ತಾನೂ ನೆನೆದುಕೊಂಡು ಬಟ್ಲರ್ ಬಾಣೆಯ ಮಳೆ ಅಳೆಯುವ ನೆತ್ತಿಗೆ ಕೆಸರಲ್ಲಿ ಕಾಲು ಬೀಸುತ್ತಾ ಹಿಂಬಾಲಿಸಿಕೊಂಡು ಬಂದಿದ್ದ.
ಆಕಾಶದಲ್ಲಿ ಇನ್ನು ಗುಡುಗಿನ ಸದ್ದು ಸಣ್ಣಗೆ ಧ್ವನಿಮಾಡುತ್ತಾ ಉರುಳಾಡುತ್ತಿತ್ತು. ಸುರಿದ ಮಳೆಗೆ ಕಾಪಿ ಗಿಡಗಳು ಮುದುಡಿ ನೀರು ಸುರಿಸಿ ಸುಮ್ಮನೆ ಕೂತಿದ್ದವು. ಗಾಳಿಗೆ ಕಳಚಿ ಬಿದ್ದ ನಾನಾ ಬಣ್ಣಗಳ ಎಲೆಗಳು ಬಟ್ಲರ್ ಬಾಣೆಯ ಹುಲ್ಲುಗಾವಲಿನ ತುಂಬ ಮಳೆಗೆ ಸಿಲುಕಿ ಬಿದ್ದುಕೊಂಡಿದ್ದವು. ಬಕರ್ೆ ಹಲಸಿನ ಬುಡದಲ್ಲಿ ಇದ್ದ ಬಟ್ಲರನ ಗೋರಿಯ ಕಟ್ಟೆಯ ಮೇಲೂ ಒಂದೆರೆಡು ಹಲಸಿನ ಹಳದಿ ಎಲೆಗಳು ಬಿದ್ದು ನೀರಲ್ಲಿ ತೇಲುತ್ತಿದ್ದವು. ಬಿಳಿಯ ದೊರೆ ಮಿಸ್ಟರ್ ವೈಟ್ ಜೊತೆಯಲ್ಲಿ ಮದರಾಸಿನಿಂದ ಅಡುಗೆ ಕೆಲಸಕ್ಕೆ ಬಂದಿದ್ದ ಕರಿಯ ಬಣ್ಣದ ಬಟ್ಲರ್ ಬಹಳ ಹಿಂದೆ ದೊಡ್ಡ ಸಾಹುಕಾರರು ತೋಟವನ್ನು ಕೊಂಡುಕೊಳ್ಳುವ ಮೊದಲೇ ಕುಡಿದು ಕುಡಿದು ತೀರಿಹೋಗಿದ್ದ. ಆತನ ಸಮಾದಿಯ ಬದಿಯಲಿ ನೆಟ್ಟಿದ್ದ ಬಕರ್ೆ ಹಲಸಿನ ಗಿಡ ಮರವಾಗಿ ಅದಕ್ಕೂ ವಯಸ್ಸಾಗಿ ಅದೂ ಮಳೆಯಲ್ಲಿ ತೀರಿ ಹೋಗುವ ಹಾಗೆ ಕಾಣಿಸುತ್ತಿತ್ತು. ಆ ಬಟ್ಲರನನ್ನು ಕೊನೆಯ ಕಾಲದಲ್ಲಿ ಕಂಡವರಲ್ಲಿ ಬದುಕಿ ಉಳಿದಿರುವವರು ಹೂವಿನ ಕೊಲ್ಲಿಯಲ್ಲಿ ತಾನು ಮತ್ತು ಮುದಾರ ಮಾತ್ರ ಎಂದು ಕುಂಞಿಕಣ್ಣ ಹೇಳುತ್ತಿದ್ದ.
