`ಬ್ಲಾಗಂಬರಿ 'ಎಂಬುದು ಕಾದಂಬರಿ ಮತ್ತು ಬ್ಲಾಗ್ ಎಂಬ ಎರಡು ನಾಮ ಪದಗಳ ವರ್ಣಸಂಕರದಿಂದ ಉಂಟಾದ ಕನ್ನಡ ಸಾಹಿತ್ಯದ ಒಂದು ವಿನೂತನ ತಳಿ.ಕನ್ನಡ ಸಾಹಿತ್ಯದ ಹೊಸ ಹೇಸರಗತ್ತೆ! ಈ ಹೊಸ ತಳಿಯ ಮೊದಲ ಕೂಸಾಗಿ ನನ್ನ `ಹೂವಿನಕೊಲ್ಲಿ' ಕಾದಂಬರಿ ಹೊರಬರುತ್ತಿರುವುದು ನನ್ನ ಮೈ-ಮನಗಳಲ್ಲಿ ವಿನೂತನ ಪಾಪ್ ಅಪ್ ಪುಳಕಗಳನ್ನು ಹುಟ್ಟಿಸುತ್ತಿದೆ. ಈ ಈ-ಕಾದಂಬರಿಯು ಒಂದು ತರಹದ ಬಳಕೆದಾರ ಸ್ನೇಹಿ ಕಾದಂಬರಿ.ಪ್ರತಿಕ್ರಿಯಾತ್ಮಕವಾದುದು ಬಳಕೆದಾರನ ಬೇಡಿಕೆಗನುಗುಣವಾಗಿ ಬರಹದ ರೂಪುರೇಖೆಗಳನ್ನು ಬದಲಾಯಿಸಲು ಕಾದಂಬರಿಕಾರನು ಸದಾ ಉತ್ಸುಕನಾಗಿರುತ್ತಾನೆ. ಆದರೆ ಆತನ ಸೃಜನಶೀಲತೆಯ ಹಕ್ಕುಗಳು ಕಾದಿರಿಸಲ್ಪಟ್ಟಿರುತ್ತದೆ ಪ್ರಿಯ ಓದುಗರೇ, ಹೂವಿನಕೊಲ್ಲಿ ನನ್ನ ಮೊದಲ ಕಾದಂಬರಿ.ಇದು ಹೇಗೆ ಕೊನೆಯಾಗುವುದು ಎನ್ನುವುದು ನನಗೂ ಗೊತ್ತಿಲ್ಲ.ಇದರ ಹಣೆಯ ಬರಹ ಸಂಪದ ದ ಸಂಪಾದಕರ ಕೈಯಲ್ಲಿದೆ.ನನಗಂತೂ ಪ್ರತೀವಾರ ಹೂವಿನ ಕೊಲ್ಲಿಯ ಅಧ್ಯಾಯವೊಂದನ್ನು ಬರೆದು ಮುಗಿಸುವುದು ಬಹಳಷ್ಟು ಸ್ವಾರಸ್ಯಕರವಾಗಿರುವಂತೆ ಅನ್ನಿಸುತ್ತಿದೆ. ಬೇಡವೆಂದಾಗ ನಿಲ್ಲಿಸಿಬಿಡುವ ಸ್ವಾತಂತ್ರ್ಯವನ್ನೂ ನಾನು ಮಾನ್ಯ ಸಂಪಾದಕರಿಂದ ಬೇಡಿ ಪಡೆದಿರುವೆ. ಅಂದಹಾಗೆ ಹೂವಿನಕೊಲ್ಲಿ ಅನ್ನುವುದು ಒಂದು ಕಾಫಿತೋಟದ ಹೆಸರು. ಕೊಲ್ಲಿ ಅಂದರೆ ಕೊರಕಲು,ಕಣಿವೆ ಅಂತ ಅರ್ಥ. `ಸಾಯಿಸಿ’ ಎನ್ನುವ ಸಾಮಾನ್ಯ ಅರ್ಥ ಇಲ್ಲಿ ಅನ್ವಯಿಸುವುದಿಲ್ಲ ಇನ್ನು ನನ್ನ ಈ ಮೊದಲ ಕಾದಂಬರಿಯ ಬಗ್ಗೆ ಬೇರೇನೂ ನಾನು ಹೇಳಬಯಸುವುದಿಲ್ಲ.ಇದು ನನ್ನ ಬಾಲ್ಯಕಾಲಲೋಕದ ಕಥೆ. ನೆನಪುಗಳು ಬಹಳಷ್ಟು ಕೈ ಕೊಟ್ಟಿರುವುದರಿಂದ ಕಲ್ಪನೆಯ ಕೈಯೇ ಮೇಲಾಗಿದೆ.ವಿವರಗಳು ಬೇಕಾದಾಗ ನಾನು ನನ್ನ ಉಮ್ಮನ ಜೊತೆ ಮಾತನಾಡುತ್ತೇನೆ.ಆದರೆ ಆಕೆ ನನ್ನನ್ನು ಹೆತ್ತದ್ದೇ ಅವಳ ಜೀವನದ ಮೊದಲ ಘಟನೆ ಅನ್ನುವ ಹಾಗೆ ಹೇಳಿ ನಕ್ಕು ಬಿಟ್ಟಿದ್ದಾಳೆ. `ಏನು ಬೇಕಾದರೂ ಬರಿ ಆದರೆ ಧರ್ಮದ ಬಗ್ಗೆ ಮಾತ್ರ ಬರೆಯಬೇಡ' ಎನ್ನುವ ವಿನೂತನ ಫತ್ವಾ ಹೊರಡಿಸಿ ನನ್ನನ್ನು ಎಂದಿನಂತೆ ಕಾಪಾಡಿದ್ದಾಳೆ. ಹೂವಿನಕೊಲ್ಲಿ ಎನ್ನುವ ನನ್ನ ಈ ನೂತನ ಸಾಹಸವನ್ನು ನನ್ನ ಉಮ್ಮ ಫಾತಿಮಾಳ ಪಾದಗಳಿಗೆ ಅರ್ಪಿಸುತ್ತಿದ್ದೇನೆ.
ಇತಿ,
ಅಬ್ದುಲ್ ರಶೀದ್.
ಆಕಾಶವಾಣಿ
ಯಾದವಗಿರಿ
ಮೈಸೂರು-೫೭೦೦೨೦
ಕರ್ಣಾಟಕ