ಉಸ್ಮಾನ್ ರೈಟರು ಮಳೆ ಅಳೆಯುವ ಕುಪ್ಪಿಯ ಬಾಯಿಯ ನಳಿಕೆಯನ್ನು ತೆಗೆದು ನೀರನ್ನು ಮಳೆಯಲ್ಲಿ ಚೆಲ್ಲಿದರು. ತುಂಬಿ ಹರಿದ ಮಳೆಯ ನೀರನ್ನು ಅಳೆಯುವುದು ಸುಮ್ಮನೆ ಎಂದು ಅವರಿಗೆ ಅರಿವಾಗಿತ್ತು. `ಈ ಮಳೆಯನ್ನು ಅಳೆದರೂ ಬಿಟ್ಟರೂ ಈ ಸಲದ ಕಾಫಿ ಹೂವಿಗೆ ಈ ಮಳೆ ಸಾಕಲ್ಲವೇ ರೈಟರೇ..' ಎಂದು ಗೊಣಗಿ ಕುಂಞಿಕಣ್ಣ ಬಂದ ದಾರಿಯನ್ನು ತಿರುಗಿ ನೋಡಿದ. ಮಳೆ ನಿಂತುಕೊಳ್ಳಲು ನೋಡುತ್ತಿತ್ತು. ಎಲ್ಲಿಂದಲೋ ಬಂದ ನಸುಗೆಂಪು ಬೆಳಕು ಹೂವಿನ ಕೊಲ್ಲಿಯ ಮೇಲೆ ವ್ಯಾಪಿಸಲು ತೊಡಗಿತ್ತು. ಬಾಣೆಯಿಂದ ಮಳೆಯ ನೀರು ಸದ್ದುಮಾಡುತ್ತ ಕಾಲುದಾರಿಯಲ್ಲಿ ಹರಿದು ಕೆಳಗೆ ಹೋಗುತ್ತಿತ್ತು. ಪಾನವಾಳಮರದ ಕೆಂಪು ಹೂಗಳು ನೆಲಕ್ಕೆ ಬಿದ್ದು ಆ ಕೆಸರು ನೀರಲ್ಲಿ ಹರಿದು ಹೋಗುತ್ತಿತ್ತು. ಕೆಳಗಿಂದ ಮೇಲಕ್ಕೆ ತೇಲಿ ಬರುತ್ತಿದ್ದ ಕುಳಿರುಗಾಳಿ ತುಂತುರು ಮಳೆ ನೀರನ್ನು ಅವರಿಬ್ಬರ ಮೇಲೆ ಸಿಂಪಡಿಸುತ್ತಾ ಹಾದು ಹೋಗುತ್ತಿತ್ತು. ರೈಟರು ಮುಖದಲ್ಲೆಲ್ಲಲಾ ನೀರು ಮಾಡಿಕೊಂಡು ಬಾಣೆಯನ್ನು ಇಳಿಯಲು ಶುರುಮಾಡಿದರು. ಕುಂಞಿಕಣ್ಣ ಕೊಡೆಯನ್ನು ಮಡಚಿ ಅದನ್ನೇ ಕೋಲುಮಾಡಿ ಹಿಡಿದು ಜಾರಿ ಬೀಳದಂತೆ ಕೆಸರಲ್ಲಿ ಊರಿ ತಾನೂ ರೈಟರ ಹಿಂದೆ ಇಳಿಯ ತೊಡಗಿದ.
ಕೆಳಗಿನ ಪಾಡಿಯ ಕಡೆಯಿಂದ ಕಾಲುದಾರಿಯಲ್ಲಿ ರಾತ್ರಿ ಕಾವಲುಗಾರ ಮೂಸಕಾಕಾ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಮರಿಯಮ್ಮ ನಿಂತ ಮಳೆಯಲ್ಲಿ ನಡೆದುಕೊಂಡು ಬರುತ್ತಿದ್ದರು. ಮರಿಯಮ್ಮಳ ನಾಯಿ ಜಿಮ್ಮಿ ರಾತ್ರಿ ಗುಡುಗಿನ ಸದ್ದಿಗೆ ಹೆದರಿ ಎಲ್ಲೋ ಕಾಣೆಯಾಗಿತ್ತು. ಅದನ್ನು ಹುಡುಕುತ್ತಾ ಮಳೆಯಲ್ಲಿ ಅಲೆದಾಡುತ್ತಿದ್ದ ಮರಿಯಮ್ಮಳನ್ನು ಹಿಂಬಾಲಿಸಿಕೊಂಡು ಮೂಸಕಾಕಾ ತಾನೂ ಜಿಮ್ಮಿಯ ಹೆಸರು ಹಿಡಿದು ಕೂಗುತ್ತಾ ಬರುತ್ತಿದ್ದರು. ಅವರಿಬ್ಬರೂ ಜಿಮ್ಮಿಯನ್ನು ಹುಡುಕುತ್ತಾ ರಾಟೆಮನೆಗೆ ಹೋಗಿ, ಮೇಲಿನ ಪಾಡಿಗೆ ಹೋಗಿ, ಬಂಗಲೆಯ ಹತ್ತಿರ ಹುಡುಕಿ, ರೈಟರ ಬಿಡಾರದ ಬಳಿ ಹುಡುಕಿ, ಮುದಾರನಲ್ಲಿ ಕೇಳಿ, ನಂಬಿಯಾರರಲ್ಲಿ ವಿಚಾರಿಸಿಕೊಂಡು ಬರುವಾಗ ದಾರಿಯಲ್ಲಿ ಕಥೆ ಹೇಳುವ ಪಾತಿಂಞ ಮಗಳು ನೆಬೀಸಳ ಕೈ ಹಿಡಿದುಕೊಂಡು ರೈಟರ ಮನೆಯಿಂದ ಮಳೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಅವರಲ್ಲಿ ಕಾಣೆಯಾದ ಜಿಮ್ಮಿಯ ಸಂಗತಿ ಕೇಳಿದರೆ ಅವರು ಅದನ್ನೂ ಕಥೆ ಮಾಡಿ ಹೇಳಬಹುದು ಎಂದು ಹೆದರಿ, 'ಸುಮ್ಮನೆ ರೈಟರನ್ನು ನೋಡಲು ಬಂದೆವು' ಅಂದಿದ್ದರು. ರೈಟರು ಬೆಳಬೆಳಿಗೆಯೇ ಮಳೆ ಅಳೆಯಲು ಬಟ್ಲರ್ ಬಾಣೆಗೆ ಹೋಗಿರುವರು ಎಂದು ಪಾತಿಂಞ ಹೇಳಿ ಮಗಳೊಡನೆ ಮುಂದೆ ನಡೆದಿದ್ದರು.
ಪಾತಿಂಞ ಮೇಲಿನ ಪಾಡಿಯ ತನ್ನ ಬಿಡಾರ ಸೇರುವ ಮೊದಲು ಸಾಹುಕಾರರ ಬಂಗಲೆಗೊಮ್ಮೆ ಹೋಗಿ ಬರಬೇಕು ಎಂದು ಮಗಳ ರಟ್ಟೆಹಿಡಿದು ಎಳೆದುಕೊಂಡು ವೇಗವಾಗಿ ನಡೆಯುತ್ತಿದ್ದರು. ಪಾತಿಂಞಳಿಗೆ ಅದು ಹೇಗೋ ಸಣ್ಣ ಸಾಹುಕಾರರೂ ಮಕ್ಕಾದಿಂದ ನಿನ್ನೆ ರಾತ್ರಿಯೇ ಬಂದು ತಲುಪಿರಬಹುದು ಎಂದು ಅನ್ನಿಸುತ್ತಿತ್ತು. ಸಾಹುಕಾರರ ಮಕ್ಕಳಿಗೆ ಕುರಾನು ಕಲಿಸುವ ಮೊಲ್ಲಾಕ ಹೂವಿನ ಕೊಲ್ಲಿಯಿಂದ ಮಕ್ಕಾ ತಲುಪಲು ಎಷ್ಟು ಹಗಲುರಾತ್ರಿಗಳು ಬೇಕು ಹಾಗು ಅಲ್ಲಿಂದ ಹಿಂತಿರುಗಲು ಎಷ್ಟು ಹಗಲರಾತ್ರಿಗಳು ಬೇಕು ಎಂದು ಲೆಕ್ಕಹಾಕಿ ಸಣ್ಣ ಸಾಹುಕಾರರು ಈವತ್ತು ರಾತ್ರಿ ಹೂವಿನ ಕೊಲ್ಲಿ ತಲುಪುತ್ತಾರೆ ಎಂದು ನಿನ್ನೆ ಸಂಜೆ ಮಳೆ ಶುರುವಾಗುವ ಮೊದಲೇ ಹೇಳಿ ಬಿಟ್ಟಿದ್ದರು. ಪಾತಿಂಞಳಿಗೂ ಆ ಲೆಕ್ಕ ಸರಿಯಾಗಿದೆ ಅನ್ನಿಸಿತ್ತು. ಬೆಳಗೆ ಚಕ್ರೋಲು ಶುರುವಾಗುವ ಮೊದಲೇ ಸಣ್ಣಸಾಹುಕಾರರಲ್ಲಿ ಮಾತನಾಡಿ, ರೈಟರಿಗೆ ಹೇಳಿಸಿ ತೋಟದ ಹಾಲುಕುಡಿಯುವ ಮಕ್ಕಳನ್ನು ನೋಡಿಕೊಳ್ಳುವ ಕೆಲಸವನ್ನು ಮರಿಯಾಳ ಕೈಯಿಂದ ತಪ್ಪಿಸಿ ತಾನು ತೆಗೆದುಕೊಳ್ಳಬೇಕು ಎನ್ನುವುದ ಪಾತಿಂಞಳ ಲೆಕ್ಕಾಚಾರವಾಗಿತ್ತು. ಬೇರೆ ಯಾರಾದರೂ ಹೇಳುವ ಮೊದಲೇ ಮಿಠಾಯಿಪಾಪ ಮತ್ತು ಮರಿಯಮ್ಮಳ ಸಂಗತಿಯನ್ನು ಸಾಹುಕಾರರಲ್ಲಿ ಗುಟ್ಟಾಗಿ ಹೇಳಿ ಬಿಡಬೇಕು ಎಂದೂ ಪಾತಿಂಞ ಅಂದುಕೊಂಡಿದ್ದಳು. ಹಾಗಾಗಿ ಬೆರಳು ಚೀಪುತ್ತಿದ್ದ ಮಗಳ ನೆಬೀಸಾಳ ರಟ್ಟೆ ಎಳೆದುಕೊಂಡು ವೇಗವಾಗಿ ಬಂಗಲೆಯ ಕಡೆ ನಡೆಯುತ್ತಿದ್ದರು. ಒಂದು ವೇಳೆ ಕಾಣೆಯಾದ ಜಿಮ್ಮಿ ನಾಯಿಯ ವಿಷಯವನ್ನು ಹೇಳಿದರೂ ಅದು ಪಾತಿಂಞಳ ತಲೆಗೆ ನಾಟುತ್ತಿರಲಿಲ್ಲ. ಮರಿಮ್ಮಳ ನಾಯಿ ಜಿಮ್ಮಿ ನಡೆಯಲಾಗದೆ ಕುಂಟಿಕೊಂಡು ಒಂದು ಕಾಲು ಎತ್ತಿ ಅತ್ತಿಯ ಮರದ ಕೆಳಗೆ ನೋವಿನಲ್ಲಿ ನಿಂತುಕೊಂಡಿತ್ತು.
ಕುಂಞಕಣ್ಣನಿಗೆ ತುಂಬಾ ಹತ್ತಿರ ಬಂದರೂ ಅದು ಅಲ್ಲಿ ನಿಂತಿರುವುದು ಕಾಣಿಸಿರಲಿಲ್ಲ. 'ಅದು ಅಲ್ಲಿ ನಿಂತಿರುವುದು ಮರಿಯಳ ಜಿಮ್ಮಿ ನಾಯಿಯಲ್ಲವೇ ಕುಂಞಿಕಣ್ಣಾ' ಎಂದು ರೈಟರು ಅಂದರೂ ಕುಂಞಿಕಣ್ಣನಿಗೆ ಅದು ಕಾಣಿಸುಲಿಲ್ಲ. 'ಹೌದು ರೈಟರೇ ಮಳೆಗೆ ನಿಂತುಕೊಂಡಿದೆ' ಎಂದು ಸುಮ್ಮನೆ ಅಂದ. ಜಿಮ್ಮಿ ನೋವಿನಲ್ಲಿ ಕುಂಯ್ಗುಟ್ಟುತ್ತಿತ್ತು. ನಿನ್ನೆ ರಾತ್ರಿ ಮಳೆಯಲ್ಲಿ ದಾರಿತಪ್ಪಿದ್ದ ಅದನ್ನು ಏಲಕ್ಕಿ ಕಾಡಿನ ನಡುವೆ ಗುಳ್ಳೆ ನರಿಗಳು ಹರಿದು ಮುಕ್ಕಿ ಅರ್ದಜೀವ ತೆಗೆದು ಬಿಟ್ಟಿದ್ದವು. ಜಿಮ್ಮಿಯನ್ನು ಹುಡುಕಿಕೊಂಡು ಮರಿಯಮ್ಮ ಬರುವುದು ಉಸ್ಮಾನ್ ರೈಟರಿಗೆ ದೂರದಿಂದ ಕಾಣಿಸಿತು. ರಾತ್ರಿ ಕಾವಲುಗಾರ ಮೂಸಕಾಕಾ ಆಕೆಯನ್ನು ಎಂದಿನಂತೆ ಹಿಂಬಾಲಿಸಿಕೊಂಡು ಬರುತ್ತಿದ್ದರು, ಅಷ್ಟು ಹೊತ್ತಿಗೆ ಬಂಗಲೆಯ ಕಡೆಯಿಂದ ಬೆಳಗಿನ ಎರಡನೆಯ ತುರಿಯ ಸದ್ದು ಆ ನಿಂತ ಮಳೆಯಲ್ಲಿ ಅಲೆ ಅಲೆಯಾಗಿ ಕೇಳಿಸತೊಡಗಿತು. 'ಇವನ ತುರಿಯ ಸದ್ದು ಪುನಹ ಶುರುವಾಯಿತಲ್ಲ ಭಗವತಿಯೆ..'ಎಂದು ಕುಂಞಿಕಣ್ಣ ಗೊಣಗಿದರು.





Post new comment